ಭಾರತದ ಇತಿಹಾಸದಲ್ಲಿ ಒಬ್ಬ ರಾಜಕೀಯ ನಾಯಕ ತನ್ನ ವ್ಯಕ್ತಿತ್ವವನ್ನು ಹೇಗೆ ಬ್ರ್ಯಾಂಡ್ ಮಾಡಿಕೊಳ್ಳಬಹುದು ಮತ್ತು ಆ ಮೂಲಕ ಜನಸಾಮಾನ್ಯರ ಭಾವನೆಗಳನ್ನು ಹೇಗೆ ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ಉದಾಹರಣೆ. ಅವರ ದಶಕದ ಆಡಳಿತವೇ ಒಂದು ಅಧ್ಯಯನಕ್ಕೊಳಪಡಿಸಬಹುದಾದ ವಿಷಯ. ಸೈನ್ಯದ ಶೌರ್ಯವಿರಲಿ, ವಿದೇಶ ಪ್ರವಾಸಗಳಿರಲಿ ಅಥವಾ ಸಣ್ಣಪುಟ್ಟ ಕಾರ್ಯಕ್ರಮಗಳೇ ಇರಲಿ… ಎಲ್ಲವನ್ನೂ ಒಂದು ವೈಭವೋಪೇತ ನರೆಟೀವ್ ಕಟ್ಟುವುದರಲ್ಲಿ ಅವರಿಗೆ ಸರಿಸಾಟಿ ಇನ್ನೊಬ್ಬರಿಲ್ಲ! ಅವರ ಭಾವನಾತ್ಮಕ ಭಾಷಣಾ ಕೌಶಲ್ಯಕ್ಕೆ ಅವರಿಗೆ ಅವರೇ ಸಾಟಿ. ಅಂಕಗಣಿತ, ಬೀಜಗಣಿತ, ಕಲೆ, ವಿಜ್ಞಾನ, ಸ್ಪೇಸ್ ಟೆಕ್ನಾಲಜಿ.. ಅವರಿಗೆ ತಿಳಿಯದ ವಿಷಯಗಳೇ ಇಲ್ಲ!
ಪ್ರಧಾನಿ ಮೋದಿಯವರು ಜುಲೈ 7 ರಿಂದ ಆರು ದಿನಗಳ ಕಾಲ ಇಂಡೋನೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾರೆ. ಅಧ್ಯಕ್ಷ ಪ್ರಬೋವೋ ಸುಬಿಯಾಂಟೊ ಅವರ ಆಹ್ವಾನದ ಮೇರೆಗೆ ಜು.6ರಿಂದ 8ವರೆಗೆ ಮೋದಿ ಇಂಡೋನೇಷ್ಯಾಗೆ ತೆರಳಿದ್ದರು. 2018ರ ಮೇ ಬಳಿಕ ನಡೆಯುತ್ತಿರುವ ಮೊದಲ ದ್ವಿಪಕ್ಷೀಯಭೇಟಿ ಅದು. ಈ ಸಮಯದಲ್ಲಿ ಜಕಾರ್ತದಲ್ಲಿ ಮೋದಿ ಅನಿವಾಸಿ ಭಾರತೀಯರ ಸಭೆಯನ್ನು ಉದ್ದೇಶಿಸಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಅದರ ಒಂದು ಚಿಕ್ಕ ಝಲಕ್ ಹೀಗಿತ್ತು…
ಭಾರತದ ಗಣರಾಜ್ಯೋತ್ಸವದ ದಿನಾಂಕ (26=2+6=8) ಎರಡರ ಮೊತ್ತ 8 ಬರುತ್ತದೆ. ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರ ಜನ್ಮದಿನ 17 (17=1+7=8) ಇದೂ ಕೂಡ ಎಂಟೇ ಬರುತ್ತದೆ ಎಂದರು ಅತ್ಯುತ್ಸಾಹದಿಂದ. ತಮ್ಮ ಈ ‘ಅಪೂರ್ವ ಆವಿಷ್ಕಾರ’ವನ್ನು ಕಂಡು ಪ್ರಧಾನಿಯವರೇ ಮುಗುಳ್ನಗುತ್ತಿರುವಂತೆ ವಿಡಿಯೋದಲ್ಲಿ ಕಾಣುತ್ತಿತ್ತು. ಹೀಗೆ ವಿವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೋದಿಯವರ ʼವೈರಲ್ ಪೋಸ್ಟ್ʼಗಳಲ್ಲಿ ಸಿಗಲಿದೆ.

