ಗೀತಾ ಕುಲಕರ್ಣಿ ಅವರ ಕತೆ | ಸೇರಾ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

‘ಕರುಣಾ’ ಮಾಳಿಗೆಯಿಂದಲೇ ನಿತೀನ್ ಕಿರುಚಿಕೊಂಡ. ಫ್ರಿಜ್ಜಿನ ಬಾಗಿಲು ತೆರೆದು ಅವಳಿಗೆ ಅತ್ತೆ ಏನನ್ನೋ ಹೇಳುತ್ತಿದ್ದಾಗಲೇ ನಿತೀನ್ ಕರೆದದ್ದು. ಕರುಣಾ ಕಾಲಿಗೆ ತೊಡರಿಕೊಂಡ ಮ್ಯಾಕ್ಸಿಯ ತುದಿಯನ್ನ ಎಡಗೈಯಲ್ಲೆತ್ತಿ ಮೆಟ್ಟಲನ್ನು ದಡಬಡ ಏರುತ್ತಿದ್ದಾಗಲೇ ಕಣ್ಣೆದುರೇ ಪರ್‌ಫ್ಯೂಮಿನ ಬಾಟ್ಲ್ ಕೈಯಲ್ಲಿ ಹಿಡಿದು ‘ಅಂಥ ಅವಸರ ನಿಂದೇನಿತ್ತು ಕೆಳಗೆ? ನಾನು ಆಫೀಸಿಗೆ ಹೊರಟು ಹೋದ್ಮಲೆ ನಿಮ್ಮದೇ ರಾಜ್ಯ. ಟೈ ಅರ್ಧ ಕಟ್ಟಿ ಓಡಿ ಬಿಟ್ರೆ- ಇಲ್ಲಿ ಅರ್ಧಕ್ಕೆ ನಿಲ್ಲಿಸಿ ಓಡಿಹೋದ ನಿನ್ನನ್ನು ಮತ್ತೆ ಕರೆಯಬೇಕಾ?’

- Advertisement -

ಕರುಣಾಗೆ ಥಟ್ಟನೆ ಕೇಳುವಾಸೆ: ‘ಇಷ್ಟು ದಿನ ಪರ್‌ಫ್ಯೂಮ್, ಟೈ ಕಟ್ಟೋದಿಕ್ಕೆ ಯಾರನ್ನ ಕರೆಯುತ್ತಿದ್ದೀರಿ? ಮನೆಯಲ್ಲಿ ಇದ್ದ ಸಮಯ ಆಚೆ-ಈಚೆ ಇಣಿಕಿ ನೋಡೋದಕ್ಕೂ ಬಿಡೋದಿಲ್ಲ’. ಆದರೆ ಅವಳಿಗೆ ನಗು ಬಂತು. ನಿತೀನ್‌ನ ಚೂಪು ಗಡ್ಡದ ತುದಿಗೆ ಚೀಸ್ ತಾಗಿತ್ತು. ಟವೆಲ್‌ನಿಂದ ಅದನ್ನು ಒರೆಸಿ ‘ಎಷ್ಟು ಗಡಿಬಿಡಿ ಇದು… ನಿಮ್ಮ ಗಡ್ಡಕ್ಕೂ ಚೀಸ್ ತಿನ್ನೋ ಆಸೆ. ಇಲ್ಲಿ ಬೆಳಗ್ಗಿನ ಹೊತ್ತು ತೀರ ಗಡಿಬಿಡಿ… ಅತ್ತೆ ಹೇಳ್ತಾರೆ- ಅವರ ಕಾಲದಲ್ಲಿ ನಿಮ್ಮ ಡ್ಯಾಡಿನ್ನ ಬೆಳಗ್ಗೆ 6ಕ್ಕೆ ನೋಡಿದ್ರೆ ಮತ್ತೆ ಕಾಣೋದು ರಾತ್ರಿ 12ಕ್ಕೇ. ನಿತೀನ್ ಇಪ್ಪತ್ನಾಕು ಗಂಟೆ ನಿಮ್ಮೆದುರು ಇರ್‍ಬೇಕೂಂದ್ರೆ ಹೇಗೆ ಸಾಧ್ಯ? ಇವೊತ್ತು ಶುಕ್ರವಾರ. ತಲೆಗೆ ಸ್ನಾನ ಮಾಡಿ, ಉಪವಾಸ- ರಾತ್ರಿ ಹಾಲು ಹಣ್ಣು ತೆಗೊಳ್ಳಿ…’ ಸೋತ ಮುಖದಲ್ಲಿ ಕರುಣಾ ಅವನ ವಿಶಾಲ ವಕ್ಷಸ್ಥಳದಲ್ಲಿ ತಲೆಯಿರಿಸಿ ಹೇಳಿದಾಗ ಆ ಮುದ್ದು ಮುಖದ ಗದ್ದ ಹಿಡಿದೆತ್ತಿ ‘ನನ್ನ ಸ್ವೀಟೀ, ಅವೆಲ್ಲ ಓಲ್ಡ್ ಕಸ್ಟಮ್ಸ್ ಬಿಟ್ಟುಬಿಡು. ಅದರಲ್ಲೂ ನಿಂಗೆ ಅಭ್ಯಾಸವಿಲ್ಲ…. ಅದೆಲ್ಲ ಅವಳಿಗೆ ಇರಲಿ. ಸಂಜೆ ಬೇಗ ಬರ್ತೇನೆ. ರಾತ್ರಿ ಡಿನ್ನರಿಗೆ ಹೋಗ್ಬೇಕು. ಅದೇ ಬ್ಲ್ಯಾಕ್ ಮ್ಯಾಕ್ಸಿಯಲ್ಲಿ ಗೋಲ್ಡನ್ ಫ್ಲವರ್ಸ್ ಇದೆಯಲ್ಲ… ಅದನ್ನೇ ಹಾಕಿಕೊ…. ಇಂಡಿಯಾದ ಹುಡುಗಿ! ಕಣ್ಣು ಕುಕ್ಕಲಿ’. ಷೂಜ್ ಒಂದು ಕೈಯಲ್ಲಿ, ಕೋಟು ಇನ್ನೊಂದು ಕೈಯಲ್ಲಿ! ನಿತೀನ್ ಕಾರಲ್ಲಿ ಕೂತು ಹಾರ್ನ್ ಮಾಡಿದಾಗಷ್ಟೆ ಕರುಣಾಗೆ ಆ ತೋಳಸೆರೆಯಿಂದ ಹೊರ ಬಂದು ಅಲ್ಲೇ ನಿಂತ ಅರಿವಾದದ್ದು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಶ್ರೀನಿವಾಸರಾಜು ದೊಡ್ಡೇರಿ ಅವರ ‘ಬಾಬಾ...

ಕನ್ನಡದ ಅಪರೂಪದ ಬರಹಗಾರ, ಅನುವಾದಕರಾದ ಶ್ರೀನಿವಾಸರಾಜು ದೊಡ್ಡೇರಿ ಅವರು ಅನುವಾದಿಸಿರುವ 'ಬಾಬಾ ಸಾಹೇಬ್' ಕೃತಿಯು ಇಂದು ಭಾನುವಾರ ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯ ಒಂದು ಆಯ್ದ ಭಾಗ... ಈದಿನ ಓದುಗರಿಗಾಗಿ... 'ಭಾರತದಲ್ಲಿ...

ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ...

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ ವೇತನವನ್ನೇ ಏಕೈಕ ಮಾನದಂಡವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಾರ್ಚ್ ತೀರ್ಪನ್ನು ಪುನರುಚ್ಚರಿಸಿದೆ. 1993ರ ಮೂಲ ನಿಯಮಗಳೇನು? ಕೆಳಹಂತದ...

ಮೈಕ್ರೋಸಾಫ್ಟ್‌ ಸರ್ವರ್ ಕ್ರಾಶ್; ತಲ್ಲಣಗೊಂಡ ಆನ್‌ ಲೈನ್‌ ಜಗತ್ತು!

ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ನ ಸರ್ವರ್‌ಗಳಲ್ಲಿ ಕಾಣಿಸಿಕೊಂಡ ಅನಿರೀಕ್ಷಿತ ತಾಂತ್ರಿಕ ದೋಷವು ಜಾಗತಿಕ ಮಟ್ಟದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಗುರುವಾರ (ನವೆಂಬರ್ 12) ಸಂಜೆಯಿಂದ...

ಇದನ್ನು ಓದಿದ್ದೀರಾ?: ಎಸ್. ನಟರಾಜ ಬೂದಾಳು ಅವರ ಕತೆ | ಆಸಾದಿ

ಗಂಟೆ ಎಂಟು! ಈಗ ಅತ್ತೆ, ಕೆಲಸದ ಹುಡುಗಿ, ತಾನು!… ನಿತೀನ್ ಕಾರಿನಲ್ಲಿ ಕೂತುಕೊಳ್ಳುವ ಮೊದಲೇ ಮೈದುನ ಬಾಲೂ, ಚಂದ್ರ, ನಾದಿನಿ ವಿಮಲಾ, ಅರ್ಧ ಬ್ರೆಡ್ಡಿನ ಚೂರಿಗೆ ಚೀಸ್, ಜಾಮೂ ತಾಗಿಸಿ ಒಂದಿಷ್ಟು ತಿಂದು ಉಳಿದಿದ್ದ ಚೀಸನ್ನು ಬಾಯಲ್ಲಿ ತುರುಕಿ ಕೈಯಲ್ಲಿ ಷೂಜ್ ಹಿಡಿದೇ ಕಾರಲ್ಲಿ ತೂರಿಕೊಳ್ಳುತ್ತಾರೆ. ಎಲ್ಲರೂ ಕೂತು ಬೆಳಗ್ಗಿನ ಬ್ರೇಕ್‌ ಫಾಸ್ಟ್ ಮಾಡಿದ್ರು ಎಂದಿಲ್ಲ. ಅದು ಭಾನುವಾರ. ಆಗ ಇವರಷ್ಟೇ ಅಲ್ಲ ಟೇಬಲ್, ಕುರ್ಚಿಯೂ ಕುಣಿಯುತ್ತವೆ. ಅವಳನ್ನೂ ಎತ್ತಿ ಕುಣಿಯುತ್ತಾರೆ. ಕುಣಿಸುತ್ತಾರೆ. ದಿನವೆಲ್ಲ ಪಿಕ್‌ನಿಕ್ ಇದ್ದ ಹಾಗೆ… ಬೋಟಿಂಗ್, ಹೊಟೇಲಿನಲ್ಲಿ ಊಟಿ, ಪಿಕ್ಟರ್…! ಮಲೇಶಿಯಾದ ಚೆಲುವನ್ನು ಹೀರುವಾಗ ಕರುಣಾಗೆ ಊರ ನೆನಪಾಗುತ್ತದೆ.

