ಭಾರತದ 70%ರಷ್ಟು ಪ್ರದೇಶದಲ್ಲಿ ಮಳೆ ಮೋಡಗಳು ಮಾಯ; ಪಾಕಿಸ್ತಾನದ ಒಣ ಗಾಳಿ ಕಾರಣವೇ?

Date:

ಭಾರತದಲ್ಲಿ ಮಳೆಗಾಲ ಆರಂಭವಾಗಿದೆ. ಮುಂಬೈ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಆದರೂ, ಬಹುಭಾಗದಲ್ಲಿ ಆಕಾಶ ಖಾಲಿಯಾಗಿದೆ. ಕೆಲವೇ ದಿನಗಳ ಹಿಂದೆ ದೇಶದಾದ್ಯಂತ ವ್ಯಾಪಿಸಿದ್ದ ಮಳೆ ಮೋಡಗಳು ಈಗ ಹಲವು ಪ್ರದೇಶಗಳಿಂದ ಕಣ್ಮರೆಯಾಗಿವೆ. ಉಪಗ್ರಹ ಚಿತ್ರಗಳಲ್ಲಿ ದೇಶದ ಸುಮಾರು 70ರಿಂದ 80%ರಷ್ಟು ಭೂಪ್ರದೇಶದಲ್ಲಿ ದಟ್ಟ ಮಳೆ ಮೋಡಗಳ ಕೊರತೆ ಕಂಡುಬಂದಿದೆ. ಮುಂಗಾರು ದೇಶದ ಎಲ್ಲ ಭಾಗಗಳನ್ನು ತಲುಪಿದ ಕೆಲವೇ ದಿನಗಳಲ್ಲಿ ಉಂಟಾಗಿರುವ ಈ ದಿಢೀರ್ ಬದಲಾವಣೆ ಕೃಷಿಕರು, ಹವಾಮಾನ ತಜ್ಞರು ಹಾಗೂ ಜಲಸಂಪನ್ಮೂಲ ನಿರ್ವಹಣಾ ವಲಯದಲ್ಲಿ ಆತಂಕ ಮೂಡಿಸಿದೆ.

- Advertisement -

ದೇಶದಾದ್ಯಂತ ಮುಂಗಾರು ವ್ಯಾಪಿಸಿದೆ ಎಂದರೆ ಎಲ್ಲ ಪ್ರದೇಶಗಳಲ್ಲೂ ನಿರಂತರ ಮಳೆ ಸುರಿಯುತ್ತದೆ ಎಂದರ್ಥವಲ್ಲ. ಮುಂಗಾರು ಎಂಬುದು ಕೇವಲ ಮಳೆಯಲ್ಲ; ಅದು ಸಾಗರ ಮತ್ತು ಭೂಭಾಗದ ನಡುವಿನ ಉಷ್ಣಾಂಶದ ವ್ಯತ್ಯಾಸದಿಂದ ರೂಪುಗೊಳ್ಳುವ ಬೃಹತ್ ವಾಯು ಸಂಚಾರ ವ್ಯವಸ್ಥೆ. ಮಳೆ ಸುರಿಯಲು ಗಾಳಿಯಲ್ಲಿ ಸಾಕಷ್ಟು ತೇವಾಂಶ ಇರಬೇಕು. ಆ ತೇವಾಂಶವನ್ನು ಮೇಲಕ್ಕೆತ್ತುವ ವಾತಾವರಣದ ವ್ಯವಸ್ಥೆ ರೂಪುಗೊಳ್ಳಬೇಕು. ಕಡಿಮೆ ಒತ್ತಡದ ಪ್ರದೇಶಗಳು, ವಾಯುಭಾರ ಕುಸಿತಗಳು ಹಾಗೂ ಅನುಕೂಲಕರ ಜಾಗತಿಕ ಹವಾಮಾನ ವ್ಯವಸ್ಥೆಗಳು ಸಕ್ರಿಯವಾಗಿರಬೇಕು. ಈ ಸರಪಳಿಯ ಯಾವುದಾದರೂ ಕೊಂಡಿ ದುರ್ಬಲಗೊಂಡರೆ ಮುಂಗಾರು ಮಾರುತಗಳು ದೇಶದ ಮೇಲೆ ಇದ್ದರೂ ಮಳೆ ಕಡಿಮೆಯಾಗಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಪ್ರಸ್ತುತ, ಭಾರತದ ಹಲವು ಭಾಗಗಳಲ್ಲಿ ಕಂಡುಬರುತ್ತಿರುವ ಮೋಡರಹಿತ ವಾತಾವರಣಕ್ಕೆ ಪಾಕಿಸ್ತಾನ ಮತ್ತು ಪಶ್ಚಿಮ ಏಷ್ಯಾದ ಒಣ ಪ್ರದೇಶಗಳಿಂದ ಭಾರತದತ್ತ ಬೀಸುತ್ತಿರುವ ಶುಷ್ಕ ಗಾಳಿಯೂ ಒಂದು ಕಾರಣ ಎಂದು ಹವಾಮಾನ ವಿಶ್ಲೇಷಣೆಗಳು ಸೂಚಿಸುತ್ತಿವೆ. ಪಾಕಿಸ್ತಾನದ ಸಿಂಧ್, ಬಲೂಚಿಸ್ತಾನ, ದಕ್ಷಿಣ ಪಂಜಾಬ್ ಹಾಗೂ ಭಾರತದ ಪಶ್ಚಿಮ ಭಾಗದಲ್ಲಿರುವ ಥಾರ್ ಮರುಭೂಮಿ ಪ್ರದೇಶಗಳು ಬೇಸಿಗೆ ಮತ್ತು ಮಳೆಗಾಲದಲ್ಲಿಯೂ ಅತ್ಯಂತ ಬಿಸಿಯಾದ, ಕಡಿಮೆ ತೇವಾಂಶ ಹೊಂದಿರುವ ಗಾಳಿಯ ಮೂಲಗಳಾಗಿವೆ.

