ರಾಜ್ಯ ಸರ್ಕಾರ ಪ್ರಕಟಿಸಿರುವ 15 ಸಾವಿರ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಉರ್ದು ಮಾಧ್ಯಮವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ವಿಜಯಪುರದ ಟಿಪ್ಪು ಕ್ರಾಂತಿ ಸೇನೆ (TKS) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
GPSTR, HSTR ಹಾಗೂ PSTR ಹುದ್ದೆಗಳ CET ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಪ್ರಶ್ನೆಪತ್ರಿಕೆ ನೀಡಲು ನಿರ್ಧರಿಸಿರುವುದು ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ಉರ್ದು ಭಾಷೆಯಲ್ಲೂ ಪ್ರಶ್ನೆಪತ್ರಿಕೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಸುಮಾರು 15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಉರ್ದು ಮಾಧ್ಯಮ ಶಾಲೆಗಳನ್ನು ಕಡೆಗಣಿಸಲಾಗಿದೆ. ಉರ್ದು ಮಾಧ್ಯಮ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡದಿರುವುದು ಉರ್ದು ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಟಿಪ್ಪು ಕ್ರಾಂತಿ ಸೇನೆ ತಿಳಿಸಿದೆ.
“ವರ್ಷಗಳಿಂದ ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳಿಗೆ ಅದೇ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನಿರಾಕರಿಸುವುದು ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. NEET ಪರೀಕ್ಷೆಯಲ್ಲಿ ಉರ್ದು ಭಾಷೆಗೆ ಅವಕಾಶವಿರುವಾಗ CET ಪರೀಕ್ಷೆಯಲ್ಲಿ ಏಕೆ ಅವಕಾಶ ನೀಡಬಾರದು?” ಎಂದು ಸಂಘಟನೆ ಪ್ರಶ್ನಿಸಿದೆ.
“ಕೂಡಲೇ ನೇಮಕಾತಿ ನಿಯಮಗಳನ್ನು ಮರುಪರಿಶೀಲಿಸಿ GPSTR, HSTR ಮತ್ತು PSTR CET ಪರೀಕ್ಷೆಗಳಿಗೆ ಉರ್ದು ಪ್ರಶ್ನೆಪತ್ರಿಕೆ ಒದಗಿಸಬೇಕು. 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಮಾಧ್ಯಮಕ್ಕೂ ಸಮಾನ ಅವಕಾಶ ಕಲ್ಪಿಸುವುದರ ಜತೆಗೆ ಉರ್ದು ಮಾಧ್ಯಮ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದೆ.
ಬೇಡಿಕೆಗಳ ಈಡೇರಿಕೆಗೆ ‘ಅನ್ಯಾಯ ನಿಲ್ಲಿಸಿ, ಬೆಂಗಳೂರು ಚಲೋ’ ಘೋಷಣೆಯೊಂದಿಗೆ ರಾಜ್ಯಾದ್ಯಂತ ಹೋರಾಟ ನಡೆಸಲು ಸಂಘಟನೆ ಸಿದ್ಧತೆ ನಡೆಸಿದೆ. ಉರ್ದು ಮಾಧ್ಯಮ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಮುಸ್ಲಿಂ ಮುಖಂಡರು, ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಕರೆ ನೀಡಿದೆ.
“ಉರ್ದು ನಮ್ಮ ಭಾಷೆ, ನಮ್ಮ ಹಕ್ಕು. 15 ಸಾವಿರ ಶಿಕ್ಷಕರ ನೇಮಕಾತಿ ಆದೇಶವನ್ನು ತಿದ್ದುಪಡಿ ಮಾಡಿ ಉರ್ದು ಮಾಧ್ಯಮಕ್ಕೂ ಅವಕಾಶ ನೀಡಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಟಿಪ್ಪು ಕ್ರಾಂತಿ ಸೇನೆ ಸಂಸ್ಥಾಪಕ ಅಧ್ಯಕ್ಷ ದಸ್ತಗೀರ ಮುಲ್ಲಾ ಎಚ್ಚರಿಕೆ ನೀಡಿದರು.