ಮನೆಯಲ್ಲಿ ಈಗ ತನ್ನ ಮುದ್ದಿನ ತಂಗಿ ಸ್ವರೂಪಾ ಸಕ್ಕರೆನಿದ್ದೆಯಲ್ಲಿ. ಈಗಲ್ಲಿ ಆರು ಗಂಟೆ! ಆಡುಗೆ ಕೋಣೆಯಿಂದ ಮಸಾಲೆ ದೋಸೆಯೋ, ಉತ್ತಪ್ಪ, ಇಲ್ವೇ ಪೂರಿ… ಘಮ ಘಮ! ಅವಳು ನಿಂತಲ್ಲೆ ಮೂಸಿ, ಬಾಯಲ್ಲಿ ನೀರೂರುವಾಗಲೇ- “ನಿತೀನ್ ಹೋಗಿ ಆಯ್ತಲ್ಲ- ಅಡುಗೆಗಿಷ್ಟು ತೋರ್‍ಸಿ ನಾನು ಕಾಳಿಮಂದಿರಕ್ಕೆ ಹೋಗಿಬರ್‍ತೇನೆ” ಎಂಬ ಅತ್ತೆಯ ಕರೆಗೆ ಕರುಣಾ ಕಣ್ಣಲ್ಲಿ ತುಂಬಿದ ತವರನ್ನು ಆಚೆ ಸರಿಸಿ ಅವಳ ಹೊಸ ಬದುಕಿನ ಪಾಕಶಾಲೆಗೆ ಬಂದಳು. ತರಕಾರಿ ಆಡುಗೆ- ಅದಕ್ಕೆ ಹಾಕುವ ಮಸಾಲೆ! ನಗು ಹೊಟ್ಟೆಯೊಳಕ್ಕೆ ಕಿಸಕ್ಕನೆ ಉಕ್ಕಿತು. ಚಿಲ್ಲಿಪೌಡರ್, ಜೊತೆಯಲ್ಲಿ ಎಗ್ ಪೌಡರ್, ಮಟನ್ ಪೌಡರ್, ಚಿಕನ್ ಪೌಡರ್! ಶುದ್ಧ ಶಾಕಾಹಾರ! ಇವೊತ್ತು ಶುಕ್ರವಾರ! ಭಾರತೀಯ ವಿದೇಶೀಯರ ಕಲಸುಮೇಲೋಗರ.

ಹಿಂದಿನ ರೋಡಿನಲ್ಲಿ ತರಕಾರಿ, ಮೊಟ್ಟೆ, ಮೀನು, ಸೋಯಾಬೀನ್ಸ್‌ನಿಂದ ತಯಾರಿಸಿದ ತಿಂಡಿ, ಚಿಕನ್ ಮಟನ್ ತುಂಬಿದ ಕಾರುಗಳು ಒಂದರ ಹಿಂದೊಂದು ಹಾರ್ನ್ ಬಾರಿಸುತ್ತ ಹೊರಟಿವೆ. ಬಣ್ಣಬಣ್ಣಗಳ ಸಾರೊಂಗ (ಲುಂಗಿ) ಧರಿಸಿದ ಚೀನಿ, ಮಲಯ ಹೆಂಗಸರು ಪಿಂಗಾಣಿ ಪಾತ್ರೆಯನ್ನು ಕಾರಿನ ಬಳಿ ತಂದಾಗ ಕರುಣಾ ಕೈಯ ಕೆಲಸ ಬಿಟ್ಟು ನೋಡುತ್ತ ನಿಲ್ಲೋದು ಅವಳಿಗೆ ಒಂದೆರಡು ತಿಂಗಳು ಕುತೂಹಲ- ಆಟವೆನಿಸಿತ್ತು. ಎಲ್ಲ ಹೊಸ ಜಗತ್ತು! ಜಲಾನ್ ಬೇಟಾಕ್ಕೂ- ತನ್ನ ಉಡುಪಿಯ ಮನೆಗೂ ಅವಳು ಮನಸ್ಸಿನ ಸೇತುವೆ ಕಟ್ಟಿ ಓಡಾಡಿದಳು. ಅಮ್ಮ ಚಿಕ್ಕ ಹುಡುಗಿಯಾಗಿದ್ದಾಗ ಚೀನಿಯರು ಬೆನ್ನ ಮೇಲೆ ಹೊತ್ತು ತರುವ ರೇಷ್ಮೆ ಬಟ್ಟೆ, ಬಗೆಬಗೆಯ ಆಟದ ಸಾಮಾನಿಗಾಗಿ ಸ್ಕೂಲಿನಿಂದ ಬರುವಾಗ ಅವರು ಸಿಕ್ಕರೆ ಕೈಸನ್ನೆಯಿಂದ ಕರೆದು ‘ಅಕ್ಕಳೆ’ (ಜಿರಳೆ) ಕೊಡುತ್ತೇನೆಂದಾಗ ಅವರ ಚಪ್ಪಟೆ ಮೂಗು, ಹುಣಸೇ ಬೀಜದಂಥ ಪುಟ್ಟ ಕಣ್ಣುಗಳು ಅಗಲ ಮುಖದಲ್ಲಿ ಮುಚ್ಚಿ ಭಯದಲ್ಲೇ ಮುಂದೋಡುತ್ತಿದ್ದ ನೆನಪುಗಳನ್ನು ಕೇಳಿದ್ದಳು.

ಇದನ್ನು ಓದಿದ್ದೀರಾ?: ಗಿರೀಶ್ ಕಾರ್ನಾಡ್ ಅವರ ಕತೆ | ಅಳಿದ ಮೇಲೆ

ಅಡುಗೆ ಕೋಣೆಯಲ್ಲಿ ಬಣ್ಣಬಣ್ಣದ ಪಿಂಗಾಣಿ ಪಾತ್ರೆ… ಅಡುಗೆ ಮಾಡುತ್ತಲೇ ತಿನ್ನುವ ಮುದ್ದಾದ ಮುಖದ ಲವಲವಿಕೆಯ ಕುಟುಂಬ… ಕರುಣಾ ಕಣ್ಣು ಪಿಳುಕಿಸದೇ ನೋಡುತ್ತಾಳೆ. ಇದೆಲ್ಲ ನಿತೀನ್ ಬಂದಾಗ ಅವಳಿಗೆ ಹೇಳಲು ಹೊಸ ವಿಷಯಗಳು.

ಕೆಲಸದ ಹುಡುಗಿ, ಕರುಣಳಿಗಾಗಿ ರಬ್ಬರ್ ಎಸ್ಟೇಟಿನಿಂದ ಅವಳ ಭಾವ ಕಳಿಸಿದ್ದು. ಇಲ್ಲಿ ಎಲ್ಲರೂ ಅವರವರ ಮನೆಗೆಲಸ ತಾವೇ ಮಾಡಿಕೊಳ್ಳೋದನ್ನು ನೋಡಿದ್ದಾಳೆ. ದಿನಕ್ಕೆ 8 ಡಾಲ‌ರ್! (1 ಡಾಲರ್ ಅಂದರೆ ನಾಲ್ಕು ರೂ.) ತನಗಾಗಿಯೇ ಈ ಹುಡುಗಿ ಬಂದದ್ದು… ಕರುಣಾ ಸ್ವಲ್ಪ ಹೆಮ್ಮೆಯಿಂದಲೇ ತರಕಾರಿ ತೊಳೆದು ಕೊಡಲು ಹೇಳುತ್ತಾಳೆ.

ಕೆಲಸದ ಹುಡುಗಿಯ ಹೆಸರು ಕೃಪಾ. ಎಷ್ಟು ಚೆನ್ನಾದ ಹೆಸರು… ಯಾಕೆ ಇಟ್ಟಿರಬಾರದು? ದಿನಕ್ಕೆ ನಾಲ್ಕು ಸಾರಿ ಮುಖವನ್ನು ಸೋಪು ನೊರೆಯಲ್ಲಿ ತೊಳೆದು, ಪೌಡ‌ರ್ ಬಳಿದು, ತನ್ನೂರಿನಲ್ಲಿ ಶ್ರೀಮಂತ ಹುಡುಗಿಯರು ಸ್ಕೂಲಿಗೆ ಹಾಕಿಕೊಳ್ಳುವ ಬಟ್ಟೆಗೂ ಮಿಗಿಲಾದ ಫ್ರಾಕ್, ಪ್ಯಾಂಟ್, ಮ್ಯಾಕ್ಸಿ- ಅಷ್ಟೇ ಅಲ್ಲ ಹೇರ್ ಸ್ಟೈಲ್ ಮಾತಿನಲ್ಲೂ ಅಧಿಕ ಪ್ರಸಂಗಿ… ಇದು ತೀರ ಹೆಚ್ಚಾಯಿತಲ್ಲಾ ಎಂದುಕೊಂಡರೆ ಇಲ್ಲಿ ಎಲ್ಲರಿಗೂ ಅಲಂಕಾರ. ಊಟ… ತಿಂಡಿಯಲ್ಲಿ ಆಸ್ಥೆ…. ಕರುಣಾ ಇಲ್ಲಿ ಬಂದ ದಿನಗಳಿಂದ ಕಂಡಿದ್ದಾಳೆ. ಕೃಪಾ ಇಷ್ಟಾಗಿಯೂ ತನ್ನ ಸುತ್ತು ತಿರುಗುತ್ತ ಹಾಲಿನ ಲೋಟ ಹಿಡಿದು ತಮಿಳಿನಲ್ಲಿ ‘ಹಾಲು ತಣ್ಣಗಾಯಿತಲ್ಲ? ಕುಡಿದುಬಿಡಿ’… ಎನ್ನುವಾಗ ಇಷ್ಟು ದೂರದಲ್ಲಿ ಈ ಪುಟ್ಟ ಹುಡುಗಿಯೂ ತನ್ನನ್ನು ಪ್ರೀತಿಸುತ್ತಾಳೆ ಎನ್ನುವದು ಅವಳಿಗೆ ಖುಷಿ ಕೊಡುತ್ತದೆ.

