ಸಕ್ಕರೆ, ಉಪ್ಪು ಹಾಗೂ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಹೆಚ್ಚಿರುವ ಪ್ಯಾಕೇಜ್ಡ್ ಆಹಾರ ಉತ್ಪನ್ನಗಳ ಮೇಲೆ ಮುಂಭಾಗದಲ್ಲೇ ಎಚ್ಚರಿಕೆ ಲೇಬಲ್ ಹಾಕುವ ವಿಚಾರದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತೋರುತ್ತಿರುವ ಹಿಂಜರಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಗುರುವಾರ ಈ ಪ್ರಕರಣದ ವಿಚಾರಣೆ ನಡೆಸಿತು. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು ಹಾಗೂ ಸ್ಯಾಚುರೇಟೆಡ್ ಕೊಬ್ಬು ಹೊಂದಿರುವ ಆಹಾರಗಳ ಮೇಲೆ ಮುಂಭಾಗದಲ್ಲೇ ಎಚ್ಚರಿಕೆ ಸೂಚಿಸುವ ಲೇಬಲ್ ಅಳವಡಿಸುವ ಕುರಿತು ಈ ಹಿಂದೆ FSSAI ಪರಿಗಣಿಸಬೇಕೆಂದು ನ್ಯಾಯಾಲಯ ಸೂಚಿಸಿತ್ತು. ಆದರೆ, FSSAI ಸಭೆಯ ನಡಾವಳಿಗಳಲ್ಲಿ ಈ ಕ್ರಮ ಜಾರಿಗೆ ತರಲು ಹಿಂಜರಿಕೆ ವ್ಯಕ್ತವಾಗಿರುವುದನ್ನು ಗಮನಿಸಿದ ನ್ಯಾಯಾಲಯ, ಆಹಾರ ಉತ್ಪಾದನಾ ಕಂಪನಿಗಳ ಒತ್ತಡಕ್ಕೆ ಪ್ರಾಧಿಕಾರ ಮಣಿಯುತ್ತಿದೆಯೇ ಎಂದು ಪ್ರಶ್ನಿಸಿತು.
“ಆಹಾರ ಉತ್ಪಾದನಾ ಕಂಪನಿಗಳ ಒತ್ತಡಕ್ಕೆ ನೀವು ಮಣಿಯುತ್ತಿದ್ದೀರಾ? ನಾವು ಈ ಕ್ರಮವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಕೈಗೊಳ್ಳುತ್ತಿದ್ದೇವೆ. ನಮಗಾಗಿ ಅಲ್ಲ. ನಮ್ಮ ಆದೇಶವನ್ನು ಏಕೆ ಪಾಲಿಸುತ್ತಿಲ್ಲ? ಇಲ್ಲಿಯವರೆಗೆ ಏನು ಮಾಡಿದ್ದೀರಿ?” ಎಂದು ಪೀಠ FSSAIಯನ್ನು ತರಾಟೆಗೆ ತೆಗೆದುಕೊಂಡಿತು.
ಸಕ್ಕರೆ, ಉಪ್ಪು ಹಾಗೂ ಕೊಬ್ಬಿನ ಪ್ರಮಾಣ ಹೆಚ್ಚಿರುವ ಆಹಾರಗಳಿಗೆ ಎಚ್ಚರಿಕೆ ಲೇಬಲ್ ಹಾಕಿದರೆ ನಮ್ಕೀನ್‌ನಂತಹ ಹಲವು ಭಾರತೀಯ ಸಾಂಪ್ರದಾಯಿಕ ಆಹಾರಗಳ ಮೇಲೂ ‘ಹೆಚ್ಚಿನ ಕೊಬ್ಬು, ಸಕ್ಕರೆ ಅಥವಾ ಉಪ್ಪು’ ಎಂಬ ಸೂಚನೆ ಬರಲಿದೆ ಎಂಬ ಕೇಂದ್ರ ಸರ್ಕಾರದ ವಾದಕ್ಕೂ ನ್ಯಾಯಾಲಯ ಅಸಮ್ಮತಿ ವ್ಯಕ್ತಪಡಿಸಿತು.
