ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಸ್ತಬ್ಧಚಿತ್ರ ಅಳವಡಿಸಿದ್ದ ವಾಹನವನ್ನು ಮುಂದೆ ಸಾಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಈದ್ ಮಿಲಾದ್ ಪ್ರಯುಕ್ತ ದೋರನಹಳ್ಳಿ ಗ್ರಾಮದ ಉರ್ದು ಶಾಲೆಯಿಂದ ಜಾಮಿಯಾ ಮಸೀದಿವರೆಗೆ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಮದೀನಾ ದೇವರ ಸ್ತಬ್ಧಚಿತ್ರ ಅಳವಡಿಸಿದ್ದ ಟ್ರ್ಯಾಕ್ಟರ್ ವಾಹನವು ಜನರ ಹಿಂಭಾಗದಲ್ಲಿ ಸಾಗುತ್ತಿತ್ತು.
ಮೆರವಣಿಗೆ ಹಳ್ಳೆರಾಯನ ಗುಡಿಯ ಸಮೀಪ ತಲುಪಿದಾಗ, ಸ್ತಬ್ಧಚಿತ್ರದ ವಾಹನವನ್ನು ಮುಂದೆ ಸಾಗಿಸುವ ವಿಚಾರವಾಗಿ ಎರಡು ಗುಂಪಿನವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ತಿರುಗಿ ಗಲಾಟೆ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನವೇ ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಶಹಾಪುರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿದರು. ಎರಡೂ ಗುಂಪಿನವರನ್ನು ಸಮಾಧಾನಪಡಿಸಿ, ಗಲಾಟೆ ಮತ್ತಷ್ಟು ಹೆಚ್ಚಾಗದಂತೆ ತಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಘಟನೆಗೆ ಸಂಬಂಧಿಸಿದಂತೆ ಶಹಾಪುರ ಪೊಲೀಸ್ ಠಾಣೆಯ ಎಎಸ್ಐ ಹೊನ್ನಪ್ಪ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 194(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಏಳೆಂಟು ತಿಂಗಳ ಬಳಿಕ ಕ್ರಮ: ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾದ ಇಬ್ಬರು ಶಿಕ್ಷಕರ ಅಮಾನತು
ಗಲಾಟೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಅಬ್ದುಲ್ ಗಫೂರ್ ಹಾಗೂ ಮೈದುನ್ಸಾಬ ಅವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.




