ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ ಪತ್ರದಲ್ಲಿ ‘ಚೌಕಸಿ ಮಾಡಿ’ ಎಂಬ ಉಲ್ಲೇಖವೇ ಇಲ್ಲ. ಆದರೂ ಶಾಸಕರ ಬೆಂಬಲಿಗರು ಪತ್ರವನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ.
ಇನ್ನೊಂದೆಡೆ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ 18 ಸಾವಿರಕ್ಕೂ ಅಧಿಕ ಆಕ್ಷೇಪಣೆ ಅರ್ಜಿಗಳನ್ನು ಏಕೆ ಹಿಂಪಡೆಯಲಾಯಿತು? ಯಾರ ಒತ್ತಡಕ್ಕೆ ಮಣಿದು ಅರ್ಜಿಗಳನ್ನು ವಾಪಸ್ ಪಡೆಯಲಾಯಿತು ಎಂಬುದನ್ನು ಬಹಿರಂಗಪಡಿಸಲಿ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಅಬ್ದುಲ್ ರಜಾಕ್ ಹೊರ್ತಿ ಸವಾಲು ಹಾಕಿದರು.
ವಿಜಯಪುರ ನಗರದ ಸುದ್ದಿಗೋಷ್ಠಿ ನಡೆಸಿದ ಅವರು, ಶಾಸಕ ಯತ್ನಾಳ್ ಬರೆದಿರುವ ಪತ್ರದ ಪ್ರಮಾಣೀಕೃತ ಪ್ರತಿಯನ್ನು ಪ್ರದರ್ಶಿಸಿ ಮಾತನಾಡಿದರು.
ಎಂಟು ಮತದಾರರು ಮೃತಪಟ್ಟಿದ್ದಾರೆ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕು ಎಂಬುದಾಗಿ ಶಾಸಕರು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ, 1,054 ಜನರ ಬಗ್ಗೆ ಸಂಶಯಾಸ್ಪದ ಮಾಹಿತಿ ಇದೆ ಎಂದು ತಿಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ಈ ವಿಷಯದಲ್ಲಿ ಪರಿಶೀಲನೆ ನಡೆಸುವಂತೆ ಪತ್ರದಲ್ಲಿ ಎಲ್ಲಿಯೂ ಹೇಳಿಲ್ಲ. ಶಾಸಕರ ಪತ್ರದಲ್ಲಿರುವ ಅಂಶಗಳನ್ನು ಮರೆಮಾಚಿ, ಅದರಲ್ಲಿ ಚೌಕಸಿ ನಡೆಸುವಂತೆ ಸೂಚಿಸಲಾಗಿದೆ ಎಂದು ಬೆಂಬಲಿಗರು ಹೇಳುತ್ತಿರುವುದು ಸಮರ್ಥನೆಯ ಪ್ರಯತ್ನವಷ್ಟೇ ಎಂದು ಆರೋಪಿಸಿದರು.
ಶಾಸಕರ ಪತ್ರಕ್ಕೆ ಮಹಾನಗರ ಪಾಲಿಕೆ ಆಯುಕ್ತರು ಉತ್ತರ ನೀಡಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಚುನಾವಣಾಧಿಕಾರಿಗಳಿಗೂ ವರದಿ ಸಲ್ಲಿಸಿದ್ದಾರೆ ಎಂದು ಹೊರ್ತಿ ತಿಳಿಸಿದರು.
ಬಡವರು ಯಾವ ಬ್ಯಾಂಕಿನಲ್ಲಿ ಸಾಲ ಪಡೆಯುತ್ತಾರೆ?
ಸಾಲ ಮತ್ತು ವಿಮೆ ಪಡೆಯುವ ಉದ್ದೇಶದಿಂದ ಮುಸ್ಲಿಮರು ಮರಣ ಪ್ರಮಾಣಪತ್ರದ ಮಾರ್ಗ ಅನುಸರಿಸುತ್ತಾರೆ ಎಂಬ ಆರೋಪದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಹೊರ್ತಿ, ಮೃತಪಟ್ಟಿದ್ದಾರೆಂದು ಉಲ್ಲೇಖಿಸಲಾದ ಎಂಟು ಜನರು ಬಡವರು ಹಾಗೂ ಅಮಾಯಕರು. ಅವರು ಯಾವ ಬ್ಯಾಂಕಿನಲ್ಲಿ ಸಾಲ ಪಡೆಯಲು ಸಾಧ್ಯ? ಇಂತಹ ಆರೋಪ ಮಾಡುವ ಮೊದಲು ಅದರ ಹಿಂದಿನ ವಾಸ್ತವಾಂಶವನ್ನು ಅರಿಯಬೇಕಿತ್ತು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರ ತಂದೆಯ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರೂ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿದಿದೆ ಎಂದು ಶಾಸಕರ ಬೆಂಬಲಿಗರು ಹೇಳುತ್ತಿರುವುದು ವಿಷಯಾಂತರ ಮಾಡುವ ಪ್ರಯತ್ನ ಎಂದು ಟೀಕಿಸಿದರು.
