ವಿಶ್ವ ಪರಂಪರೆಯ ಮಹತ್ವ ಸಾರುವ ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಸ್ವಚ್ಛತೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವಿಶ್ವ ಪಾರಂಪರಿಕ ಸಪ್ತಾಹ-2026ರ ಅಂಗವಾಗಿ ವಿಜಯಪುರ ನಗರದಲ್ಲಿ ಬುಧವಾರ ಸಾಂಪ್ರದಾಯಿಕ ಟಾಂಗಾ ಜಾಥಾ ಆಯೋಜಿಸಲಾಯಿತು.
ವಿಜಯಪುರ ನಗರದ ಗೋಳಗುಮ್ಮಟದ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಜಾಥಾಕ್ಕೆ ಚಾಲನೆ ನೀಡಿದರು. ವಿಜಯಪುರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ಹಾಗೂ ಅಪೂರ್ವ ವಾಸ್ತುಶಿಲ್ಪ ದೇಶ-ವಿದೇಶಗಳಲ್ಲಿ ವಿಶಿಷ್ಟ ಗುರುತನ್ನು ಹೊಂದಿದ್ದು, ಇಂತಹ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸ್ಮಾರಕಗಳ ಸ್ವಚ್ಛತೆ, ಸಂರಕ್ಷಣೆ ಹಾಗೂ ಐತಿಹಾಸಿಕ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದ್ದು, ಯುವಜನರು ಐತಿಹಾಸಿಕ ಸ್ಮಾರಕಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಗೋಳಗುಮ್ಮಟದಿಂದ ಆರಂಭಗೊಂಡ ಟಾಂಗಾ ಜಾಥಾ ಗಗನ ಮಹಲ್, ಆನಂದ ಮಹಲ್, ಬಾರಾ ಕಮಾನ್, ತಾಜಬಾವಡಿ, ಇಬ್ರಾಹಿಂ ರೋಜಾ, ಮಲೀಕ-ಇ-ಮೈದಾನ್ ತೋಪು ಹಾಗೂ ಉಪಲಿ ಬುರ್ಜ್ ಸೇರಿದಂತೆ ನಗರದ ಪ್ರಮುಖ ಐತಿಹಾಸಿಕ ತಾಣಗಳ ಮೂಲಕ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.
ಜಿಲ್ಲಾಡಳಿತ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.



