ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ರಾಜ್ಯ ಸರ್ಕಾರವು ಶಹಾಪುರದಲ್ಲಿ ಮೇ 18ರಂದು ಆಯೋಜಿಸಿರುವ ʼಬಸವಾದಿ ಶರಣರ ಹಿಂದೂ ಸಮಾವೇಶʼವನ್ನು ಸರ್ಕಾರವೇ ಮುಂದೆ ನಿಂತು ಸಮಾವೇಶಕ್ಕೆ ತಡೆಯೊಡ್ಡಬೇಕು ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭೆ, ಕಲ್ಯಾಣ ಕರ್ನಾಟಕದ ಬಸವಪರ ಸಂಘಟನೆಗಳು, ಕಾಯಕ ಶರಣರ ಒಕ್ಕೂಟ, ಸೌಹಾರ್ದ ಕರ್ನಾಟಕ, ದಲಿತ, ಹಿಂದುಳಿದ, ಪ್ರಗತಿಪರ, ರೈತ, ಕಾರ್ಮಿಕ, ಮಹಿಳಾ ಹಾಗೂ ಯುವಜನ, ವಿದ್ಯಾರ್ಥಿ ಒಕ್ಕೂಟದ ಸಹಯೊಗದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಬಸವಾದಿ ಶರಣರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ʼಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವ್ಯಕ್ತಿ ಪೂಜೆ ಅಪಾಯಕಾರಿ ಬೆಳವಣಿಗೆ. ಧರ್ಮದ ಆಧಾರದ ಮೇಲೆ ರಾಜಕೀಯ ಷಡ್ಯಂತ್ರ ನಡೆಸಿ ರಾಜಕೀಯ ತೆವಲು ತೀರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಬಸವಣ್ಣ ಎಟಿಎಂ ಆಗಿದ್ದಾರೆ. ವಚನಗಳನ್ನು ತಿರುಚುವ ದುಷ್ಟಶಕ್ತಿಗಳನ್ನು ಮಟ್ಟಹಾಕಬೇಕುʼ ಎಂದರು.

ʼತನ್ನ ನಾಲಿಗೆಯನ್ನು ಹರಿಬಿಟ್ಟು ಸುಪ್ರಿಂಕೋರ್ಟ್‌ನಲ್ಲಿ ವಾಗ್ದಂಡನೆ ವಿಧಿಸಿಕೊಂಡ ಒಬ್ಬ ಸ್ವಾಮೀಜಿಗೆ ಆತ್ಮಗೌರವ ಮಾನ ಮರ್ಯಾದೆ ಇದ್ದರೆ ಧ್ಯಾನ ಮಾಡಲಿ. ಯುವಕರನ್ನು ಹುರುದುಂಬಿಸಿ ಪ್ರಚೋದನಾಕಾರಿ ಭಾಷಣ ಮಾಡಿದರೆ ಪೊಲೀಸರು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬಾರದು. ಶರಣರ, ಸೂಫಿ, ಸಂತರ ನಾಡಿನಲ್ಲಿ ಸಾಮರಸ್ಯ ಕದಡಿದರೆ ವೇದಿಕೆಯೆ ಮೇಲೆಯೇ ಬಂಧಿಸಬೇಕುʼ ಎಂದು ಅವರು ಕನ್ನೇರಿ ಸ್ವಾಮೀಜಿ ಹೆಸರನ್ನು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
ಪ್ರಗತಿಪರ ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ʼಬಸವ ತತ್ವವನ್ನು ಚಾಚುತಪ್ಪದೇ ಪಾಲಿಸುವ ಶ್ರಮಿಕವರ್ಗ ನಮ್ಮದಾಗಿದೆ. ಕೋಮುವಾದ ಹೆಸರಿನಲ್ಲಿ ಬೆಂಕಿಯಿಡುವ ಕೆಲಸ ನಿಲ್ಲಿಸಿ. ಧರ್ಮದ ಹೆಸರಿನಲ್ಲಿ ಸೀಟಿ ಊದಿ ಯುವಕರನ್ನು ಪ್ರಚೋದನೆ ಮಾಡುವುದು ಬಿಡಿ. ನಿಮ್ಮ ಆರ್‌ಎಸ್‌ಎಸ್ ಅಜೆಂಡಾ ಸಗರನಾಡಿನಲ್ಲಿ ನಡೆಯುವುದಿಲ್ಲ. ಬಸವಾದಿ ಶರಣರ ಹಿಂದೂ ಸಮಾವೇಶ ಠುಸ್ ಆಗಲಿದೆʼ ಎಂದರು.
