ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ಪಡಿತರ ಚೀಟಿದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಹೊಸದಾಗಿ 73 ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸುವಂತೆ ಕೋರಿ ಬೆಂಗಳೂರಿನ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 409 ನ್ಯಾಯಬೆಲೆ ಅಂಗಡಿಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ ರಾಜಿನಾಮೆ, ಅಮಾನತು ಮತ್ತು ರದ್ದಾಗಿರುವ 19 ಅಂಗಡಿಗಳನ್ನು ಪರ್ಯಾಯ ವ್ಯವಸ್ಥೆಯ ಮೂಲಕ ತಾತ್ಕಾಲಿಕವಾಗಿ ನಿರ್ವಹಿಸಲಾಗುತ್ತಿದೆ. ಜಿಲ್ಲೆಯು ಅರಣ್ಯ ಪ್ರದೇಶಗಳಿಂದ ಕೂಡಿದ್ದು, ಜನಸಾಂದ್ರತೆ ಕಡಿಮೆ ಇರುವುದರಿಂದ ಸಾರ್ವಜನಿಕರು ಪಡಿತರ ಪಡೆಯಲು ಹರಸಾಹಸ ಪಡುತ್ತಿದ್ದರು. ಈ ಸಮಸ್ಯೆಯನ್ನು ನೀಗಿಸಲು ವೈಜ್ಞಾನಿಕವಾಗಿ ಹೊಸ ಅಂಗಡಿಗಳನ್ನು ಗುರುತಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ 1000 ಕ್ಕಿಂತ ಹೆಚ್ಚು ಮತ್ತು ನಗರ ಪ್ರದೇಶದಲ್ಲಿ 1600 ಕ್ಕಿಂತ ಹೆಚ್ಚು ಪಡಿತರ ಚೀಟಿಗಳಿರುವ ಪ್ರದೇಶಗಳನ್ನು ವಿಂಗಡಿಸಲಾಗಿದೆ. 2021ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಜನಸಂಖ್ಯೆಗೆ ಅನುಗುಣವಾಗಿ ಆದ್ಯತೆ ನೀಡಲು ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ ? ಶಿರಸಿ | ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ: ಮೇ 18ರಂದು ಏಜೆಂಟರ ನೇಮಕಾತಿಗೆ ನೇರ ಸಂದರ್ಶನ
SC/ST ಸಮುದಾಯದವರು 40% ಕ್ಕಿಂತ ಹೆಚ್ಚಿರುವ ಕಡೆ ಒಟ್ಟು 11 ಅಂಗಡಿಗಳಿಗೆ (SC-9, ST-2) ಪ್ರಸ್ತಾವನೆ ಸಲ್ಲಿಸಲಾಗಿದೆ. 40% ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ 62 ಅಂಗಡಿಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ತಾಲೂಕುವಾರು ಹೊಸ ಅಂಗಡಿಗಳ ವಿವರ: ಮುಂಡಗೋಡ 11, ಭಟ್ಕಳ: 10, ಜೋಯಿಡಾ: 09, ಕಾರವಾರ: 08, ಹೊನ್ನಾವರ: 7, ಶಿರಸಿ: 07, ಕುಮಟಾ: 06, ಯಲ್ಲಾಪುರ: 05, ಅಂಕೋಲ: 03, ಸಿದ್ದಾಪುರ: 03, ಹಳಿಯಾಳ: 03, ದಾಂಡೇಲಿ: 01,
ತಹಶೀಲ್ದಾರರು, ಆಹಾರ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರು ಸ್ಥಳೀಯವಾಗಿ ಸಾರ್ವಜನಿಕರಿಂದ ಮಾಹಿತಿ ಪಡೆದು ವರದಿಯನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು, “ಜಿಲ್ಲೆಯ ಭೌಗೋಳಿಕ ಹಿನ್ನೆಲೆ ಮತ್ತು ಜನಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಹೊಸ ನ್ಯಾಯಬೆಲೆ ಅಂಗಡಿಗಳು ಆರಂಭವಾದಲ್ಲಿ, ದೂರದ ಊರುಗಳಿಗೆ ಅಲೆದಾಡುತ್ತಿದ್ದ ಜನರಿಗೆ ತಮ್ಮ ಸಮೀಪದ ಸ್ಥಳಗಳಲ್ಲೇ ಪ್ರತಿ ತಿಂಗಳು ಸುಲಭವಾಗಿ ಪಡಿತರ ಪಡೆಯಲು ಅನುಕೂಲವಾಗಲಿದೆ,” ಎಂದು ಅವರು ತಿಳಿಸಿದ್ದಾರೆ. ಆಹಾರ ಇಲಾಖೆಯ ಆಯುಕ್ತರಿಂದ ಹಸಿರು ನಿಶಾನೆ ದೊರೆತ ತಕ್ಷಣವೇ ಅಧಿಸೂಚನೆ ಹೊರಡಿಸಿ, ಹೊಸ ಅಂಗಡಿಗಳ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ.




