ಪಶ್ಚಿಮ ಏಷ್ಯಾದ ಯುದ್ಧದಿಂದ ಜಾಗತಿಕ ರಾಜಕೀಯ ಅಸ್ಥಿರಗೊಂಡಿರುವ ಈ ಸಂದರ್ಭದಲ್ಲಿ, ಅದರ ಹೊಡೆತವನ್ನು ಹೆಚ್ಚು ಅನುಭವಿಸುತ್ತಿರುವ ಕ್ಷೇತ್ರಗಳಲ್ಲಿ ಭಾರತದ ಕೃಷಿ ಪ್ರಮುಖವಾಗಿದೆ. ಹಾರ್ಮುಜ್ ಜಲಸಂಧಿ ಮುಚ್ಚುವಿಕೆ, ಇಂಧನ ಬೆಲೆ ಏರಿಕೆ, ಗೊಬ್ಬರದ ಕೊರತೆ ಮತ್ತು ರಫ್ತು ಕುಸಿತವು, ಆಮದು ಅವಲಂಬಿತ ಇಂಧನ, ಗೊಬ್ಬರ ಮತ್ತು ಖಾದ್ಯ ತೈಲಗಳ ಮೇಲೆ ಭಾರತದ ಅವಲಂಬನೆ ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಂತಹ ಸಂದರ್ಭಗಳಲ್ಲಿ ಕೇವಲ ತಾತ್ಕಾಲಿಕ ಪರಿಹಾರಗಳಿಗಿಂತ ದೀರ್ಘಕಾಲೀನ ನೀತಿಗಳು, ದೇಶೀಯ ಉತ್ಪಾದನೆ ಹೆಚ್ಚಿಸುವುದು ಮತ್ತು ವ್ಯಾಪಾರ ಸಮತೋಲನ ಸಾಧಿಸುವುದು ಅತ್ಯಗತ್ಯ. ರೈತರ ಆದಾಯವನ್ನು ಕಾಪಾಡುವುದು ಮತ್ತು ಕೃಷಿ ಕ್ಷೇತ್ರದಲ್ಲಿ ಸ್ಥಿರತೆ ತರುವುದು ದೇಶದ ಆರ್ಥಿಕ ಭವಿಷ್ಯಕ್ಕಾಗಿ ಈಗಿನ ಅತ್ಯಂತ ಮುಖ್ಯ ಆದ್ಯತೆಯಾಗಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕ ರಾಜಕೀಯ ಪರಿಸ್ಥಿತಿಯನ್ನು ಆಸ್ಥಿರಗೊಳಿಸಿದೆ. ಇದರ ಪರಿಣಾಮ ಆಗುತ್ತಿರುವುದು ಕೇವಲ ಯುದ್ಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಪಾಲ್ಗೊಳ್ಳುತ್ತಿರುವ ದೇಶಗಳ ಮೇಲೆ ಮಾತ್ರವಲ್ಲ. ಇಡೀ ಪ್ರಪಂಚದ ಬಹುತೇಕ ದೇಶಗಳ ಮೇಲೆ ಇದರ ಪರಿಣಾಮ ಆಗುತ್ತಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಈಗಾಗಲೇ ಇಂಧನ ಬೆಲೆಗಳು ದಿಢೀರನೆ ಏರಿವೆ. ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಎದುರಾಗಿದೆ.
ಭಾರತವು ಮನೆಬಳಕೆ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ಅತಿಯಾಗಿ ಅವಲಂಬಿಸಿರುವುದರಿಂದ, ಈಗಿನ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಭಾರತಕ್ಕೂ ತೊಂದರೆಯಾಗುತ್ತಿದೆ. ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ಕೊರತೆಯು ದೀರ್ಘಕಾಲ ಇರದೇ ಇರಬಹುದು. ಆದರೆ ಇದರ ಪ್ರಭಾವ ಕೇವಲ ಮನೆಬಳಕೆ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗುವುದಿಲ್ಲ.

