ಕರಾವಳಿ ಭಾಗದ ಜನತೆಯ ಬಹುದಿನಗಳ ನ್ಯಾಯಯುತ ಬೇಡಿಕೆಯಾದ ‘ಕರಾವಳಿ ಹೈಕೋರ್ಟ್ ಪೀಠ’ ಸ್ಥಾಪನೆಯು ಕೇವಲ ಸಾಂದರ್ಭಿಕ ಬೇಡಿಕೆಯಲ್ಲ, ಅದು ಈ ಭಾಗದ ಜನರ ಸಂವಿಧಾನಬದ್ಧ ಹಕ್ಕಾಗಿದೆ. ಬೆಂಗಳೂರು ಹೊರತುಪಡಿಸಿದರೆ ರಾಜ್ಯಕ್ಕೆ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಕರಾವಳಿಯ ಜನರು ನ್ಯಾಯಕ್ಕಾಗಿ ನೂರಾರು ಕಿಲೋಮೀಟರ್ ದೂರದ ಬೆಂಗಳೂರಿಗೆ ಅಲೆಯುವ ಪರಿಸ್ಥಿತಿ ತಪ್ಪಬೇಕು,” ಎಂದು ನ್ಯಾಯವಾದಿ ಹಾಗೂ ಉಡುಪಿ ಜಿಲ್ಲಾ
ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಪ್ರೇಮ್ ಪ್ರಸಾದ್ ಶೆಟ್ಟಿ ಪ್ರತಿಪಾದಿಸಿದರು.
ಯು ಆಕ್ಟ್, ಕಾರ್ಕಳ ತಾಲೂಕು ವಕೀಲರ ಸಂಘ, ಹಾಗೂ ವಿವಿಧ ಜನಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಕಳದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆ ತಾಲೂಕು ಮಟ್ಟದ ಹಕ್ಕೊತ್ತಾಯ ಸಭೆ’ಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
“ನಮ್ಮ ಜಿಲ್ಲಾ ಹೋರಾಟ ಸಮಿತಿ, ವಕೀಲರ ಸಂಘಗಳು ಹಾಗೂ ನೂರಕ್ಕೂ ಹೆಚ್ಚು ಸಂಘಟನೆಗಳನ್ನು ಒಗ್ಗೂಡಿಸಿ ನಡೆಸಿದ ನಿರಂತರ ಜನಾಂದೋಲನದ ಫಲವಾಗಿ, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಕಳೆದ ಸೆಪ್ಟೆಂಬರ್ 29ರಂದು ಹೈಕೋರ್ಟ್ ಪೀಠ ಸ್ಥಾಪನೆಯ ಸಾಧ್ಯತೆಯನ್ನು ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ದೊಡ್ಡ ಜಯವಾಗಿದೆ. ಈ ಸಮಿತಿಯ ಮುಂದೆ ಕರಾವಳಿ ಜನತೆಯ ಒಕ್ಕೊರಲಿನ ಧ್ವನಿಯನ್ನು ಗಟ್ಟಿಯಾಗಿ ದಾಖಲಿಸಬೇಕಿದೆ,” ಎಂದರು.
ಹೈಕೋರ್ಟ್ ಪೀಠದ ಅನಿವಾರ್ಯತೆಯನ್ನು ವಿವರಿಸಿದ ಪ್ರಮುಖ ಅಂಶಗಳು:
ಜನಸಾಮಾನ್ಯರಿಗೆ ಆರ್ಥಿಕ ಹೊರೆ ಇಳಿಕೆ: ಬೆಂಗಳೂರಿಗೆ ಹೋಗಿ ಬರುವ ಪ್ರಯಾಣ, ವಸತಿ ಮತ್ತು ದುಬಾರಿ ವೆಚ್ಚದಿಂದ ಬಡ ಹಾಗೂ ಮಧ್ಯಮ ವರ್ಗದವರು ಮೇಲ್ಮನವಿ ಸಲ್ಲಿಸಲು ಹಿಂದೇಟು ಹಾಕುವಂತಾಗಿದೆ. ಸ್ಥಳೀಯ ಪೀಠದಿಂದ ಸಂವಿಧಾನದ ವಿಧಿ 14 ಮತ್ತು 21ರ ಆಶಯದಂತೆ ಕೈಗೆಟಕುವ ಹಾಗೂ ಶೀಘ್ರ ನ್ಯಾಯ ಸಿಗಲಿದೆ.