ತರಕಾರಿ ತೊಳೆದು ತನ್ನ ಕಣ್ಣೆದುರಲ್ಲೇ ನಮ್ಮಲ್ಲಿಯ ಹೊಟೇಲು ಮಾಣಿಗಳ ಕೈಚಳಕಕ್ಕೂ ತ್ವರೆಯಾಗಿ ಕೃಪಾ ತರಕಾರಿ ಚೂರಿಯಲ್ಲಿ ಕತ್ತರಿಸಿ, ‘ಕರುಣಕ್ಕ, ಈಗ ನಿಮ್ಮ ಟೀಚರ್ ಬರೋ ಸಮಯ. ಯೂ ರೆಡಿ?’ ಅರ್ಧ ತಮಿಳು ಅರ್ಧ ಇಂಗ್ಲೀಷ್ ಬೆರೆಸಿ ಹೇಗೊ ಅರ್ಥವಾಗುವಂತೆ ಹೇಳಿದಾಗ, ಕರುಣಾ ಗಡಿಬಿಡಿಯಲ್ಲಿ ಗ್ಯಾಸ್ ಹೊತ್ತಿಸುತ್ತಾಳೆ. ರಾತ್ರಿ ಎಲ್ಲರೂ ಡೈನಿಂಗ್ ಟೇಬಲ್ಲಿನಲ್ಲಿ ಒಂದಾಗಿ ಊಟ, ಟೆಲಿವಿಜನ್ನಿನಲ್ಲಿ ನೋಡುವಂತೆ ಅದರಲ್ಲಿಯ ಸಂಗೀತ, ನೃತ್ಯದಲ್ಲಿ ಕರುಣಾ ತಾನು ಭಾಗವಹಿಸದಿದ್ದರೂ ವಿಮಲಾ, ರಾಜೂ ಅವಳನ್ನು ಕುಣಿಯಲು ಆಚೆ-ಈಚೆ ಎಳೆದಾಡುತ್ತಿದ್ದರೆ…. ಅವಳಿಗೆ ಊರಲ್ಲಿ ಅಕ್ಕ ಅಂಜೂ, ಸ್ವರೂಪಾ, ಹಾಲಿನಲ್ಲಿ ನಡುಮಧ್ಯೆ ತಾನು ತಾಂ…. ತ್ತಾಂ…. ಥೈ… ಥೈಯ ಎಂದು ಕುಣಿಯುತ್ತಿದ್ದುದು ನೆನಪಾಗುತ್ತದೆ.

ಇದನ್ನು ಓದಿದ್ದೀರಾ?: ಅಗ್ರಹಾರ ಕೃಷ್ಣಮೂರ್ತಿ ಅವರ ಕತೆ | ಮನೋರಥ

ಕೃಪಾ ಓಡಿ ಬಾಗಿಲು ತೆರೆದು ‘ಟೀಚರ್ ಕಮಿಂಗ್’ ಎಂದಳು. ಕರುಣಾ ಆಗಲೇ ನೋಟ್‌ಬುಕ್, ಪೆನ್ನು ಕೈಯಲ್ಲಿ ಹಿಡಿದೇ ‘ಹಲೋ ಗುಡ್ ಮಾರ್ನಿಂಗ್. ಕಮ್ ಇನ್’ ಎಂದಾಗ, ಕ್ಯಾಥರೀನ್ ತಲೆ ಅಲ್ಲಾಡಿಸಿ. ‘ನೀನು ಮಲಯದಲ್ಲೇ ನನ್ನ ಕರೆಯಬೇಕಲ್ಲ?’ ಎಂದು ನಗುತ್ತ ತನ್ನ ಸ್ವಾಗತಿಸಿದ ಕರುಣಾಳ ಗಲ್ಲಕ್ಕೆ ಮುದ್ದು ಕೊಟ್ಟು ಬಣ್ಣದ ಬೀಸಣಿಕೆ, ಕೊಡೆಯನ್ನ ಸ್ಟಾಂಡಿನಲ್ಲಿಟ್ಟು ಕುರ್ಚಿಯಲ್ಲಿ ಕೂತಳು. ಕರುಣಾ ನಗುತ್ತ ಮಲಯ ಭಾಷೆ ಕಲಿಯುವ ವಿದ್ಯಾರ್ಥಿಯಾದಳು ಈಗ.

ಹೊಸ ಭಾಷೆ ಬೋರ್ ಹೊಡೆಸಿದ್ರೂ ಅದನ್ನವಳು ಕಲಿಯಲೇಬೇಕು; ಅಲ್ಲಿ ಇಲ್ಲಿ ಸುತ್ತಾಡಲು, ದಿನದ ಬದುಕಿಗೆ, ಆಫೀಸಿನಲ್ಲಿ ಕೆಲಸ ಬೇಕಾದರೆ, ಮಲಯ ಭಾಷೆ ಬಾರದಿದ್ದರೆ…. ಪ್ರಾಯ ಸಂದವರು ಮನೆಯಲ್ಲಿ ಕೂತಂತೆ. ಕರುಣಾ ಮನೆಯ ಕಿಟಕಿಯಲ್ಲಿ…. ಆಚೆ-ಈಚೆ ಕಿಚನಿನಲ್ಲಿ ಬಟ್ಟೆ-ಬರೆ ಒಗೆಯುವ ಚೀನಿ, ಮಲಯ ಹೆಂಗಸರನ್ನ- ಅತ್ತೆಯ ಉಪದೇಶವನ್ನ ಕೇಳುತ್ತಾ ಕೊಳೆಯಬೇಕು.

ಅಷ್ಟರಲ್ಲಿ ಕೃಪಾ ಫೋನ್ ಎತ್ತಿಕೊಂಡು, ‘ಮೇಮ್ ಸಾಬ್ ನಿಮ್ಗೆ’ ಎಂದಳು. ಕರುಣಾಗೆ ತಾನೀಗ ವಿದ್ಯಾರ್ಥಿ ಎನ್ನೋದು ಒಂದು ಕ್ಷಣ ಮರೆತು ಹೋಯಿತು. ಅವಳು ಇನ್ನೇನು ನಿತೀನ್ ಎಂದು ಉಕ್ಕಿ ಬಂದ ಸಂಭ್ರಮ ತುಟಿ ಕಚ್ಚಿಕೊಳ್ಳುವಾಗಲೇ ಈ ಸಮಯಕ್ಕೆ ನಿತೀನ್ ಕರೆಯಲಾರ…. ಆದಷ್ಟು ತನ್ನ ಪಾಠ ಸರಿಯಾಗಿ ನಡೆಯಬೇಕು ಎಂದು. ಅವಳೆಡೆಗೆ ಮನಸ್ಸಿನ ಓಡೋ ಕುದುರೆಗೂ ಕಡಿವಾಣ ಹಾಕುತ್ತಾನೆಂದೂ ಗೊತ್ತು… ತನ್ನಾಸೆಯೇ ಹೀಗೆ ಯೋಚಿಸುತ್ತಿದೆಯಲ್ಲ ಎಂದು ತಲೆ ಕೆರೆದು ಎದ್ದು ನಿಂತಾಗ ‘ಸೇರಾ ನಿಮ್ಮನ್ನ ಕರೆಯೋದು’ ಎಂದು ರಿಸೀವ‌ರ್ ಕರುಣಾಳ ಕೈಗಿತ್ತಳು ಹುಡುಗಿ.

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಎರಡು ನಿಮಿಷಕ್ಕೆ ಮಾತು ಮುಗಿಸಿ ಮತ್ತೆ ಕರುಣಾ ಪಾಠಕ್ಕೆ ಅಣಿಯಾದಳು. ಪುಸ್ತಕದ ಪುಟ ತಿರುಗಿಸಿ, ‘ಸೇರಾನ ಫೋನ್’ ಎಂದಳು. ಕ್ಯಾಥರೀನ್, ‘ಯಾರು ಸೇರಾನಾ? ನಿನ್ನ ಹಸ್ಬೆಂಡ್ ನಿತೀನ್ ಸೆಕ್ರೆಟರಿ?’ ಎಂದು ಕೇಳಿದಳು.

ಕರುಣಾಳ ಮುಖ ಒಂದು ಕ್ಷಣ ಕಿವುಚಿಕೊಂಡಿತು. ‘ಸೆಕ್ರೆಟರಿ!’ ಉಡುಪಿಯಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಮ್ಯಾನೇಜರೊಂದಿಗೆ…. ಸೆಕ್ರೆಟರಿ ಜಯಾ! ಹುಚ್ಚು ಕುದುರೆಯ ಹಾಗೆ ಕುಣಿಯುತ್ತಿದ್ದದ್ದು, ಇಬ್ಬರೂ ಒಂದೇ ಕಪ್ಪಿಗೆ ಬಾಯಿಟ್ಟು ಕಾಫಿ ಹೀರೋದು… ಕಾರಲ್ಲಿ ಸಿಕ್ಕಾಪಟ್ಟೆ ತಿರುಗೋದು. ಮಲ್ಪೆ ಸಮುದ್ರದಲ್ಲಿ ರಾಸಕ್ರೀಡೆ! ಆದರೆ ಕ್ಲಬ್ಬು-ಪಾರ್ಟಿಗಳಲ್ಲಿ ತಾನು ಸತ್ಯವಾನ! ಕೈಹಿಡಿದ ಧರ್ಮಪತ್ನಿ ಸಾವಿತ್ರಿ! ಸ್ಕೂಟರ್ ಆಕ್ಸಿಡೆಂಟಿನಲ್ಲಿ ಬದುಕಿ ಉಳಿದದ್ದೇ ತನ್ನವಳ ಪುಣ್ಯದಿಂದ, ಬಾಯಲ್ಲಿ ಈ ಮಹಾಮಂತ್ರ… ದಿನವಿಡೀ ಜಯಾಳೊಂದಿಗೆ ಪ್ರಣಯಕೇಳಿ! ಸ್ಟಾಪಿನಲ್ಲಿ ಇದೇ ಗುಸುಗುಸು!

‘ಸೇರಾ’ ಸೆಕ್ರೆಟರಿ! ಇಲ್ಲಿಗೂ ಯಾವಾಗಲೊಮ್ಮೆ ಬರ್‍ತಾಳೆ. ಬರಿಗೈಯಲ್ಲಿ ಬಂದುದಿಲ್ಲ. ತನ್ನ ಕಾಣುತ್ಲೇ ಓಡಿ ಬಂದು, ಗಲ್ಲಕ್ಕೆ ಮುದ್ದಿಟ್ಟು ‘ಓ ಹೌ ಸ್ವೀಟ್ ಯು ಆ‌ರ್…. ರಿಯಲಿ ಯು ಆರ್ ದಿ ಲಕಿಯಸ್ಟ್ ಗರ್ಲ್…. ಅವರ್ ಬಾಸ್ ನಿತೀನ್ ಆಲ್‌ಸೊ, ಲಕಿ ಟು ಗೆಟ್ ಸಚ್ ಎ ಬ್ಯುಟಿಪುಲ್, ಚಾರ್ಮಿಂಗ್ ಲೈಫ್ ಪಾರ್ಟನ‌ರ್ ಲೈಕ್ ಯು!’

