ಜಾತ್ಯತೀತವಾದಿ, ಸಮಾನತಾವಾದಿ ಸಿದ್ಧಾಂತದ ಪಕ್ಷಗಳಲ್ಲಿದ್ದು ಬಿಜೆಪಿಗೆ ಹೋದವರು ಕಡು ಕಟ್ಟರ್ ಕೋಮುವಾದಿಗಳಾಗಿ, ಆ ಪಕ್ಷದ ನಾಯಕರೇ ನಾಚುವಂತೆ ಆ ಸಿದ್ಧಾಂತದ ಉಗ್ರ ಪ್ರತಿಪಾದಕರಾಗಿ ಬದಲಾಗುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಎರಡು ಉದಾಹರಣೆಗಳೆಂದರೆ ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರವಾಗಿ ಅಸ್ಸಾಂಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಹಿಮಂತ ಬಿಸ್ವ ಸರ್ಮಾ ಮತ್ತು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ, ಮಾಜಿ ಟಿಎಂಸಿ ಮುಖಂಡ ಸುವೇಂದು ಅಧಿಕಾರಿ. ಅವರ ಉಗ್ರ ಕೋಮುವಾದಿ ನಡವಳಿಕೆಗಳು.
ಭಾರತದ ರಾಜಕೀಯದಲ್ಲಿ ಹೊಸದೊಂದು ʼಸ್ವಭಾವʼ ಒಡೆದು ತೋರುತ್ತಿದೆ. ಒಂದು ಸಿದ್ಧಾಂತದಲ್ಲಿ ನಂಬಿಕೆಯಿಟ್ಟ ಪಕ್ಷದಲ್ಲಿ ಬಹಳ ವರ್ಷ ಇದ್ದು, ತದ್ವಿರುದ್ಧವಾದ ಮತ್ತೊಂದಕ್ಕೆ ಪಕ್ಷಾಂತರ ಮಾಡಿದಾಗ ಅಲ್ಲಿನ ‘ಮೂಲನಿವಾಸಿ’ಗಳಿಗಿಂತ ನೂರು ಪಟ್ಟು ಸಾವಿರ ಪಟ್ಟು ಆಕ್ರಮಣಕಾರಿಯಾಗಿ ಅಬ್ಬರಿಸುವುದನ್ನು ಕಾಣಬಹುದು. ನೇರವಾಗಿ ಹೇಳಬೇಕೆಂದರೆ ಜಾತ್ಯತೀತವಾದಿ, ಸಮಾನತಾವಾದಿ ಸಿದ್ಧಾಂತದ ಪಕ್ಷಗಳಲ್ಲಿದ್ದು ಬಿಜೆಪಿಗೆ ಹೋದವರು ಕಡು ಕಟ್ಟರ್ ಕೋಮುವಾದಿಗಳಾಗಿ, ಆ ಪಕ್ಷದ ನಾಯಕರೇ ನಾಚುವಂತೆ ಆ ಸಿದ್ಧಾಂತದ ಉಗ್ರ ಪ್ರತಿಪಾದಕರಾಗಿ ಬದಲಾಗುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಎರಡು ಉದಾಹರಣೆಗಳೆಂದರೆ ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರವಾಗಿ ಅಸ್ಸಾಂಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಹಿಮಂತ ಬಿಸ್ವ ಸರ್ಮಾ ಮತ್ತು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಮಾಜಿ ಟಿಎಂಸಿ ಮುಖಂಡ ಸುವೇಂದು ಅಧಿಕಾರಿ. ಅವರ ಉಗ್ರ ಕೋಮುವಾದಿ ನಡವಳಿಕೆಗಳು.
