ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಇದೀಗ ಪ್ರಮುಖ ಕಾಲಘಟ್ಟ ತಲುಪಿದ್ದು, ಪೀಠ ಸ್ಥಾಪನೆಯಿಂದ ಕರಾವಳಿ ಭಾಗದ ಜನರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಯು-ಆ್ಯಕ್ಟ್ ಸಮಿತಿ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ಉಡುಪಿಯ ಎಂಜಿಎಂ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿವಿಧ ಸಂಘ-ಸಂಸ್ಥೆಗಳ ಹಕ್ಕೊತ್ತಾಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ವಕೀಲರು ಹಾಗೂ ಕಕ್ಷಿದಾರರಿಗೆ ಮಾತ್ರವಲ್ಲದೆ ಜನಸಾಮಾನ್ಯರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿದೆ. ಕಕ್ಷಿದಾರರ ಪ್ರಯಾಣ ಹಾಗೂ ಕಾನೂನು ಹೋರಾಟದ ವೆಚ್ಚ ಕಡಿಮೆಯಾಗಲಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯುವಂತಾಗುತ್ತದೆ. ನ್ಯಾಯಾಲಯದ ವ್ಯಾಪ್ತಿಯನ್ನು ಸಮರ್ಪಕವಾಗಿ ನಿರ್ಧರಿಸಿ ಜನರಿಗೆ ಸುಲಭವಾಗಿ ನ್ಯಾಯ ದೊರೆಯುವ ವ್ಯವಸ್ಥೆ ರೂಪಿಸಬೇಕು ಎಂದು ಅವರು ಹೇಳಿದರು.

ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯೆ ಶ್ಯಾಮಲಾ ಭಂಡಾರಿ ಮಾತನಾಡಿ, ಕರಾವಳಿಗೆ ಹೈಕೋರ್ಟ್ ಪೀಠ ಸ್ಥಾಪನೆಗೆ ಕೆಲವು ಲಾಬಿಗಳು ಅಡ್ಡಿಯಾಗುತ್ತಿವೆ. ಇದನ್ನು ಮೆಟ್ಟಿ ನಿಲ್ಲಲು ಜನಪ್ರತಿನಿಧಿಗಳು, ವಕೀಲರು ಹಾಗೂ ಸಾರ್ವಜನಿಕರು ಪಕ್ಷಭೇದ ಮರೆತು ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಸರ್ಕಾರ, ಮುಖ್ಯ ನ್ಯಾಯಮೂರ್ತಿ ಹಾಗೂ ಜನಪ್ರತಿನಿಧಿಗಳಿಗೆ ಕರಾವಳಿಗೆ ಹೈಕೋರ್ಟ್ ಪೀಠ ಏಕೆ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಬೇಕು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಅನುಕೂಲವಾಗುವ ಮಧ್ಯಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸವಿತಾ ಕೊರಗ ಮಾತನಾಡಿ, ಬುಡಕಟ್ಟು ಸಮುದಾಯವಾದ ಕೊರಗರು ಹಲವು ವರ್ಷಗಳಿಂದ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಕರಾವಳಿಯಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ನಮ್ಮ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಜನರಿಗೆ ಸಾಂವಿಧಾನಿಕ ಹಕ್ಕುಗಳ ಸಮರ್ಪಕ ಲಾಭ ದೊರೆಯಲು ಸಾಧ್ಯವಾಗಲಿದೆ. ನ್ಯಾಯ ವ್ಯವಸ್ಥೆ ಮತ್ತಷ್ಟು ಜನಸ್ನೇಹಿಯಾಗಲಿದೆ ಎಂದರು.

ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಉಡುಪಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಚಾರದಲ್ಲಿ ಆಗಿರುವಂತೆ ಹೈಕೋರ್ಟ್ ಪೀಠದ ವಿಚಾರದಲ್ಲೂ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಸರಿಪಡಿಸಲು ಹೋರಾಟವೊಂದೇ ದಾರಿ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ರಾವ್, ಕಾರ್ಕಳ ವಕೀಲರ ಸಂಘದ ಉಪಾಧ್ಯಕ್ಷ ಹರೀಶ್ ಅಧಿಕಾರಿ, ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಬೈಂದೂರು ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮಾತನಾಡಿದರು.
ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಕಾಮತ್ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿಜಯ ಡಿಸೋಜ ವಂದಿಸಿದರು.