ಭಾರತ–ಪಾಕಿಸ್ತಾನ ಗಡಿಗೆ ಗೋಡೆ ಇದೆ; ಗಾಳಿಗೆ ಗಡಿ ಇಲ್ಲ

ಭಾರತ ಮತ್ತು ಪಾಕಿಸ್ತಾನ ರಾಜಕೀಯವಾಗಿ ಎರಡು ಪ್ರತ್ಯೇಕ ರಾಷ್ಟ್ರಗಳಾಗಿದ್ದರೂ, ಭೌಗೋಳಿಕವಾಗಿ ಒಂದೇ ನಿರಂತರ ಭೂಪ್ರದೇಶದ ಭಾಗಗಳಾಗಿವೆ. ಎರಡೂ ದೇಶಗಳ ನಡುವೆ ಸಾವಿರಾರು ಕಿಲೋಮೀಟರ್ ಉದ್ದದ ಗಡಿ ಇದ್ದರೂ, ಪರ್ವತಗಳು ಅಥವಾ ಸಮುದ್ರದಂತಹ ದೊಡ್ಡ ನೈಸರ್ಗಿಕ ತಡೆಗೋಡೆ ಇಲ್ಲ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಭಾರತದ ರಾಜಸ್ಥಾನ ಮತ್ತು ಗುಜರಾತ್‌ವರೆಗೆ ಥಾರ್ ಮರುಭೂಮಿ ನಿರಂತರವಾಗಿ ಹರಡಿಕೊಂಡಿದೆ. ಪಂಜಾಬ್ ಪ್ರದೇಶವೂ ಭಾರತ–ಪಾಕಿಸ್ತಾನದ ನಡುವೆ ಹಂಚಿಕೆಯಾಗಿದೆ. ಹೀಗಾಗಿ, ಪಾಕಿಸ್ತಾನದ ಬಯಲು ಮತ್ತು ಮರುಭೂಮಿ ಪ್ರದೇಶಗಳಲ್ಲಿ ರೂಪುಗೊಳ್ಳುವ ಬಿಸಿ, ಒಣ ಗಾಳಿ ಯಾವುದೇ ದೊಡ್ಡ ಭೌಗೋಳಿಕ ಅಡೆತಡೆಯಿಲ್ಲದೆ ರಾಜಸ್ಥಾನ, ಗುಜರಾತ್, ಪಂಜಾಬ್ ಹಾಗೂ ಹರಿಯಾಣದ ಮೂಲಕ ಭಾರತದ ಒಳನಾಡನ್ನು ಪ್ರವೇಶಿಸಬಹುದು.