ಹಿಮಂತ 2021ರಲ್ಲಿ ಬಿಜೆಪಿ ಸೇರಿ ಮುಖ್ಯಮಂತ್ರಿ ಆಗುತ್ತಾರೆ. ಮುಖ್ಯಮಂತ್ರಿಯಾದ ನಂತರ ಅವರ ಆಡಳಿತ ನೀತಿಗಳು ಮುಸ್ಲಿಂ ವಿರೋಧಿ ಅಷ್ಟೇ ಅಲ್ಲ ಅವರ ಹೇಳಿಕೆಗಳು ಅಲ್ಲಿನ ಮುಸ್ಲಿಮರಿಗೆ ಭಯದಿಂದ ಬದುಕುವಂತೆ ಬೆದರಿಸಿವೆ. ಮೊದಲ ಅವಧಿ ಮುಗಿಯುವುದಕ್ಕೂ ಮುನ್ನ ಜನವರಿಯಲ್ಲಿ ಅವರು ಅಲ್ಲಿನ ಮಿಯಾ(ಮುಸ್ಲಿಮರು)ಗಳಿಗೆ ತೊಂದರೆ ಕೊಡುವಂತೆ ಬಹಿರಂಗ ಕರೆ ಕೊಟ್ಟಿದ್ದರು. “ಮುಸ್ಲಿಮರ ಆಟೋದಲ್ಲಿ ಪ್ರಯಾಣಿಸಿದರೆ ಐದು ರೂಪಾಯಿ ಕೇಳಿದರೆ ನಾಲ್ಕು ರೂಪಾಯಿ ಕೊಡಿ, ಹೀಗೆ ಕಿರುಕುಳ ಕೊಟ್ಟರೆ ಅವರು ಅಸ್ಸಾಂನಿಂದಲೇ ಪರಾರಿಯಾಗುತ್ತಾರೆ. ನನ್ನ ಗುರಿ ಇಲ್ಲಿನ ಮಿಯಾಗಳಿಗೆ ಕಷ್ಟಕೋಟಲೆ ನೀಡುವುದು. ನಾನು ಸಿಎಂ ಆಗಿರುವವರೆಗೆ ಮಿಯಾಗಳನ್ನು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ” ಎಂದು ಘೋಷಿಸಿದ್ದರು. ಬಿಜೆಪಿ ಮಿಯಾಗಳ ವಿರುದ್ಧವಿದೆ ಎಂಬುದರಲ್ಲಿ ಮುಚ್ಚುಮರೆ ಇಲ್ಲ ಎಂದಿದ್ರು. ಮೊನ್ನೆ ಮಾರ್ಚ್ನಲ್ಲಿ ಚುನಾವಣಾ ಪ್ರಚಾರದುದ್ದಕ್ಕೂ ಅವರ ನಡವಳಿಕೆಗಳು, ಹೇಳಿಕೆಗಳು ಆಘಾತಕಾರಿಯಾಗಿದ್ದವು. “ಬಾಂಗ್ಲಾದೇಶದಿಂದ ಬಂದು ಅಸ್ಸಾಂನ ಭೂಮಿ ಅಕ್ರಮಿಸಿದವರ ಕೈ-ಕಾಲುಗಳನ್ನು ರಾಜಕೀಯವಾಗಿ ಮುರಿದಿದ್ದೇವೆ. ಈ ಬಾರಿ ಅವರ ಬೆನ್ನುಹುರಿ ಮುರಿಯುತ್ತೇವೆ (break the backbone). ಅವರು ಅಸ್ಸಾಮಿ ಜನರನ್ನು ಎದುರಿಸಲು ಧೈರ್ಯ ಮಾಡದಂತೆ ತಡೆಯುತ್ತೇವೆ” ಎಂದು ಹೇಳುವ ಮೂಲಕ ಅಸ್ಸಾಮಿನ ಮುಸ್ಲಿಮರ ವಿರುದ್ಧ ವಿಷ ಕಾರಿದ್ದರು. “ಅಸ್ಸಾಮಿನ ಮಿಯಾ ವ್ಯಾಪಾರಿಗಳು ತರಕಾರಿ ಬೆಲೆ ಏರಿಸುತ್ತಿದ್ದಾರೆ, ಅವರನ್ನು ನಿಯಂತ್ರಣ ಮಾಡುವುದು ನನ್ನ ಜವಾಬ್ದಾರಿ” ಎಂದಿದ್ದರು. ಮುಸ್ಲಿಮರ ವಿರುದ್ಧ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಆರೋಪ ಮಾಡಿದ್ದರು.