ತೆರೆಗಳು ಒಂದರ ಮೇಲೊಂದು ಅಪ್ಪಳಿಸಿದಂತೆ ಅಲ್ಲಿಯ ನೆನಪು ಇಲ್ಲಿಯ ಬೇಡಾದ ಚಿತ್ರಗಳನ್ನು ಅವಳೆದುರು ಕಣ್ಣಿಗೆ ಅಪ್ಪಿ ಹಿಡಿದಂತೆ ಕರುಣಾ ಒಂದು ಕ್ಷಣ ತಲೆ ಝಾಡಿಸಿ- ನಿತೀನ್‌ನ ಮುಖ ಸೇರಾಳೊಂದಿಗೆ ಮಾತನಾಡುತ್ತಿದ್ದಾಗ ಹೇಗಿತ್ತು ಎಂದು ನೆನಪಿಸಿಕೊಂಡಳು. ಅವಳಿಗೆ ಕ್ಯಾಥರೀನ್ ಎದುರಿಗಿದ್ದುದು ಮರೆತು ಹೋಗಿತ್ತು. ಸೇರಾ ಸೆಕ್ರೆಟರಿ! ನಿತೀನ್ ಬಾಸ್!

ಕ್ಯಾಥರಿನ್ ಪುಸ್ತಕ ಕೆಳಗಿಟ್ಟು “ಸೇರಾ ಒಳ್ಳೆ ಹುಡುಗಿ… ಅಂಥ ಮನಸ್ಸು ಸಿಗೋದು ತುಂಬ ಅಪರೂಪ! ಪೂವರ್ ಗರ್ಲ್…. ಬಾಯ್‌ಫ್ರೆಂಡ್ ಇದ್ದಾನೆ. ಮದುವೆಯಾಗೋಣ ಎಂದು ದುಂಬಾಲು ಬಿದ್ದಿದ್ದಾನೆ, ಇವಳ ಸ್ವಭಾವ ಮೆಚ್ಚಿ. ಆದ್ರೆ ಇವಳಿನ್ನೂ ಮನಸ್ಸು ಮಾಡಿಲ್ಲ. ಕೈಯಲ್ಲಿ ಇನ್ನಷ್ಟು ಹಣ ಕೂಡಲಿ ಎನ್ನುತ್ತಾಳೆ. ಅವಳು ಹುಟ್ಟಿದ ಒಂದೇ ವರ್ಷಕ್ಕೆ ಆರ್‌ಫನ್ ಬೇಬಿ ಎಂದು ಇಲ್ಲಿಯ ಸೈಂಟ್ ಮೇರಿ ಕಾನ್ವೆಂಟಿನಲ್ಲಿ ಅವಳ ತಂದೆ-ತಾಯಿ ಬಿಟ್ಟು ಹೋದದ್ದು!”

ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಕರುಣಾಳ ಬಗ್ಗಿದ ಕತ್ತು ಮೇಲಕ್ಕಾಯಿತು. ”ಕ್ಯಾಥರೀನ್, ತಂದೆ-ತಾಯಿ ಇರುವಾಗ ಸೇರಾ ಆರ್‌ಫನ್ ಹೇಗಾಗುತ್ತಾಳೆ?”

ಕೃಪಾ ಪ್ಲೇಟಿನಲ್ಲಿ ‘ತೋಫೂಫಾ’ (ಸೋಯಾಬೀನ್‌ನಿಂದ ಮಾಡಿದ ಗಿಣ್ಣದಂಥ ಸಿಹಿತಿಂಡಿ) ಕೇಕು, ಬಿಸ್ಕಿಟು ತಂದಿಟ್ಟು ‘ಟೀ ತರಲಾ?’ ಎಂದು ಕರುಣಾಳ ಬೆನ್ನಮೇಲೆ ಕೈಯಾಡಿಸಿದಾಗ ಅಧಿಕ ಪ್ರಸಂಗಿ ಎಂದು ಗದರಿಸಲು ಆಗಲಿಲ್ಲ.

ಅಲ್ಲಿ ಅಮ್ಮ, ಅಕ್ಕ ಅಂಜೂ, ಸ್ವರೂಪ, ಎಲ್ಲಕ್ಕೂ ಹೆಚ್ಚು ಅಂಕಲ್‌ ದಿನದಲ್ಲಿ ಹತ್ತು ಬಾರಿಯಾದರೂ ಬೆನ್ನಿಗೆ ಗುದ್ದಿ ಜಡೆ ಹಿಡಿದೆಳೆದು, ಕಚಗುಳಿ ಇಟ್ಟ ಈ ಬೆನ್ನು ಮೈಗೆ, ಕೃಪಾಳ ಕೈ ಹಿತವಾಗುತ್ತದೆ.

ಅಲ್ಲಿಯ ಎಲ್ಲ ಪ್ರೀತಿ ನಿತೀನ್ ಕೊಡದಲ್ಲಿ ತಲೆಗೆ ಬಸಬಸನೆ ಸುರಿಯುತ್ತಾನೆ. ಮೈಯಲ್ಲಿ ಶ್ರೀಗಂಧದ ಪರಿಮಳ… ಸೇರಾ…. ನಡುನಡುವೆ ಈ ನೀರಿನಲ್ಲಿ ತನ್ನ…. ಛೆ…

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಮತ್ತೆ ಎಚ್ಚರ. ತುಟಿಯಲ್ಲಿ ನಡುಕ…. ನಾಲಗೆಯಲ್ಲಿ ಪಸೆ ಆರುತ್ತಿದೆ. ಎದುರಿಗಿದ್ದ ‘ತೋಫೂಫಾ’ ಮುಟ್ಟಲಿಲ್ಲ. ಕೇಕೂ ಬೇಡವಾಗಿದೆ. ತಾನು ಏನನ್ನೂ ತಕ್ಕೊಳ್ಳದಿದ್ದರೆ ಕ್ಯಾಥರೀನ್ ಯಾವುದನ್ನು ತಿನ್ನಲು ಹೇಗೆ ಸಾಧ್ಯ? ಬಿಸ್ಕಿಟು ಕೈಗೆತ್ತಿ ಅವಳೆದುರು ತೋಫೂಫಾದ ಪ್ಲೇಟು ಮುಂದೆ ಚಾಚಿದಳು ಕರುಣಾ.

ಕ್ಯಾಥರೀನ್ ಸ್ಪೂನಿನಿಂದ ತೋಫೂಫಾ ಬಾಯಿಗಿಟ್ಟು “ಕರುಣಾ, ನೀನು ಮಮ್ಮಿ-ಡ್ಯಾಡಿ ಇದ್ದರೂ ಸೇರಾ ಹ್ಯಾಗೆ ಆರ್‌ಫನ್ ಎಂದೆಯಲ್ಲ. ಇಲ್ಲಿ ಬಹಳಷ್ಟು ಚೀನಿ ಹುಡುಗಿಯರು ಬೆಳೆದದ್ದೇ ಆರ್‌ಫನ್ ಮಕ್ಕಳೆಂದು. ನಾನೂ ಆರ್‌ಫನ್! ನನ್ನ ಮಮ್ಮಿ.. ಡ್ಯಾಡಿ…”

”ನಿಜವಾಗಿಯೂ ನೀನು ಅವರ ಮಗಳಲ್ವೆ?”

ಕ್ಯಾಥರೀನ್ ತಲೆ ಅಲ್ಲಾಡಿಸಿದಳು. “ಸ್ವಂತ ಮಗ ಮದುವೆಯಾಗಿ ಬೇರೆ ಮನೆಯಲ್ಲಿದ್ದಾನೆ. ಹುಡುಗಿಯರೂ ಅವರ ಗಂಡನ ಮನೆಯಲ್ಲಿ. ದೊಡ್ಡ ಮನೆ…. ಬೇಸರ ಕಳೆಯಲು ನನ್ನನ್ನು ತಂದದ್ದು. ಈ ಡ್ಯಾಡಿಗೆ ನನ್ನ ಮೇಲೆ ಪ್ರೀತಿ ಇದೆ. ಆದ್ರೆ ಮಮ್ಮಿ ಸಿಟ್ಟು ಬಂದ್ರೆ ಬೆನ್ನಮೂಳೆ ಮುರಿಯುತ್ತಾರೆ. ಇಲ್ನೋಡು ಬೆತ್ತದ ಏಟು”.

ದಂತದ ಮೈಯಲ್ಲಿ ಏಟಿನ ಗುರುತು ಹಸುರುಗಟ್ಟಿದೆ. “ಕರುಣಾ… ಈ ಸೇರಾ, ನಾನೂ ಒಟ್ಟಿಗೆ ಕಾನ್ವೆಂಟಿನಲ್ಲಿ ಇದ್ದದ್ದು, ಓದಿದ್ದು. ಅವಳ ಹೆಲ್ತು ತುಂಬ ಡೆಲಿಕೇಟ್… ಯಾವುದಕ್ಕೂ ಹಟ-ಸುಳ್ಳು ಹೇಳಿದ ಹುಡುಗಿಯಲ್ಲ. ಇವಳೆಂದ್ರೆ ಮದರ್ ಮಾರ್ಥಾ ಅವರಿಗೆ ಅಚ್ಚುಮೆಚ್ಚು, ನೀನೇ ನೋಡಿದ್ದೀಯಲ್ಲ- ಸೇರಾ ನೋಡೋದಕ್ಕೆ ಅಂಥ ಚಂದ ಅಲ್ಲ. ಆದ್ರೆ ಅವಳ ಗುಣ, ರೂಪಕ್ಕೆ ಯಾವುದೋ ಹೆಚ್ಚಿನ ಆಕರ್ಷಣೆ ಕೊಟ್ಟಿದೆ. ಈಗ ಮೂರು ವರ್ಷಗಳಲ್ಲಿ ಕಾನ್ವೆಂಟಿನ ಓದು ಮುಗಿಸಿ, ಸ್ವತಂತ್ರ ಪುಟ್ಟ ಮನೆ ಮಾಡಿದ್ದು, ಎರಡು ವರ್ಷ ಒಂದೆರಡು ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ಅಲ್ಲಿ ಇಲ್ಲಿ ಫರ್ಮುಗಳಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಲೇ ಇದ್ದಳು. ಯಾವಾಗ ‘ಟ್ರಾಕ್ಟರ್ ಮಲೇಶಿಯಾ’ದಂಥ ದೊಡ್ಡ ಕಂಪನಿಯಲ್ಲಿ ಟೈಪಿಸ್ಟ್‌, ನಂತರ ಅವಳ ಶ್ರಮ, ಗುಣಕ್ಕೆ ತಕ್ಕಂತೆ ಸೆಕ್ರೆಟರಿ ಪೋಸ್ಟು ಸಿಕ್ಕಿತೋ ಬದುಕಿನಲ್ಲಿ ಬರಿಯ ಕತ್ತಲಿಲ್ಲ, ಬೆಳಕಿದೆ ಎಂದು ಅವಳಿಗನ್ನಿಸಿದ್ದು! ನಿತೀನ್ ಆಫೀಸಿನಲ್ಲಿ ಅವಳು ಎಲ್ಲರಿಗೂ ಬೇಕು. ಅವಳೊಂದು ಮಗು ಇದ್ದ ಹಾಗೆ. ಅವಳನ್ನು ಮೆಚ್ಚಿ ಮದುವೆ ಆಗ್ತೇನೆ ಎಂದು ದುಂಬಾಲು ಬಿದ್ದಿದ್ದಾನೆ ಅವಳ ಬಾಯ್ ಫ್ರೆಂಡು ಎಂದೆನಲ್ಲ…. ಒಳ್ಳೆ ಸ್ಮಾರ್ಟ್ ಇದ್ದಾನೆ. ಇವಳಿಗೂ ಮನಸ್ಸಿದೆ… ಕೈಯಲ್ಲಿ ಇನ್ನಷ್ಟು ಹಣ ಬೇಕು ಎಂದಿವಳ ಹಟ.”

