ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ ಕಡಿಮೆ ಇಲ್ಲದಂತೆ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಬೇಕು ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಬಿ.ಎಸ್.ಎನ್.ಎಲ್. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲೆಯಾದ್ಯಂತ ಇರುವ ಬಿ.ಎಸ್.ಎನ್.ಎಲ್. ಸ್ಥಾವರಗಳನ್ನು 3ಜಿಯಿಂದ 4ಜಿಗೆ ಮೇಲ್ದರ್ಜೆಗೇರಿಸುವುದರೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು. ಟವರ್ಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಕೈಗೊಂಡು, ನೆಟ್ವರ್ಕ್ ಸಮಸ್ಯೆಗಳು ಉಂಟಾಗದಂತೆ ಅಗತ್ಯ ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲ ಸ್ಥಾವರಗಳಿಗೆ ಡೀಸೆಲ್ ಜನರೇಟರ್ಗಳನ್ನು ಅಳವಡಿಸಿ, ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಪವರ್ ಪ್ಲಾಂಟ್ಗಳ ನಿರಂತರ ಕಾರ್ಯನಿರ್ವಹಣೆಗೆ ಆದ್ಯತೆ ನೀಡುವುದರೊಂದಿಗೆ ಅಗತ್ಯವಿರುವ ಕಡೆ ಬ್ಯಾಟರಿ ಅಥವಾ ಸೋಲಾರ್ ಬ್ಯಾಟರಿಗಳನ್ನು ಅಳವಡಿಸಬೇಕು ಎಂದರು.
ಹೊಸ ಟವರ್ಗಳ ನಿರ್ಮಾಣಕ್ಕಾಗಿ ಜಿಲ್ಲಾಡಳಿತದಿಂದ ಬೇಡಿಕೆಗೆ ಅನುಗುಣವಾಗಿ 39 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ನಿವೇಶನಗಳಲ್ಲಿ ಟವರ್ ನಿರ್ಮಾಣ ಕಾಮಗಾರಿಗಳನ್ನು ಶೀಘ್ರ ಆರಂಭಿಸಬೇಕು. ಪೆರ್ಡೂರಿನ ಕುಕ್ಕುಂಡಿಯ ನಿವೇಶನದಲ್ಲಿನ ಮರ ತೆರವು ಕಾರ್ಯವನ್ನು ಅರಣ್ಯ ಇಲಾಖೆ ತ್ವರಿತವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಹಾಗೂ ಸಮೀಪದ ಆಸ್ಪತ್ರೆಗಳಲ್ಲಿ ನೆಟ್ವರ್ಕ್ ಸಮಸ್ಯೆ ಕಂಡುಬರುತ್ತಿರುವ ಬಗ್ಗೆ ಗಮನ ಸೆಳೆದ ಅವರು, ತಕ್ಷಣ ಸಮಸ್ಯೆ ಪರಿಹರಿಸಿ ಸೇವೆಯಲ್ಲಿ ಸುಧಾರಣೆ ತರಬೇಕು ಎಂದರು. ಕಾಪು ಮತ್ತು ಕಮಲಶಿಲೆಯಂತಹ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ನೆಟ್ವರ್ಕ್ ಸಮಸ್ಯೆಗಳ ಕುರಿತು ದೂರುಗಳು ಬರುತ್ತಿದ್ದು, ಅವುಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಬ್ರಹ್ಮಾವರ ತಾಲೂಕಿನ ಕರ್ಜೆ ಹಾಗೂ ಕಾಪು ತಾಲೂಕಿನ ಕಟಪಾಡಿಯಲ್ಲಿ ಟವರ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮತ್ತು ನಾಡ್ಪಾಲು–ಕಬ್ಬಿನಾಲೆ ಪರಿಸರದಲ್ಲಿ ಮರುಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್. ಸೇವೆಯ ಗುಣಮಟ್ಟ ಸುಧಾರಣೆಗೆ ಇನ್ನು ಮುಂದೆ ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಮುಂದಿನ ಸಭೆಯ ವೇಳೆಗೆ ಪ್ರಸ್ತುತ ಗುರುತಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಭೆಯಲ್ಲಿ ಬಿ.ಎಸ್.ಎನ್.ಎಲ್. ಬೆಂಗಳೂರು ವಿಭಾಗದ ಸಿಜಿಎಂ ಸುಕುಮಾರನ್ ಎನ್.ಕೆ., ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಪಿಜಿಎಂ ಬಿ. ವೆಂಕಟೇಶ್ವರಲು ಹಾಗೂ ಮಂಗಳೂರು ಜಿಎಂ ಹೇಮಂತ್ ಎಸ್.ಬಿ. ಉಪಸ್ಥಿತರಿದ್ದರು.





