ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಪೊಲೀಸರು ನಿರ್ಬಂಧ ಹೇರಿರುವುದನ್ನು ವಿಜಯನಗರ ಜಿಲ್ಲಾ AIDSO ಸಂಘಟನೆ ತೀವ್ರವಾಗಿ ಖಂಡಿಸಿದೆ. ದೆಹಲಿ ಪೊಲೀಸರ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ AIDSO ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾದೇವಿ, ಕೇಂದ್ರ ಸರ್ಕಾರವು ಪ್ರತಿಭಟನೆಗಳನ್ನು ಹತ್ತಿಕ್ಕುವ ಮೂಲಕ ಜನರ ಹೋರಾಟದ ಹಕ್ಕನ್ನು ನಿರ್ಬಂಧಿಸುತ್ತಿದೆ. ಈಗಾಗಲೇ SIR ವಿರುದ್ಧದ ಹೋರಾಟವನ್ನು ತಡೆಯಲು ರಾಷ್ಟ್ರ ರಾಜಧಾನಿ ದೆಹಲಿಯನ್ನೇ ತೆರೆದ ಸೆರೆಮನೆಯಂತೆ ಮಾಡಲಾಗಿದೆ. ಅಕ್ಟೋಬರ್ 10ರಿಂದ ಜಂತರ್ ಮಂತರ್ಗೆ ಪ್ರತಿಭಟನೆ ನಡೆಸಲು ತೆರಳುತ್ತಿರುವ ಹೋರಾಟಗಾರರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾತಾಂತ್ರಿಕ ಹಕ್ಕುಗಳಿಗೆ ಧಕ್ಕೆ ಉಂಟುಮಾಡುತ್ತಿರುವ ಸರ್ಕಾರ, ಇದೀಗ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವುದಕ್ಕೂ ನಿರ್ಬಂಧ ವಿಧಿಸಿದೆ. ಜನರ ಚಳವಳಿಗಳಿಗೆ ಹೆದರಿ ಸರ್ಕಾರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಉಮಾದೇವಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಈ ಕ್ರಮವು ಅಪ್ರಜಾತಾಂತ್ರಿಕ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಎಐಡಿಎಸ್ಓ ಟೀಕಿಸಿದೆ. ಜನರು ತಮ್ಮ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಮತ್ತು ಪ್ರತಿಭಟನೆ ನಡೆಸಲು ಇರುವ ಹಕ್ಕನ್ನು ಕಸಿದುಕೊಳ್ಳಬಾರದು. ಪ್ರತಿಭಟನೆಯ ಹಕ್ಕಿನ ಮೇಲಿನ ಈ ದಾಳಿಯನ್ನು ವಿರೋಧಿಸಿ ರಾಷ್ಟ್ರದ ಜನರು ಹಾಗೂ ವಿದ್ಯಾರ್ಥಿಗಳು ಪ್ರಬಲ ಹೋರಾಟ ನಡೆಸಬೇಕು ಎಂದು ಎಐಡಿಎಸ್ಓ ಕರೆ ನೀಡಿದೆ.
ಇದನ್ನೂ ಓದಿ: ವಿಜಯನಗರ | ರಾಜಕೀಯ ವೈಷಮ್ಯಕ್ಕೆ ಇಡಿ ಬಳಕೆ: ಮಾನವ ಬಂಧುತ್ವ ವೇದಿಕೆ ಆಕ್ರೋಶ
ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗಾಗಿ ಜನರು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಸಂಘಟನೆ ಮನವಿ ಮಾಡಿದೆ.




