ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆ, ಜನಪ್ರತಿನಿಧಿಗಳ ಅಧಿಕಾರ ಹಾಗೂ ಕೇಂದ್ರ ಸರ್ಕಾರದ ರಾಜಕೀಯ ತಟಸ್ಥತೆಯ ವಿಚಾರಗಳು ಪದೇ-ಪದೇ ವಿಮರ್ಶೆಗೆ ಒಳಗಾಗುತ್ತಿವೆ. ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತಿವೆ. ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ನೀತಿಗಳು, ಜನಪ್ರತಿನಿಧಿಗಳ ಅಧಿಕಾರವನ್ನು ಸೀಮಿತಗೊಳಿಸುವ ಮತ್ತು ತಮ್ಮ ವೈಚಾರಿಕ ಸಿದ್ಧಾಂತಕ್ಕೆ ಅನಗತ್ಯ ಸವಲತ್ತು ನೀಡುವ ದ್ವೇಷ ರಾಜಕಾರಣದ ಧೋರಣೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿವೆ. ಈಗ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕಗೆ ಭೇಟಿ ನೀಡಿರುವ ಸಮಯದಲ್ಲಿ ಮೋದಿ-ಶಾ ಸರ್ಕಾರದ ವಿದೇಶಾಂಗ ನೀತಿ ಕುರಿತ ಪ್ರಶ್ನೆಗೆ ಕೇಳಿಬಂದಿವೆ.
ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ನಾಲ್ಕಾರು ದೇಶಗಳಿಗೆ ಸುದೀರ್ಘ ಪ್ರವಾಸ ಕೈಗೊಂಡಿದ್ದಾರೆ. ವಿದೇಶಗಳಲ್ಲಿರುವ ಭಾರತೀಯ ಸಮುದಾಯ ಮತ್ತು ವಿವಿಧ ಸಂಘಟನೆಗಳನ್ನು ಭೇಟಿಯಾಗುವುದು ಅವರ ಪ್ರವಾಸದ ಪ್ರಮುಖ ಉದ್ದೇಶ.
ಅಂದಹಾಗೆ, ಆರ್‌ಎಸ್‌ಎಸ್ ಒಂದು ಸಮಾಜ, ಟ್ರಸ್ಟ್, ಎನ್‌ಜಿಒ ಅಥವಾ ರಾಜಕೀಯ ಪಕ್ಷವಾಗಿ ಭಾರತೀಯ ಕಾನೂನುಗಳ ಅಡಿಯಲ್ಲಿ ಔಪಚಾರಿಕವಾಗಿ ನೋಂದಾಯಿಸಲ್ಪಟ್ಟ ಸಂಸ್ಥೆಯಲ್ಲ. ತನ್ನನ್ನು ಕೇವಲ ‘ವ್ಯಕ್ತಿಗಳ ಗುಂಪು’ (Association of Individuals) ಎಂದು ಕರೆದುಕೊಳ್ಳುವ ಈ ಸಂಘದ ಬಳಿ ನಿರ್ದಿಷ್ಟ ಸದಸ್ಯತ್ವದ ಪಟ್ಟಿಯಾಗಲಿ ಅಥವಾ ಸಾರ್ವಜನಿಕವಾಗಿ ಆಡಿಟಿಂಗ್‌ಗೆ ಒಳಪಡುವ ಲೆಕ್ಕಪತ್ರಗಳಾಗಲಿ ಇಲ್ಲ. ಸಾಮಾನ್ಯ ಎನ್‌ಜಿಒಗಳು, ಕಂಪನಿಗಳು ಹಾಗೂ ರಾಜಕೀಯ ಪಕ್ಷಗಳು ತಮ್ಮ ನೋಂದಣಿ, ತೆರಿಗೆ, ವಿದೇಶಿ ದೇಣಿಗೆ ಮತ್ತು ಪದಾಧಿಕಾರಿಗಳ ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸುತ್ತಿರುವಾಗ, ಆಡಳಿತಾರೂಢ ಬಿಜೆಪಿಯ ವೈಚಾರಿಕ ತಾಯಿ ಸಂಸ್ಥೆ ಆರ್‌ಎಸ್‌ಎಸ್ ಮಾತ್ರ ಇಂತಹ ಎಲ್ಲ ನಿಯಮಗಳಿಂದ ವಿನಾಯಿತಿ ಪಡೆಯುತ್ತಿದೆ. ಇಂತಹ ಸಾರ್ವಜನಿಕ ಉತ್ತರದಾಯಿತ್ವವಿಲ್ಲದ ಸಂಸ್ಥೆಯ ನಾಯಕನಿಗೆ, ಮೋದಿ-ಶಾ ಸರ್ಕಾರ ಯಾವುದೇ ಅಡೆತಡೆ ಇಲ್ಲದೆ ವಿದೇಶಿ ಪ್ರವಾಸಗಳಿಗೆ ಅನುಮತಿ ನೀಡುತ್ತದೆ.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ತೆಲಂಗಾಣದ ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ತಮ್ಮ ರಾಜ್ಯದ ಅಭಿವೃದ್ಧಿ, ಜಾಗತಿಕ ಹೂಡಿಕೆ ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಉದ್ದೇಶದಿಂದ ಅಮೆರಿಕಕ್ಕೆ ಕೈಗೊಳ್ಳಬೇಕಿದ್ದ ಪ್ರವಾಸಕ್ಕೆ ಕೇಂದ್ರ ಸರ್ಕಾರವು ರಾಜಕೀಯ ಅನುಮತಿ (Political Clearance) ನಿರಾಕರಿಸಿತು. ‘ಈ ಪ್ರವಾಸವು