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಕರುಣಾಳ ಮನಸ್ಸಿನ ಕಣ್ಣು… ಸೇರಾ ಇಲ್ಲಿಗೆ ಬಂದ ಪ್ರಸಂಗ ಜ್ಞಾಪಿಸಿಕೊಂಡಿತು. ತುಂಬು ನಗು. ಅವಳನ್ನು ತಾನೂ ಮೆಚ್ಚಿಕೊಂಡದ್ದು ಅದಕ್ಕೇ. ತಾನು ಇಂಡಿಯಾದಿಂದ ಊರು ಬಿಟ್ಟು ಬಂದವಳೆಂದೋ ಏನೋ ತನ್ನ ಮಾತೇ ವೇದವಾಕ್ಯ ಎನ್ನುವಂತೆ ಇತ್ತೀಚೆಗೆ ಅವಳಲ್ಲಿ ತುಂಬಾ ಬದಲಾವಣೆ. “ಸೇರಾ ನಿನ್ನ ಮಾತು ಕೇಳಿ ಊಟ-ಬಟ್ಟೆಯಲ್ಲಿ ಬಹಳಷ್ಟು ಆಸಕ್ತಿ ವಹಿಸಿದ್ದಾಳೆ ಕರುಣಾ” ಎಂದಿದ್ದ ನಿತೀನ್. ಬೇಸಿಲ್‌ನ ಮದುವೆಯಾಗೋದಕ್ಕೆ ಅವಳಿಗೂ ಇಷ್ಟವಿದೆ. ಕೇವಲ ಹಣಕ್ಕಾಗಿ ಅವಳು ಹಿಂಜರಿದಂತೆ ಕಾಣದು. ಮತ್ತೇಕೆ ಮದುವೆ ಬೇಡ ಎನ್ನುತ್ತಿದ್ದಾಳೆ? ಅವಳೆದೆಯಲ್ಲಿ ಯಾವ ನೋವು ಮನೆಮಾಡಿಕೊಂಡಿದೆ?… ಪಾಠಕ್ಕಾಗಿ ಮತ್ತೆ ಪುಟ ತಿರುಗಿಸಿದಳು… ಆದರೆ ಅವಳಿಗೆ ಇವೊತ್ತು ಅದರಲ್ಲಿ ಇಂಟ್ರೆಸ್ಟ್ ಉಳಿದಿರಲಿಲ್ಲ. “ಕ್ಯಾಥರಿನ್, ಪಾಠ ಇವೊತ್ತು ಸಾಕು… ಸೇರಾಗೆ ಲವ್ ಅಫೇರ್‌ನಲ್ಲಿ ಎಲ್ಲಾದ್ರೂ….”

ಕ್ಯಾಥರೀನ್ ಜೋರಾಗಿ ತಲೆ ಅಲ್ಲಾಡಿಸಿಬಿಟ್ಟಳು. “ಇಲ್ಲ ಕರುಣಾ, ಅಂಥ ಹುಡುಗೀನೇ ಅವಳಲ್ಲ. ಅವಳಿಗೆ ಎಳೆ ಪ್ರಾಯದಲ್ಲಿ ಬಿದ್ದ ಪೆಟ್ಟು! ಕಾನ್ವೆಂಟಿನಲ್ಲಿ ಓದುತ್ತಿದ್ಲು ಎಂದೆನಲ್ಲ… ನಾವಿಬ್ರೂ ಜೊತೆಯಾಗಿಯೇ ಎಲ್ಲಿಗೆ ಹೋದರೂ, ಓದುತ್ತಿದ್ದದ್ದೂ ಹಾಗೆ. ಮಲಗುವ ಕಾಟೂ ನಮ್ಮದು ಅಕ್ಕಪಕ್ಕದ್ದು.”

“ಕಾನ್ವೆಂಟಿನಲ್ಲಿ ಬಡತನದಿಂದಾಗಿ ತಮ್ಮ ಮಕ್ಕಳನ್ನು ಬಿಟ್ಟುಹೋದ ತಂದೆ-ತಾಯಿಗಳು ಆಗಾಗ ಬಂದು ತಮ್ಮ ಮಕ್ಕಳ ಯೋಗಕ್ಷೇಮ…. ತಮ್ಮಿಂದ ಅವರಿಗೆ ದೊರಕಲಾರದ ವಿದ್ಯೆ ಇಲ್ಲಿ ಸಿಕ್ಕು ಅವುಗಳ ಭವಿಷ್ಯ ಬೆಳಗುವ ಸಂತಸ… ಬರುವಾಗ ಚಿಕ್ಕಪುಟ್ಟ ಗಿಫ್ಟ್ ಮಕ್ಕಳ ಕೈಗಿತ್ತು, ಅವರು ಹಿಂತಿರುಗುವ ನೋಟ ಸೇರಾನ ನೆನಪಿನಲ್ಲಿ ಒಳಗೊಳಗೆ ಇಳಿದು. ‘ತನ್ನ ತಂದೆ-ತಾಯಿ ಇದ್ದಾರೆಯೇ? ಇದ್ದಿದ್ದರೆ ಅವರೂ ಇಲ್ಲಿಗೆ ಬಂದು ತನ್ನನ್ನೇಕೆ ನೋಡದೆ ಇರುತ್ತಿದ್ದರು?” ಈ ಯೋಚನೆ ಅವಳೆದೆಯನ್ನು ಕೆದಕಿದಾಗಲೆಲ್ಲ ನನ್ನೊಡನೆ ಒಂದೆರಡು ಸಾರಿ ಮಾತಾಡಿದ್ದಳು. ಇಬ್ಬರೂ ರಾತ್ರಿಯಲ್ಲಿ ಪ್ರೇಯರ್ ಮುಗಿಸಿ, ಬೆಡ್ಡಿನಲ್ಲಿ ಮಲಗಿದಲ್ಲೇ ಕುಚುಕುಚು ಮಾತನಾಡುತ್ತಿದ್ದರೆ ಅಕ್ಕ ಪಕ್ಕದ ಬೆಡ್ಡಿನಲ್ಲಿದ್ದ ಹುಡುಗಿಯರು ‘ನಮ್ಮ ನಿದ್ದೆ ಡಿಸ್ಟರ್ಬ್ ಯಾಕೆ ಮಾಡ್ತೀರಾ? ಬೆಳಗ್ಗಿನ ಸಮಯ ನಿಮಗೆ ಸಾಲದಾಯಿತೇನೋ?’ ಎಂದು ಗೊಣಗಿದರೆ, ಹುಡುಗಿಯರ ಮಾತಿಗೆ ಉತ್ತರ ಎನ್ನುವಂತೆ ನಮ್ಮ ಪಿಸುಮಾತು ನಿಂತೂ ಸೇರಾಗೆ ಹಗಲು-ರಾತ್ರಿ ಇದೇ ಯೋಚನೆ, ಅವಳೆದೆಯನ್ನು ಕೊರೆದು ಹುಡುಗಿ ಕೊರಗುತ್ತ ಬಂದಳು.

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

”ಒಂದು ದಿನ ನಾನೇ ಹೇಳಿದೆ: ‘ನೋಡು ಸೇರಾ, ಮದರ್ ಹತ್ತಿರ ನಿನ್ನಾಸೆ ಹೇಳು. ಅವರು ದೊಡ್ಡವರು. ನಿನ್ನ ಡ್ಯಾಡಿ, ಮಮ್ಮಿ ಇದ್ರೆ ಕರೆಸುತ್ತಾರೆ. ಈಗ ನೋಡು, ನಂಗೆ ಮಮ್ಮಿ-ಡ್ಯಾಡಿ ಇಲ್ಲ. ಅವರು ಎಲ್ಲಿಂದ ಬರಬೇಕು? ಹಾಗೆ ನಿಂಗೂ ಇಲ್ಲದಿದ್ರೆ…” ಸೇರಾನ ಕಣ್ಣುಗಳಲ್ಲಿ ಝಗ್ಗನೆ ಬೆಳಗಿದ್ದ ಬೆಳಗು ‘ಇಲ್ಲದಿದ್ರೆ’ ಎಂದಾಗ ಬೆಳಕು ಕಳೆದುಕೊಂಡ ಕಣ್ಣಿನಂತೆ ಅವಳು ತೀರ ಸೋತಿದ್ದಳು. ಕರುಣಾ, ನನಗಿನ್ನೂ ನೆನಪಿದೆ…. ಯಾಕೆ ಹೀಗೆ ಹೇಳಿದೆ ನಾನು? ಸೇರಾನ ಪಾಲಿಗೆ ಅವಳ ಮಮ್ಮಿ-ಡ್ಯಾಡಿ ಜೀವಂತವಿದ್ದಾರೆ. ಆದರೆ ನನಗೆ ಅನುಮಾನ. ಇದ್ದಿದ್ದರೆ ಉಳಿದ ತಂದೆ-ತಾಯಿ ತಮ್ಮ ಮಕ್ಕಳನ್ನು ನೋಡಲು ಬಂದಂತೆ ಸೇರಾನ್ನ ನೋಡಲು ಅವರೂ ಬರುತ್ತಿದ್ದರು. ಆದರೆ ಸೇರಾ ಅವರಿಲ್ಲ ಎಂದು ಒಪ್ಪಲು ತಯಾರಿಲ್ಲ. ಅವಳಲ್ಲಿದ್ದ ನೋಡುವ ಆಸೆ ಎಷ್ಟು ಉತ್ಕಟವಾಯಿತೆಂದರೆ ಈ ವರೆಗೂ ಕಾಣದಿದ್ದ ಮಮ್ಮಿ-ಡ್ಯಾಡಿಗಾಗಿ ರಾತ್ರಿಯೆಲ್ಲಾ ಸೇರಾ ಕನವರಿಕೆಯಲ್ಲಿ ಅಳುತ್ತಿದ್ದಳು. ನಾನು ಮೂಕಪ್ರೇಕ್ಷಕಳಾಗಿ ನೋಡುತ್ತಿದ್ದೆ, ಕೇಳುತ್ತಿದ್ದೆ, ತಿಳಿಯದೆ ನನ್ನ ಕಣ್ಣುಗಳಿಂದಲೂ ನೀರು ತೊಟ್ಟು ತೊಟ್ಟಾಗಿ ಇಳಿಯುತ್ತಿತ್ತು. ಇದಕ್ಕೆ ಉಪಾಯವೇನು? ಎಂದು ನಾನೂ ಯೋಚನೆಯಲ್ಲಿ ಬಿದ್ದೆ.