ಗಾಳಿಯ ಚಲನೆಗೆ ದೇಶಗಳ ರಾಜಕೀಯ ಗಡಿಗಳು ಅನ್ವಯಿಸುವುದಿಲ್ಲ. ವಾಯುಭಾರದ ವ್ಯತ್ಯಾಸ, ಭೂಮಿಯ ಮೇಲ್ಮೈ ಉಷ್ಣಾಂಶ ಹಾಗೂ ಮೇಲ್ಮಟ್ಟದ ಗಾಳಿಯ ದಿಕ್ಕು ಅದರ ಚಲನೆಯನ್ನು ನಿರ್ಧರಿಸುತ್ತವೆ. ಅನುಕೂಲಕರ ವಾತಾವರಣ ನಿರ್ಮಾಣವಾದಾಗ ಪಾಕಿಸ್ತಾನದ ಒಣ ಪ್ರದೇಶಗಳಿಂದ ಹೊರಡುವ ಶುಷ್ಕ ಗಾಳಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳನ್ನು ದಾಟಿ ಮಧ್ಯಭಾರತದವರೆಗೂ ವ್ಯಾಪಿಸುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ, ಈ ಶುಷ್ಕ ಗಾಳಿಯ ಪ್ರಭಾವ ಅರಬ್ಬೀ ಸಮುದ್ರದ ಕೆಲವು ಭಾಗಗಳಿಂದ ಮಧ್ಯಭಾರತ ಮತ್ತು ದಕ್ಷಿಣ ಭಾರತದವರೆಗೂ ವಿಸ್ತರಿಸಿದೆ. ಇದರಿಂದ ಮುಂಗಾರು ಮಾರುತಗಳು ಹೊತ್ತು ತರುವ ತೇವಾಂಶ ದುರ್ಬಲಗೊಳ್ಳುತ್ತಿದ್ದು, ಮೋಡಗಳ ಬೆಳವಣಿಗೆಗೆ ಅಗತ್ಯವಾದ ವಾತಾವರಣ ರೂಪುಗೊಳ್ಳುತ್ತಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಶುಷ್ಕ ಗಾಳಿ ಬಂದರೆ ಮೋಡಗಳು ಏಕೆ ಮಾಯವಾಗುತ್ತವೆ?

ಮೋಡಗಳು ನಿರ್ಮಾಣವಾಗಲು ಗಾಳಿಯಲ್ಲಿ ಹೆಚ್ಚಿನ ಪ್ರಮಾಣದ ನೀರಾವಿ ಇರಬೇಕು. ಸಮುದ್ರದಿಂದ ತೇವಾಂಶ ಹೊತ್ತು ತರುವ ಗಾಳಿ ಮೇಲಕ್ಕೆ ಏರಿದಾಗ ಅದು ತಂಪಾಗುತ್ತದೆ. ನಂತರ ನೀರಾವಿ ಸಣ್ಣ ನೀರಿನ ಹನಿಗಳಾಗಿ ಘನೀಕರಣಗೊಂಡು ಮೋಡಗಳನ್ನು ರೂಪಿಸುತ್ತದೆ. ಈ ಹನಿಗಳು ಒಂದಕ್ಕೊಂದು ಸೇರಿ ದೊಡ್ಡದಾದಾಗ ಮಳೆಯಾಗಿ ಭೂಮಿಗೆ ಬೀಳುತ್ತವೆ.

ಆದರೆ, ತೇವಾಂಶ ಹೊಂದಿರುವ ಮುಂಗಾರು ಮಾರುತಗಳ ನಡುವೆ ಬಿಸಿ ಮತ್ತು ಒಣ ಗಾಳಿ ಪ್ರವೇಶಿಸಿದಾಗ ಈ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಶುಷ್ಕ ಗಾಳಿ ವಾತಾವರಣದಲ್ಲಿರುವ ತೇವಾಂಶವನ್ನು ಕಡಿಮೆ ಮಾಡುತ್ತದೆ. ಈಗಾಗಲೇ ರೂಪುಗೊಂಡಿರುವ ಸಣ್ಣ ಮೋಡಗಳಲ್ಲಿನ ನೀರಿನ ಹನಿಗಳು ಆವಿಯಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಪರಿಣಾಮವಾಗಿ ಮೋಡಗಳು ದಟ್ಟವಾಗಿ ಬೆಳೆಯುವುದಿಲ್ಲ. ಮೋಡಗಳು ಕಾಣಿಸಿಕೊಂಡರೂ ಮಳೆ ಸುರಿಸುವಷ್ಟು ಎತ್ತರ ಮತ್ತು ಸಾಂದ್ರತೆಯನ್ನು ಪಡೆಯದೆ ಚದುರಿಹೋಗುತ್ತವೆ.