“ಈ ದೇಶದ ಜನರು, ಅದರಲ್ಲೂ ಬೆಳೆಯುತ್ತಿರುವ ಮಕ್ಕಳು ಆರೋಗ್ಯವಾಗಿರಬಾರದು ಎಂದು ನೀವು ಬಯಸುತ್ತೀರಾ?” ಎಂದು ನ್ಯಾಯಾಲಯ ಪ್ರಶ್ನಿಸಿತು. ಯಾವುದೇ ನಿರ್ದಿಷ್ಟ ಆಹಾರ ಉತ್ಪನ್ನದ ವಿರುದ್ಧ ತಾನು ಇಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಗ್ರಾಹಕರು ತಾವು ಸೇವಿಸುತ್ತಿರುವ ಆಹಾರದಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಹೇಳಿತು.
“ಎಷ್ಟು ಜನರಿಗೆ ಒಣಹಣ್ಣುಗಳನ್ನು ಖರೀದಿಸುವ ಸಾಮರ್ಥ್ಯವಿದೆ? ಎಷ್ಟು ಮಕ್ಕಳು ಕುರ್ಕುರೆ ಖರೀದಿಸುತ್ತಾರೆ? ಅದೇ ವ್ಯತ್ಯಾಸ. ನಾವು ಯಾವುದೇ ನಿರ್ದಿಷ್ಟ ಉತ್ಪನ್ನದ ವಿರುದ್ಧವಲ್ಲ. ಖರೀದಿಸುವ ವ್ಯಕ್ತಿಗೆ ತಾನು ಏನು ಸೇವಿಸುತ್ತಿದ್ದಾನೆ ಎಂಬುದು ತಿಳಿದಿರಬೇಕು ಎಂಬುದಷ್ಟೇ ನಮ್ಮ ಉದ್ದೇಶ” ಎಂದು ಪೀಠ ಹೇಳಿತು.
FSSAI ಮತ್ತು ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಬೃಜೇಂದ್ರ ಚಹಾರ್ ವಾದ ಮಂಡಿಸಿ, ಇತರೆ ದೇಶಗಳಿಗಿಂತ ಭಾರತೀಯ ಸಾಂಪ್ರದಾಯಿಕ ಆಹಾರಗಳಲ್ಲಿ ಉಪ್ಪು, ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ಇಂತಹ ಎಚ್ಚರಿಕೆ ಲೇಬಲ್ ವ್ಯವಸ್ಥೆ ಭಾರತಕ್ಕೆ ಸೂಕ್ತವಾಗದಿರಬಹುದು ಎಂದು ತಿಳಿಸಿದರು.