ನ್ಯಾಯಾಲಯದ ಒತ್ತಡ ಇಳಿಕೆ: ಬೆಂಗಳೂರು ಪ್ರಧಾನ ಪೀಠದಲ್ಲಿ ಸುಮಾರು 2.50 ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಕರಾವಳಿಯ ಪ್ರಕರಣಗಳು ಇಲ್ಲಿಗೆ ವರ್ಗಾವಣೆಯಾದರೆ ರಾಜ್ಯಾದ್ಯಂತ ತ್ವರಿತ ನ್ಯಾಯದಾನ ಸಾಧ್ಯವಾಗಲಿದೆ ಹಾಗೂ ಸ್ಥಳೀಯ ಆಡಳಿತ ಯಂತ್ರವೂ ಚುರುಕಾಗಲಿದೆ.
ಸ್ಥಳೀಯ ಕಾನೂನುಗಳ ಅರಿವು: ಕರಾವಳಿಯ ವಿಶಿಷ್ಟ ಕಾನೂನುಗಳಾದ ಅಳಿಯಸಂತಾನ ಕಾನೂನು, ಸಿಆರ್‌ಝಡ್ (CRZ), ಮೀನುಗಾರಿಕೆ ಹಾಗೂ ಭೂ ನ್ಯಾಯಮಂಡಳಿ ಪ್ರಕರಣಗಳನ್ನು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಅರಿವಿರುವ ವಕೀಲರು ಅತ್ಯಂತ ಪರಿಣಾಮಕಾರಿಯಾಗಿ ಮಂಡಿಸಲು ಸಾಧ್ಯವಾಗುತ್ತದೆ.

ವಕೀಲರು ಹಾಗೂ ವಿದ್ಯಾರ್ಥಿಗಳಿಗೆ ಅವಕಾಶ: ಸ್ಥಳೀಯ ಕಾನೂನು ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ಗಾಗಿ ಬೆಂಗಳೂರಿಗೆ ವಲಸೆ ಹೋಗುವುದು ತಪ್ಪುತ್ತದೆ ಮತ್ತು ಸ್ಥಳೀಯ ವಕೀಲರಿಗೆ ಉನ್ನತ ಹುದ್ದೆಗೇರಲು ಹೆಬ್ಬಾಗಿಲು ತೆರೆಯಲಿದೆ.
”ನ್ಯಾಯದಾನ ವ್ಯವಸ್ಥೆ ಜನಸಾಮಾನ್ಯರಿಗೆ ಕೈಗೆಟಕದೆ ವಿಳಂಬವಾದರೆ, ಸಮಾಜದಲ್ಲಿ ಹಣಬಲ ಮತ್ತು ತೋಳ್ಬಲದ ಮಾಫಿಯಾ ಶಕ್ತಿಗಳು ತಲೆಎತ್ತುವ ಅಪಾಯವಿದೆ. ಆದ್ದರಿಂದ ಕರಾವಳಿಯ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಹೈಕೋರ್ಟ್ ಪೀಠ ಅನಿವಾರ್ಯ. ಇದು ಕೇವಲ ವಕೀಲರ ಹೋರಾಟವಲ್ಲ, ಪ್ರತಿಯೊಬ್ಬ ನಾಗರಿಕನ ಭವಿಷ್ಯದ ಹೋರಾಟವಾಗಿದ್ದು, ಮುಂದಿನ ತೀವ್ರ ಸ್ವರೂಪದ ಹೋರಾಟಗಳಿಗೆ ಎಲ್ಲರೂ ಕೈಜೋಡಿಸಬೇಕು,” ಎಂದು ಅವರು ಕರೆ ನೀಡಿದರು.
