ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಗೆ ಬೆಂಗಳೂರಿನ ಜೈಲಿನಲ್ಲಿ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಲಾಗಿದ್ದು, ಆರೋಪಿಗೆ ಸೂಕ್ತ ಭದ್ರತೆ ಒದಗಿಸುವಂತೆ ಉಡುಪಿ ಜಿಲ್ಲಾ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಆ.7ರಂದು ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮುಗಿದ ಬಳಿಕ ಪ್ರವೀಣ್ ಚೌಗುಲೆಯನ್ನು ಜೈಲು ಕೊಠಡಿಗೆ ಕರೆದೊಯ್ಯುವ ಸಂದರ್ಭದಲ್ಲಿ, ಮಂಗಳೂರು ಮೂಲದವರು ಎಂದು ಹೇಳಿಕೊಂಡ 3–4 ಮಂದಿ ಜೈಲು ಕೈದಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಶನಿವಾರ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಪ್ರವೀಣ್ ಚೌಗುಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಗಮನಕ್ಕೆ ತಂದನು. “ನನ್ನ ಜೀವಕ್ಕೆ ಅಪಾಯವಿದೆ” ಎಂದು ಆತ ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಆರೋಪಿಗೆ ಅಗತ್ಯ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದರು.
56 ಸಾಕ್ಷಿಗಳ ವಿಚಾರಣೆ ಪೂರ್ಣ
ಇದೇ ವೇಳೆ ನೇಜಾರು ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಇದುವರೆಗೆ ಒಟ್ಟು 56 ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡಿದೆ.
ಇಂದಿನ ವಿಚಾರಣೆಗೆ ಐವರು ಸಾಕ್ಷಿಗಳು ಹಾಜರಾಗಿದ್ದು, ನಾಲ್ವರು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿಸವಾಲು ನಡೆಯಿತು. ಪೂರ್ವ ಸಾಕ್ಷಿಯ 47ನೇ ಸಾಕ್ಷಿಯ ವಿಚಾರಣೆ ಬಾಕಿ ಉಳಿದಿದೆ. ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಅವರು ಸಾಕ್ಷಿಗಳ ಮುಖ್ಯ ವಿಚಾರಣೆ ನಡೆಸಿದರೆ, ಆರೋಪಿ ಪರ ವಕೀಲ ರಾಜು ಪೂಜಾರಿ ಪಾಟಿಸವಾಲು ನಡೆಸಿದರು.
ಮುಂದಿನ ವಿಚಾರಣೆಯನ್ನು ಸೆ.11ರಂದು ನಾಲ್ಕು ಸಾಕ್ಷಿಗಳು ಹಾಗೂ ಸೆ.17ರಂದು ಆರು ಸಾಕ್ಷಿಗಳ ವಿಚಾರಣೆ ನಡೆಸಲು ನ್ಯಾಯಾಧೀಶರು ದಿನಾಂಕ ನಿಗದಿಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.