ಇಂಡೋನೇಷ್ಯಾ ಬಳಿಕ ಆಸ್ಟ್ರೇಲಿಯಾಗೆ ಬಂದರು. ಮೆಲ್ಬೋರ್ನ್ನಲ್ಲಿ ನಡೆದ ಬೃಹತ್ ಭಾರತೀಯ ಸಮುದಾಯದ ಸಮಾರಂಭದಲ್ಲಿ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಹೀಗಂದರು.. “ಕಳೆದ ವರ್ಷ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನೆನಪಿದೆಯೇ, ಭಾರತೀಯ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್ ಯಶಸ್ಸನ್ನು ಕಂಡು ಭಾರತೀಯರಾದ ನಿಮಗೆ ಹೆಮ್ಮೆ ಎನಿಸುವುದಿಲ್ಲವೇ?” ಎಂದು ಮೋದಿ ಪ್ರಶ್ನಿಸಿದರು. ಇಡೀ ಸಭಾಂಗಣ “ಮೋದಿ, ಮೋದಿ” ಎಂದು ಕೂಗುತ್ತಾ, ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿತು.
ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಭಾರತೀಯ ಸೈನಿಕರಾರೂ ಹುತಾತ್ಮರಾಗಿಲ್ಲ ಎಂದಿತ್ತು ಮೋದಿ ಸರ್ಕಾರ. ಆದರೀಗ 6 ಹುತಾತ್ಮರ ಹೆಸರನ್ನ ಅಧಿಕೃತವಾಗಿ ಬಹಿರಂಗಗೊಳಿದೆ. ಅವರ ಬಲಿದಾನದ ಗೌರವಾರ್ಥ ಅವರ ಹೆಸರುಗಳನ್ನು ನವದೆಹಲಿಯಲ್ಲಿರುವ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಕೆತ್ತಲಾಗುತ್ತದೆ ಎಂದು ತಿಳಿಸಿದೆ. ಸೇನಾ ಕಾರ್ಯಾಚರಣೆಯ ಸಂದರ್ಭವನ್ನೂ ಈಗ ನೆನಪಿಸಿಕೊಳ್ಳಬಹುದು… ದೇಶದ ರಸ್ತೆಗಳಲ್ಲಿ ಸೈನಿಕರ ತ್ಯಾಗವನ್ನು ಸಾರುವ ಪೋಸ್ಟರ್ಗಳಿಗಿಂತ, ಮೋದಿಯವರೇ ಯುದ್ಧದ ನೇತೃತ್ವ ವಹಿಸಿದಂತೆ ಬಿಂಬಿಸುವ ಕಟೌಟ್ಗಳು ರಾರಾಜಿಸಿದ್ದವು. ರಕ್ತ ಚೆಲ್ಲಿದ್ದು ಯೋಧರು, ಪ್ರಾಣ ಕೊಟ್ಟಿದ್ದು ನಮ್ಮ ಸೈನಿಕರು; ಆದರೆ ಕ್ರೆಡಿಟ್ ಮಾತ್ರ ನೇರ ಮೋದಿಯವರ ಖಾತೆಗೆ!