ಆ ದಿನ ಧೈರ್ಯ ಮಾಡಿ ಸೇರಾನ್ನ ಕರೆದುಕೊಂಡು ಮದರ್ ಅವರೆದುರು ನಿಂತೆ. ನಾನೇ ಹೇಳಿದೆ: ‘ಮದರ್ ಸೇರಾಗೆ… ಅವಳ ಮಮ್ಮಿ-ಡ್ಯಾಡಿ ಬಗ್ಗೆ ತಿಳಿಯಬೇಕಾಗಿದೆಯಂತೆ. ಅವರನ್ನು ನೋಡಬೇಕು ಎನ್ನೋ ಆಸೆಯಲ್ಲಿ ರಾತ್ರಿ ನಿದ್ದೆಯಲ್ಲೂ ಅಳ್ತಾಳೆ….’

ಮದರ್ ಸೇರಾಳ ತಲೆ ನೇವರಿಸಿದರು. ಸೇರಾ ಬಿಕ್ಕುತ್ತಿದ್ದಳು. ‘ಆದ್ರೂ ಟೈ ಮಾಡ್ತೇನೆ. ನಿನ್ನ ಬಿಟ್ಟು ಹೋದ್ಮೇಲೆ ಒಮ್ಮೆಯೂ ಇಲ್ಲಿ ಬಂದಿಲ್ಲ…. ನಿನ್ನ ಬಗ್ಗೆ ಎನ್‌ಕ್ವಾಯರಿನೂ ಮಾಡಿಲ್ಲ. ಈ ವಿಷಯ ಪೇಪರಲ್ಲಿ ಕೊಡ್ತೇನೆ, ನೋಡುವಾ. ಮನಸ್ಸಿಗೆ ಬೇಜಾರು ಮಾಡಬೇಡ. ಬಿ ಹ್ಯಾಪಿ.’

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

“ಮತ್ತೂ ಸೇರಾ ಮೊದಲಿನಂತೆ… ಆಡುವ ಮಾತುಗಳಲ್ಲಿ, ನಿದ್ದೆಯಲ್ಲಿ ನಡುನಡುವೆ ಎದ್ದು ಮತ್ತೆ ಮಲಗಬೇಕು. ನಾನು ಕಾಟಿನ ಸದ್ದಿಗೆ ಎಚ್ಚರಾಗಿ ನೋಡಿದರೆ ಅವಳು ಎದ್ದು ಏನೋ ಜ್ಞಾಪಿಸಿ ಮಾತು-ನಗು, ತಟ್ಟನೆ ಮೆಟ್ಟಿ ಬಿದ್ದಂತೆ ಆಚೀಚೆ ನೋಡಿ ಮತ್ತೆ ಮಲಗಬೇಕು. ಇನ್ನು ನನಗೆ ತಡೆಯಲಾಗಲಿಲ್ಲ. ಎದ್ದೆ. ಸೇರಾನ ಹೆಗಲು ತಟ್ಟಿದೆ. ಅವಳು ಬೆಚ್ಚಿಬಿದ್ದಳು. ಏನಿದು? ಬದುಕೋದಕ್ಕಷ್ಟು ಊಟ ಮಾಡ್ತಿ… ಕ್ಲಾಸಿನಲ್ಲಿ ನಡೆಯೋ ಪಾಠದಲ್ಲೂ ನಿಂಗೆ ಎಚ್ಚರವಿಲ್ಲ. ರಾತ್ರಿ ನಿದ್ದೆ ಇಲ್ಲ…. ಏನೂ ಗೊತ್ತಿಲ್ಲದ ಮಮ್ಮಿ, ಡ್ಯಾಡಿಯ ನೆನಪು ನಿನ್ನನ್ನು ಇಷ್ಟು ಹಿಂಡಿದ್ರೆ ಹೇಗೆ? ನೀನು ಇಷ್ಟು ದಿನ ಬದುಕಿಲ್ವಾ? ಮದರ್ ಪೇಪರಲ್ಲಿ ನಿನ್ನ ಬಗ್ಗೆ ಎಲ್ಲ ವಿವರ ಕೊಟ್ಟಿದ್ದಾರೆ. ಪಕ್ಕನೆ ಅವರು ಬಂದೂ ಅಂದಿಟ್ಕೊ… ನೀನು ಎಲುಬು-ಚರ್ಮ ಆದ್ರೆ… ಅವರಿಗೆ ಏನಾಗಬೇಡ!”

“ಇದು ಸೇರಾನ್ನ ಸಂತೈಸಲು ನಾನಾಡಿದ ಮಾತಷ್ಟೆ, ಅವರು ಬದುಕಿದ್ದರೆ, ಮಗಳನ್ನು ನೋಡಲು ಒಂದ್ಸಾರಿಯಾದರೂ ಇಲ್ಲಿ ಬಾರದಿರುತ್ತಿದ್ದರೆ? ಬದುಕಿದ್ದರೆ ಅವರೆಂಥ ತಂದೆ-ತಾಯಿ?”

ಸೇರಾ ನನ್ನನ್ನ ತಬ್ಬಿ ‘ಇಲ್ಲ ಕ್ಯಾಥರೀನ್… ಯಾಕೆ ಈ ಆಸೆ ಹುಟ್ಟಿದೆಯೋ… ಯಾವಾಗ್ಲೂ ಇಲ್ಲದ ಹುಚ್ಚು ನನ್ನಲ್ಲಿ ಸೇರಿ ಮನಸ್ಸಿನ ನೆಮ್ಮದಿಯೇ ಕದಡಿದೆ. ಇಕಾ ಪ್ರಾಮಿಸ್… ನೀನು ಹೇಳಿದ್ದು ಕೇಳೇನೆ.’

“ಒಂದು ವಾರದಲ್ಲಿ ಮದರ್‌ಗೆ ಸೇರಾನ ತಂದೆಯಿಂದ ಕಾಗದ ಬಂತು! ವೀಕ್ ಎಂಡ್‌ನಲ್ಲಿ ತಾವಿಬ್ಬರೂ ಬಂದು ಮದರನ್ನ ಕಾಣೋದಾಗಿ ಬರೆದಿದ್ದರು. ಮದರ್ ಲೆಟರ್ ತೋರಿಸಿದರೆ ಸೇರಾ ಬೆರಳು ಬಾಯಲ್ಲಿಟ್ಟು ನಾಚಿಕೆಯಲ್ಲಿ ನನ್ನ ಹಿಂದೆ ನಿಲ್ಲಬೇಕಾ!”

”ಬೆಳಿಗ್ಗೆ ಸೇರಾ ತೀರಾ ಹೊಸ ಹುಡುಗಿ! ಎಂಥ ಮಾರ್ಪಾಡು! ಕ್ಲಾಸಿನ ಪಾಠದಲ್ಲಿ ಏಕಚಿತ್ತ, ಊಟದಲ್ಲಿ ಆಸಕ್ತಿ… ಬಟ್ಟೆ, ಮೇಕಪ್ಪಿನಲ್ಲಿ ಉತ್ಸುಕತೆ… ಕೂದಲನ್ನ ನಾನಾ ಬಗೆಯಾಗಿ ಬ್ರಶ್ ಮಾಡಿಕೊಳ್ಳೋದು… ಕಣ್ಣ ರೆಪ್ಪೆಗಳಿಗೆ ಐಲಾಶಸ್ಸ್, ತುಟಿಗೆ ಲಿಪ್‌ಸ್ಟಿಕ್… ಉಗುರು… ಏನು ಮಾಡಲು ಸಾಧ್ಯವೋ ಅದೆಲ್ಲ ನಮ್ಮ ರೂಮಿನಲ್ಲೇ ಪ್ರಯೋಗ! ನನ್ನೆದುರು ನಿಂತು, ‘ಕ್ಯಾಥರೀನ್, ನಾನೀಗ ಹ್ಯಾಗೆ ಕಾಣ್ತೇನೆ? ಪುಟ್ಟ ಮಗೂನ್ನ ಮಮ್ಮಿ ಬಿಟ್ಟು ಹೋದದ್ದು ಅಂದ್ರಲ್ಲ ಮದರ್…. ಈಗ ನೋಡಿದ್ರೆ ನನ್ನ ಗುರುತು ಹ್ಯಾಗೆ ಸಿಗಬೇಕು? ಓ! ಇಮ್ಯಾಜಿನ್ ಮಾಡೋದಕ್ಕೇ ಸಾಧ್ಯವಿಲ್ಲ. ಎಂಥ ಥ್ರಿಲಿಂಗ್….’ ಎಲ್ಲಿ ಇವಳಿಗೆ ಹುಚ್ಚು ಹಿಡಿಯುತ್ತದೋ ಎಂದು ಅವಳನ್ನು ಹಿಡಿದಿಡುವುದೇ ನನಗೆ ಪ್ರಯಾಸವಾಗಿತ್ತು. ಇಲ್ಲ ಎನ್ನುವ ಮಮ್ಮಿ, ಡ್ಯಾಡಿ ಇದೇ ವೀಕ್ ಎಂಡ್‌ಗೆ ಬರ್‍ತಾರೆ ಎಂದು ತಿಳಿದಾಗ ನನಗೂ ಇದೇ ಹುಚ್ಚು. ಇದೇ ಅವಸ್ಥೆ. ನಾನು ಸೇರಾನ್ನ ಗಲ್ಲ ಹಿಂಡಿ ‘ನನ್ನ ಮರೆಯುತ್ತೀಯಾ?’ ಎಂದೆ, ‘ಊಹೂಂ, ನನ್ನ ಸಿಸ್ಟ‌ರ್ ಅಲ್ವ ನೀನು. ನಾವಿಬ್ರೂ ಅವಳಿಜವಳಿ, ಬಿಟ್ಟಿರೋದು ಹ್ಯಾಗೆ?’ ನನ್ನ ಗಲ್ಲಕ್ಕೆ ಮುದ್ದಿಟ್ಟು, ಕಚ್ಚಿಬಿಟ್ಟಾಗ ಈ ಗಲ್ಲ ಉಳಿಸುತ್ತಾಳೋ ಇಲ್ಲವೋ ಎನ್ನುವ ಭಯ ನನಗೆ ಆ ಕ್ಷಣ ಮೂಡಿತ್ತು.

