ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಪ್ರಳಯ
ಹಿಂದೆ ಎಷ್ಟು ಪ್ರಳಯ
ಹೋಯಿತ್ತೆಂದರಿಯೆ?
ಮುಂದೆ ಎಷ್ಟು ಪ್ರಳಯ
ಬಂದಹುದೆಂದರಿಯೆ?
ತನ್ನ ಸ್ಥಿತಿಯ ತಾನರಿಯದಡೆ
ಅದೇ ಪ್ರಳಯವಲ್ಲಾ!
ತನ್ನ ವಚನ ತನಗೆ ಹಗೆಯಾದಡೆ
ಅದೇ ಪ್ರಳಯವಲ್ಲಾ!
ಇಂತಹ ಪ್ರಳಯ ನಿನ್ನಲುಂಟೆ
ಗುಹೇಶ್ವರಾ?
ವಚನಾರ್ಥ:
ಸೃಷ್ಟಿ, ಸ್ಥಿತಿ ಮತ್ತು ಲಯ ಈ ಮೂರು ಜಗತ್ತಿನ ನಿರಂತರ ಸಹಜ ಕ್ರಿಯೆಗಳು. ಹುಟ್ಟಬೇಕು, ಬದುಕಬೇಕು, ನಿರ್ಗಮಿಸಬೇಕು. ಸೃಷ್ಟಿಯಾದದ್ದು ಲಯವಾಗಬೇಕು. ಲಯ, ಅದೇ ಪ್ರಳಯ. ಈ ಹಿಂದೆ ಎಷ್ಟು ಸೃಷ್ಟಿ ಕ್ರಿಯೆಗಳು ನಡೆದಿವೆ, ಎಷ್ಟು ಪ್ರಳಯ ಕ್ರಿಯೆಗಳು ನಡೆದಿವೆ ಎಂದು ಯಾರಿಗೂ ಗೊತ್ತಿಲ್ಲ. “ಲೆಕ್ಕವಿಟ್ಟಿಲ್ಲ ಜಗ ತನ್ನಾದಿ ಬಂಧುಗಳ” ಎಂದು ಮಂಕುತಿಮ್ಮನ ಕಗ್ಗ ಹೇಳುತ್ತದೆ. ಹಾಗೆಯೇ ಮುಂದಾಗುವ ಸೃಷ್ಟಿ, ಪ್ರಳಯಗಳ ಅರಿದವರಾರು? ಅದೂ ಗೊತ್ತಿಲ್ಲ. ಹಾಗಾದರೆ ನಾವು ಕಂಡುಕೊಳ್ಳಬಹುದಾದ ಪ್ರಳಯ ಯಾವುದು ಅಂದರೆ ಅದು ನಮ್ಮ ವ್ಯಕ್ತಿತ್ವದಲ್ಲಾಗುವ ಅಧಃಪತನ. ಅದೇ ಪ್ರಳಯ. ನಮ್ಮ ಸ್ಥಿತಿಯನ್ನು ನಾವು ಅರಿತುಕೊಂಡು ಸಮಚಿತ್ತದಿಂದ ಸಹಜ ಜೀವನ ನಡೆಸದಿದ್ದರೆ ಅದುವೇ ಪ್ರಳಯ. ನಮ್ಮ ಮಾತುಕಥೆಯಲ್ಲಿ ನಡೆ ನುಡಿಯಲ್ಲಿ ಸತ್ಯಾಸತ್ಯತೆ ಇಲ್ಲದೆ ವಿರೋಧಾಭಾಸದಿಂದ ಕೂಡಿ ನಮ್ಮ ಸುತ್ತಲಿನ ಜೀವನ ಪರಿಸರದಲ್ಲಿ ನಿರಂತರವಾಗಿ ವ್ಯತ್ಯಯವಾಗುತ್ತಿದ್ದರೆ ವ್ಯಕ್ತಿತ್ವದಲ್ಲಿ ಅಧಃಪತನವಾಗಿ ಅದುವೇ ಪ್ರಳಯ. ಇಂತಹ ಪ್ರಳಯ ಶರಣನಲ್ಲಿಲ್ಲ. ಅವನದು ತನ್ನ ಸ್ಥಿತಿಯ ತಾನರಿದ, ತನ್ನ ವಚನ ತನಗೆ ಹಗೆಯಾಗದ, ಮಾತೆಂಬುದು ಜ್ಯೋತಿರ್ಲಿಂಗ ಎಂಬಂತ ನಡೆ ನುಡಿ ಒಂದಾದ ಭಾವ. ಅಲ್ಲಿ ಪ್ರಳಯವಿಲ್ಲ.
ಪದಪ್ರಯೋಗಾರ್ಥ:
ಇದು ಮೂರು ಪ್ರಶ್ನೆಗಳ ಮಧ್ಯದಲ್ಲಿ ಎರಡು ಅಭಿವ್ಯಕ್ತಿಗಳನ್ನು ಸೂಚಿಸಿ “ಪ್ರಳಯ” ಎಂಬ ಒಂದು ಪದವನ್ನು ಕೇಂದ್ರ ವಸ್ತುವನ್ನಾಗಿಸಿಕೊಂಡು ರಚಿಸಿದ ಅಲ್ಲಮನ ಮಹತ್ವದ ವಚನ. ವಚನದ ಎಲ್ಲಾ ಐದು ಸಾಲುಗಳಲ್ಲಿ “ಪ್ರಳಯ” ಎಂಬ ಪದ ಬಳಕೆಯಾಗಿದೆ. ಪ್ರ-ಳಯ ಶಬ್ದದ ಮೂಲ ಸಂಸ್ಕೃತದಲ್ಲಿದೆ. ಇದರರ್ಥ ಮುಕ್ತಾಯ, ಸಮಾಪ್ತಿ, ವಿನಾಶ, ಸರ್ವನಾಶ. ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದನ್ನು ಪ್ರಳಯ ಎಂದು ಕರೆಯುವ ಕಲ್ಪನೆಯಿದೆ. ಕಂಡು ಕೇಳರಿಯದ ಪ್ರಳಯ ಎಂಬ ಕಾಲ್ಪನಿಕ ಘಟನೆಯನ್ನು ಕಣ್ಣೆದುರು ಇಟ್ಟುಕೊಂಡು ಅದನ್ನು ವ್ಯಕ್ತಿಯ ವ್ಯಕ್ತಿತ್ವದ ಅಧಃಪತನಕ್ಕೆ ಕಾರಣವಾಗುವ ನಡೆ ನುಡಿಯಲ್ಲಿನ ವ್ಯತ್ಯಯಕ್ಕೆ ಸಮೀಕರಿಸಿ ವ್ಯಾಖ್ಯಾನಿಸಿರುವುದು ಈ ವಚನದ ಹೆಚ್ಚುಗಾರಿಕೆ. ತನ್ನ ಸ್ಥಿತಿಯ ತಾನು ಅರಿಯದಿದ್ದರೆ, ತನ್ನ ಮಾತೇ ತನಗೆ ವಿರುದ್ಧವಾದರೆ ಅದು ವ್ಯಕ್ತಿತ್ವದಲ್ಲಾಗುವ ಅಧಃಪತನ. ಅದೇ ಜೀವನ ಪ್ರಳಯ. ಅಂತಹ ಪ್ರಳಯ ಸಂಭವಿಸಲಾಗದಂತೆ ಸದಾ ಎಚ್ಚರನಾಗಿರಬೇಕು ಎಂಬುದೇ ವಚನದ ಆಶಯ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