ಇಲ್ಲಿಗೇ ನಿಲ್ಲುವುದಿಲ್ಲ ನಮ್ಮ ಪ್ರಧಾನಿಗಳ ಬೌದ್ಧಿಕ ಪ್ರದರ್ಶನ. ಈ ಪ್ರಸಂಗ ಖಂಡಿತ ನೆನಪಿರಬಹುದು. ಮೋದಿ ಅವರು ಮುಂಬೈಯ ಆಸ್ಪತ್ರೆಯೊಂದರಲ್ಲಿ ವೈದ್ಯರನ್ನುದ್ದೇಶಿಸಿ ಮಾತನಾಡುತ್ತಾ, ಪ್ರಾಚೀನ ಭಾರತದಲ್ಲಿ ವೈದ್ಯಕೀಯ ವಿಜ್ಞಾನ ಎಷ್ಟು ಮುಂದುವರಿದಿತ್ತು ಎಂಬುದನ್ನು ವಿವರಿಸಲು ಗಣೇಶನ ಉದಾಹರಣೆಯನ್ನು ನೀಡಿದ್ದರು. “ನಮ್ಮಲ್ಲಿ ಗಣೇಶನಿದ್ದಾನೆ. ಆ ಸಂದರ್ಭದಲ್ಲಿ ಯಾವ ವೈದ್ಯಕೀಯ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ (Plastic Surgery) ನಡೆದಿದೆ? ಒಬ್ಬ ವ್ಯಕ್ತಿಯ ತಲೆಯ ಮೇಲೆ ಆನೆಯ ತಲೆಯನ್ನು ಇರಿಸಲಾಗಿದೆ. ಆ ಕಾಲದಲ್ಲಿ ನಾವು ಅಂತಹ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿದ್ದೆವು,” ಎಂದು ಅವರು ಹೇಳಿದ್ದರು. ಇದು ಸಾಕಷ್ಟು ವಾದ-ವಿವಾದಗಳಿಗೆ ಕಾರಣವಾಗಿತ್ತು. ʼನಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ಹೇಳಿಕೊಂಡು ಬೀಗುವುದು ಒಳ್ಳೆಯದೇ! ಆದರೆ, ಗಣೇಶನ ಅಸ್ತಿತ್ವಕ್ಕೆ ಅವಮಾನವಾಗುವಂತೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವುದು ಹಿಂದುಗಳ ಧಾರ್ಮಿಕ ಭಾವನೆಗಳನ್ನು ಅವಮಾನಗೊಳಿಸಿದೆ ಎಂದೆಲ್ಲಾ ಟೀಕೆಗಳೆದ್ದವು.

ಬಾಲಾಕೋಟ್ ವೈಮಾನಿಕ ದಾಳಿ ಹಿನ್ನೆಲೆಯನ್ನು ಟಿವಿ ಸಂದರ್ಶನವೊಂದರಲ್ಲಿ ವಿವರಿಸುತ್ತಾ, ಅಂದು ಭಾರಿ ಮಳೆ ಮತ್ತು ಮೋಡವಿದ್ದರೂ ವೈಮಾನಿಕ ದಾಳಿ ನಡೆಸಿದ್ದೇಕೆ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ದಿಗ್ಭ್ರಾಂತಗೊಳಿಸಿತ್ತು. “ಮೋಡಗಳು ಮತ್ತು ಮಳೆಯಿಂದಾಗಿ ರೇಡಾರ್ನಿಂದ ನಮ್ಮ ವಿಮಾನಗಳನ್ನು ರಕ್ಷಿಸಬಹುದು ಎಂದು ನನಗೆ ಅನಿಸಿತು. ನಾನು ವಿಜ್ಞಾನಿ ಅಲ್ಲ, ಆದರೂ ನನಗೆ ಹೀಗೆ ಅನಿಸಿತು,” ಎಂದಿದ್ದರು. ಈ ಹೇಳಿಕೆ ತಾಂತ್ರಿಕವಾಗಿ ತಪ್ಪು ಎಂದು ರಕ್ಷಣಾ ತಜ್ಞರು ಮತ್ತು ವಿಜ್ಞಾನಿಗಳು ಟೀಕಿಸಿದ್ದರು, ಏಕೆಂದರೆ ರೇಡಾರ್ ತರಂಗಗಳು ಮೋಡಗಳನ್ನು ಭೇದಿಸಬಲ್ಲವು.