ʼಎಲ್ಲರೂ ಒಂದೇ ಧರ್ಮದವರು ಎಂದು ಹೇಳುವವರು ಮೊದಲು ಜಾತಿ ಭೇದ ತೊರೆಯಬೇಕು. ವೇದಗಳು ಶ್ರೇಷ್ಠವೆಂದು ಹೇಳುವ ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ಹಾಗೂ ಜಾತೀಯತೆ ಏಕೆ ಮುಂದುವರೆದಿರುವುದು ಪ್ರಶ್ನಿಸಬೇಕು. ದಲಿತರು, ಹಿಂದುಳಿದ ವರ್ಗಗಳಿಗೆ ಸಮಾನ ಗೌರವ ಸಿಗಬೇಕು. ಬಸವತತ್ವವನ್ನು ಚಾಚು ತಪ್ಪದೆ ಪಾಲಿಸುವ ಶ್ರಮಿಕ ವರ್ಗ ನಮ್ಮದಾಗಿದೆ. ಶರಣರ ತತ್ವ ತಿರುಚುವ ಕೆಲಸ ಎಲ್ಲೇ ನಡೆದರೂ ಅದನ್ನು ಖಂಡಿಸುತ್ತೇವೆʼ ಎಂದರು.
ಪ್ರಗತಿಪರ ಚಿಂತಕಿ ಕೆ. ನೀಲಾ ಮಾತನಾಡಿ, ʼಪ್ರಜಾಪ್ರಭುತ್ವದ ಪ್ರಶ್ನೆಯ ಜತೆಯಲ್ಲಿ ಸಾಂಸ್ಕೃತಿಕ ನಾಯಕನ ಬಗ್ಗೆ ಹಗುರವಾಗಿ ಮಾತನಾಡಿದರೆ ಸರ್ಕಾರ ಮೌನವಹಿಸಬಾರದು. ಓಟಿನ ರಾಜಕಾರಣ ಮಾಡದೆ ಸಾಮಾನ್ಯರ ಬದುಕಿನ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಿಂದೂ ಸಮಾವೇಶಕ್ಕೆ ನಮ್ಮ ಧಿಕ್ಕಾರವಿದೆ. ಸಚಿವರು ಗಮನಹರಿಸಬೇಕುʼ ಎಂದು ಹೇಳಿದರು.
ʼಹಿಂದೂ ಧರ್ಮವೇ ಅಲ್ಲ. ಲಿಂಗಾಯತ ಜಾತಿ ಅಲ್ಲ. ಶರಣರ ಹಾಗೂ ವಚನಗಳ ತತ್ವಗಳನ್ನು ಉಳಿಸಿಕೊಳ್ಳಬೇಕು. ಮನುವಾದಿಗಳಿಗೆ ಆಸ್ಪದ ನೀಡಬಾರದು. ಸಗರ ನಾಡಿನಲ್ಲಿ ವಿಷಬೀಜ ಬಿತ್ತುವ ಕೆಲಸ ಸಾಗುವುದಿಲ್ಲ. ಪುರಾಣ ಎಂಬುವುದು ಪುಂಡರಗೋಷ್ಠಿಯಾಗಿದೆ; ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಆರ್.ಜಿ.ಶೆಟ್ಟಿಗಾರ್ ಮಾತನಾಡಿ, ʼಬಸವಣ್ಣನವರು ನಮ್ಮ ಬೆಳಕು. ಹಿಂದೂ ಹೆಸರು ಸೇರಿಸಿ ಅಪಚಾರ ಮಾಡುವ ಮಠಾಧೀಶರನ್ನು ಮಟ್ಟಹಾಕಿ. ಕನ್ನೇರಿ ಸ್ವಾಮೀಜಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕುʼ ಎಂದು ಆಗ್ರಹಿಸಿದರು.