ಉದಾಹರಣೆಯೊಂದಿಗೆ ನೋಡುವುದಾದರೆ; ಒದ್ದೆಯಾದ ಬಟ್ಟೆಯನ್ನು ಬಿಸಿಯಾದ, ಒಣ ಗಾಳಿಯಲ್ಲಿ ಒಣಗಿಸುವ ರೀತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಗಾಳಿ ಎಷ್ಟು ಒಣಗಿದೆಯೋ ಅಷ್ಟು ವೇಗವಾಗಿ ನೀರು ಆವಿಯಾಗುತ್ತದೆ. ಇದೇ ರೀತಿಯಲ್ಲಿ ವಾತಾವರಣದ ಕೆಳ ಮತ್ತು ಮಧ್ಯಮ ಪದರಗಳಲ್ಲಿ ಶುಷ್ಕ ಗಾಳಿ ಹೆಚ್ಚಾದರೆ ಮೋಡಗಳ ಬೆಳವಣಿಗೆ ಕುಂಠಿತವಾಗುತ್ತದೆ.

ಮುಂಗಾರು ಬಂದಿದ್ದರೂ ಮಳೆ ಏಕೆ ನಿಂತಿದೆ?

ದಕ್ಷಿಣ–ಪಶ್ಚಿಮ ಮುಂಗಾರು ಜುಲೈ 9ರ ವೇಳೆಗೆ ದೇಶದ ಎಲ್ಲ ಭಾಗಗಳನ್ನು ಆವರಿಸಿದೆ. ಆದರೆ, ಮುಂಗಾರು ದೇಶವನ್ನು ಆವರಿಸುವುದು ಮತ್ತು ನಿರಂತರವಾಗಿ ಮಳೆ ಸುರಿಸುವುದು ಎರಡು ವಿಭಿನ್ನ ಸಂಗತಿಗಳು. ಮುಂಗಾರು ಮಾರುತಗಳ ಉಪಸ್ಥಿತಿಯ ಜೊತೆಗೆ ಕಡಿಮೆ ವಾಯುಭಾರದ ಪ್ರದೇಶಗಳು ಮತ್ತು ವಾಯುಭಾರ ಕುಸಿತಗಳು ರೂಪುಗೊಳ್ಳಬೇಕು.

ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಕಡಿಮೆ ಒತ್ತಡದ ಪ್ರದೇಶಗಳು ಸಾಮಾನ್ಯವಾಗಿ ಮಧ್ಯಭಾರತದ ಮೂಲಕ ಪಶ್ಚಿಮದತ್ತ ಸಾಗುತ್ತವೆ. ಇವು ಒಡಿಶಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಹಾಗೂ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಗೆ ಮಳೆ ತರುತ್ತವೆ. ಆದರೆ, ಇಂತಹ ಮಳೆ ವ್ಯವಸ್ಥೆಗಳು ದುರ್ಬಲವಾದಾಗ ಅಥವಾ ಹೊಸ ಕಡಿಮೆ ಒತ್ತಡದ ಪ್ರದೇಶಗಳು ರೂಪುಗೊಳ್ಳದಿದ್ದಾಗ ಮುಂಗಾರು ತಾತ್ಕಾಲಿಕ ವಿರಾಮದ ಸ್ಥಿತಿಗೆ ಜಾರುತ್ತದೆ. ಇದನ್ನು ಹವಾಮಾನ ವಿಜ್ಞಾನದಲ್ಲಿ ‘ಬ್ರೇಕ್ ಮಾನ್ಸೂನ್’ ಅಥವಾ ‘ಮುಂಗಾರು ವಿರಾಮ’ ಎಂದು ಕರೆಯಲಾಗುತ್ತದೆ.