ಅವರ ಹುದ್ದೆ ಮತ್ತು ಉದ್ದೇಶಕ್ಕೆ ಸೂಕ್ತವಾಗಿಲ್ಲ’ ಎಂಬ ತಾಂತ್ರಿಕ ಹಾಗೂ ಅಸ್ಪಷ್ಟ ನೆಪವೊಡ್ಡಿತು. ತೆಲಂಗಾಣದ ನಾಲ್ಕು ಕೋಟಿ ಜನರ ಆರ್ಥಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಅಮೆರಿಕಗೆ ತೆರಳಬೇಕಿದ್ದ ರೇವಂತ್ ರೆಡ್ಡಿ ಅವರ ಪ್ರವಾಸಕ್ಕೆ ಕೊಕ್ಕೆ ಹಾಕಿತು. ಆದರೆ, ಇದೇ ಸಮಯದಲ್ಲಿ, ಬಿಜೆಪಿ ಆಡಳಿತವಿರುವ ಗುಜರಾತ್‌ನಂತಹ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಜಾಗತಿಕ ಹೂಡಿಕೆ ಪ್ರಚಾರಕ್ಕೆ ಸುಲಭವಾಗಿ ಹಸಿರು ನಿಶಾನೆ ತೋರಿಸಿತು. ಇದು ಮೋದಿ ಸರ್ಕಾರದ ದ್ವೇಷ ರಾಜಕಾರಣಕ್ಕೆ ಸ್ಪಷ್ಟ ನಿದರ್ಶನ.
ಅಂದಹಾಗೆ, ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಅವರು ಅಮೆರಿಕ, ಕೆನಡಾ ಮತ್ತು ಬ್ರಿಟನ್‌ಗೆ ಸುದೀರ್ಘ ಪ್ರವಾಸ ಕೈಗೊಂಡಿದ್ದಾರೆ. ನ್ಯೂಯಾರ್ಕ್, ಟೊರೊಂಟೊ ಮತ್ತು ಲಂಡನ್‌ನಲ್ಲಿ ಭಾರತೀಯ ಮೂಲದ ಜನರನ್ನು ಭೇಟಿಯಾಗಲಿದ್ದಾರೆ. ಅವರ ಈ ಭೇಟಿಗಳಿಗೆ ಯಾವುದೇ ಅಡೆತಡೆಗಳು ಎದುರಾಗಿಲ್ಲ. ಮಾತ್ರವಲ್ಲ, ಅವರಿಗೆ ಜಾಗತಿಕ ಮಟ್ಟದಲ್ಲಿ ಸರ್ಕಾರವೇ ಭದ್ರತೆಗಳನ್ನು ಒದಗಿಸುತ್ತಿದೆ.
ಗಮನಾರ್ಹವಾಗಿ, ಖಾಸಗಿ ವ್ಯಕ್ತಿಗಳು ಅಥವಾ ಸಂಘಟನೆಗಳಿಗೆ ಸರ್ಕಾರದ ‘ಪೊಲಿಟಿಕಲ್ ಕ್ಲಿಯರೆನ್ಸ್’ ಅಗತ್ಯವಿಲ್ಲ ಎನ್ನುವ ವಾದ ಮೇಲ್ನೋಟಕ್ಕೆ ಕಂಡುಬಂದರೂ, ಇದು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಆಳವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಹೊಣೆಗಾರಿಕೆ ಇಲ್ಲದ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಕೇಂದ್ರ ಸರ್ಕಾರವು ಜಾಗತಿಕ ಮಟ್ಟದಲ್ಲಿ ವಿಶೇಷ ರಾಜತಾಂತ್ರಿಕ ಸಹಕಾರ ಮತ್ತು ಉನ್ನತ ಮಟ್ಟದ (ಝಡ್ ಪ್ಲಸ್) ಭದ್ರತೆಯನ್ನು ನೀಡಿದೆ. ಈ ಭದ್ರತೆಗಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ತೆರಿಗೆ ಹಣ ವೆಚ್ಚವಾಗುತ್ತಿದ್ದು, ಈ ಕುರಿತು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ವಿವರ ಕೇಳಿದರೂ ಗೃಹ ಸಚಿವಾಲಯವು ಭದ್ರತೆ ಮತ್ತು ಗೌಪ್ಯತೆಯ ನೆಪ ಹೇಳಿ ಮಾಹಿತಿ ನೀಡಲು ನಿರಾಕರಿಸಿದೆ. ಅತ್ತ, ಭದ್ರತಾ ವೆಚ್ಚ ವಸೂಲಿ ಮಾಡುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಕೂಡ ತಿರಸ್ಕರಿಸಿದೆ. ಆದರೆ, ಪ್ರಜಾಸತ್ತಾತ್ಮಕವಾಗಿ ಲಕ್ಷಾಂತರ ಜನರಿಂದ ಆಯ್ಕೆಯಾಗಿ ರಾಜ್ಯವನ್ನು ಮುನ್ನಡೆಸುವ ಮುಖ್ಯಮಂತ್ರಿಯೊಬ್ಬರಿಗೆ ಸಿಗಬೇಕಾದ ಗೌರವ ಮತ್ತು ಸ್ವಾಯತ್ತತೆಯನ್ನು ಕಸಿದುಕೊಳ್ಳಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್‌ನದ್ದು ವೋಟ್ ಬ್ಯಾಂಕ್ ರಾಜಕಾರಣವಾದರೆ, ಧರ್ಮ-ʼದೇಶಭಕ್ತಿʼಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದೇನು?
