ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಧ್ಯಕ್ಷ ಎಂ ಬಿ ನಾಡಗೌಡ ಮಾತನಾಡಿ, “ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ನೀರುಗಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರನ್ನೂ ಏಕಕಾಲದಲ್ಲಿ ಸರ್ಕಾರಿ ನೌಕರರೆಂದು ಘೋಷಿಸಬೇಕು” ಎಂದು ಒತ್ತಾಯಿಸಿದರು.
“ಸೇವಾ ಹಿರಿತನದ ಆಧಾರದ ಮೇಲೆ ನೌಕರರಿಗೆ ಇನ್‌ಕ್ರಿಮೆಂಟ್ ನೀಡಬೇಕು. ಐದು ವರ್ಷ ಸೇವೆ ಪೂರ್ಣಗೊಳಿಸಿದವರಿಗೆ ₹750, 10 ವರ್ಷ ಮೇಲ್ಪಟ್ಟವರಿಗೆ ₹1,500 ಹಾಗೂ 15 ವರ್ಷ ಮೇಲ್ಪಟ್ಟವರಿಗೆ ₹3,000 ಇನ್‌ಕ್ರಿಮೆಂಟ್ ನಿಗದಿಪಡಿಸಬೇಕು. ನಿವೃತ್ತಿ ಅಥವಾ ಮರಣ ಹೊಂದಿದ ನೌಕರರ ಕುಟುಂಬಕ್ಕೆ ₹6 ಲಕ್ಷ ಇಡಗಂಟು ನೀಡಬೇಕು” ಎಂದು ಆಗ್ರಹಿಸಿದರು.
ತರಬೇತಿ ಪಡೆದ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಉದ್ಯೋಗ ಕಲ್ಪಿಸಬೇಕು. ಒಡಂಬಡಿಕೆ ಪತ್ರ ಹಾಗೂ ಪ್ರತಿವರ್ಷ ನವೀಕರಣ ಮಾಡುವ ಪದ್ಧತಿ ರದ್ದುಪಡಿಸಿ, 15ನೇ ಹಣಕಾಸು ಯೋಜನೆಯಡಿ ವೇತನ ಪಾವತಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಚಾಲಕನನ್ನು ನೇಮಿಸಿ ₹15 ಸಾವಿರ ವೇತನ ನಿಗದಿಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾಯ ಇಳಗೇರ ಮಾತನಾಡಿ, ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಗ್ರೇಡ್-1 ಕಾರ್ಯದರ್ಶಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿ ನೀಡಬೇಕು. ಪ್ರತಿ ಪಂಚಾಯಿತಿಗೂ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಿ, ಅರ್ಹ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸುರೇಖಾ ರಜಪೂತ್, ಲಕ್ಷ್ಮಣ ಹಂದ್ರಾಳ, ಲಾಲಹ್ಮದ್ ಶೇಕ್, ಭೀಮರಾಯ ಪೂಜಾರಿ, ನಾರಾಯಣ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




