ಮಹಿಳೆಯ ಸಲ್ವಾರ್ ಎಳೆಯುವುದು, ಎದೆ ಒತ್ತುವುದು ಅತ್ಯಾಚಾರ ಪ್ರಯತ್ನವಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಸ್ವಯಂಪ್ರೇರಿತ ಪ್ರಕರಣ (ಸುವೋ ಮೊಟೊ) ದಾಖಲಿಸಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ನ್ಯಾಯಪೀಠವು ಈ ವಿಚಾರವನ್ನು ಕೈಗೆತ್ತಿಕೊಂಡಿತು. ಪಾಟ್ನಾ ಹೈಕೋರ್ಟ್‌ನ ಕೆಲವು ಅವಲೋಕನಗಳು ಆಕ್ಷೇಪಾರ್ಹ ಎಂದು ಸಿಜೆಐ ಸೂರ್ಯ ಕಾಂತ್ ಟಿಪ್ಪಣಿ ಮಾಡಿದರು.
“ಹೈಕೋರ್ಟ್‌ನ ತೀರ್ಪಿನಲ್ಲಿ ಕೆಲವು ಆಕ್ಷೇಪಾರ್ಹ ಅವಲೋಕನಗಳಿವೆ. ನಾವು ಆರೋಪಿಯನ್ನು ಕೇಳಿದ ನಂತರವೇ ಆ ತೀರ್ಪನ್ನು ರದ್ದುಪಡಿಸಬಹುದು. ಸ್ಥಳೀಯ ಪೊಲೀಸರ ಮೂಲಕ ಆರೋಪಿಗೆ ನೋಟಿಸ್ ತಲುಪಿಸುವುದನ್ನು ಖಚಿತಪಡಿಸಿ” ಎಂದು ಬಿಹಾರದ ಅಡ್ವೊಕೇಟ್ ಜನರಲ್ ಎಸ್.ಡಿ ಸಂಜಯ್ ಅವರಿಗೆ ಸುಪ್ರೀಂ ಕೋರ್ಟ್ ಪೀಠವು ಸೂಚಿಸಿದೆ.
ಪಾಟ್ನಾ ಹೈಕೋರ್ಟ್ ತೀರ್ಪು ಏನಿತ್ತು?
ಜುಲೈ 9, 2026ರಂದು ನ್ಯಾಯಮೂರ್ತಿ ಪೂರ್ಣೇಂದು ಸಿಂಗ್ ಅವರು 2008ರ ಬಿಹಾರದ ಬಂಕಾ ಜಿಲ್ಲೆಯ ಅಮರ್‌ಪುರ್‌ನ ಫೋಟೋ ಸ್ಟುಡಿಯೋ ಪ್ರಕರಣದಲ್ಲಿ ಆರೋಪಿ ಹಿಮಾಂಶು ಕುಮಾರ್ ಪಾಠಕ್ ಅವರ ಅತ್ಯಾಚಾರ ಪ್ರಯತ್ನದ ಶಿಕ್ಷೆಯನ್ನು ರದ್ದುಪಡಿಸಿದ್ದರು.
ಆರೋಪಿಯು ಮಹಿಳೆಯನ್ನು ಸ್ಟುಡಿಯೋದಲ್ಲಿ ಬಂಧಿಸಿ, ಬಾಗಿಲು ಮುಚ್ಚಿ, ಸಲ್ವಾರ್ ತೆಗೆಯಲು ಪ್ರಯತ್ನಿಸಿ, ಎದೆ ಒತ್ತಿದ್ದಾನೆ ಎಂಬ ಆರೋಪಗಳಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಪೆನಿಟ್ರೇಷನ್ ಅಥವಾ ಅತ್ಯಾಚಾರದ ಸ್ಪಷ್ಟ ಉದ್ದೇಶವನ್ನು ತೋರಿಸುವ ಯಾವುದೇ ಸ್ಪಷ್ಟ ಕ್ರಿಯೆ ಇಲ್ಲದಿದ್ದರೆ, ಐಪಿಸಿ 376,511 ಅಡಿಯಲ್ಲಿನ ಅತ್ಯಾಚಾರ ಪ್ರಯತ್ನ ಪ್ರಕರಣದ ವ್ಯಾಪ್ತಿಗೆ ಸೇರುವುದಿಲ್ಲ ಬದಲಿಗೆ ಐಪಿಸಿ ಸೆಕ್ಷನ್ 354ರ ಅನ್ವಯ ಮಹಿಳೆಯ ಮಾನಭಂಗದ ಪ್ರಯತ್ನವೆಂದು ದಾಖಲಾಗುತ್ತದೆ ಎಂದು ತೀರ್ಪು ಪ್ರಕಟಿಸಿ ಶಿಕ್ಷೆ ರದ್ದುಗೊಳಿಸಿತ್ತು.
ಜುಲೈನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಇಂತಹದ್ದೇ ವಿವಾದಾತ್ಮಕ ತೀರ್ಪಿನ ಸಂದರ್ಭದಲ್ಲಿಯೂ ಕೂಡ ಸಿಜೆಐ ಪೀಠವು ಹೈಕೋರ್ಟ್‌ಗಳಲ್ಲಿ ಸಂಶೋಧನೆಯ ಕೊರತೆ ಇರುವುದನ್ನು ಮತ್ತು ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಸಂವೇದನಾಶೀಲತೆಯ ಅಗತ್ಯವನ್ನು ಒತ್ತಿ ಹೇಳಿತ್ತು.
ಸುಪ್ರೀಂ ಕೋರ್ಟ್ ಆರೋಪಿಗೆ ನೋಟಿಸ್ ಜಾರಿ ಮಾಡಿ, ಹೈಕೋರ್ಟ್‌ನ ಅವಲೋಕನಗಳನ್ನು ಪರಿಶೀಲಿಸಲಿದೆ. ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗದ ಸಂವೇದನಾಶೀಲತೆ ಕುರಿತು ಹಿಂದಿನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ನ್ಯಾಯಾಲಯಗಳಿಗೆ ಸುಪ್ರೀಂ ಸೂಚಿಸಿದೆ.




