ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಲು ಆಗ್ರಹಿಸಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ವಿದ್ಯಾರ್ಥಿ–ಯುವಜನ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.
ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಜಾರಿಗೆ ತರಲು ಹೊರಟಿರುವ ಸಂವಿಧಾನ ವಿರೋಧಿ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ವರ್ತಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಎಐಡಿಎಸ್ಓ (AIDSO), ಎಐಡಿವೈಓ (AIDYO) ಹಾಗೂ ಎಸ್‌ಎಫ್‌ಐ (SFI) ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹೊಸಪೇಟೆಯ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಮಾನ್ಯ ರಾಷ್ಟ್ರಪತಿಗಳಿಗೆ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ರವಿ ಕಿರಣ್ ಜೆ.ಪಿ. ಅವರು ಮಾತನಾಡಿ, “ನಮ್ಮ ದೇಶದ ಬಹುಪಾಲು ಜನರು ಬಡವರು, ಕೂಲಿ ಕಾರ್ಮಿಕರು, ಗ್ರಾಮೀಣ ಭಾಗದವರು ಹಾಗೂ ಶೋಷಿತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಇದ್ದರೂ ಅವರನ್ನು ನಾಗರಿಕರೆಂದು ಪರಿಗಣಿಸದೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಬ್ಯಾಂಕ್ ಖಾತೆ ಅಥವಾ ಜನನ ಪ್ರಮಾಣಪತ್ರದಂತಹ ದಾಖಲೆಗಳನ್ನು ಕೇಳಿ ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ” ಎಂದು ಆಕ್ಷೇಪಿಸಿದರು.
ತಳಮಟ್ಟದ ಜನರನ್ನು ಮತದಾನದ ಪ್ರಕ್ರಿಯೆಯಿಂದಲೇ ಹೊರದೂಡುವ ವ್ಯವಸ್ಥಿತ ಹುನ್ನಾರವಿದು. ಅಲ್ಲದೆ, ಯುವ ಮತದಾರರು ಮೊದಲ ಬಾರಿಗೆ ನೋಂದಾಯಿಸಿಕೊಳ್ಳುವ ‘ಫಾರ್ಮ್ 6’ ರಲ್ಲಿ ಕಠಿಣ ನಿಯಮಗಳನ್ನು ತಂದು, ಪೋಷಕರ ದಾಖಲೆಗಳನ್ನು ಕಡ್ಡಾಯಗೊಳಿಸಿರುವುದರಿಂದ ಕೋಟ್ಯಂತರ ಯುವಜನರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. “ಇದು ಸಂವಿಧಾನದ 326ನೇ ವಿಧಿ ನೀಡಿರುವ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಜಾಪ್ರಭುತ್ವದ ಮೂಲ ಸ್ತಂಭಗಳೇ ಧ್ವಂಸಗೊಳ್ಳುತ್ತಿರುವಾಗ ವಿದ್ಯಾರ್ಥಿ ಸಮುದಾಯ ಮೌನವಾಗಿರಲು ಸಾಧ್ಯವಿಲ್ಲ. ಕೈಬಿಡಲಾದ ಎಲ್ಲಾ 13 ಕೋಟಿ ಮತದಾರರ ಹೆಸರುಗಳನ್ನು ಮರುಸೇರ್ಪಡೆ ಮಾಡುವವರೆಗೆ ಮತ್ತು ಈ ಪ್ರಕ್ರಿಯೆ ರದ್ದಾಗುವವರೆಗೆ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳ ಹಾದಿಯಲ್ಲಿ ನಮ್ಮ ಸಂಘಟಿತ ಹೋರಾಟ ಮುಂದುವರಿಯಲಿದೆ” ಎಂದು ಕರೆ ನೀಡಿದರು.

ನಂತರ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶಿವರಡ್ಡಿ ಅವರು ಮಾತನಾಡಿ, “ಚುನಾವಣಾ ಆಯೋಗ ಆರಂಭಿಸಿರುವ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವದಲ್ಲಿ ಮತದಾರರ ಪರಿಷ್ಕರಣೆಯಲ್ಲ, ಬದಲಿಗೆ ಕೋಟ್ಯಂತರ ಮತದಾರರ ಹಕ್ಕು ಕಸಿದುಕೊಳ್ಳುವ ‘ಮತದಾರರ ಹರಣ ಪ್ರಕ್ರಿಯೆ’ಯಾಗಿದೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವಿಶೇಷ ತನಿಖಾ ವರದಿಯಂತೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಪ್ರಜಾತಾಂತ್ರಿಕ ನಿರ್ಧಾರಗಳಿಗೆ ಚುನಾವಣಾ ಆಯೋಗದಲ್ಲೇ ಬಹುಮತದ ಒಪ್ಪಿಗೆ ಸಿಕ್ಕಿಲ್ಲ. ಆಯೋಗದ ಉಳಿದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ 14 ಬಾರಿ ಲಿಖಿತ ಆಕ್ಷೇಪ ವ್ಯಕ್ತಪಡಿಸಿದ್ದರೂ, ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ಎಸ್‌ಐಆರ್ ಹೇರಲಾಗಿದೆ. ಇದರ ಪರಿಣಾಮವಾಗಿ ದೇಶದ 30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 13 ಕೋಟಿಗೂ ಅಧಿಕ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಮಾನವೀಯವಾಗಿ ತೆಗೆದುಹಾಕಲಾಗಿದೆ. ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕನ್ನು ಹೊಂದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಎಐಡಿವೈಓ ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಪಂಪಾಪತಿ ಅವರು ಮಾತನಾಡಿ, “ಪ್ರಜಾಪ್ರಭುತ್ವದ ಅಡಿಪಾಯವೇ ಪ್ರತಿಯೊಬ್ಬ ನಾಗರಿಕನಿಗಿರುವ ಮತದಾನದ ಹಕ್ಕು. ಬಡವರು, ದಲಿತರು, ಮಹಿಳೆಯರು ಹಾಗೂ ಯುವಜನರ ಧ್ವನಿಯನ್ನು ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಪ್ರಜಾಪ್ರಭುತ್ವ ವಿರೋಧಿ ಹುನ್ನಾರಗಳ ವಿರುದ್ಧ ಯುವಜನತೆ ಸಂಘಟಿತವಾಗಿ ಪ್ರತಿರೋಧ ಒಡ್ಡಬೇಕು” ಎಂದು ಎಚ್ಚರಿಸಿದರು.
ಈ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಎಐಡಿವೈಓ ಜಿಲ್ಲಾ ನಾಯಕರಾದ ಪ್ರಕಾಶ್ ಅವರು ವಹಿಸಿದ್ದರು. ಪ್ರತಿಭಟನೆಯಲ್ಲಿ AIDSO ಜಿಲ್ಲಾ ಕಾರ್ಯದರ್ಶಿಗಳಾದ ಯು. ಉಮಾದೇವಿ, AIDYO ಜಿಲ್ಲಾ ಸಮಿತಿ ಸದಸ್ಯರಾದ ಶ್ರೀನಿವಾಸ್, ಸಮೀರ್ ಹಾಗೂ ಮೂರೂ ಸಂಘಟನೆಗಳ ನೂರಾರು ವಿದ್ಯಾರ್ಥಿಗಳು, ಯುವಜನರು ಭಾಗವಹಿಸಿದ್ದರು.