ಸಮಾವೇಶಕ್ಕೆ ಮುನ್ನ ನಗರದ ಬಸವೇಶ್ವರ ವೃತ್ತದಿಂದ ಮೊಚಿಗಡ್ಡೆ, ದಿಗ್ಗಿಬೇಸ್, ಸಿ.ಬಿ. ಕಮಾನದವರೆಗೆ ಶರಣರ ಭಾವಚಿತ್ರಗಳ ಹಾಗೂ ವಚನ ಗಾಯನದೊಂದಿಗೆ ಬೃಹತ್ ಮೆರವಣಿಗೆ ನಡೆಯಿತು. ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಬಸವಾನುಯಾಯಿಗಳು ತಲೆ ಮೇಲೆ ಬಿಳಿ ಟೋಪಿ ಧರಿಸಿ, ಕೈಯಲ್ಲಿ ಷಟಸ್ಥಲ ಧ್ವಜ ಹಿಡಿದು ಪಾಲ್ಗೊಂಡಿದ್ದರು.
ಚಿಂತಕ ಆರ್.ಕೆ.ಹುಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವ ಗಂಗೋತ್ರಿಯ ಚನ್ನಬಸವಾನಂದ ಸ್ವಾಮೀಜಿ, ಸಿದ್ಧ ಕಬೀರಾನಂದ ಸ್ವಾಮೀಜಿ, ಮಹಾರಾಷ್ಟ್ರದ ಮಹಾನಂದ ತಾಯಿ ಮುಗಳಿ, ಗುರುಮಠಕಲ್ ಶ್ರೀ, ಕಡಕೋಳ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು.
ಇದನ್ನೂ ಓದಿ : ಯಾದಗಿರಿ | ಕಾಲುವೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು
ಸಮಾವೇಶದಲ್ಲಿ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಆಳಂದದ ಕೊರಣೇಶ್ವರ ಸ್ವಾಮೀಜಿ, ಮನಗುಂಡಿ ಬಸವಾನಂದ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯರು, ಬಸಯ್ಯ ಶರಣರು, ಗುಣತೀರ್ಥವಾಡಿ ಬಸವಪ್ರಭು ಸ್ವಾಮೀಜಿ, ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು, ಸಂಘಟನೆಗಳ ಪ್ರಮುಖರಾದ ಗುಂಡಪ್ಪ ಕಲಬುರಗಿ, ಗಿರೆಪ್ಪಗೌಡ ಬಾಣತಿಹಾಳ, ಚನ್ನಪ್ಪ ಆನೇಗುಂದಿ, ತಿಮ್ಮಯ್ಯ ಪುರ್ಲೆ, ಸಿದ್ರಾಮ ಹೊನ್ಕಲ್, ವಿಶ್ವಾರಾಧ್ಯ ಸತ್ಯಂಪೇಟೆ, ಅಯ್ಯಣ್ಣ ಕನ್ಯಾಕೊಳ್ಳುರ, ಆರ್.ಚೆನ್ನಬಸು ವನದುರ್ಗ, ರವೀಂದ್ರನಾಥ ಹೊಸಮನಿ, ದಾವಲಸಾಬ ನದಾಫ್, ಎಸ್.ಎಂ. ಸಾಗರ, ಶಿವಣ್ಣ ಇಜೇರಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಜೈಲಾಲ ತೋಟದಮನೆ, ಮಲ್ಲಿಕಾರ್ಜುನ ಹಿರೇಮಠ, ಶೇಖರ ದೊರೆ, ಶರಣಬಸಪ್ಪ ಪಾಟೀಲ, ಸಯ್ಯದ ಉದ್ದಿನ್ ಖಾದ್ರಿ, ಯೂಸುಫ್ ಸಿದ್ದಿಕಿ, ರಾಮು ಸಗರ, ಭೀಮರಾಯ ಪೂಜಾರಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರಮುಖರು, ಸಾಮಾಜಿಕ ಚಿಂತಕರು, ಮುಖಂಡರು ಭಾಗವಹಿಸಿದ್ದರು.