ಈ ಅವಧಿಯಲ್ಲಿ ದೇಶದ ಮಧ್ಯ, ಪಶ್ಚಿಮ ಹಾಗೂ ದಕ್ಷಿಣ ಭಾಗಗಳಲ್ಲಿ ಮಳೆ ಕಡಿಮೆಯಾಗಬಹುದು. ಅದೇ ವೇಳೆ ಹಿಮಾಲಯದ ತಪ್ಪಲು, ಈಶಾನ್ಯ ಭಾರತ ಅಥವಾ ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸುರಿಯಬಹುದು.

ಈ ಲೇಖನ ಓದಿದ್ದೀರಾ?: ತಡವಾದ ಮುಂಗಾರು: ಮೊದಲ ಬೆಳೆ ಖೋತಾ, ರೈತರ ಕೈ ಹಿಡಿಯುವುದೇ ಜುಲೈ ಮಳೆ?

ಪ್ರಸ್ತುತ ಮುಂಗಾರು ದುರ್ಬಲಗೊಳ್ಳಲು ಪಾಕಿಸ್ತಾನದಿಂದ ಹರಿದುಬರುತ್ತಿರುವ ಶುಷ್ಕ ಗಾಳಿ ಮಾತ್ರ ಕಾರಣವಲ್ಲ. ಮುಂಗಾರು ಚಟುವಟಿಕೆಯನ್ನು ಪ್ರಭಾವಿಸುವ ಜಾಗತಿಕ ವಾತಾವರಣ ವ್ಯವಸ್ಥೆಯಾದ ‘ಮ್ಯಾಡೆನ್–ಜೂಲಿಯನ್ ಆಸಿಲೇಷನ್’ (MJO) ಕೂಡ ಅನುಕೂಲಕರ ಸ್ಥಿತಿಯಲ್ಲಿಲ್ಲ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಹೊಸ ಕಡಿಮೆ ಒತ್ತಡದ ಪ್ರದೇಶಗಳು ರೂಪುಗೊಳ್ಳುವ ಸಾಧ್ಯತೆ ಕಡಿಮೆಯಾಗಿರುವುದೂ ಮಳೆ ಕೊರತೆಗೆ ಕಾರಣವಾಗಬಹುದು ಎಂದಿದ್ದಾರೆ.

ಅರಬ್ಬೀ ಸಮುದ್ರದ ತೇವಾಂಶಕ್ಕೂ ಅಡ್ಡಿ

ಭಾರತದ ದಕ್ಷಿಣ–ಪಶ್ಚಿಮ ಮುಂಗಾರಿಗೆ ಅರಬ್ಬೀ ಸಮುದ್ರ ಪ್ರಮುಖ ತೇವಾಂಶದ ಮೂಲ. ಸಮುದ್ರದಿಂದ ತೇವಾಂಶ ಹೊತ್ತು ತರುವ ಮಾರುತಗಳು ಪಶ್ಚಿಮ ಘಟ್ಟಗಳಿಗೆ ಅಪ್ಪಳಿಸಿ ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಸುತ್ತವೆ.

ಆದರೆ, ಉತ್ತರ–ಪಶ್ಚಿಮ ದಿಕ್ಕಿನಿಂದ ಬರುವ ಶುಷ್ಕ ಗಾಳಿ ಅರಬ್ಬೀ ಸಮುದ್ರದ ಮೇಲಿನ ವಾತಾವರಣದವರೆಗೂ ವ್ಯಾಪಿಸಿದರೆ ತೇವಾಂಶದ ಹರಿವು ದುರ್ಬಲಗೊಳ್ಳುತ್ತದೆ. ಇದರ ಪರಿಣಾಮ ಪಶ್ಚಿಮ ಕರಾವಳಿಯ ಮಳೆ ಚಟುವಟಿಕೆಯ ಮೇಲೂ ಬೀರುತ್ತದೆ. ಆದ್ದರಿಂದಲೇ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಮುಂದಿನ ದಿನಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಆದರೆ, ಪಾಕಿಸ್ತಾನದಿಂದ ಬೀಸುವ ಒಣ ಗಾಳಿ ಅರಬ್ಬೀ ಸಮುದ್ರದ ನೀರನ್ನು ನೇರವಾಗಿ ಒಣಗಿಸುತ್ತದೆ ಎಂದು ಅರ್ಥೈಸಲಾಗದು. ಅದು ಸಮುದ್ರದ ಮೇಲ್ಮೈಯನ್ನೇ ಒಣಗಿಸುವುದಕ್ಕಿಂತ, ವಾತಾವರಣದ ತೇವಾಂಶದ ಹಂಚಿಕೆ, ಗಾಳಿಯ ದಿಕ್ಕು ಹಾಗೂ ಮೋಡಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಕೃಷಿಗೆ ಹೆಚ್ಚಿದ ಆತಂಕ