ʼಗಟಾರ್ ಗ್ಯಾಸ್ʼ ಮೀಮ್ ಕೂಡ ಇದೇ ಹಿನ್ನೆಲೆಯಿಂದ ಬಂದದ್ದು. ಚರಂಡಿಯಿಂದ ಬರುವ ಅನಿಲವನ್ನು ಬಳಸಿ ಚಹಾ ತಯಾರಿಸಬಹುದು ಅಥವಾ ಅದರಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಮೋದಿ ಹೇಳಿದ್ದರು. “ಚರಂಡಿಯಿಂದ ಬರುವ ಗ್ಯಾಸ್ನ ಪೈಪ್ಲೈನ್ ಅನ್ನು ಬಳಸಿಕೊಂಡು ಚಹಾ ತಯಾರಿಸುವ ಅಥವಾ ಆಹಾರ ಬೇಯಿಸುವ ಕುರಿತು ನನ್ನ ವಿಜ್ಞಾನಿಗಳಿಗೆ ನಾನು ಸೂಚನೆ ನೀಡಿದ್ದೆ,” ಎಂದು ವಿವರಿಸಿದ್ದರು. ಚರಂಡಿಯ ಅನಿಲವು (ಸಾಮಾನ್ಯವಾಗಿ ಮೀಥೇನ್) ನೇರವಾಗಿ ಶಕ್ತಿಯಾಗಿ ಬಳಕೆಗೆ ತರುವಷ್ಟು ಶುದ್ಧವಾಗಿರುವುದಿಲ್ಲ ಮತ್ತು ಅಸುರಕ್ಷಿತ ಎಂಬ ವೈಜ್ಞಾನಿಕ ವಾಸ್ತವವನ್ನು ಹಲವರು ನೆನಪಿಸಿದ್ದರು.
2014ರ ಸಮಯದಲ್ಲಿ ಗ್ಲೋಬಲ್ ವಾರ್ಮಿಂಗ್ ಕುರಿತು ವಿದ್ಯಾರ್ಥಿನಿಯೊಬ್ಬಳಿಗೆ ವಿವರಿಸಿದ್ದು ಹೀಗೆ… “ಹವಾಮಾನ ಬದಲಾವಣೆ ಎಂಬುದು ವಾಸ್ತವವಲ್ಲ, ಬದಲಾಗಿ ಇದು ನಮ್ಮ ಜೀವನಶೈಲಿ ಮತ್ತು ಅಭ್ಯಾಸಗಳಲ್ಲಿನ ಬದಲಾವಣೆಯಷ್ಟೇ ಎಂದಿದ್ದರು. ಆಕೆ ಕೇಳಿದ್ದೊಂದು, ಇವರು ಉತ್ತರಿಸಿದ್ದು ಇನ್ನೊಂದು.
ಆದರೆ, ವಿಜ್ಞಾನಿಗಳು ದಶಕಗಳಿಂದಲೂ ಗ್ಲೋಬಲ್ ವಾರ್ಮಿಂಗ್ನ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ. ತಾಪಮಾನದ ತೀವ್ರ ಏರಿಕೆ (Heat waves) ಗರ್ಭಿಣಿಯರ ಮೇಲೆ ನೇರ ಪರಿಣಾಮ ಬೀರುತ್ತದೆ. ಅತಿಯಾದ ಬಿಸಿಯಿಂದಾಗಿ ಅಕಾಲಿಕ ಜನನ (Preterm birth), ಕಡಿಮೆ ತೂಕದ ಶಿಶುಗಳ ಜನನ ಮತ್ತು ಭ್ರೂಣದ ಬೆಳವಣಿಗೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ ಎಂದು ಹಲವು ವೈದ್ಯಕೀಯ ಅಧ್ಯಯನಗಳು (ಉದಾಹರಣೆಗೆ: The Lancet ನಂತಹ ಜರ್ನಲ್ಗಳಲ್ಲಿ ಪ್ರಕಟವಾದ ವರದಿಗಳು) ಎಚ್ಚರಿಸಿವೆ. ಇಂತಹ ಗಂಭೀರ ವಿಷಯನ್ನು ʼಮಾನಸಿಕ ಸ್ಥಿತಿʼಯ ಕಾರಣ ಕೊಟ್ಟು ತಳ್ಳಿಹಾಕಿದ್ದು ಭಾರೀ ಟೀಕೆಗೆ ಒಳಗಾಗಿತ್ತು. ಆ ಸಮಯದಲ್ಲಿ ಮೋದಿಯವರನ್ನು ಬೆಂಬಲಿಸುತ್ತಿದ್ದವರೇ ಅವರ ಈ ಹಾರಿಕೆಯ ಪ್ರತಿಕ್ರಿಯೆಗಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಇನ್ನೂ ಸಾಕಷ್ಟು ಉದಾಹರಣೆಗಳನ್ನು ಪಟ್ಟಿ ಮಾಡಬಹುದು.
