ಪೊಲೀಸ್ ಎಸ್ಕಾರ್ಟ್‌ನ ಬಿಗಿ ಭದ್ರತೆಯಲ್ಲಿ ಉಡುಪಿಗೆ ಆಗಮಿಸಿದ ಭೂಗತ ಪಾತಕಿ ರವಿ ಪೂಜಾರಿ ಶನಿವಾರ ಮಲ್ಪೆಯಲ್ಲಿ ನಡೆದ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರಿ ನ. 12ರಂದು ನಿಧನರಾಗಿದ್ದರು. ಸ್ವಗ್ರಾಮಕ್ಕೆ ತೆರಳಿ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರವಿ ಪೂಜಾರಿಗೆ ನ್ಯಾಯಾಲಯ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಬೆಂಗಳೂರಿನ ಸಿಟಿ ಆರ್ಮ್ಡ್ ರಿಸರ್ವ್ (ಸಿಎಆರ್) ಪೊಲೀಸರ ಎಸ್ಕಾರ್ಟ್ ಭದ್ರತೆಯಲ್ಲಿ ಅವರನ್ನು ಉಡುಪಿಗೆ ಕರೆತರಲಾಗಿತ್ತು.

ಮಲ್ಪೆಯಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ರವಿ ಪೂಜಾರಿಯನ್ನು ಮತ್ತೆ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಅವರನ್ನು ಕರೆತರಲು ಮತ್ತು ವಾಪಸ್ ಕರೆದೊಯ್ಯಲು ಬೆಂಗಳೂರಿನ ಸಿಎಆರ್ ಪೊಲೀಸರಿಗೆ ನಿರ್ದೇಶನ ನೀಡಲಾಗಿತ್ತು. ಜೈಲು ಇಲಾಖೆಯಿಂದ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಹೆಚ್ಚುವರಿಯಾಗಿ ಉಡುಪಿ ಜಿಲ್ಲಾ ಪೊಲೀಸರಿಂದಲೂ ಸ್ಥಳೀಯ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.
ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.

ಕೊಲೆ, ಕೊಲೆ ಯತ್ನ, ಸುಲಿಗೆ, ಹಫ್ತಾ ವಸೂಲಿ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ರವಿ ಪೂಜಾರಿ ಆರೋಪಿಯಾಗಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕರ್ನಾಟಕವೊಂದರಲ್ಲೇ 90ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಸುಮಾರು 26 ವರ್ಷಗಳ ಕಾಲ ಭೂಗತ ಜಗತ್ತಿನಲ್ಲಿ ಸಕ್ರಿಯವಾಗಿದ್ದ ರವಿ ಪೂಜಾರಿಯನ್ನು 2019ರ ಜನವರಿ 19ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಬಂಧಿಸಲಾಗಿತ್ತು.