ಭಾರತದ ಕೃಷಿ ವ್ಯವಸ್ಥೆ ಬಹುಪಾಲು ಮುಂಗಾರು ಮಳೆಯನ್ನೇ ಅವಲಂಬಿಸಿದೆ. ದೇಶದ ವಾರ್ಷಿಕ ಮಳೆಯ ಬಹುಭಾಗ ದಕ್ಷಿಣ–ಪಶ್ಚಿಮ ಮುಂಗಾರು ಅವಧಿಯಲ್ಲೇ ಸುರಿಯುತ್ತದೆ. ಲಕ್ಷಾಂತರ ರೈತರು ಭತ್ತ, ಹತ್ತಿ, ಸೋಯಾಬೀನ್, ಮೆಕ್ಕೆಜೋಳ, ತೊಗರಿ ಹಾಗೂ ಇತರ ಮುಂಗಾರು ಬೆಳೆಗಳ ಬಿತ್ತನೆಗೆ ಮಳೆಯನ್ನೇ ಅವಲಂಬಿಸಿದ್ದಾರೆ.

ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ ಹಲವು ಪ್ರದೇಶಗಳಲ್ಲಿ ಜುಲೈ ಆರಂಭದ ಮಳೆ ರೈತರಿಗೆ ಭರವಸೆ ಮೂಡಿಸಿತ್ತು. ಆದರೆ, ಈಗ ಒಣ ಹವೆ ಹೆಚ್ಚಿದ್ದು, ಮಳೆ ಕಾಣೆಯಾಗುತ್ತಿದೆ. ಇದು ಹೊಸದಾಗಿ ಮೊಳಕೆಯೊಡೆದ ಬೆಳೆಗಳಿಗೆ ಹಾನಿ ಮಾಡಲಿದೆ. ಮರುಬಿತ್ತನೆಯ ಅನಿವಾರ್ಯತೆ ಎದುರಾದರೆ ರೈತರ ವೆಚ್ಚ ಮತ್ತಷ್ಟು ಹೆಚ್ಚುತ್ತದೆ.

ಮಳೆಯ ಕೊರತೆ ಕೇವಲ ಕೃಷಿಗೆ ಸೀಮಿತವಾಗುವುದಿಲ್ಲ. ಜಲಾಶಯಗಳ ಒಳಹರಿವು, ಅಂತರ್ಜಲ ಮರುಪೂರಣ, ಕುಡಿಯುವ ನೀರಿನ ಲಭ್ಯತೆ ಹಾಗೂ ಜಲವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ನಗರಗಳಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತದೆ. ಬಿಸಿಲಿನ ತೀವ್ರತೆಯೂ ಹೆಚ್ಚುವ ಸಾಧ್ಯತೆಯೂ ಇದೆ.

ಮೋಡಗಳು ಮಾಯವಾಗಿವೆ; ಮುಂಗಾರು ಮುಗಿದಿಲ್ಲ

ದೇಶದ ಬಹುಭಾಗಗಳಲ್ಲಿ ಮಳೆ ಮೋಡಗಳು ಕಡಿಮೆಯಾಗಿವೆ. ಇದು ಆತಂಕಕಾರಿ ಬೆಳವಣಿಗೆ. ಆದರೂ, ಮುಂಗಾರು ಸಂಪೂರ್ಣ ವಿಫಲವಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ಭಾರತದ ಮುಂಗಾರು ಸ್ವಭಾವತಃ ಏರಿಳಿತಗಳಿಂದ ಕೂಡಿದೆ. ಕೆಲವು ದಿನಗಳಲ್ಲಿ ಮತ್ತೆ ಮಳೆ ತೀವ್ರಗೊಳ್ಳಬಹುದು; ನಂತರ ಒಂದು ಅಥವಾ ಎರಡು ವಾರ ದುರ್ಬಲವಾಗಬಹುದು. ಆದ್ದರಿಂದ, ಮುಂದಿನ ದಿನಗಳಲ್ಲಿ ಮಳೆ ಮೋಡಗಳು ರೂಪುಗೊಂಡು ಮಳೆಯಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ವಿವರಿಸಿದ್ದಾರೆ.

ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದ ಮುಂಗಾರು ಮಳೆಯ ಸ್ವರೂಪ ಹೆಚ್ಚು ಅನಿಶ್ಚಿತವಾಗುತ್ತಿದೆ. ದೀರ್ಘ ಒಣ ಅವಧಿಯ ನಂತರ ಕೆಲವೇ ದಿನಗಳಲ್ಲಿ ಅತಿಯಾದ ಮಳೆ ಸುರಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ಒಟ್ಟು ಮಳೆಯ ಪ್ರಮಾಣ ಸಾಮಾನ್ಯಕ್ಕೆ ಸಮೀಪದಲ್ಲಿದ್ದರೂ ಕೃಷಿಗೆ ಅಗತ್ಯವಾದ ಸಮರ್ಪಕ ಮತ್ತು ಸಮಾನ ಹಂಚಿಕೆಯ ಮಳೆ ಸಿಗದ ಪರಿಸ್ಥಿತಿ ಆಗ್ಗಾಗ್ಗೆ ಎದುರಾಗುತ್ತಲೇ ಇದೆ.

ಪಾಕಿಸ್ತಾನದ ಶುಷ್ಕ ಪ್ರದೇಶಗಳಿಂದ ಹರಿದುಬರುವ ಗಾಳಿ, ಅರಬ್ಬೀ ಸಮುದ್ರದ ತೇವಾಂಶ, ಬಂಗಾಳ ಕೊಲ್ಲಿಯ ಕಡಿಮೆ ಒತ್ತಡದ ವ್ಯವಸ್ಥೆಗಳು, ಹಿಮಾಲಯ, ಪಶ್ಚಿಮ ಘಟ್ಟ ಹಾಗೂ ಜಾಗತಿಕ ವಾತಾವರಣದ ಅಲೆಗಳು—ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಭಾರತದ ಮುಂಗಾರನ್ನು ರೂಪಿಸುತ್ತವೆ.

ಭಾರತ ಮತ್ತು ಪಾಕಿಸ್ತಾನ ರಾಜಕೀಯವಾಗಿ ಗಡಿಗಳನ್ನು ಹೊಂದಿದ್ದರೂ, ಅವುಗಳ ಹವಾಮಾನ ವ್ಯವಸ್ಥೆ ಪರಸ್ಪರ ಬೆಸೆದುಕೊಂಡಿದೆ. ಪಾಕಿಸ್ತಾನದ ಮರುಭೂಮಿಯಲ್ಲಿ ರೂಪುಗೊಳ್ಳುವ ಶುಷ್ಕ ಗಾಳಿ ಭಾರತದ ಮಳೆ ಮೋಡಗಳ ಮೇಲೆ ಪರಿಣಾಮ ಬೀರಬಹುದು; ಭಾರತದ ಮುಂಗಾರು ವ್ಯವಸ್ಥೆಗಳು ಪಾಕಿಸ್ತಾನಕ್ಕೂ ಮಳೆ ತರಬಹುದು. ಪ್ರಕೃತಿಗೆ ರಾಜಕೀಯ ಗಡಿಗಳಿಲ್ಲ ಎಂಬುದನ್ನು ನೈಸರ್ಗಿಕ ಬೆಳವಣಿಗೆಗಳು ಆಗ್ಗಾಗ್ಗೆ ನೆನಪಿಸುತ್ತಲೇ ಇರುತ್ತವೆ. ಆದರೆ, ಅದನ್ನು ಅರ್ಥೈಸಿಕೊಳ್ಳುವ ವ್ಯವದಾನ ಮನುಷ್ಯರಿಗಿಲ್ಲ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...