ನಮ್ಕೀನ್‌ನಿಂದ ಮೊಟ್ಟೆಯವರೆಗೂ ಹಲವು ಆಹಾರಗಳ ಮೇಲೆ ಕೆಂಪು ಎಚ್ಚರಿಕೆ ಚಿಹ್ನೆ ಬರಬೇಕಾಗುತ್ತದೆ. ಹೀಗಾಗಿ ಭಾರತೀಯ ಸಾಂಪ್ರದಾಯಿಕ ಆಹಾರಗಳಿಗೆ ವಿದೇಶಗಳ ಮಾನದಂಡಗಳನ್ನು ನೇರವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಎಚ್ಚರಿಕೆ ಲೇಬಲ್ ಇಲ್ಲದಿದ್ದರೂ ಆಹಾರದಲ್ಲಿ ಸಕ್ಕರೆ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇಂತಹ ಲೇಬಲ್‌ಗಳ ಉದ್ದೇಶ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಾಗಿದೆ ಎಂದು ಹೇಳಿತು. ವಿಶೇಷವಾಗಿ ಜಂಕ್ ಫುಡ್‌ಗೆ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಎಚ್ಚರಿಕೆ ಲೇಬಲ್‌ಗಳಿಂದ ಆಹಾರ ಉತ್ಪಾದಕರ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ FSSAI ಈ ಕ್ರಮದಿಂದ ಹಿಂದೆ ಸರಿಯುತ್ತಿದೆಯೇ ಎಂದೂ ಪೀಠ ಪ್ರಶ್ನಿಸಿತು. “ಉತ್ಪಾದಕರಿಗೆ ಈ ಎಚ್ಚರಿಕೆ ಲೇಬಲ್‌ಗಳು ಇಷ್ಟವಾಗದಿರಬಹುದು. ಏಕೆಂದರೆ ಅವರ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಆದರೆ ಎಚ್ಚರಿಕೆ ನೀಡಿದ ನಂತರವೂ ಆ ಉತ್ಪನ್ನವನ್ನು ಖರೀದಿಸಬೇಕೇ ಬೇಡವೇ ಎಂಬುದು ಗ್ರಾಹಕರ ವಿವೇಚನೆ. ಹೀಗಿರುವಾಗ FSSAI ಏಕೆ ಹಿಂಜರಿಯುತ್ತಿದೆ?” ಎಂದು ನ್ಯಾಯಾಲಯ ಕೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ASG, ಸಾಂಪ್ರದಾಯಿಕ ಆಹಾರ ಕ್ಷೇತ್ರದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಆದಾಯದ ಸುಮಾರು ಮೂರನೇ ಒಂದು ಭಾಗ ಬರುತ್ತದೆ. ಇಂತಹ ನಿಯಮಗಳು ಅವುಗಳ ಮೇಲೂ ಪರಿಣಾಮ ಬೀರಬಹುದು ಎಂದು ತಿಳಿಸಿದರು. ಆದರೆ ಈ ವಾದದಿಂದಲೂ ನ್ಯಾಯಾಲಯ ಸಮಾಧಾನಗೊಂಡಿಲ್ಲ.
ಪ್ಯಾಕೇಜ್ಡ್ ಆಹಾರಗಳ ಮೇಲೆ ಮುಂಭಾಗದಲ್ಲೇ ಎಚ್ಚರಿಕೆ ಲೇಬಲ್ ಅಳವಡಿಸುವ ಕುರಿತು ಕೇಂದ್ರ ಸರ್ಕಾರ ಹಾಗೂ FSSAI ತಮ್ಮ ಅಂತಿಮ ನಿರ್ಧಾರವನ್ನು ಎರಡು ವಾರಗಳಲ್ಲಿ ನ್ಯಾಯಾಲಯದ ಮುಂದೆ ಸಲ್ಲಿಸಬೇಕು ಎಂದು ಪೀಠ ಸೂಚಿಸಿದೆ. “ಇದು ಕೇಂದ್ರ ಸರ್ಕಾರಕ್ಕೆ ಕೊನೆಯ ಅವಕಾಶ. ಮುಂದಿನ ಬಾರಿ ನಾವು ತೀರ್ಪನ್ನೇ ನೀಡಬೇಕಾಗಬಹುದು” ಎಂದು ನ್ಯಾಯಾಲಯ ಎಚ್ಚರಿಸಿತು. ಭಾರತದಲ್ಲಿ ಅಂತಾರಾಷ್ಟ್ರೀಯ ಆಹಾರ ಲೇಬಲಿಂಗ್ ಮಾನದಂಡಗಳನ್ನು ಅನುಸರಿಸಲು ಸಾಧ್ಯವಿಲ್ಲ ಎಂಬ ಕೇಂದ್ರದ ನಿಲುವನ್ನೂ ನ್ಯಾಯಾಲಯ ಒಪ್ಪಲಿಲ್ಲ.