ಈ ಯುದ್ಧದಿಂದ ಅತ್ಯಂತ ತೊಂದರೆ ಅನುಭವಿಸಲಿರುವ ಪ್ರಮುಖ ಕ್ಷೇತ್ರವೆಂದರೆ ಕೃಷಿ. ಇಂಧನದ ಬೆಲೆ ಏರಿಕೆಯಿಂದ ರೈತರ ಕೃಷಿ ವೆಚ್ಚ ನೇರವಾಗಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ರಸಗೊಬ್ಬರಗಳ ಬೆಲೆಗಳೂ ಏರುವುದರಿಂದ ರೈತರ ಮೇಲಿನ ಹೊರೆ ಇನ್ನಷ್ಟು ಹೆಚ್ಚುತ್ತದೆ. ಭಾರತವು ತನಗೆ ಬೇಕಾದ ಯೂರಿಯಾ ಗೊಬ್ಬರದ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ; ಇನ್ನು ಸಂಕೀರ್ಣ ಗೊಬ್ಬರಗಳ (Complex fertilizers) ವಿಷಯದಲ್ಲಂತೂ ಆಮದಿನ ಮೇಲಿನ ನಮ್ಮ ಅವಲಂಬನೆ ವಿಪರೀತವಾಗಿದೆ.
ಇದನ್ನೂ ಓದಿ: ಆರ್ಥಿಕ ಹಿನ್ನಡೆ ಎಲ್ಲಿಂದ ಶುರು ಆಯಿತು
ಸೌದಿ ಅರೇಬಿಯಾ, ಓಮನ್, ಕತಾರ್ ಮತ್ತು ಯುಎಇ ದೇಶಗಳು ನಮಗೆ ಗೊಬ್ಬರವನ್ನು ಪೂರೈಸುವ ಪ್ರಮುಖ ರಾಷ್ಟ್ರಗಳಾಗಿವೆ. ಪೂರೈಕೆಯಲ್ಲಿನ ವ್ಯತ್ಯಯದಿಂದಲೂ ಗೊಬ್ಬರದ ಬೆಲೆಗಳು ವಿರುತ್ತವೆ. ಆದರೆ ಬೆಲೆ ಏರಿಕೆಗೆ ಇನ್ನೊಂದು ಕಾರಣವಿದೆ: ನಮ್ಮ ದೇಶದ ಗೊಬ್ಬರ ತಯಾರಿಕಾ ಕಾರ್ಖಾನೆಗಳು ಗೊಬ್ಬರ ತಯಾರಿಕೆಗೆ ಗ್ಯಾಸ್ ಬಳಸುತ್ತವೆ. ಅಲ್ಲದೆ, ರಸಗೊಬ್ಬರ ಬೆಲೆಗಳು ‘ನ್ಯಾಪ್ತಾ’ (Naphtha) ಎಂಬ ಕಚ್ಚಾ ವಸ್ತುವಿನ ಬೆಲೆಯನ್ನು ಅವಲಂಬಿಸಿದೆ. ಪೆಟ್ರೋಲಿಯಂ ಮತ್ತು ಗ್ಯಾಸ್ ಬೆಲೆ ಏರಿದರೆ ನ್ಯಾಪ್ತಾ ಬೆಲೆಯೂ ಏರುತ್ತದೆ.
