ಗ್ರಾಮೀಣ ಮಹಿಳೆಯರಲ್ಲಿ ಸಂವಿಧಾನದ ಹಕ್ಕನ್ನು ಮತ್ತು ಕೃಷಿ ಕಾಯಕದ ಘನತೆಯನ್ನು ಎತ್ತಿ ಹಿಡಿಯುವುದು ಈ ಹಬ್ಬದ ಮುಖ್ಯ ಉದ್ದೇಶ ಎಂದು ಒಡಲದಿನಿ ಮಹಿಳಾ ಒಕ್ಕೂಟದ ಸಂಸ್ಥಾಪಕಿ ಡಾ. ಭುವನೇಶ್ವರಿ ಕಾಂಬಳೆ ಹೇಳಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ʼಒಡಲದನಿ ಮಹಿಳಾ ಒಕ್ಕೂಟʼ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿದ ಮಹಾನ್ ಮೇದಾವಿ. ಅವರ ದೃಷ್ಟಿಯಲ್ಲಿ ಶಿಕ್ಷಣವೇ ಸಮಾನತೆ ಮತ್ತು ಸ್ವಾತಂತ್ರ್ಯದ ಮೂಲ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯಿರಿ ಸಂಘಟಿತರಾಗಿ ಹೋರಾಡಿರಿ ಎಂಬ ಸಂದೇಶವನ್ನು ಮಹಿಳೆಯರಿಗೆ ನೀಡಿದರು. ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಸಿದ ಡಾ.ಬಿ ಆರ್ ಅಂಬೇಡ್ಕರ್ ಅವರು ಅಸ್ಪೃಶ್ಯತೆ ನಿರ್ಮೂಲನೆಗೆ ಶ್ರಮ ವಹಿಸಿದ್ದರು” ಎಂದರು.
“ಸಾರ್ವಜನಿಕ ನೀರಿನ ಮೂಲ, ದೇವಸ್ಥಾನ ಹಾಗೂ ಶಿಕ್ಷಣದ ಸಮಾನ ಹಕ್ಕಿಗಾಗಿ ಅಂಬೇಡ್ಕರ್ ಹಲವು ಚಳುವಳಿಗಳನ್ನು ನಡೆಸಿದ್ದಾರೆ. ಮಹಡ್ ಸತ್ಯಾಗ್ರಹದ ಮೂಲಕ ಅಸ್ಪಶ್ಯರಿಗೆ ಕೆರೆಯ ನೀರು ಬಳಸುವ ಸೌಕರ್ಯ ಕಲ್ಪಿಸಲು ಅವರು ಹೋರಾಟ ನಡೆಸಿದ್ದು ಐತಿಹಾಸಿಕ ಘಟನೆ” ಎಂದು ಸ್ಮರಿಸಿದರು.
ಇದನ್ನೂ ಓದಿ> ಬೀದರ್ ಜಿಲ್ಲಾಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮ
ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಧಿಕಾರಿ ನಾರಾಯಣ ಕುರುಬರ ಮಾತನಾಡಿ, “ಒಡಲದನಿ ಮಹಿಳಾ ಒಕ್ಕೂಟ ಮಹಿಳೆಯರ ಧ್ವನಿಯಾಗಿ ಕರ್ನಾಟಕದಾದ್ಯಂತ ಮೊಳುಗುತ್ತಿದೆ. ಸ್ತ್ರೀ ಸಂಘಟನೆಯ ಶಕ್ತಿ ಅಪಾರವಾದದ್ದು. ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ರಾಯಭಾರಿಯಾಗಬೇಕು ಎನ್ನುವುದು ನನ್ನ ಆಸೆಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೀದರಿನ ಹಣದೂರಿನ ದಮ್ಮಾನಂದ ಬಂತೆಜಿ, ಕರುಣಾನಂದ ಬಂತೆಜಿ, ಮಲ್ಲಿಕಾರ್ಜುನ ದಶವಂತ, ಅಶ್ವಿನಿ ಶಿವಶರಣ, ದೀಪಾಲಯ್ಯ ಸಮಾಜ ಸೇವಾ ಸಂಸ್ಥೆಯ ಹಿಲರಿ ಪಿಂಟೊ, ಒಡಲದನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಇಂದಿರಾಗಾಂಧಿ ಹೊಸಮನೆ, ಗ್ರಾಮ ಪಂಚಾಯಿತಿ ಸದಸ್ಯರಾದ ಶಾಂತಬಾಯಿ ಬನಸೋಡೆ, ಭಾರತಿ ಹೊಸಮನಿ, ರೇಣುಕಾ ನಡಗಡ್ಡಿ, ಸರೋಜಿನಿ, ರಾಜು ಶಿವಶರಣ, ಸಿದ್ದಪ್ಪ ಶಿವಶರಣ, ಸುನಿಲ ಶಿವಶರ, ಶಿಕ್ಷಕರಾದ ರಾಹುಲ್ ದ್ರಾವಿಡ ಸುನಿಲ ಹೊಸಮನಿ, ಲಕ್ಷ್ಮಿ ದ್ರಾವಿಡ ಸಂಗೀತ ಮಯೂರ ಇದ್ದರು.




