ಪಾಶ್ ಕಾಯ್ದೆ(PoSH act) ಅನುಷ್ಠಾನದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಕಾಯ್ದೆಯ ಉದ್ದೇಶ ಸಫಲಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚಿಸಿದರು.
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ಮಹಿಳಾ ಸ್ಪಂದನಾ ಹಾಗೂ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಹೋಟೆಲ್, ರೆಸಾರ್ಟ್ ಸೇರಿದಂತೆ ಮಹಿಳೆಯರು ಕೆಲಸ ಮಾಡುವ ಎಲ್ಲ ಸ್ಥಳಗಳಲ್ಲಿ ಪಾಶ್ ಸಮಿತಿ(ಆಂತರಿಕ ಸಮಿತಿ) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಮಹಿಳೆಯರಲ್ಲಿ ಸುರಕ್ಷತಾ ಭಾವನೆ ಮೂಡಿಸಲು ಸಾಧ್ಯವಾಗಲಿದೆ. ಪಾಶ್ ಕುರಿತು ಆಗಾಗ್ಗೆ ತರಬೇತಿ ಆಯೋಜಿಸುವುದರ ಜತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ʼಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿ ಮೂಲಸೌಲಭ್ಯ ಕಲ್ಪಿಸಲಾಗಿದೆʼ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ನಾಗಲಕ್ಷ್ಮಿ ಚೌಧರಿ, “ಬಾಲಕಿಯರಿಗೆ ಬೇಡಿಕೆಗೆ ಅನುಗುಣವಾಗಿ ವಸತಿ ನಿಲಯಗಳಲ್ಲಿ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿ ಉತ್ತಮ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು” ಎಂದರು.
“ವಸತಿ ನಿಲಯಗಳಲ್ಲಿ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಬೇಕು. ವಿವಿಧ ಇಲಾಖೆಗಳಲ್ಲಿರುವ ಅನುದಾನವನ್ನು ಬಳಸಿಕೊಂಡು ವಸತಿ ನಿಲಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು” ಎಂದು ಸಲಹೆ ನೀಡಿದರು.
“ವಿದ್ಯಾಸಿರಿ ವಿದ್ಯಾರ್ಥಿ ವೇತನ ಯೋಜನೆ ಕುರಿತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಇತ್ತೀಚೆಗೆ ಮಕ್ಕಳೊಂದಿಗೆ ನಡೆಸಿದ ಸಂವಾದದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಅಧಿಕಾರಿಗಳು ವೈಯಕ್ತಿಕವಾಗಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಮತ್ತು ಮಾರ್ಗದರ್ಶನ ನೀಡಬೇಕು” ಎಂದು ಸೂಚಿಸಿದರು.
“ಎಲ್ಲ ಕಾಲೇಜುಗಳಲ್ಲಿ ಮಾಹಿತಿ ಫಲಕ ಅಳವಡಿಸಿ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಪ್ರಚಾರ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು” ಎಂದರು.
“ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳ ಕುರಿತು ಯಾವುದೇ ದೂರುಗಳು ಬಾರದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಮಕ್ಕಳಿಗೆ ಸಮರ್ಪಕ ಪೌಷ್ಠಿಕ ಆಹಾರ ದೊರೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಹೇಳಿದರು.
“ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು” ಎಂದರು.
“ಪಾಂಗ್ರೂನ್ ದೊಡ್ಡಿಯಲ್ಲಿ ವಾಸಿಸುವ ಜನರು ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ ಕೆರೆಗಳಿಗೆ ನೀರು ಹರಿಸುವ ಕ್ರಮ ಕೈಗೊಳ್ಳಬೇಕು. ಕುರಿಗಳಿಗೆ ಕುಡಿಯುವ ನೀರು ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಸರ್ಕಾರದ ವಿವಿಧ ಯೋಜನೆಗಳ ಕುರಿತು ಅಲ್ಲಿನ ಜನರಿಗೆ ಮಾಹಿತಿ ನೀಡುವುದರ ಜತೆಗೆ ಸಾರಿಗೆ ಸೌಲಭ್ಯ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಕುಡಿಯುವ ನೀರು, ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯಗಳಿಗೆ ಆದ್ಯತೆ ನೀಡಬೇಕು. ಅಕ್ರಮ ಮದ್ಯ ಮಾರಾಟದ ಕುರಿತು ಪ್ರಕರಣ ದಾಖಲಿಸಿ, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು” ಎಂದು ತಿಳಿಸಿದರು.
ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಆಸ್ಪತ್ರೆ ಕಟ್ಟಡದ ನಿರ್ವಹಣೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಲಭ್ಯವಿರುವ ಮೆಮೊಗ್ರಫಿ ಯಂತ್ರದ ಸದುಪಯೋಗಪಡಿಸಿಕೊಂಡು ಮಹಿಳೆಯರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಬೇಕು. ಹೊರಗುತ್ತಿಗೆ ಸಿಬ್ಬಂದಿಗೆ ನಿಯಮಾನುಸಾರ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು.
“ಚೇತನ ಸಂಜೆ ಮಿಷನ್‌ನಡಿ ವಿದ್ಯಾಪುರದಲ್ಲಿ ಸಂಜೆ ತರಗತಿಗಳು ನಡೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ಬಾಲಕಿಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್‌ಗೆ ನೂತನ ಅಧ್ಯಕ್ಷರಾಗಿ ಅಬ್ದುಲ್ ಶುಕುರ್ ಬೆಳ್ವೆ ಆಯ್ಕೆ
ಸಭೆಯ ಬಳಿಕ ಮಹಿಳೆಯರ ಕುಂದುಕೊರತೆಗಳನ್ನು ಅಧ್ಯಕ್ಷರು ಸಹಾನುಭೂತಿಯಿಂದ ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸಿದರು. ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರೂ ಕೂಡ ಮಹಿಳೆಯರ ಅಹವಾಲುಗಳನ್ನು ಆಲಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಂತೋಷಕುಮಾರ ಎಚ್. ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.




