ಮೈಸೂರು ಯೋಗ ಫೆಡರೇಷನ್ ವತಿಯಿಂದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೇ.31ರಂದು ನಗರದ ಅರಮನೆ ಆವರಣದಲ್ಲಿ ಯೋಗಾಭ್ಯಾಸ ಹಾಗೂ ಮಹಾ ಸಂಕಲ್ಪ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಿ. ಶ್ರೀಹರಿ ದ್ವಾರಕನಾಥ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 5:30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸುಮಾರು ಸಾವಿರ ಮಂದಿ ಯೋಗಾಸಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಇದೇ ವೇಳೆ ನಗರದ ವಿವಿಧ ಅಪಾರ್ಟ್ಮೆಂಟ್ಗಳು, ಶಾಲಾ-ಕಾಲೇಜುಗಳು, ಉದ್ಯಾನಗಳು ಸೇರಿದಂತೆ 120 ಕೇಂದ್ರಗಳಲ್ಲಿ ಸುಮಾರು 1.20 ಲಕ್ಷ ಮಂದಿ ಯೋಗಾಸನದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಯೋಗದ ಮೂಲಕ ಆರೋಗ್ಯಕರ, ಶಾಂತಿಯುತ ಹಾಗೂ ಶಿಸ್ತುಬದ್ಧ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಯೋಗದ ಪ್ರಚಾರ ಮತ್ತು ಪ್ರಸಾರಕ್ಕಾಗಿ ಇದೇ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಯೋಗ ಸಂಸ್ಥೆಗಳ ಪ್ರಮುಖರಾದ ಶಶಿಕುಮಾರ್, ಜಿ. ನಂಜುಂಡಸ್ವಾಮಿ, ದೇವರಾಜ್, ಅನಂತ್ ಹಾಗೂ ರಂಗನಾಥ್ ಇದ್ದರು.