ಗಣ್ಯರ ಬೆಂಬಲ ಮತ್ತು ವಿವಿಧ ಸಂಘ ಸಂಸ್ಥೆಗಳ ಒಕ್ಕೊರಲಿನ ಆಗ್ರಹ:
ಸಭೆಯಲ್ಲಿ ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್, ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ರಾಜಕೀಯ ಮುಖಂಡ ಮುನಿಯಾಲು ಉದಯ ಶೆಟ್ಟಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶುಭದರಾವ್, ಬಿಜೆಪಿ ಕಾರ್ಕಳ ಅಧ್ಯಕ್ಷ ನವೀನ್ ನಾಯಕ್, ಹಿರಿಯ ನ್ಯಾಯವಾದಿ ಶೇಖರ್ ಮಡಿವಾಳ, ರವೀಂದ್ರ ಮೊಯಿಲಿ, ರಾಜ್ಯ ಕ್ರಶರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಗಜೇಂದ್ರ ನಲ್ಲೂರು, ಜೆ ಸಿ ಐ ಕಾರ್ಕಳದ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ, ಸಿವಿಲ್ ಇಂಜಿನಿಯರ್ ಎಸೋಸಿಯೇಷನ್ ಅಧ್ಯಕ್ಷರಾದ ರಾಕೇಶ ಅಮೀನ್, ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಜಗದೀಶ್ ಗೋಖಲೆ, ಸಾಹಿತ್ಯ ಸಂಘ ಕಾರ್ಕಳದ ನಿತ್ಯಾನಂದ ಪೈ, ವಿಶ್ವಕರ್ಮ ಮಹಿಳಾ ಮಂಡಳಿಯ ಕವಿತಾ ಹರೀಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ರಮೇಶ್, ಪತ್ರಕರ್ತರ ಸಂಘ ಕಾರ್ಕಳದ ಅಧ್ಯಕ್ಷ ಶರೀಫ್, ಜೆಸಿಐ ಶಾಲೆಯ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ, ಕ್ರಿಯೇಟಿವ್ ಕಾಲೇಜ್ ಸಂಸ್ಥಾಪಕರಾದ ಡಾ.ಗಣನಾಥ್ ಶೆಟ್ಟಿ, ಅಖಿಲ ಭಾರತ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಿತ್ರ ಪ್ರಭಾ ಹೆಗಡೆ, ಪುರಸಭೆಯ ಮಾಜಿ ಅಧ್ಯಕ್ಷೆ ಪ್ರತಿಮ ರಾಣಿ, ಬಸ್ ಏಜೆಂಟರ ಬಳಗದ ಅಧ್ಯಕ್ಷ ಬಾಲಕೃಷ್ಣ, ಬಿಲ್ಲವ ಸಂಘ ಕಾರ್ಕಳದ ಅಧ್ಯಕ್ಷ ಪ್ರಮಲ್, ರೋಟರಿ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮದ್, ಕಡ್ತಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಕೇಶ್ ಹೆಗ್ಡೆ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಸನ್ನ ಶೆಟ್ಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮಾಜಿ ಪುರಸಭಾ ಸದಸ್ಯರು, ಮಾಜಿ ಗ್ರಾಮ ಪಂಚಾಯತ್ ತಾಲೂಕು ಪಂಚಾಯತ್ ಸದಸ್ಯರು,ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಕರಾವಳಿಯ ಮೂರು ಜಿಲ್ಲೆಗಳ ಜನರ ಹಿತದೃಷ್ಟಿಯಿಂದ ಸರ್ಕಾರ ಮತ್ತು ನ್ಯಾಯಾಂಗವು ತಕ್ಷಣವೇ ಹೈಕೋರ್ಟ್ ಪೀಠ ಸ್ಥಾಪನೆಗೆ ಮುಂದಾಗಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಒತ್ತಾಯಿಸಿದರು.
ಸಭೆಯ ಅಂತ್ಯದಲ್ಲಿ ನೆರೆದಿದ್ದವರು “ಹೈಕೋರ್ಟ್ ಪೀಠ – ನಮ್ಮ ಹಕ್ಕು, ನಮ್ಮ ಒತ್ತಾಯ” ಎಂಬ ಘೋಷಣೆಯೊಂದಿಗೆ ಹೋರಾಟವನ್ನು ತೀವ್ರಗೊಳಿಸುವ ಸಂಕಲ್ಪ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ದೀಪಕ್ ಎಳ್ಳಾರೆ ನಿರ್ವಹಿಸಿ, ಹರೀಶ್ ಅಧಿಕಾರಿ ವಂದಿಸಿದರು.