ಇದನ್ನೂ ಓದಿ: ನಾಲ್ಕನೇ ಮಗುವಿಗೆ ಮಾತೃತ್ವ ರಜೆ ನೀಡಲು ಅಲಹಾಬಾದ್ ಹೈಕೋರ್ಟ್ ನಕಾರ
ಅಭಿವೃದ್ಧಿ ಹೊಂದಿದ ದೇಶಗಳ ಮಾನದಂಡಗಳಿಗೆ ಭಾರತ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂಬ ನಿಲುವು ಸರಿಯಲ್ಲ. “ಭಾರತ ಅಭಿವೃದ್ಧಿ ಹೊಂದದ ದೇಶವಾಗಿಯೇ ಉಳಿಯಬೇಕೇ?” ಎಂದು ಪ್ರಶ್ನಿಸಿದ ನ್ಯಾಯಾಲಯ, ದೇಶದ ನಾಗರಿಕರ, ಅದರಲ್ಲೂ ಮಕ್ಕಳ ಆರೋಗ್ಯದ ಬಗ್ಗೆ ಭಾರತ ಕಾಳಜಿ ವಹಿಸುತ್ತಿದೆ ಎಂಬ ಸಂದೇಶ ಜಗತ್ತಿಗೆ ಹೋಗಬೇಕು ಎಂದು ಹೇಳಿತು.
ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮುಂದಾದ ಆಹಾರ ಉತ್ಪಾದನಾ ಕಂಪನಿಯ ಪರ ಹಿರಿಯ ವಕೀಲ ಮನೀಂದರ್ ಸಿಂಗ್ ಅವರಿಗೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. “ನೀವು ಉತ್ಪಾದಕರು. ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಮಗೆ ಹೇಳುವ ಅಧಿಕಾರವಿಲ್ಲ. ನೀವು ಏಕೆ ಇಷ್ಟೊಂದು ಆತುರಪಡುತ್ತಿದ್ದೀರಿ? ಈ ವಿಚಾರದ ಗಂಭೀರತೆ ನಮಗೆ ತಿಳಿದಿದೆ” ಎಂದು ಪೀಠ ಹೇಳಿತು.
ಪ್ಯಾಕೇಜ್ಡ್ ಆಹಾರಗಳ ಮೇಲೆ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣದ ಬಗ್ಗೆ ಎಚ್ಚರಿಕೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
2025ರ ಏಪ್ರಿಲ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, FSSAI ರಚಿಸಿದ್ದ ತಜ್ಞರ ಸಮಿತಿಯು ಈ ಕುರಿತು ಶಿಫಾರಸುಗಳನ್ನು ಅಂತಿಮಗೊಳಿಸುವಂತೆ ಸೂಚಿಸಿತ್ತು. ನಂತರ ತಜ್ಞರ ಸಮಿತಿ ‘ಇಂಡಿಯನ್ ನ್ಯೂಟ್ರಿಷನ್ ರೇಟಿಂಗ್’ ವ್ಯವಸ್ಥೆ ಕುರಿತು ಚರ್ಚಿಸಿ 14,000ಕ್ಕೂ ಹೆಚ್ಚು ಅಭಿಪ್ರಾಯಗಳನ್ನು ಸ್ವೀಕರಿಸಿದ್ದರೂ, ಲೇಬಲ್‌ಗಳ ಸ್ವರೂಪದ ಬಗ್ಗೆ ಒಮ್ಮತ ಮೂಡಿಲ್ಲ ಎಂದು FSSAI ನ್ಯಾಯಾಲಯಕ್ಕೆ ತಿಳಿಸಿತ್ತು. ಹೆಚ್ಚಿನ ಸಂಶೋಧನೆ, ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ಹಾಗೂ ಜಾಗತಿಕ ಬೆಳವಣಿಗೆಗಳ ಅಧ್ಯಯನದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಹೇಳಿತ್ತು. ಇದೀಗ ಈ ವಿಳಂಬದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ FSSAIಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.



