ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ಸದೃಢವಾದ ಯುವಕರು ಬದುಕಿಗೆ ಅಗತ್ಯವಾದ ಕೌಶಲ್ಯಗಳನ್ನೂ ರೂಢಿಸಿಕೊಂಡರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸಸ್ವಿಯಾಗಿ ನೆಲೆ ಕಂಡುಕೊಳ್ಳಬಹುದು ಎಂದು ಎ.ವಿ.ಬಾಳಿಗಾ ಆಸ್ಪತ್ರೆಯ ಖ್ಯಾತ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕ್ಯಾಲೆಂಡರ್ಗೆ ಒಂದು ವಾರ ಮುಂಚಿತವಾಗಿ ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಆಯೋಜಿಸಿದ 2026–27ನೇ ಸಾಲಿನ ಶೈಕ್ಷಣಿಕ ವರ್ಷದ ಬ್ರಿಡ್ಜ್ ಕೋರ್ಸ್ನ್ನು ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬ್ರಿಡ್ಜ್ ಕೋರ್ಸ್ನ ಭಾಗವಾಗಿ ಕಾರ್ಕಳದ ಕೆ.ಜಿ.ಟಿ.ಟಿ.ಐ ಸಂಸ್ಥೆ ನಡೆಸಿಕೊಡಲಿರುವ 90 ಗಂಟೆಗಳ ಕಂಪ್ಯೂಟರ್ ಲಿಟರೆಸಿ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸುತ್ತಾ ನಮ್ಮ ಯಶಸ್ಸಿನಂತೆ ಸೋಲಿಗೂ ಕೂಡ ನಾವೇ ಹೊಣೆಗಾರರು ಎಂಬ ಎಚ್ಚರ ಉಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಕಳದ ಕೆ.ಜಿ.ಟಿ.ಟಿ.ಐ ನಿರ್ದೇಶಕ ಡಾ. ಗಿರಿಧರ ಸಾಲ್ಯಾನ್, ಯಾರು ಭಿನ್ನವಾದ ಕೆಲಸದಲ್ಲಿ ತೊಡಗದೆ ವಿಭಿನ್ನವಾಗಿ ಯೋಚಿಸುತ್ತಾರೆ ಅವರು ಅಭದ್ರತೆಯಲ್ಲೂ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಎಂದರು. ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ. ಹಾಗೂ ಕೆ.ಜಿ.ಟಿ.ಟಿ.ಐ ಮಾಸ್ಟರ್ ಟ್ರೈನರ್ ಶ್ರೀಮತಿ ವಿಂದ್ಯಾ ಉಪಸ್ಥಿತರಿದ್ದರು. ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ.ಎಂ ಸ್ವಾಗತಿಸಿ ಪ್ರಸ್ತಾವನೆ ಗೈದರು. ಕು. ವರ್ಷ, ತೃ. ಬಿ.ಕಾಂ. ವಂದಿಸಿ, ನಿಶ್ಚಿತ ಎಸ್ ಹೋಬಳಿದಾರ್ ನಿರೂಪಿಸಿದರು.