ಇದನ್ನೂ ಓದಿ: ಹೊಸ ಮತದಾರರಿಗೆ ಪೋಷಕರ ‘SIR’ ವಿವರ ಕಡ್ಡಾಯಕ್ಕೆ ವಿರೋಧ: ಸಿಇಸಿಗೆ ಸಿಪಿಎಂ ನಾಯಕ ಪತ್ರ
ಮೋದಿಯವರ ಭಾಷಣಗಳು, ವರ್ತನೆ ಮತ್ತು ವಿವಾದಾತ್ಮಕ ಹೇಳಿಕೆಗಳ ಹಿಂದಿರುವುದು ಅತ್ಯಂತ ಜಾಗರೂಕತೆಯಿಂದ ರೂಪಿಸಲಾದ ಒಂದು ‘ರಾಜಕೀಯ ನರೆಟಿವ್’ ಎನ್ನುವುದಂತು ಸ್ಪಷ್ಟ. ಪುರಾಣವನ್ನು ವಿಜ್ಞಾನದೊಂದಿಗೆ ಬೆಸೆಯುವುದು, ಸೇನಾ ಕಾರ್ಯಾಚರಣೆಗಳ ಕ್ರೆಡಿಟ್ ಅನ್ನು ತಾವೇ ಹೆಗಲೇರಿಸಿಕೊಳ್ಳುವುದು ಮತ್ತು ಸಂಕೀರ್ಣ ಜಾಗತಿಕ ಸಮಸ್ಯೆಗಳನ್ನು ಲಘುವಾಗಿ ತಳ್ಳಿಹಾಕುವುದು.. ಇವೆಲ್ಲವೂ ಜನಸಾಮಾನ್ಯರ ಮನಸ್ಸಿನಲ್ಲಿ ಮೋದಿಯವರನ್ನು ಸುಪ್ರೀಂ ನಾಯಕನನ್ನಾಗಿ ಬಿಂಬಿಸುವ ತಂತ್ರಗಳು. ಆದರೆ, ರಾಜಕೀಯ ನೀರಿನ ಗುಳ್ಳೆಯೊಂದು ವಾಸ್ತವದೊಂದಿಗೆ ಸಂಘರ್ಷಕ್ಕಿಳಿದಾಗ ಅಪಾಯಗಳು ಆರಂಭವಾಗುತ್ತವೆ. ಯಾವುದೇ ನಾಯಕನ ವ್ಯಕ್ತಿತ್ವ ಎಷ್ಟೇ ಪ್ರಭಾವಶಾಲಿಯಾಗಿರಲಿ, ಅಂತಿಮವಾಗಿ ಇತಿಹಾಸದಲ್ಲಿ ಉಳಿಯುವುದು ಆಡಳಿತದ ಗುಣಮಟ್ಟ ಮತ್ತು ವಿವೇಚನೆ ಮಾತ್ರ. ಕಟೌಟ್ಗಳಿಗಿಂತ ಜನತೆಯ ವಿವೇಚನಾಶೀಲತೆ ಮುಖ್ಯ. ನಾಯಕರ ಪ್ರತಿ ನಡೆಯನ್ನೂ ಪ್ರಶ್ನಿಸುವ ಮತ್ತು ತಾರ್ಕಿಕವಾಗಿ ಆಲೋಚಿಸುವ ಸಮಾಜ ಯಾವುದೇ ದೇಶದ ನಿಜವಾದ ಬಲ.