ಜಾಗತಿಕವಾಗಿ ಇಂಧನ ಬೆಲೆ ಏರಿದಾಗ, ರಸಗೊಬ್ಬರದ ಬೆಲೆಯೂ ಏರುತ್ತದೆ. ಸರ್ಕಾರ ಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ಕೊಡದೇ ಹೋದರೆ ರೈತರ ಲಾಭ ಕಡಿಮೆಯಾಗುತ್ತದೆ. ಈಗಾಗಲೇ ರಸಗೊಬ್ಬರದ ಬೆಲೆಗಳು ಹೆಚ್ಚಿವೆ. ಇಂತಹ ಸಮಯದಲ್ಲಿ ಈ ಯುದ್ಧವೂ ಕೃಷಿಯನ್ನು ಕಾಡುತ್ತಿರುವುದು” ನಿಜವಾಗಿ ದುರದೃಷ್ಟಕರ, ಮಧ್ಯಪ್ರಾಚ್ಯ ದೇಶಗಳು ಭಾರತದ ಬಾಸುಮತಿ ಅಕ್ಕಿ ಮತ್ತು ಸಾಂಬಾರ ಪದಾರ್ಥಗಳಿಗೆ ಪ್ರಮುಖ ಮಾರುಕಟ್ಟೆಗಳಾಗಿವೆ. ಕಳೆದ ಎರಡು ವರ್ಷಗಳಿಂದ ಭಾರತದ ಕೃಷಿ ಉತ್ಪನ್ನಗಳ ರಫ್ತು ಕುಸಿಯುತ್ತಿದೆ. 2022-23ರಲ್ಲಿ 53.1 ಶತಕೋಟಿ ಡಾಲರ್ ಇದ್ದ ರಫ್ತು, 2024-25ರಲ್ಲಿ 51.1 ಶತಕೋಟಿ ಡಾಲರ್‌ಗೆ ಇಳಿದಿದೆ. ಹಿಂದೆ 2013-14ರಲ್ಲಿ ಇದು 43.3 ಶತಕೋಟಿ ಡಾಲರ್ ಇದ್ದದು 2019-20ರಲ್ಲಿ 30-35 ಶತಕೋಟಿ ಡಾಲರಿಗೆ ಇಳಿದಿತ್ತು. ಈಗಿನ ಬಿಕ್ಕಟ್ಟಿನಿಂದ ರಫ್ತು ಮತ್ತಷ್ಟು ಕುಸಿದು. ರೈತರು ರಫ್ಟಿನಿಂದ ಪಡೆಯುತ್ತಿದ್ದ ಲಾಭವನ್ನು ಕಳೆದುಕೊಳ್ಳಬಹುದು.
ಹಲವು ಕೃಷಿ ವಸ್ತುಗಳ ಆಮದಿಗೂ ಸಮಸ್ಯೆಯಾಗುತ್ತದೆ. ವಿಶೇಷವಾಗಿ ಖಾದ್ಯ ತೈಲ ಹಾಗೂ ಬೇಳೆಕಾಳುಗಳಿಗೆ ಭಾರತ ಆಮದನ್ನು ನೆಚ್ಚಿಕೊಂಡಿದೆ. ಭಾರತ ತನ್ನ ಬಳಕೆಯ ಅರ್ಧಕ್ಕಿಂತ ಹೆಚ್ಚು ಖಾದ್ಯ ತೈಲವನ್ನು ಮತ್ತು ಶೇಕಡ 20ರಷ್ಟು ಬೇಳೆಕಾಳುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಖಾದ್ಯ ತೈಲದ ಬೆಲೆಗಳು ಸಾಮಾನ್ಯವಾಗಿ ಪೆಟ್ರೋಲಿಯಂ ಬೆಲೆಗಳ ಹಾದಿಯನ್ನೇ ಅನುಸರಿಸುತ್ತವೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಪ್ರಕಾರ, ಜಾಗತಿಕ ಖಾದ್ಯ ತೈಲ ಬೆಲೆಗಳು ಜೂನ್ 2022ರ ನಂತರದ ಗರಿಷ್ಠ ಮಟ್ಟಕ್ಕೆ ಏರಿವೆ. ಆಗ ರಷ್ಯ-ಯುಕ್ರೇನ್ ಯುದ್ಧದಿಂದ ಬೆಲೆಗಳು ಗರಿಷ್ಟ ಮಟ್ಟ ಮುಟ್ಟಿತ್ತು.
