ತಾಳಿಕೋಟೆ ತಾಲೂಕಿನ ಸಾಸನೂರು ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ವಿಕಲಚೇತನ ಯುವಕ ರವಿಕುಮಾರ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಗ್ರಾಮದ ಸಂತೋಷ್ ದ್ಯಾಮನಗೊಂಡ ಎಂಬಾತನ ಬಂಧನ ಸ್ವಾಗತಾರ್ಹ. ಅಂತೆಯೇ ಪ್ರಕರಣದ ಉಳಿದ ಆರೋಪಿಗಳನ್ನೂ ಕೂಡ ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮಾದಿಗರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಶೈಲ್ ರತ್ನಾಕರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ರವಿಕುಮಾರ್ ಈ ಹಿಂದೆ ಸಾರ್ವಜನಿಕರಿಗೆ ಜಾತಿ ಪ್ರಮಾಣಪತ್ರ, ರೇಷನ್ ಕಾರ್ಡ್, ವಿಧವಾ ವೇತನ ಸೇರಿದಂತೆ ವಿವಿಧ ಸರ್ಕಾರಿ ದಾಖಲೆಗಳ ಕೆಲಸ ಮಾಡಿಕೊಡುತ್ತಿದ್ದರು. ಬಳಿಕ ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ದೊರೆತ ಕಾರಣ ಆ ಕೆಲಸವನ್ನು ನಿಲ್ಲಿಸಿದ್ದಾರೆ. ಘಟನೆಯ ದಿನ ಆರೋಪಿಯು ಮದ್ಯದ ಅಮಲಿನಲ್ಲಿ ಬಂದು ತಾನು ಹೇಳಿದ ಕೆಲಸ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾನೆ. ಇದಕ್ಕೆ ರವಿಕುಮಾರ್, ʼಈಗ ಆ ಕೆಲಸ ಮಾಡುವುದಿಲ್ಲʼವೆಂದು ತಿಳಿಸಿದಾಗ, ಜಾತಿ ನಿಂದನೆ ಮಾಡುತ್ತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎದೆಗೆ ಒದ್ದು, ಊರುಗೋಲನ್ನು ಕಸಿದುಕೊಂಡು ಅದರಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕಲ್ಲು ಎತ್ತಿ ಹೊಡೆಯಲು ಯತ್ನಿಸಿದ್ದು, ರವಿಕುಮಾರ್ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ವಿವರಿಸಿದ್ದಾರೆ.
“ಗಾಯಗೊಂಡ ರವಿಕುಮಾರ್ ಅವರನ್ನು ಮೊದಲು ಬಸವನ ಬಾಗೇವಾಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಘಟನೆಯ ಮಾಹಿತಿ ತಿಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಧೈರ್ಯ ತುಂಬಿ, ವೈದ್ಯಕೀಯ-ಕಾನೂನು(ಎಂಎಲ್‌ಸಿ) ಪ್ರಕ್ರಿಯೆಗೆ ನೆರವಾಗಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ” ಎಂದು ಹೇಳಿದರು.
“ಪ್ರಕರಣ ಸಂಬಂಧ ಈಗಾಗಲೇ ಪ್ರಮುಖ ಆರೋಪಿ (ಎ-1) ಸಂತೋಷ್ ಶಾಂತಪ್ಪ ದ್ಯಾಮಗೊಂಡ್ ಅವರನ್ನು ಬಂಧಿಸಲಾಗಿದೆ. ಆದರೆ ಪ್ರಕರಣದಲ್ಲಿ ಭಾಗಿಯಾಗಿರುವ(ಎ-2) ಶಾಂತಪ್ಪ ದ್ಯಾಮಗೊಂಡ್, (ಎ-3) ಬಸಪ್ಪ ದ್ಯಾಮಗೊಂಡ್ ಹಾಗೂ (ಎ-4) ಆನಂದ ಶಾಂತಪ್ಪ ದ್ಯಾಮಗೊಂಡ್ ತಲೆಮರೆಸಿಕೊಂಡಿದ್ದು, ಅವರನ್ನೂ ಕೂಡ ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಭಾರಿ ಮಳೆಗೆ ಮನೆಯ ಗೋಡೆ ಕುಸಿತ: ಏಳು ಜನರು ಕೂದಲೆಳೆ ಅಂತರದಲ್ಲಿ ಪಾರು
ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡ ಬಸವನ ಬಾಗೇವಾಡಿ ಸಿಪಿಐ ಗುರುಶಾಂತ್ ದಶ್ಯಾಳ್ ಹಾಗೂ ಡಿಎಸ್‌ಪಿ ನಡರೆಡ್ಡಿ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸದಾನಂದ ಗುಣಾಪುರ, ನಾಗರಾಜ್ ಮಾದರ್, ಬಾಲಚಂದ್ರ ಹುಲೂರ್, ರಮೇಶ್ ಮಾದರ್, ಸಂಗಮೇಶ್ ದವಳಗಿ, ರಮೇಶ್ ದೊಡ್ಡಮನಿ, ಮಲ್ಲು ಶೇಷಗಿರಿ, ಶಿವು ರೂಗಿ, ಪ್ರಶಾಂತ್ ದೊಡ್ಡಮನಿ ಸೇರಿದಂತೆ ಮಾದಿಗ ಸಂಘಟನೆಯ ಮುಖಂಡರು ಇದ್ದರು.




