ತಾಯಿ ಮರಣ ಪ್ರಮಾಣ ಮತ್ತು ತೊಂದರೆ ತಡೆಗಟ್ಟುವುದು ವಿಶ್ವ ಜನಸಂಖ್ಯೆ ದಿನಾಚರಣೆಯ ಉದ್ದೇಶವಾಗಿದ್ದು, ಜನಸಂಖ್ಯೆ ನಿರ್ವಹಣೆಗೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸದ್ಬಳಕೆ ಅಗತ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತ್ ಗುಣಾರಿ ಹೇಳಿದರು.
ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ನರ್ಸಿಂಗ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವೆ ಆರೋಗ್ಯಕರ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವುದರೊಂದಿಗೆ ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಬಹುದಾಗಿದೆ. ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಗುಣಮಟ್ಟ ಸುಧಾರಣೆ ಗರ್ಭಧಾರಣೆಗೆ ಆರೋಗ್ಯಕರ ಸಮಯ ಮತ್ತು ಗರ್ಭಧಾರಣೆಗಳ ನಡುವಿನ ಅಂತರವನ್ನು ಉತ್ತೇಜಿಸಬೇಕಿದೆ” ಎಂದರು.
“ಭಾರತ ಸ್ವಾತಂತ್ರ್ಯ ಪಡೆದುಕೊಂಡಾಗ ದೇಶದ ಜನಸಂಖ್ಯೆ ಕೇವಲ 33 ಕೋಟಿ ಇತ್ತು. ಕಳೆದ 79 ವರ್ಷಗಳಲ್ಲಿ ಜನಸಂಖ್ಯೆಯ ವಿಷಯದಲ್ಲಿ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಭಾರತ ಜನಸಂಖ್ಯೆ 144 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದೆ. ಆದ್ದರಿಂದ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ ಇತ್ತಿಚಿನ ವರ್ಷಗಳಲ್ಲಿ ಭಾರತ ದೇಶದ ಜನನ ದರ 1.94ಕ್ಕೆ ಕುಸಿದಿದೆ. ಇದು ಭವಿಷ್ಯದಲ್ಲಿ ಜನಸಂಖ್ಯೆಯ ಆಸಮತೋಲನಕ್ಕೆ ಕಾರಣವಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, “ವೃದ್ಧರ ಸಂಖ್ಯೆ ಹೆಚ್ಚಳಗೊಂಡು ದುಡಿಯುವ ಕೈಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಮುಖ್ಯವಾಗಿ ದೇಶಕ್ಕೆ ಆರ್ಥಿಕ ದೃಷ್ಟಿಯಿಂದ ಅಪಾಯವಾಗುತ್ತದೆ” ಎಂದರು.
ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ ಮಾತನಾಡಿ, “ಜನಸಂಖ್ಯೆಗೆ ಅನುಗುಣವಾಗಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಾದ ಶಾಶ್ವತ ಹಾಗೂ ತಾತ್ಕಾಲಿಕ ವಿಧಾನಗಳನ್ನು ಮಹಿಳೆಯರಿಗೆ ಹಾಗೂ ಪುರುಷರಿಗೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪಿಪಿಐಯುಸಿಡಿ ಚುಚ್ಚುಮದ್ದು, ಇಂಪ್ಲಾಂಟ್ ರಾಡ್ ಅಳವಡಿಕೆ, ಪುರುಷರು ನಿರೋಧ್ ಬಳಸುವುದು, ಶಾಶ್ವತ ವಿಧಾನಗಳಾದ ಮಹಿಳೆಯರಿಗೆ ಟ್ಯುಬೆಕ್ಟಮಿ, ಉದರದರ್ಶಕ ಶಸ್ತ್ರಚಿಕಿತ್ಸೆ, ಪುರುಷರಿಗೆ ಪುರುಷ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗಳು ಎಲ್ಲ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ” ಎಂದರು.
ಅರವಳಿಕೆ ತಜ್ಞ ಡಾ. ಸಜ್ಜನ ಮಾತನಾಡಿ, “ದೇಶದ ಜನಸಂಖ್ಯೆಯು 144 ಕೋಟಿಗೂ ಹೆಚ್ಚಾಗಿ ಅದರಲ್ಲಿ ನಮ್ಮ ದೇಶದಲ್ಲಿ ಯುವಕರೇ ಹೆಚ್ಚಿನ ಪ್ರಮಾಣದಲ್ಲಿದೆ. ಆದರಿಂದ ನಗರೀಕರಣ ನಿರುದ್ಯೋಗ ಮತ್ತು ಪರಿಸರ ಮಾಲಿನ್ಯದಂಥಹ ದೊಡ್ಡ ಸವಾಲುಗಳು ಈಗ ಎದುರಾಗಿವೆ. ಜನಸಂಖ್ಯೆಯು ಈಗ ಕೇವಲ ನಿಯಂತ್ರಣದ ವಿಷಯವಾಗಿರದೇ ನಿರ್ವಹಣೆಯ ವಿಷಯವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸೋನಂ ವಾಂಗ್ಚುಕ್, ವಿದ್ಯಾರ್ಥಿಗಳ ಪ್ರಾಣ ಉಳಿಸಿ: ಕೇಂದ್ರಕ್ಕೆ ‘ಕರ್ನಾಟಕ ನಾಗರಿಕ ಸಮಾಜ’ದ ತುರ್ತು ಆಗ್ರಹ
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಎಂ ಬಿ ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ ಡಿ ಗುಂಡಬಾವಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಸುರೇಂದ್ರ ಮಾನಕರ, ಶಂಕರ ಚಲವಾದಿ, ರೇಖಾ ದಶವಂತ, ಮೋತಿಲಾಲ ಲಮಾಣಿ, ಎನ್ ಆರ್ ಬಾಗವಾನ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ಸಹಾಯಕ ಮಲೇರಿಯಾ ಅಧಿಕಾರಿ ವಿರುಪಾಕ್ಷ ಬಂದಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.