ಭೂರಾಜಕೀಯ ಬಿಕ್ಕಟ್ಟುಗಳು ಅಥವಾ ಅಂತರಾಷ್ಟ್ರೀಯ ರಾಜಕೀಯ ಅಸ್ಥಿರತೆಗಳು ಹೊಸದೇನಲ್ಲ. ಇವು ಅನಿರೀಕ್ಷಿತವಾಗಿ ಸಂಭವಿಸುತ್ತವೆ ಮತ್ತು ಇವು ಆರ್ಥಿಕತೆಯಲ್ಲಿ ಅನಿಶ್ಚಿತತೆಯನ್ನು ಉಂಟುಮಾಡುತ್ತವೆ. ಪ್ರಸ್ತುತ ಸನ್ನಿವೇಶದಲ್ಲಿ, ಪೂರೈಕೆಯಲ್ಲಿನ ವ್ಯತ್ಯಯ ಮತ್ತು ಬೆಲೆ ಏರಿಳಿತದ ನೇರ ಪರಿಣಾಮಗಳಿಂದ ಕೃಷಿ ಕ್ಷೇತ್ರವನ್ನು ರಕ್ಷಿಸುವುದು ಭಾರತದ ಮೊದಲ ಆದ್ಯತೆಯಾಗಬೇಕು.
ಕೃಷಿ ವೆಚ್ಚಗಳು ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆಗಳು ಮುಂದಿನ ಕೆಲ ಕಾಲ ಅಸ್ಥಿರವಾಗಿರುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ಸರ್ಕಾರವು ರಫ್ತನ ಮೇಲೆ ಯಾವುದೇ ಕಠಿಣ ನಿರ್ಬಂಧ ಅಥವಾ ನಿಯಂತ್ರಣ ಹೇರಿದರೆ, ಅದು ಕೃಷಿ ಕ್ಷೇತ್ರದ ಲಾಭದಾಯಕತೆಗೆ ದೊಡ್ಡ ಹೊಡೆತ ನೀಡುತ್ತದೆ.
ಆಹಾರ ಮತ್ತು ಕೃಷಿ ಉತ್ಪನ್ನಗಳ ಬೆಲೆಗಳು ಏರುವುದರಿಂದ ಹಣದುಬ್ಬರ ತೀವ್ರವಾಗುವ ಸಾಧ್ಯತೆಯಿದೆ. ಆದರೆ, ಈ ಬೆಲೆ ಏರಿಕೆಗೆ ಸ್ವಲ್ಪಮಟ್ಟಿಗೆ ಬೇಸ್ ಎಫೆಕ್ಟ್ ಕಾರಣ, ಅಂದರೆ ಕಳೆದ ಒಂದು ವರ್ಷದಿಂದ ಅನೇಕ ಕೃಷಿ ಉತ್ಪನ್ನಗಳ ಬೆಲೆಗಳು ತುಂಬಾ ಕಡಿಮೆಯಿದ್ದವು. ಹಾಗಾಗಿ, ಈಗ ಸ್ವಲ್ಪ ಬೆಲೆ ಹೆಚ್ಚಾದರು ವಿಪರೀತ ಏರಿಕೆಯಾದಂತೆ ಕಾಣಿಸಬಹುದು. ಸಮಯ ಕಳೆದಂತೆ ಇದು ಸಹಜ ಸ್ಥಿತಿಗೆ ಬರಬಹುದು. ಆದರೆ ಈ ಸಮಯದಲ್ಲಿ ರಫ್ತು ಅಥವಾ ಆಂತರಿಕ ವ್ಯಾಪಾರದ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರುವುದರಿಂದ ಪರಿಸ್ಥಿತಿ ಹದಗೆಡುತ್ತದೆ. ಮತ್ತಷ್ಟು ಬೆಲೆಯ ಸ್ಥಿರತೆ ಮುಖ್ಯ. ಆದರೆ ಕೃಷಿ ಇಂದಿಗೂ ಭಾರತದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಾಗಬೇಕಾದರೆ ರೈತರ ಆದಾಯವನ್ನು ರಕ್ಷಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು.