ಇದೇ ಸರ್ಮಾ ಕಾಂಗ್ರೆಸ್ನಲ್ಲಿದ್ದಾಗ ಭಾರೀ ಭ್ರಷ್ಟಾಚಾರದ ಆರೋಪ ಎದುರಿಸಿದ್ದರು. ಶಾರದಾ ಚಿಟ್ಫಂಡ್ ಹಗರಣದಲ್ಲಿ ಶಾರದಾ ಗ್ರೂಪ್ನ ಮುಖ್ಯಸ್ಥ ಸುದೀಪ್ತ ಸೇನ್ ಅವರ 18 ಪುಟದ ತುರ್ತು ಹೇಳಿಕೆಯಲ್ಲಿ ಹಿಮಂತ ಅವರ ಹೆಸರು ನೇರವಾಗಿ ಉಲ್ಲೇಖವಾಗಿದೆ. ₹3ಕೋಟಿ ಮತ್ತು ತಿಂಗಳಿಗೆ ₹20ಲಕ್ಷ ಲಂಚ ಪಡೆದಿದ್ದಾರೆ ಎಂಬ ಆರೋಪ ಬಂದಿತ್ತು. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ CBI ಅವರ ಮನೆ ಮತ್ತು ಪತ್ನಿ ರಿನಿಕಿ ಭುಯಾನ್ ಶರ್ಮಾ ಮಾಲೀಕತ್ವದ News Live ಚಾನಲ್ ಕಚೇರಿಗೆ ದಾಳಿ ನಡೆಸಿತು. CBI ಅವರನ್ನು ಎಂಟು ತಾಸುಗಳ ಕಾಲ ವಿಚಾರಣೆ ಮಾಡಿತ್ತು. ಇದು ಅತ್ಯಂತ ಗಂಭೀರ ಆರೋಪ. ಆದರೆ ಪ್ರಕರಣದಿಂದ ಮುಕ್ತಿ ಪಡೆಯಲು ಅವರು ಕಂಡುಕೊಂಡ ರಾಜಮಾರ್ಗ ಬಿಜೆಪಿ ಸೇರುವುದು. ರಾಜ್ಯ ಕಾಂಗ್ರೆಸ್ಸಿನ ಒಳವಲಯದಲ್ಲಿದ್ದು, ಬಲ ದೌರ್ಬಲ್ಯಗಳನ್ನು ಅರಿತಿದ್ದ ಸರ್ಮ ಕೇಸರಿ ಪಕ್ಷ ಸೇರಿದರು. ಅದರ ಮುಸ್ಲಿಮ್ ದ್ವೇಷಕ್ಕೆ ಧ್ವನಿವರ್ಧಕ ಹಿಡಿದ ಸರ್ಮ ಅವರಿಂದಾಗಿ ಬಿಜೆಪಿಗೆ ಅಸ್ಸಾಮ್ ಅನಾಯಸವಾಗಿ ಕೈವಶ ಆಗಿತ್ತು..
ಲೂಯಿಸ್ ಬರ್ಜರ್ ಲಂಚ ಹಗರಣ (Louis Berger Bribery Scam) ದಲ್ಲೂ ಹಿಮಂತ ಆರೋಪಿಯಾಗಿದ್ದರು. ಅಮೆರಿಕದ ಕಂಪನಿ ಲೂಯಿಸ್ ಬರ್ಜರ್ ಗುವಾಹಟಿ ನೀರು ಪೂರೈಕೆ ಯೋಜನೆಗಾಗಿ $976,639 (ಸುಮಾರು ₹6.5 ಕೋಟಿ) ಲಂಚ ಕೊಟ್ಟಿದೆ ಎಂಬ ಆರೋಪ ಬಂದಿತ್ತು. ಹಿಮಂತ ಅವರು ಆಗ ಗುವಾಹಟಿ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದರು. ಅಮೆರಿಕದ ನ್ಯಾಯಾಲಯದಲ್ಲಿ ಈ ವಿಚಾರ ಬಹಿರಂಗವಾಗಿತ್ತು. BJPಯೇ 2015ರಲ್ಲಿ ಬಿಸ್ವ ಅವರ ವಿರುದ್ಧ ಪುಸ್ತಕ ಪ್ರಕಟಿಸಿ “ಪ್ರಮುಖ ಆರೋಪಿ” ಎಂದು ಉಲ್ಲೇಖಿಸಿತು. ತಮಗೆ ಗೆಲುವು ಕಷ್ಟ ಇರುವ ರಾಜ್ಯಗಳಲ್ಲಿರುವ ಆಡಳಿತದಲ್ಲಿರುವ ಭ್ರಷ್ಟ ಆದರೆ ಅಷ್ಟೇ ಪ್ರಭಾವಿಯಾಗಿರುವ ನಾಯಕರನ್ನು ಇಡಿ ಸಿಬಿಐ ತನಿಖಾ ಏಜೆನ್ಸಿಗಳ ಮೂಲಕ ಬೆದರಿಸಿ ತಮ್ಮ ಪಕ್ಷಕ್ಕೆ ಕರೆದುಕೊಂಡು ‘ವಾಷಿಂಗ್ ಮಷೀನ್’ ಗೆ ಹಾಕಿ ಸ್ವಚ್ಛಗೊಳಿಸುವ ಹೊಸ ತಂತ್ರದ ಭಾಗವಾಗಿ ಬಿಸ್ವ ಸರ್ಮಾ ಬಿಜೆಪಿಗೆ ಸೇರ್ಪಡೆಯಾಗಿ ಮುಖ್ಯಮಂತ್ರಿಯಾಗಿ ಎಲ್ಲ ಆರೋಪಗಳಿಂದ ಮುಕ್ತರಾಗಿ ಎರಡನೇ ಬಾರಿಯೂ ಮುಖ್ಯಮಂತ್ರಿಯಾಗಿದ್ದಾರೆ. ಈ ಸಲದ ಚುನಾವಣಾ ಪ್ರಚಾರದಲ್ಲಿ ಅವರು ತಾಳಿದ ಉಗ್ರದ್ವೇಷದ ರೂಪ ಮೂಲ ಬಿಜೆಪಿಗರನ್ನೂ ದಂಗು ಬಡಿಸಿದೆ. ಬಿಜೆಪಿಯ ಹಿಂದು-ಮುಸ್ಲಿಮ್ ದ್ವೇಷದ ಕಾರ್ಯಸೂಚಿಯನ್ನು ಸುಲಭವಾಗಿ ಅಸ್ಸಾಂನಲ್ಲಿ ಜಾರಿಗೊಳಿಸಿದ್ದಾರೆ.
ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ದವೂ ಭ್ರಷ್ಟಾಚಾರದ ಆರೋಪ ಬಂದಿತ್ತು. 2014ರಲ್ಲಿ ನಾರದ ಸ್ಟಿಂಗ್ ಆಪರೇಷನ್ ಭಾರೀ ಸದ್ದು ಮಾಡಿದ್ದ ಲಂಚ ಹಗರಣ. ತೆಹೆಲ್ಕಾ ಪತ್ರಕರ್ತ ಮ್ಯಾಥ್ಯೂ ಸ್ಯಾಮ್ಯುಯಲ್ ನಡೆಸಿದ ಕುಟುಕು ಕಾರ್ಯಾಚರಣೆ ವಿಡಿಯೋದಲ್ಲಿ ಸುವೇಂದು ಅಧಿಕಾರಿ ಲಂಚ ತೆಗೆದುಕೊಳ್ಳುವುದು ಸೆರೆಯಾಗಿತ್ತು. ಸಿಬಿಐ ಮತ್ತು ಇಡಿ ತನಿಖೆ ನಡೆಸಿದ್ದವು. 2017ರಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿತು. ಆದರೆ ಸುವೇಂದು 2020ರಲ್ಲಿ ಬಿಜೆಪಿಗೆ ಸೇರಿದ ನಂತರ ತನಿಖೆ ಮುಂದೆ ಹೋಗಿಯೇ ಇಲ್ಲ.