ಇದನ್ನು ಓದಿದ್ದೀರಾ?: ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಬೆಳಗನ್ನೇ ಕಾಯುತ್ತಿದ್ದ ಸೇರಾ ಬಾತ್‌ ರೂಮಿನಲ್ಲಿ ಡ್ಯಾನ್ಸ್ ಮಾಡುತ್ತಿದ್ದಳೋ… ಸ್ನಾನ ಮಾಡುತ್ತಿದ್ದಳೋ ಬಾಗಿಲ ಸಂದಿನಿಂದ ಅವಳ ಮ್ಯೂಜಿಕ್ ಲಲಲಲಾ… ಡಾಲಿಂಗ್ ಸೋಪಿನ ಕಂಪು ತೂರಿ ಬಂದಾಗ ನಾನೇ ಬಾಗಿಲು ಬಡಿದೆ, ‘ಸಾಕಿನ್ನು ಹೊರಗೆ ಬಾ… ಉಳಿದವರಿಗೂ ಸ್ನಾನಕ್ಕೆ ಬಾತ್ ರೂಮು ಬೇಕು. ಮದರ್ ಕರೆದಾಗ್ಲೂ ನೀನಿನ್ನೂ ಸ್ನಾನ ಮಾಡುತ್ಲೇ ಇರು….’

“ಸೇರಾ, ಕೆಂಪು ಗುಲಾಬಿಯಾಗಿದ್ದಳು. ಎಷ್ಟು ಆಸೆ… ಎಂಥ ಸಂಭ್ರಮ ತುಂಬಿತ್ತು ಆ ಕಣ್ಣುಗಳಲ್ಲಿ. ಹೆತ್ತ ತಂದೆ-ತಾಯಿಗಳನ್ನು ಈಗಲಾದರೂ ನೋಡುವ ಭಾಗ್ಯ ದೊರಕಿದೆ. ಅವಳನ್ನ ಅವರು ಕರೆದೊಯ್ದರೆ? ನಾನು.. ನನ್ನ ಬದುಕಿನಲ್ಲಿ ಮಮ್ಮಿ-ಡ್ಯಾಡಿ? ಅಷ್ಟರಲ್ಲೇ ಚೇತರಿಸಿಕೊಂಡೆ.”

ನಾನೇ ಸೇರಾಗೆ ಕೆಂಪು ಮಿಡಿ ತೊಡಿಸಿ. ಇಂಟಿಮೇಟ್ ಸ್ಪ್ರೇ ಮಾಡಿದೆ. ಕೂದಲನ್ನು ಬ್ರಶ್ ಮಾಡಿದೆ. ಸೇರಾ ಒಮ್ಮೆಲೆ ನನ್ನ ಕೈ ಹಿಡಿದು ‘ಕ್ಯಾಥರೀನ್, ನನಗೆ ನನ್ನ ಮಮ್ಮಿ-ಡ್ಯಾಡಿ ಬಂದ ಹಾಗೆ ಕಾಣ್ತದೆ. ಒಂದು ನಿಮಿಷ ಮೆಲ್ಲ ಹೋಗಿ ನೋಡಿ ಬರೋಣವಾ?’ ಎಂದಾಗ ಅವಳ ಅವಸರಕ್ಕೆ ನಗು ಬಂತು. ‘ಮದರ್ ಬಂದ ಕೂಡಲೇ ಹೇಳಿ ಕಳಿಸ್ತೇನೆ ಎಂದಿಲ್ವೆ?’ ‘ಇಲ್ಲ ಕ್ಯಾಥರೀನ್, ಒಂದೇ ನಿಮಿಷ…. ಹೋಗಿ ನೋಡಿದ್ರೆ ನಿನ್ನ ಕಾಲು ಸವೆಯುತ್ತವಾ? ಬಾ…. ಒಂದೇ ಒಂದು ನಿಮಿಷ ಆ ನಂತರ ಮದರ್ ಕರೆಸೋವರೆಗೆ ಹೀಗೆ ಸುಮ್ನೆ ಕೂತಿರ್‍ತೇನೆ. ಇಕಾ ಇನ್ನೊಂದು ಕಿಸ್…’ ಸೇರಾ ನನ್ನ ಕೈ ಹಿಡಿದೆಳೆಯುತ್ತ ಮದ‌ರ್ ರೂಮಿನ ಬಳಿಗೆ ಕರೆತಂದಳು.

ಇದನ್ನು ಓದಿದ್ದೀರಾ?: ಉಮಾ ರಾವ್ ಅವರ ಕತೆ | ಅಗಸ್ತ್ಯ

‘ಒಳಗಡೆ ಯಾರೊಡನೆಯೋ ಮದರ್ ಮಾತಾಡುತ್ತಿದ್ದರು. ಒಳಗಿದ್ದವರ ಮುಖ ಸ್ವಲ್ಪ ಕಾಣುತ್ತಿತ್ತು. ಆಧುನಿಕ ವೇಷಭೂಷಣದಲ್ಲಿದ್ದ ದಂಪತಿಗಳು…. ಬೆಲೆಬಾಳುವ ಮ್ಯಾಕ್ಸಿಯಲ್ಲಿ, ಲೇಟೆಸ್ಟ್ ಸ್ಟೈಲ್‌ನಲ್ಲಿ ಶೃಂಗರಿಸಿಕೊಂಡ ಮುದ್ದಾದ ಹುಡುಗಿ ಅವರಿಬ್ಬರ ನಡುವೆ ಕೂತಿದ್ದಳು.

‘ಇವಳು ಸೇರಾನ ತಂಗಿಯೋ…. ಮುದ್ದಾಗಿದ್ದಾಳೆ. ಹಾಗಾದ್ರೆ ನಿಮ್ಗೆ ಸೇರಾನ ನೆನಪೇ ಆಗಿಲ್ಲ. ಆದ್ರೆ ಸೇರಾ ತನಗೆ ತಂದೆ-ತಾಯಿ ಇಲ್ಲ… ಅದಕ್ಕೆ ಇಲ್ಲಿ ಬಂದಿಲ್ಲ… ಎಂದುಕೊಂಡದ್ದು ಈವರೆಗೆ. ದಿನಾ ಬೇರೆ ಮಕ್ಕಳ ತಂದೆ… ತಾಯಿ ಬರ್‍ತಾರೆ. ಸಾಕಲು ಆಗದವರು ಏನಾದರೂ ಗಿಫ್ಟ್ ತಂದು ಕೊಡ್ತಾರೆ… ಸಾಕುವ ಶಕ್ತಿ ಬಂದವರು ಇಲ್ಲಿಂದ ಕರ್‍ಕೊಂಡು ಹೋಗ್ತಾರೆ. ಸೇರಾಗೆ ಇತ್ತೀಚೆಗೆ ತನ್ನವರನ್ನು ಕಾಣುವ ಹಂಬಲ ಹೆಚ್ಚಾಗಿ ಈ ಎಡ್ವರ್ಟಾಯಿಜ್‌ಮೆಂಟ್ ಕೊಡಿಸಿದ್ದು. ಅವಳು ನಿಮಗಾಗಿ ತುಂಬ ಚಡಪಡಿಸುತ್ತಿದ್ದಾಳೆ. ಈಗ ತಿಳಿಸಿದ್ರೆ….’

“ಮದರ್, ನೀವು ಕೊಟ್ಟ ಪೇಪರ್ ಎಡ್ವರ್ಟಾಯಿಜ್‌ಮೆಂಟ್‌ಗೆ ರಿಗಾರ್ಡ್ ತೋರಿಸಬೇಕಾದ್ದು ನಮ್ಮ ಕರ್ತವ್ಯ. ಸೇರಾ ಹುಟ್ಟುವಾಗ್ಲೆ ತೀರ ಅಶಕ್ತ…. ಅವಳನ್ನು ನೋಡಿಕೊಳ್ಳೋದು ನನ್ನ ಮಿಸೆಸ್‌ಗೂ ಆಗಲಿಲ್ಲ….. ನನಗೆ ಆಗ ಮಕ್ಕಳ ಬಗ್ಗೆ ತೀರ ಅಸಹ್ಯ.. ಸೇರಾ ಆಗ ಹುಟ್ಟಿದ್ದೇ ಬೇಡವಾಗಿತ್ತು. ಹೀಗಾಗಿ ಇಲ್ಲಿ ನಾವು ತಂದು ಬಿಟ್ಟದ್ದು. ಅವಳಿಗೆ ನಾವು ಇದ್ದದ್ದೇ ಗೊತ್ತಾಗಬಾರದೆಂದಿತ್ತು. ಐದು ವರ್ಷಗಳ ನಂತರ ಈ ನಾನ್ಸಿ ಹುಟ್ಟಿದ್ದು. ಇವಳು ಹುಟ್ಟಿದ್ದೇ ನಮಗೆ ಅದೃಷ್ಟ ತೆರೆದದ್ದು. ಇವಳು ಚಂದದ ಗೊಂಬೆ. ಆರೋಗ್ಯವಂತ ಮಗು… ನಾವಿಬ್ಬರೂ ಇವಳನ್ನು ಅರೆಕ್ಷಣ ಬಿಟ್ಟಿರಲು ಸಾಧ್ಯವಿಲ್ಲವಾಗಿದೆ. ಆದರೆ ನಿಮ್ಮ ಕಾಗದ ಮತ್ತೆ ಬಂದಾಗ… ಒಮ್ಮೆ ನೋಡಿ ಬರೋಣ ಎಂದು ಬಂದದ್ದು. ಅವಳಿಗೆ ನಾವು ಗಿಫ್ಟ್ ತಂದಿದ್ದೇವೆ. ಆದ್ರೆ ಕರ್‍ಕೊಂಡು ಹೋಗಲು ಮಾತ್ರ ಸಾಧ್ಯವಿಲ್ಲ. ವಿ ಆರ್ ರಿಯಲಿ ಸಾರಿ ಮದರ್….”

ಸೇರಾ ಪೂರಾ ಬಿಳಿಚಿಕೊಂಡಿದ್ದಳು. ಮೈ ಥರಥರ ನಡುಗುತ್ತಿತ್ತು. ನನ್ನ ಕೈ ಎಳೆದುಕೊಂಡು ರೂಮು ಸೇರಿದವಳೇ ಬಾಗಿಲು ಹಾಕಿ ನನ್ನ ಕೊರಳಿಗೆ ತೆಕ್ಕೆ ಬಿದ್ದು, ‘ಕ್ಯಾಥರೀನ್, ಮದರ್‌ಗೆ ಹೇಳು, ನನಗೆ ಅವರನ್ನ ನೋಡೋ ಆಸೆ ಇಲ್ಲ. ಯಾರ ಗಿಫ್ಟೂ ಬೇಡ. ನಮ್ಮಿಬ್ಬರಿಗೂ ಮಮ್ಮಿ…. ಡ್ಯಾಡಿ ಇಲ್ಲ. ನಾವಿಬ್ಬರೂ ಅವಳಿ ಜವಳಿ, ಹೋಗು. ಮದರ್‌ಗೆ ಹೇಳು….’ ಇದಿಷ್ಟೇ ಅವಳು ಹೇಳಿದ್ದು.

ಇದನ್ನು ಓದಿದ್ದೀರಾ?: ಬಿ.ಟಿ. ಜಾಹ್ನವಿ ಅವರ ಕತೆ | ದೂಪ್ದಳ್ಳಿ ಸೆಕ್ಸಿ ದುರುಗ

ಕರುಣಾ ಕಲ್ಲುಗೊಂಬೆಯಂತೆ ಕುಳಿತಿದ್ದು ಮತ್ತೆ ಜೀವ ಬಂದದ್ದು ಅಲ್ಲಿದ್ದ ಫೋನ್ ಕಿರುಚಿಕೊಂಡಾಗ…. ಈಗ ನಿತೀನ್ ಮಾಡಿರಬೇಕು. ತನ್ನ ಪಾಠ ಮುಗಿಯುವ ಹೊತ್ತು. “ಹಲೋ… ಓ… ನೀನು! ಯಾಕೆ ಸ್ಪೆಶಲ್ಲಾಗಿ ಫೋನ್? ಹೌದು… ನನ್ನ ಕಂಡಿಷನ್ ಗೊತ್ತಲ್ಲ? ಸರಿ…. ಬೈ…”

ಕರುಣಾಳ ತುಟಿಯಲ್ಲಿ ನಗು ಮಿನುಗುತ್ತಿತ್ತು. ಕ್ಯಾಥರೀನ್ ಕೈಹಿಡಿದು- “ಸೇರಾನ ಫೋನ್… ನಾಡಿದ್ದು ನನ್ನ ಬರ್ಥ್‌ಡೇ ಅಂತ ರಜೆ ತೆಕ್ಕೊಂಡಿದಾಳಂತೆ.. ಅದಕ್ಕೆ ಬೇಸಲ್‌ನ ಕರ್‍ಕೊಂಡು ಬಂದ್ರೆ ನಿಂಗೆ ಪಾರ್ಟಿಯಲ್ಲಿ ಪ್ರವೇಶ ಎಂದೆ. ಅದಕ್ಕೆ ಸೇರಾ ಏನೆಂದಳು ಗೊತ್ತಾ? ಬರಿ ಪಾರ್ಟಿಯಲ್ಲಿ ಯಾಕೆ? ಲೈಫ್ ಪಾರ್ಟ್ನರ್ ಎಂದು ನಿನ್ನೆದುರೇ ಅವನನ್ನು ಸ್ವೀಕಾರ ಮಾಡ್ತೇನೆ. ನಿನ್ನ ಮಾತನ್ನು ಮೀರಿದ್ದೇನಾ ಅಂದ್ಲು…. ನಿನಗೆ ಸ್ಪೆಶಲ್ ಇನ್ವಿಟೇಶನ್ ಬೇಕಾ ಕ್ಯಾಥರೀನ್…?”

ಕ್ಯಾಥರೀನ್ ಮೂಗಿನ ತುದಿ ಕೆಂಪಾಗಿತ್ತು. ಅವಳಿಗೆ ಓ… ಕೆ… ಥ್ಯಾಂಕ್ಯೂ ಎನ್ನಲು ಮರೆತಿತ್ತು. ಕರುಣಾಳ ಗಲ್ಲಕ್ಕೆ ಮುದ್ದಿಟ್ಟು ‘ಬೈ’ ಎಂದಳು.

ಗೀತಾ ಕುಲಕರ್ಣಿ

ಗೀತಾ ಕುಲಕರ್ಣಿ(1927 – 1986): ಮುಂಬೈನಲ್ಲಿ ಜನಿಸಿದರು. ಮಾತೃಭಾಷೆ ತುಳು, ಶಾಲೆಯಲ್ಲಿ ಕಲಿತದ್ದು ಕನ್ನಡ. ಮಂಗಳೂರು ಮತ್ತು ಉಡುಪಿಯಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಇವರ ನಿಜ ನಾಮಧೇಯ ಅಹಲ್ಯಾ ಆಳ್ವ. ಶಿವರಾಮ ಕಾರಂತರ ಪತ್ನಿ ಲೀಲಾ, ಗೀತಾ ಅವರ ಸ್ವಂತ ಅಕ್ಕ. ಕಾರಂತರ ಪುತ್ತೂರಿನ ‘ಬಾಲಭವನ’ದಲ್ಲಿ ಸುಮಾರು 8 ವರ್ಷಗಳ ಕಾಲ ನೃತ್ಯ, ಅಭಿನಯ ಹಾಗೂ ಸಂಗೀತದ ತರಬೇತಿ ಪಡೆದರು. ಕಾರಂತರ ಮೂಲಕವೇ ಪರಿಚಿತರಾದ ಶೇಷಗಿರಿ ಕುಲಕರ್ಣಿ ಅವರನ್ನು ಅಂತರ್ಜಾತೀಯ ವಿವಾಹವಾದರು. ಆ ನಂತರ ಧಾರವಾಡದಲ್ಲಿ ನೆಲೆಯಾದರು. ಗೀತಾ ಅವರು ಬರೆದ ಮೊದಲ ಕಥೆ ‘ಅಂದು-ಇಂದು’. ಸಣ್ಣ ಕತೆಗಳ ಮುಖಾಂತರ ಸಾಹಿತ್ಯ ರಚನೆಯನ್ನು ಪ್ರಾರಂಭಿಸಿದ ಇವರು ಕಾದಂಬರಿಗಳು, ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ಪ್ರವಾಸಸಾಹಿತ್ಯ, ವಿಡಂಬನೆ ಎಲ್ಲವೂ ಸೇರಿ ಸುಮಾರು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಪ್ರಕಟಿತ ಕೃತಿಗಳು: ತೇಲಿಹೋದ ಮೋಡ, ಮೌನಸಂಧಾನ, ಸುವರ್ಣೆಯ ಗ್ರೀನ್‌ ರೂಂ, ಚಿಪ್ಪಿನೊಳಗಿನ ಮುತ್ತು, ಪಾತಾಳ, ಕಾಡುಗುಲಾಬಿ, ಅಪ್ಪಗೆ ಬರೆಯಬೇಕು(ಕಥಾ ಸಂಕಲನಗಳು); ಕಂಬನಿ ಒರೆಸಿದ ಕೈ, ಗರ್ಭ, ಸ್ವಪ್ನಮಂದಿರ, ಶೋಭನ, ದೀಪಮಿಂಚಿತು, ನೂಲಏಣಿ, ಸಂಬಂಧ(ಕಾದಂಬರಿಗಳು); ಹುರಿಗಾಳು(ವಿಡಂಬನೆ); ಹೂಮನೆ, ನೇಜಿಗುಬ್ಬಚ್ಚಿ, ಹಾರುವ ಕಂಬಳಿ, ಅರವತ್ನಾಲ್ಕು ವಿದ್ಯೆ, ಏಳು ಕನ್ನಿಕೆಯರು, ತುಳುಜಾನಪದ ಕಥೆಗಳು, ಇನ್ನಷ್ಟು ತುಳು ಜಾನಪದ ಕಥೆಗಳು(ಶಿಶು ಸಾಹಿತ್ಯ); ಕಿಟಕಿ ತೆರೆಯಿತು, ಕಲ್ಲುಗಳು(ನಾಟಕ); ತಿಮ್ಮಪ್ಪನಾಯಕ, ಮಹರ್ಷಿ ಕರ್ವೆ, ಸರೋಜಿನಿನಾಯ್ಡು (ಅನುವಾದ) ಮತ್ತು ಆಣಿ ಮುತ್ತುಗಳು(ವ್ಯಕ್ತಿಚಿತ್ರಗಳು); ಹಚ್ಚ ಹಸಿರಿನ ಮಲೇಷಿಯಾ(ಪ್ರವಾಸ ಕಥನ). ಕಲ್ಲುಗಳು ನಾಟಕವು ‘ಪತ್ಥರ್’ ಎಂಬ ಹೆಸರಿನಿಂದ ಹಿಂದಿಗೆ ಅನುವಾದಗೊಂಡಿದೆ. ಚಿಪ್ಪಿನೊಳಗಿನ ಮುತ್ತು ‘ಸೀಂಪ್‌ ಕಾ ಮೋತಿ’ ಎಂಬ ಹೆಸರಿನಿಂದ ದೆಹಲಿಯ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿಯೂ ಕ್ರಿಯಾಶೀಲರಾಗಿದ್ದ ಇವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆಯಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಗ್ರಂಥಾಲಯದ ಸಗಟು ಪುಸ್ತಕ ಖರೀದಿ ಸಮಿತಿಯ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡಮಿ ಕನ್ನಡ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ನೇರಮಾತಿನ, ದಿಟ್ಟಸ್ವಭಾವದ, ಅನಿಸಿದ್ದನ್ನು ನಿಸ್ಸಂಕೋಚವಾಗಿ ತಿಳಿಸುವ ಸ್ವಭಾವದ ಇವರು ಕಣ್ಮರೆಯಾದದ್ದು 1986ರ ಮೇ 25ರಂದು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೇಖಾರಾಣಿ ಅವರ ಕತೆ | ಪ್ರೀತಿಯಲ್ಲಿ ಕ್ಷಮೆಯಿರಲಿ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ವಿ.ಕೃ. ಗೋಕಾಕ್ ಅವರ ಕತೆ | ಹತಭಾಗ್ಯನ ಭಾಗ್ಯ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕಾಳೇಗೌಡ ನಾಗವಾರ ಅವರ ಕತೆ | ಕೂಡಿಕೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಜಿ.ಬಿ. ಜೋಶಿ ಅವರ ಕತೆ | ಡೂಗಜ್ಜನ ಬಹಿಷ್ಕಾರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...