ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಅಂಗವಾಗಿ ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ರಾಜ್ಯಾದ್ಯಂತ ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)’ ಎಂಬ ಶೀರ್ಷಿಕೆಯಡಿ ಬೃಹತ್ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ವಿಜಯಪುರದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಚ್ ಬಳಗಾನೂರ ತಿಳಿಸಿದರು.
ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರವಾದಿ ಮುಹಮ್ಮದ್ (ಸ) ಅವರು ಜಗತ್ತಿಗೆ ಸಾರಿದ ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಏಕತೆಯ ಸಂದೇಶಗಳನ್ನು ಜನರಿಗೆ ಪರಿಚಯಿಸುವುದು ಅಭಿಯಾನದ ಉದ್ದೇಶವಾಗಿದೆ. ವ್ಯಕ್ತಿಯ ಮನಸ್ಸು ಹಾಗೂ ಚಾರಿತ್ರ್ಯವನ್ನು ಸಂಸ್ಕರಿಸುವ ಮೂಲಕ ವ್ಯಕ್ತಿ ಮತ್ತು ಸಮಾಜದಲ್ಲಿ ನೈತಿಕ ಪರಿವರ್ತನೆ ತರುವುದು, ಪ್ರವಾದಿಯವರ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ ಸೌಹಾರ್ದತೆ ಹಾಗೂ ಪರಸ್ಪರ ಬಾಂಧವ್ಯವನ್ನು ಬಲಪಡಿಸುವುದು ಅಭಿಯಾನದ ಪ್ರಮುಖ ಆಶಯವಾಗಿದೆ” ಎಂದರು.
ಎರಡು ಕೃತಿಗಳ ಬಿಡುಗಡೆ
ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ಎರಡು ವಿಶೇಷ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು. ಖ್ಯಾತ ಸಾಹಿತಿ ಯೋಗೇಶ್ ಮಾಸ್ಟರ್ ಅವರ ‘ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್(ಸ)’ ಹಾಗೂ ವಾರ್ತಾ ಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)’ ಕೃತಿಗಳು ಬಿಡುಗಡೆಯಾಗಲಿವೆ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಮಾಜಿ ಅಧ್ಯಕ್ಷ ಎಂ.ಡಿ. ಯೂಸುಫ್ ಖಾಜಿ ಮಾತನಾಡಿ, ಸೀರತ್ ಅಭಿಯಾನ ಯಾವುದೇ ಧರ್ಮ ಪ್ರಚಾರದ ಕಾರ್ಯಕ್ರಮವಲ್ಲ. ಪ್ರವಾದಿ ಮುಹಮ್ಮದ್ (ಸ) ಅವರ ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ ಹಾಗೂ ಏಕತೆಯ ಸಂದೇಶಗಳನ್ನು ಕನ್ನಡಿಗರಿಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ ಎಂದರು.
ಅಭಿಯಾನದ ಅವಧಿಯಲ್ಲಿ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜಸೇವಾ ಚಟುವಟಿಕೆಗಳು ಹಾಗೂ ಸೌಹಾರ್ದ ಸಂದೇಶ ರ‍್ಯಾಲಿಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ವಿವಿಧ ಕಾರ್ಯಕ್ರಮ
ಸ್ಥಳೀಯ ಮಟ್ಟದಲ್ಲಿ ಪುಸ್ತಕ ವಿತರಣೆ, ನಿಬಂಧ ಸ್ಪರ್ಧೆ, ಮೊಹಲ್ಲಾ ಸೀರತ್ ಕಾರ್ಯಕ್ರಮಗಳು ಹಾಗೂ ಗಣ್ಯರ ಸಭೆಗಳನ್ನು ನಡೆಸಲಾಗುವುದು. ಶಿವನಗುತ್ತಿ ಮತ್ತು ಕೃಷ್ಣಾಪುರದಲ್ಲಿ ವಿಶೇಷ ಸೀರತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳಾ ವಿಭಾಗದ ನೇತೃತ್ವದಲ್ಲಿ ಆಸ್ಪತ್ರೆ, ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಭೇಟಿ ನೀಡಿ ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಅಧ್ಯಕ್ಷ ಸಮದಾನಿ ಖಾಜಿ, ಅಬ್ದುಲ್ ರಹೀಮಾನ ನಾಸೀರ, ಇಲಕಲ್ಲಿನ ಆಶೀಫ್ ಬಿಳಿಕುದರಿ, ಎಸ್.ಎಚ್. ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