ಕರಡು ಮತದಾರರ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿ ಇರ್ಫಾನ್ ಶೇಖ್ ಅವರದ್ದೇ? ಪಟ್ಟಿಯಲ್ಲಿ ತಪ್ಪುಗಳಿದ್ದರೆ ಸಂಬಂಧಿಸಿದ ರಾಜಕೀಯ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳು ಏನು ಮಾಡುತ್ತಿದ್ದರು? ಎಂಬ ಪ್ರಶ್ನೆಗಳಿಗೆ ಮೊದಲು ಉತ್ತರಿಸಲಿ ಎಂದು ಆಗ್ರಹಿಸಿದರು.
ಮತದಾರರ ಹೆಸರುಗಳ ವಿಚಾರದಲ್ಲಿ ಆತಂಕವೇಕೆ?
ಚಿಂಚೋಳಿ ಹಾಗೂ ನಾಗಠಾಣ ಭಾಗದ ಸಾವಿರಾರು ಜನರ ಹೆಸರುಗಳು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಹೊರಹೋಗಿವೆ ಎಂದು ಹೊರ್ತಿ ಆರೋಪಿಸಿದರು. ಈ ಬೆಳವಣಿಗೆ ಶಾಸಕ ಯತ್ನಾಳ್ ಅವರಿಗೆ ಆತಂಕ ಉಂಟುಮಾಡಿದೆ ಎಂದು ಟೀಕಿಸಿದ ಅವರು, ನಾಗಠಾಣ ಭಾಗದ ಕೆಲವು ಮತದಾರರ ಹೆಸರುಗಳು ಇನ್ನೂ ನಗರ ಕ್ಷೇತ್ರದ ಪಟ್ಟಿಯಲ್ಲಿವೆ. ಈ ಹೆಸರುಗಳ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕು. ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರ್ಜಿಗಳನ್ನು ಹಿಂಪಡೆದಿದ್ದೇಕೆ?
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ 18 ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಆ ಅರ್ಜಿಗಳನ್ನು ಬಳಿಕ ಹಿಂಪಡೆಯಲು ಕಾರಣವೇನು? ಯಾರ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳಲಾಯಿತು? ಈ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡುವ ಹೊಣೆಗಾರಿಕೆ ಸಂಬಂಧಪಟ್ಟವರ ಮೇಲಿದೆ ಎಂದು ಹೊರ್ತಿ ಪ್ರಶ್ನಿಸಿದರು.
ಶಾಸಕರ ಪಕ್ಷದ ರಾಜ್ಯಾಧ್ಯಕ್ಷರೇ ಅವರನ್ನು ‘ನಾಲಾಯಕ್’ ಎಂದು ಕರೆದಿದ್ದಾರೆ ಎಂದು ಪ್ರಸ್ತಾಪಿಸಿದ ಅವರು, ಮೊದಲು ಆಕ್ಷೇಪಣೆ ಅರ್ಜಿಗಳನ್ನು ಹಿಂಪಡೆದಿರುವ ಹಿಂದಿನ ಸತ್ಯವನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆದರೂ ನಮ್ಮ ಅಭ್ಯಂತರವಿಲ್ಲ. ತಪ್ಪು ಮಾಡಿದ್ದರೆ ನಮಗೂ ಶಿಕ್ಷೆಯಾಗಲಿ, ತಪ್ಪು ಮಾಡಿರುವುದು ಇನ್ನೊಂದು ಕಡೆಯವರಾದರೆ ಅವರಿಗೂ ಶಿಕ್ಷೆಯಾಗಲಿ. ಸತ್ಯ ಹೊರಬರಬೇಕು ಎಂಬುದಷ್ಟೇ ನಮ್ಮ ಆಗ್ರಹ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್ ದಿನೇಶ ಹಳ್ಳಿ, ಅಪ್ಪು ಪೂಜಾರಿ, ಮೈನುದ್ದೀನ ಬೀಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




