ಕಳೆದ 10 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನಾಲ್ಕನೇ ಬಾರಿಗೆ ಏರಿಕೆಯಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ವಾಹನ ಸವಾರರು ಮತ್ತು ವಾಹನ ಮಾಲೀಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದರ ಏರಿಕೆಯಿಂದ ಆಟೋ, ಬೈಕ್ ಸವಾರರು, ವ್ಯಾಪಾರಿಗಳು, ಫುಡ್ ಡೆಲಿವರಿ ಬಾಯ್ಸ್, ಇನ್ನಿತರ ವ್ಯಾಪಾರಸ್ಥರು ಕಂಗಾಲಾಗಿದ್ದು, ಕೆಲವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರೆ, ಇನ್ನೂ ಕೆಲವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೊಸಪೇಟೆ ನಿವಾಸಿ ಜಹಾಂಗೀರ್ ಭಾಷಾ ಮಾತನಾಡಿ, “ಜೀವನ ನಡೆಸಲು ಮೊದಲೇ ಕಷ್ಟ ಆಗುತ್ತಿದೆ. ಅಂತಹದರಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರ ಇನ್ನಷ್ಟು ಸಂಕಷ್ಟಕ್ಕೆ ಈಡುಮಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ತೈಲ ಬೆಲೆ ಇಳಿಕೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಆನಂದಯ್ಯ ಮಾತನಾಡಿ, “ದಿನದಿಂದ ದಿನಕ್ಕೆ ತೈಲ ಬೆಲೆ ಏರುತ್ತಾ ಹೋದಲ್ಲಿ ಜೀವನ ನಡೆಸುವುದು ಹೇಗೆ? ಇದಕ್ಕೆಲ್ಲಾ ರಾಜಕಾರಣಿಗಳೇ ಕಾರಣ. ಕೇಳಿದರೆ ಒಬ್ಬರ ಮೇಲೊಬ್ಬರು ಹೇಳಿಕೆ ಕೊಡುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ರೇಶ್ ನಾಯಕ್ ಮಾತನಾಡಿ, “ಬೆಲೆ ಏರಿಕೆಯನ್ನು ಶ್ರೀಮಂತರು ಹೇಗೋ ನಿಭಾಯಿಸಿಕೊಳ್ಳುತ್ತಾರೆ, ಬಡವರು ಹೇಗೆ ಬದುಕು ನಿರವಹಿಸಬೇಕು? ಕೂಡಲೇ ತೈಲ ಬೆಲೆ ಇಳಿಕೆ ಮಾಡಿ ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಬೇಕು” ಎಂದು ಆಗ್ರಹಿಸಿದರು.
ಡೆಲಿವರಿ ಬಾಯ್ ಹನುಮೇಶ್ ಮಾತನಾಡಿ, “ಸರ್ಕಾರ ನಿರಂತರವಾಗಿ ತೈಲ ಬೆಲೆ ಏರಿಕೆ ಮಾಡುತ್ತಿದೆ. ಆದರೆ ನಮಗೆ ಆನ್ ಲೈನ್ ಡೆಲಿವರಿ ಕಂಪನಿಗಳು ನಮ್ಮ ಪೇಮೆಂಟ್ ಹೆಚ್ಚಳ ಮಾಡುತ್ತಿಲ್ಲ. ತೈಲ ಬೆಲೆ ಏರಿಕೆಯಾದರೂ ಒಂದು ಆರ್ಡರ್ ಗೆ ಮೊದಲು ಎಷ್ಟು ಪಾವತಿ ಮಾಡುತ್ತಿದ್ದರೋ ಈಗಲೂ ಅಷ್ಟೇ ಹಣ ಪಾವತಿಸುತ್ತಿದ್ದಾರೆ. ಒಂದು ರೂಪಾಯಿಯನ್ನೂ ಹೆಚ್ಚಳ ಮಾಡುತ್ತಿಲ್ಲ. ಡೆಲಿವರಿ ಬಾಯ್ಸ್ ಸಂಬಳವನ್ನೂ ಜಾಸ್ತಿ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಸರಸ್ವತಿ ಎನ್ನುವವರು ಮಾತನಾಡಿ, “ತೈಲ ಬೆಲೆ ಏರಿಕೆಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಕಾರಣ. ವಾರ್ ನಡೆಯುತ್ತಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಜನರು ಸಹಿಸಿಕೊಳ್ಳಬೇಕಿದೆ” ಎಂದು ಅಭಿಪ್ರಾಯಿಸಿದರು.
ಇನ್ನು, ಮೇ 15ರಿಂದ ಶುರು ಆಗಿರುವ ಬೆಲೆ ಏರಿಕೆ ಸರಣಿಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ 7.5 ರೂಪಾಯಿಗಳಷ್ಟು ಜಾಸ್ತಿಯಾಗಿದ್ದು, ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿದೆ.