ಇದು ಕೇವಲ ರೇವಂತ್ ರೆಡ್ಡಿ ಅವರೊಬ್ಬರ ವಿಷಯವಲ್ಲ. ಈ ಹಿಂದೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು ಕೇಂದ್ರ ಸರ್ಕಾರ ಇದೇ ರೀತಿ ಅಡೆತಡೆ ಒಡ್ಡಿತ್ತು. ವಿಪಕ್ಷ ನಾಯಕರು ಜಾಗತಿಕ ವೇದಿಕೆಗಳಲ್ಲಿ ಗುರುತಿಸಿಕೊಳ್ಳಬಾರದು, ರಾಜ್ಯಗಳಿಗೆ ವಿದೇಶಿ ಹೂಡಿಕೆಗಳು ಬಂದು ಆಯಾ ರಾಜ್ಯ ಸರ್ಕಾರಗಳಿಗೆ ನಾಯಕತ್ವದ ಕೀರ್ತಿ ಸಿಗಬಾರದು ಎಂಬ ಕ್ಷುಲ್ಲಕ ರಾಜಕೀಯ ಕುತಂತ್ರವನ್ನು ಮೋದಿ-ಶಾ ಜೋಡಿ ಮಾಡುತ್ತಿದೆ. ‘ಪೊಲಿಟಿಕಲ್ ಕ್ಲಿಯರೆನ್ಸ್’ ಎಂಬ ಆಡಳಿತಾತ್ಮಕ ಸಾಧನವನ್ನು ಬಳಸಿಕೊಂಡು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ಹತೋಟಿಯಲ್ಲಿಡಲು ಮತ್ತು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ.
ಸಂವಿಧಾನದ ಎದುರು ದೇಶದ ಪ್ರತಿಯೊಬ್ಬ ನಾಗರಿಕನೂ, ಪ್ರತಿಯೊಂದು ಸಂಸ್ಥೆಯೂ ಸಮಾನ. ಆದರೆ, ಕೇಂದ್ರ ಸರ್ಕಾರವು ಆಡಳಿತಾರೂಢ ಪಕ್ಷಕ್ಕೆ ಮತ್ತು ಅದರ ಸೈದ್ಧಾಂತಿಕ ನಂಟು ಹೊಂದಿರುವ ಸಂಸ್ಥೆಗೆ ಒಂದು ಮಾನದಂಡ, ಹಾಗೂ ವಿರೋಧ ಪಕ್ಷಗಳು ಮತ್ತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳಿಗೆ ಮತ್ತೊಂದು ಮಾನದಂಡವನ್ನು ಅನುಸರಿಸುತ್ತಿದೆ. ಭಾರತದ ರಾಜ್ಯಯಂತ್ರವು ಜನರಿಂದ ಆಯ್ಕೆಯಾದ ಸಾಂವಿಧಾನಿಕ ಸಂಸ್ಥೆಗಳಿಗೆ ಉತ್ತರದಾಯಿಯಾಗಿರಬೇಕೇ ಹೊರತು, ನೋಂದಣಿಯೇ ಆಗದ ಮತ್ತು ಸಾರ್ವಜನಿಕ ಉತ್ತರದಾಯಿತ್ವವಿಲ್ಲದ ಸಂಘಟನೆಗಲ್ಲ. ಆದರೆ, ಮೋದಿ-ಶಾ ಸರ್ಕಾರವು ದ್ವೇಷ ರಾಜಕಾರಣವನ್ನೇ ತನ್ನ ಸಿದ್ಧಾಂತ ಮಾಡಿಕೊಂಡಿದೆ. ವಿಪಕ್ಷಗಳ ನಾಯಕರನ್ನು ಹತ್ತಿಕುತ್ತಿದೆ. ಆರ್‌ಎಸ್‌ಎಸ್‌ನ ಸಿದ್ಧಾಂತಗಳನ್ನೂ ದೇಶದಲ್ಲೂ-ದೇಶದ ಹೊರಗೂ ಪ್ರಚಾರ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಒದಗಿಸುತ್ತಿದೆ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ, ಸರ್ವಾಧಿಕಾರವನ್ನು ಹೇರುತ್ತಿದೆ.