ಕೃಷಿ ಕ್ಷೇತ್ರದಲ್ಲಿಸ್ಥಿರತೆಯನ್ನು ತರುವುದಕ್ಕೆ ನಾವು ದೀರ್ಘಕಾಲೀನ ಕಾರ್ಯತಂತ್ರ ರೂಪಿಸಬೇಕಿದೆ. ಇದಕ್ಕಾಗಿ ರಸಗೊಬ್ಬರಗಳ ಉತ್ಪಾದನೆಯನ್ನು ದೇಶದ ಒಳಗೇ ಹೆಚ್ಚಿಸಬೇಕು. 2014ರ ನಂತರ ಉತ್ಪಾದನೆ ಹೆಚ್ಚಿದ್ದರೂ, ಅದು ನಮ್ಮ ಬಳಕೆಯ ವೇಗಕ್ಕೆ ಸಾಲುತ್ತಿಲ್ಲ.
ಎರಡನೆಯದಾಗಿ ವ್ಯಾಪಾರ ನೀತಿಗೆ ಗಮನಕೊಡಬೇಕು. ಕೃಷಿಯಲ್ಲಿ ಅಂತರಾಷ್ಟ್ರೀಯ ವ್ಯಾಪಾರವು ಬೆಲೆಗಳನ್ನು ಸ್ಥಿರವಾಗಿರಿಸಲು ಸಹಾಯ ಮಾಡುತ್ತದೆ. ಆದರೆ ಇದು ಯಾವಾಗಲೂ ಮುಕ್ತವಾಗಿರುವುದಿಲ್ಲ. ಹಾಗೂ ನ್ಯಾಯಯುತವಾಗಿರುವುದಿಲ್ಲ. ಉದಾಹರಣೆಗೆ, ಬ್ರಿಟನ್, ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕದೊಂದಿಗೆ ಭಾರತ ಮಾಡಿಕೊಳ್ಳುತ್ತಿರುವ ಒಪ್ಪಂದಗಳಿಂದಾಗಿ ಆ ದೇಶಗಳಿಗೆ ನಮ್ಮ ಮಾರುಕಟ್ಟೆಯನ್ನು ಸುಲಭವಾಗಿ ತೆರೆಯುತ್ತಿವೆ. ಆದರೆ ನಮ್ಮ ರೈತರಿಗೆ ಅಷ್ಟೇ ಪ್ರಮಾಣದಲ್ಲಿ, ಅವರ ಮಾರುಕಟ್ಟೆಗಳಲ್ಲಿ ಅವಕಾಶ ಸಿಗುತ್ತಿಲ್ಲ.
ನಮ್ಮ ರೈತರಿಗೆ ಅನಿಶ್ಚಿತತೆಗೆ ಭೂರಾಜಕೀಯ ಪರಿಸ್ಥಿತಿಯಷ್ಟೇ, ಕೇಂದ್ರ ಸರ್ಕಾರದ ನೀತಿಗಳ ಬದಲಾವಣೆಗಳೂ ಕಾರಣ. ಯುದ್ಧದಂತಹ ಬಾಹ್ಯ ಬಿಕ್ಕಟ್ಟುಗಳಿಂದ ಭಾರತದ ಕೃಷಿಯನ್ನು ಸಂಪೂರ್ಣವಾಗಿ ರಕ್ಷಿಸುವುದು ಸಾಧ್ಯವಿಲ್ಲದೆ ಇರಬಹುದು. ಆದರೆ ರೈತರ ಜೀವನೋಪಾಯವನ್ನು ರಕ್ಷಿಸಲು ನಮ್ಮ ದೇಶದೊಳಗಿನ ನೀತಿಗಳನ್ನು ಬಲಪಡಿಸುವುದು ಖಂಡಿತವಾಗಿಯೂ ಸಾಧ್ಯವಿದೆ.
–ಹಿಮಾಂಶು
(ಹಿಮಾಂಶು ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯನಲ್ಲಿ ಸಹ ಪ್ರಾಧ್ಯಾಪಕರಾಗಿದ್ದು, ಸೆಂಟರ್ ಡೆ ಸೈನ್ಸಸ್ ಹ್ಯೂಮೇನ್ಸ್, ನವದೆಹಲಿ. ಇಲ್ಲಿ ವಿಸಿಟಿಂಗ್ ಫೆಲೋ ಆಗಿದ್ದಾರೆ.)
This article originally appeared in Mint

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





