ಉತ್ತರ ಕನ್ನಡ: ತೋಟಗಾರಿಕೆ ಇಲಾಖೆಯ ವತಿಯಿಂದ ಸಿದ್ದಾಪುರ ತಾಲೂಕಿನ ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ 10 ತಿಂಗಳ ಅವಧಿಯ ತೋಟಗಾರಿಕೆ ತರಬೇತಿಗೆ ಜಿಲ್ಲೆಯ ಅರ್ಹ ರೈತರ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ತರಬೇತಿಯು 2026ರ ಮೇ 2 ರಿಂದ ಪ್ರಾರಂಭವಾಗಿ 2027ರ ಫೆಬ್ರವರಿ 28 ರವರೆಗೆ ನಡೆಯಲಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹತೆ ಮತ್ತು ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ (SSLC) ಉತ್ತೀರ್ಣರಾಗಿರಬೇಕು. ಅಭ್ಯರ್ಥಿ ಅಥವಾ ಅವರ ಪೋಷಕರು ಕೃಷಿ ಜಮೀನು ಹೊಂದಿರಬೇಕು ಹಾಗೂ ಈ ಬಗ್ಗೆ ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ವಯೋಮಿತಿಗೆ ಸಂಬಂಧಿಸಿದಂತೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 18 ರಿಂದ 33 ವರ್ಷ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಕೇಂದ್ರದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.
This video cannot be played in your browser. Open the video directly
ಈ ಸುದ್ದಿ ಓದಿದ್ದೀರಾ? ಶಿರಸಿ | ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮನ ಜೀವ ಉಳಿಸಿದ ಪಯಾಜ್ (ಪಯ್ಯು) ಚೌಟಿ
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು ಅರ್ಜಿ ನಮೂನೆಗಳನ್ನು ಶಿರಸಿಯ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಅಥವಾ ಕಾರವಾರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ರಾಜ್ಯ ವಲಯ) ಕಚೇರಿಯಲ್ಲಿ ಪಡೆಯಬಹುದು.
ಅಲ್ಲದೆ ಇಲಾಖೆಯ ಅಧಿಕೃತ ವೆಬ್‌ಸೈಟ್ horticulturedir.karnataka.gov.in ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 15 ರ ಸಂಜೆ 5.30 ರೊಳಗೆ ಸಂಬಂಧಿಸಿದ ಕಚೇರಿಗಳಿಗೆ ಸಲ್ಲಿಸಬೇಕಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಏಪ್ರಿಲ್ 23 ರಂದು ಶಿರಸಿಯ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಸಂದರ್ಶನದ ಆಧಾರದ ಮೇಲೆ ಸಿದ್ಧಪಡಿಸಲಾದ ಅಂತಿಮ ಆಯ್ಕೆ ಪಟ್ಟಿಯನ್ನು ಏಪ್ರಿಲ್ 27 ರಂದು ಪ್ರಕಟಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.