2014ರ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿಯವರು ಸುವೇಂದು ಅಧಿಕಾರಿ ಭ್ರಷ್ಚಾಚಾರವನ್ನು ಹಾವಭಾವಗಳೊಂದಿಗೆ ಬಗೆ ಬಗೆಯಾಗಿ ಗೇಲಿ ಮಾಡಿ ಜನರ ಮುಂದಿಟ್ಟಿದ್ದರು. ಮಮತಾ ಬಲಗೈಯಾಗಿದ್ದ ಸುವೇಂದು ಅಧಿಕಾರಿಯನ್ನು 2020ರಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಆಪರೇಷನ್ ಕಮಲ ಮಾಡಿ ಬಿಜೆಪಿಯ ತೆಕ್ಕೆಗೆ ಹಾಕಿಕೊಂಡ ನಂತರ ಅವರ ಮೇಲಿದ್ದ ಆರೋಪಗಳೆಲ್ಲ ಏನಾದವು, ತನಿಖೆಯ ಕತೆ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಾರಿ ಎಸ್ಐಆರ್ ಮಾಡಿ 75 ಲಕ್ಷ ಮತದಾರರನ್ನು ಡಿಲಿಟ್ ಮಾಡಿ ಗೆದ್ದ ಬಿಜೆಪಿಗೆ ಸುವೇಂದು ಅಧಿಕಾರಿಯೇ ದಂಡನಾಯಕ. ಟಿಎಂಸಿಯಲ್ಲಿ ಬೆಳೆದ ಸುವೇಂದು ಮಮತಾ ಮೇಲಿನ ಸಿಟ್ಟಿಗೆ ಪಕ್ಕಾ ಕೋಮುವಾದಿಯಂತೆ ನಡೆದುಕೊಂಡರು. ಈ ಬಾರಿಯ ಚುನಾವಣೆ, ಮುಖ್ಯಮಂತ್ರಿಯಾದ ನಂತರ ಮೂರು ದಿನಗಳ ಕಾಲ ನಡೆದ ಅಮಾಯಕ ಮುಸ್ಲಿಮರ ಮೇಲಿನ ದಾಳಿ, ಮನೆ , ಅಂಗಡಿ ಧ್ವಂಸ, ಅವರ ಆಡಳಿತದಲ್ಲಿ ಜಾರಿಗೆ ತಂದ ನಿಯಮಗಳು ಮುಸ್ಲಿಮರ ವಿರುದ್ಧ ಗೋ ವ್ಯಾಪಾರದ ಮೇಲಿನ ನಿರ್ಬಂಧ ಇವೆಲ್ಲವೂ ದಶಕದಿಂದ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿರುವ ಕಟ್ಟರ್ ಹಿಂದುತ್ವವಾದಿ ಆದಿತ್ಯನಾಥರನ್ನು ಮೀರಿಸುವಂತಿದೆ. ಬಿಜೆಪಿಗೆ ಹೋದ ತಕ್ಷಣ ಅಲ್ಲಿ ನೆಲೆ ಊರಲು ಅಧಿಕಾರ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ ಕಟ್ಟರ್ ಕೋಮುವಾದಿಯಾಗಿ ಅಬ್ಬರಿಸುವುದು ಎಂಬುದನ್ನು ಇಬ್ಬರೂ ಅರ್ಥ ಮಾಡಿಕೊಂಡಿದ್ದಾರೆ. ಆದರೆ ಈ ಅನೈತಿಕ ವಿಕೃತ ಮಾದರಿಯು ಭಾರತದ ರಾಜಕಾರಣದ ಕಪ್ಪು ಚುಕ್ಕೆ ಮಾತ್ರವಲ್ಲ ದೇಶದ ಬಹುತ್ವದ ಮೇಲಿನ ದಾಳಿ ಮತ್ತು ಪ್ರಜಾಪ್ರಭುತ್ವದ ಅಣಕ.
