ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭೆಯಲ್ಲಿ ಆಡಳಿತ ನಡೆಸಿದ ಬಿಜೆಪಿ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ಪೈಪ್ಗಳ ಜೋಡಣೆ ಹಾಗೂ ಹೊಸ ಪೈಪ್ಗಳ ಅಳವಡಿಕೆ ಕಾಮಗಾರಿಗಳನ್ನು ಕೈಗೊಂಡಿದ್ದರೂ, ನಗರ ವ್ಯಾಪ್ತಿಯಲ್ಲಿ ಒಳಚರಂಡಿ ನೀರು ರಸ್ತೆಗಳು ಹಾಗೂ ರಾಜಕಾಲುವೆಗಳಲ್ಲಿ ಹರಿಯುತ್ತಿರುವುದು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಹಾಗೂ ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಆರೋಪಿಸಿದ್ದಾರೆ.
ಹೊಸ ಪೈಪ್ಗಳನ್ನು ಅಳವಡಿಸಿ ಕಾಮಗಾರಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ನಗರದ ವಿವಿಧ ಭಾಗಗಳಲ್ಲಿ ಒಳಚರಂಡಿ ನೀರು ರಸ್ತೆಗೆ ಹಾಗೂ ರಾಜಕಾಲುವೆಗಳಿಗೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ದುರ್ವಾಸನೆ ಹಾಗೂ ಆರೋಗ್ಯ ಸಮಸ್ಯೆಯ ಭೀತಿಯನ್ನು ಎದುರಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿರಿಬೀಡು ವಾರ್ಡ್, ಬನ್ನಂಜೆ ರಾಜಕಾಲುವೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈಗಾಗಲೇ ಹಲವು ಮನೆಗಳಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಕಂಡುಬಂದಿದ್ದು, ಪರಿಸ್ಥಿತಿಯ ಬಗ್ಗೆ ನಗರಸಭೆ ತಕ್ಷಣ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಳಚರಂಡಿ ಕಾಮಗಾರಿಗೆ ಕೋಟ್ಯಂತರ ರೂಪಾಯಿ ಮೀಸಲಿಟ್ಟು ವೆಚ್ಚ ಮಾಡಲಾಗಿದೆ. ಆದರೆ ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲವೆಂಬ ಆರೋಪಗಳಿದ್ದು, ಸಾರ್ವಜನಿಕರ ಹಣದ ಬಳಕೆಯ ಬಗ್ಗೆ ಉಡುಪಿ ನಗರಸಭೆಯ ಹಿಂದಿನ ಬಿಜೆಪಿ ಆಡಳಿತದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸ್ಪಷ್ಟ ಉತ್ತರ ನೀಡಬೇಕು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹಿಸಿದ್ದಾರೆ.
ನಗರದ ಒಳಚರಂಡಿ ವ್ಯವಸ್ಥೆಯನ್ನು ತಕ್ಷಣ ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ರಾಜಕಾಲುವೆ ಹಾಗೂ ರಸ್ತೆಗೆ ಒಳಚರಂಡಿ ನೀರು ಹರಿಯುವುದನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ರಾಜಕಾಲುವೆಯಲ್ಲಿ ಒಳಚರಂಡಿ ನೀರು ಹರಿಯುವುದನ್ನು ತಡೆಯಲು ನಗರಸಭೆ ಕ್ರಮ ಕೈಗೊಳ್ಳದಿದ್ದರೆ, ನಗರಸಭೆ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸುವುದಾಗಿ ಸುರೇಶ್ ಶೆಟ್ಟಿ ಬನ್ನಂಜೆ ಎಚ್ಚರಿಕೆ ನೀಡಿದ್ದಾರೆ.





