ದೆಹಲಿ ಪೊಲೀಸರು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವುದನ್ನು ನಿರ್ಬಂಧ ಹೇರಿದ್ದಕ್ಕೆ ವಿಜಯನಗರ ಜಿಲ್ಲಾ ಎಐಡಿಎಸ್ಓ ಸಂಘಟನೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಮೂಲಕ ದೆಹಲಿ ಪೊಲೀಸರನ್ನು ಬಳಸಿಕೊಂಡು ಮೋಶಾ ನೇತೃತ್ವದ ಬಿಜೆಪಿ ಸರ್ಕಾರವು ಪ್ರಜಾತಾಂತ್ರಿಕ ಹಕ್ಕುಗಳ ಹರಣ ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ AIDSO ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾದೇವಿ, “ಈಗಾಗಲೇ ಎಸ್ಐಆರ್ ವಿರುದ್ಧದ ಹೋರಾಟವನ್ನು ತಡೆಯಲು ರಾಷ್ಟ್ರದ ರಾಜಧಾನಿ ದೆಹಲಿಯನ್ನೇ ತೆರೆದ ಸೆರೆಮನೆಯಾಗಿ ಮಾಡಲಾಗಿದೆ. ಅಕ್ಟೋಬರ್ 10ರಿಂದಲೂ, ಜಂತರ್ ಮಂತರ್ ಗೆ ಬರಲು ಯತ್ನಿಸುತ್ತಿರುವ ಹೋರಾಟಗಾರರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಈಗಾಗಲೇ ಪ್ರಜಾತಂತ್ರದ ಹಕ್ಕುಗಳ ಕಗ್ಗೊಲೆ ಮಾಡುತ್ತಿರುವ ಸರ್ಕಾರವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಂತರ್ ಮಂತರ್ ನಲ್ಲಿ ಪ್ರತಿಭಟಿಸುವುದಕ್ಕೆ ನಿಬಂಧ ಹೇರಿದೆ. ಜನ ಚಳುವಳಿಗಳಿಗೆ ಹೆದರಿ ಸರ್ಕಾರ ಈ ಕ್ರಮ ಕೈಗೊಂಡಿದೆ” ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ಈ ಅಪ್ರಜಾತಂತ್ರಿಕ ಮತ್ತು ಸರ್ವಾಧಿಕಾರಿ ನಡೆಯನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ. ರಾಷ್ಟ್ರದ ಜನತೆ ಹಾಗೂ ವಿದ್ಯಾರ್ಥಿಗಳು ಹೋರಾಟದ ಹಕ್ಕಿನ ಮೇಲಿನ ಈ ದಾಳಿಯ ವಿರುದ್ಧ ಪ್ರಬಲ ಹೋರಾಟವನ್ನು ನಡೆಸಲು ಎಐಡಿಎಸ್ಓ ಕರೆ ನೀಡಿದೆ.