ಮಾರ್ಚ್ನಲ್ಲಿ ಚುನಾವಣಾ ಸಮಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಆಚೆ ಹಾಕಲಾಗುವುದು ಎಂದು ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಎಂಬುದನ್ನೇ ಮರೆತು ಹೇಳಿಕೆ ನೀಡಿದ್ದರು. ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ನಂತರ “ಶೇ. ನೂರರಷ್ಟು ಮುಸ್ಲಿಮರು ಟಿಎಂಸಿಗೆ ಮತ ಹಾಕಿದ್ದಾರೆ. ನನ್ನ ದಾರಿ ಸ್ಪಷ್ಟವಾಗಿದೆ, ನಾನು ಹಿಂದೂಗಳಿಗಾಗಿ ಮಾತ್ರ ಕೆಲಸ ಮಾಡುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ. ಹೀಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಹಿಂದೂಗಳಿಗಾಗಿ ಮಾತ್ರ ಕೆಲಸ ಮಾಡುತ್ತೇನೆಂದು ಹೇಳಿಕೆ ನೀಡುವುದು ಅಥವಾ ನಡೆದುಕೊಳ್ಳುವುದು ಸರಿಯೇ ಎಂದು ಮೋದಿಯವರನ್ನು ಕೇಳುವ ಅಂದ್ರೆ ಅವರು ಯಾರ ಕೈಗೂ ಸಿಗುವುದಿಲ್ಲ, ಪತ್ರಿಕಾಗೋಷ್ಠಿ ನಡೆಸಿದರೆ ಇಂತಹ ಪ್ರಶ್ನೆ ಎದುರಿಸಬೇಕಾಗುತ್ತದೆ ಎಂಬ ಅರಿವಿದ್ದೇ ಮೋದಿಯವರು ಪತ್ರಿಕಾಗೋಷ್ಠಿಗೆ ಹೆದರುತ್ತಾರೆ. ವಿದೇಶದ ಮುಸ್ಲಿಂ- ಕ್ರೈಸ್ತ ನಾಯಕರನ್ನು ಬಾಚಿ ತಬ್ಬಿ ನಗುವ ಮೋದಿಯವರಿಗೆ ಈ ದೇಶದ ಮುಸ್ಲಿಮರ ಮೇಲೆ ಯಾಕಿಷ್ಟು ಅಸಹನೆ? ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಇಲ್ಲಿನ ಭಾರತೀಯ ಮುಸ್ಲಿಮರ ಹೆಸರುಗಳನ್ನು ಪಟ್ಟಿಯಿಂದ ಡಿಲಿಟ್ ಮಾಡುವುದು ಮುಸ್ಲಿಂ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಸುವುದು ಎಡಬಿಡಂಗಿತನ ಅಲ್ಲವೇ? ಈ ಇಬ್ಬರು ಮುಖ್ಯಮಂತ್ರಿಗಳು ಇನ್ನು ಐದು ವರ್ಷಗಳಲ್ಲಿ ಹಿಂದೂ- ಮುಸ್ಲಿಂ ನಡುವಿನ ಕಂದಕವನ್ನು ಇನ್ನಷ್ಟು ಆಳವಾಗಿ ಮಾಡಲಿದ್ದಾರೆ. ಈ ವ್ಯಾಧಿ ಬೇರೆ ರಾಜ್ಯಗಳಿಗೂ ಹಬ್ಬಲಿದೆ.
ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರು ಪಕ್ಷ ಒಡೆದು ಎನ್ಡಿಎ ಸೇರಿಕೊಂಡ ನಂತರ ಅವರ ಮತ್ತು ಅವರ ಕುಟುಂಬದ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲಾಯಿತು. ಇ.ಡಿ. ವಶಪಡಿಸಿಕೊಂಡಿದ್ದ ಒಂದು ಸಾವಿರ ಕೋಟಿ ಹಣವನ್ನು ವಾಪಸ್ ಕೊಡಲಾಯಿತು. ಚಂದ್ರಬಾಬು ನಾಯ್ಡು ಮೇಲಿದ್ದ ಪ್ರಕರಣಗಳಿಗೂ ಒಂದು ಗತಿ ಕಾಣಿಸಲಾಯಿತು. ಇವರೆಲ್ಲ ಎನ್ಡಿಎ ಜೊತೆಗೆ ಸೇರಿಕೊಂಡ ನಂತರ ಕೋಮುವಾದಿ ಹೇಳಿಕೆ ನೀಡದಿದ್ದರೂ ಬಿಜೆಪಿಯ ಕೋಮುವಾದಿ ಪ್ರೊಪಗಾಂಡ ವಿರುದ್ಧ ಮೌನವಾಗಿದ್ದಾರೆ. ಇದು ಮೋದಿ ಮತ್ತು ಬಿಜೆಪಿಗೆ ವಿರೋಧವೇ ಇಲ್ಲದ ವಾತಾವರಣ ಸೃಷ್ಟಿಸಿದೆ. ಅಪಾಯಕಾರಿ ಬೆಳವಣಿಗೆಯಿದು.




