ಮಳೆಯ ಕೊರತೆಯಿಂದ ನೀರಿನ ಮಟ್ಟ ಗಣನೀಯವಾಗಿ ಕುಸಿದು ಡೆಡ್ ಸ್ಟೋರೇಜ್ ತಲುಪಿದ್ದ ತುಮಕೂರು ನಗರದ ಪ್ರಮುಖ ಕುಡಿಯುವ ನೀರಿನ ಮೂಲವಾದ ಬುಗುಡನಹಳ್ಳಿ ಕೆರೆಗೆ ಹೇಮಾವತಿ ಜಲಾಶಯದಿಂದ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಶನಿವಾರ ಸಂಜೆ ಕೆರೆಗೆ ಭೇಟಿ ನೀಡಿ ನೀರಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಿಂದ ಕಳೆದ ಎರಡು ದಿನಗಳಿಂದ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದ್ದು, ಕೆರೆಯಲ್ಲಿನ ನೀರಿನ ಮಟ್ಟ, ಒಳಹರಿವು ಹಾಗೂ ಮುಂದಿನ ದಿನಗಳಲ್ಲಿ ನೀರು ಸಂಗ್ರಹಿಸುವ ಕುರಿತು ಅಧಿಕಾರಿಗಳಿಂದ ಡಿಸಿಎಂ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಡಾ. ಜಿ. ಪರಮೇಶ್ವರ್, ಬುಗುಡನಹಳ್ಳಿ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಮುಂದಿನ ಮೂರೂವರೆ ತಿಂಗಳ ಕುಡಿಯುವ ನೀರಿನ ಅಗತ್ಯ ಪೂರೈಸುವಂತೆ ಮನವಿ ಮಾಡಲಾಗಿತ್ತು. ಹೇಮಾವತಿ ಜಲಾಶಯದಲ್ಲಿ ನೀರು ಲಭ್ಯವಿರುವ ಕಾರಣ ಇದೀಗ ಕೆರೆಗೆ ನೀರು ಹರಿಸಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್ ವೇಳೆಗೆ ಮತ್ತೆ ಕುಡಿಯುವ ನೀರಿನ ಅಗತ್ಯ ಎದುರಾಗಲಿದ್ದು, ಅಷ್ಟರೊಳಗೆ ಬುಗುಡನಹಳ್ಳಿ ಕೆರೆಯನ್ನು ಸಾಧ್ಯವಾದಷ್ಟು ತುಂಬಿಸಿಕೊಂಡರೆ ಮುಂದಿನ ಮೇ–ಜೂನ್‌ವರೆಗೆ ತುಮಕೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಹೇಮಾವತಿ ನೀರು ಕೆರೆಗೆ ಹರಿದುಬರುತ್ತಿರುವುದು ಸಂತಸದ ಸಂಗತಿ ಎಂದರು.
ಕೃಷಿಗೆ ಬಳಸಬೇಡಿ
ಪ್ರಸ್ತುತ ಬರದ ಪರಿಸ್ಥಿತಿ ಇರುವುದರಿಂದ ಬುಗುಡನಹಳ್ಳಿ ಕೆರೆಗೆ ಹರಿದುಬರುವ ಹೇಮಾವತಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸಬಾರದು ಎಂದು ಸಾರ್ವಜನಿಕರಲ್ಲಿ ಡಿಸಿಎಂ ಮನವಿ ಮಾಡಿದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ. ಶುಭ ಮಾತನಾಡಿ, ಹೇಮಾವತಿ ಜಲಾಶಯದಿಂದ ನೀರು ಬಿಡಲಾಗಿದ್ದು, ಆಗಸ್ಟ್ 27ರವರೆಗೆ ನೀರು ಹರಿಸುವ ಸಾಧ್ಯತೆಯಿದೆ. ಸುಮಾರು 100 ಎಂಸಿಎಫ್‌ಟಿ ನೀರು ಬುಗುಡನಹಳ್ಳಿ ಕೆರೆಗೆ ಬಂದರೆ ತುಮಕೂರು ನಗರದ ಜನರಿಗೆ ಜನವರಿವರೆಗೆ ಯಾವುದೇ ಆತಂಕವಿಲ್ಲದೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಹೇಮಾವತಿ ನೀರನ್ನು ಪಂಪ್ ಅಥವಾ ಮೋಟರ್‌ಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಬಳಸಬಾರದು. ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವ ಮೂಲಕ ನಗರದ ನೀರಿನ ಸಮಸ್ಯೆ ನಿವಾರಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಡಿಸಿಎಂ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತೆ ಬಿ. ಶುಭ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




