ನವೋದಯದ ಮಹಾನ್ ಚೇತನ, ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮದಿನ ಆಚರಣೆಗೆ ಸಮರ್ಪಿತವಾಗಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (AIDSO) ವಿಜಯನಗರ ಜಿಲ್ಲಾ ಕೌನ್ಸಿಲ್ ವತಿಯಿಂದ ಸೆಪ್ಟೆಂಬರ್ 20 ರಂದು ನಗರದ ‘ಡಾನ್ ಬಾಸ್ಕೋ ಟೆಕ್’ನಲ್ಲಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಶಿಬಿರವನ್ನು ಆಯೋಜಿಸಲಾಗಿದೆ.
ಇಂದಿನ ಶೈಕ್ಷಣಿಕ ವಾತಾವರಣದಲ್ಲಿ ಶಿಕ್ಷಣವು ಕೇವಲ ವ್ಯಾಪಾರವಾಗುತ್ತಿದ್ದು, ಸಾಮಾನ್ಯ ಮತ್ತು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜತೆಗೆ ಪರೀಕ್ಷಾ ಅಕ್ರಮಗಳು, ಅತಿಯಾದ ಸೋಶಿಯಲ್ ಮೀಡಿಯಾ ಹಾಗೂ ಆನ್‌ಲೈನ್ ಗೇಮಿಂಗ್ ಚಟಗಳಿಂದ ಯುವಜನತೆ ದಿಕ್ಕುತಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಕೇವಲ ಅಂಕಗಳಿಕೆಯಷ್ಟೇ ಅಲ್ಲದೆ ವೈಜ್ಞಾನಿಕ ಮನೋಭಾವ, ವೈಚಾರಿಕತೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಹಾಗೂ ಸಾರ್ವಜನಿಕ ಶಿಕ್ಷಣವನ್ನು ರಕ್ಷಿಸುವ ಬದ್ಧತೆಯನ್ನು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸಂಘಟನೆ ತಿಳಿಸಿದೆ.
ಶಿಬಿರದ ಪ್ರಮುಖ ಅಂಶಗಳು :
- ಪ್ರಸ್ತುತ ವಿದ್ಯಮಾನಗಳ ಕುರಿತು ಸಂವಾದ ವೈಜ್ಞಾನಿಕ ಮನೋಭಾವ, ವ್ಯಕ್ತಿತ್ವ ವಿಕಸನ ಮತ್ತು ಮಹಾನ್ ವ್ಯಕ್ತಿಗಳ ಕುರಿತು ವಿಶೇಷ ಗೋಷ್ಠಿಗಳು, ಗುಂಪು ಚರ್ಚೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಿನಿಮಾ ಪ್ರದರ್ಶನ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಜಿಲ್ಲೆಯ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲು, ನಾಯಕತ್ವ ಗುಣ ಬೆಳೆಸಿಕೊಳ್ಳಲು ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘಟನೆ ಕೋರಿದೆ. ವಿದ್ಯಾರ್ಥಿಗಳಲ್ಲಿ ನೈಜ ಮೌಲ್ಯಗಳನ್ನು ಬಿತ್ತುವ ಈ ಸಾರ್ಥಕ ಪ್ರಯತ್ನಕ್ಕೆ ಪೋಷಕರು, ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರು ಎಲ್ಲ ರೀತಿಯ ಪ್ರೋತ್ಸಾಹ, ಆರ್ಥಿಕ ನೆರವು ಹಾಗೂ ಸಹಕಾರವನ್ನು ನೀಡಿ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.




