ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಎಂದಾಕ್ಷಣ ಡಿಜೆ ಸದ್ದು, ಪಟಾಕಿಗಳ ಅಬ್ಬರ, ಅದ್ಧೂರಿ ಮೆರವಣಿಗೆ ಇರುವುದು ಸಹಜ ಎಂಬಂತಾಗಿದೆ ಆದರೆ, ಇವೆಲ್ಲಕ್ಕೂ ವಿಭಿನ್ನವಾಗಿ ಯೋಚಿಸಿರುವ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಕಾಮನಕಟ್ಟೆ ಗಣೇಶ ಮಂಡಳಿಯ ಯುವಕರ ತಂಡವೊಂದು ಗಣೇಶೋತ್ಸವಕ್ಕೆ ಸಮಾಜಮುಖಿ ಸ್ಪರ್ಶ ನೀಡುವ ಮೂಲಕ ಸೈ ಎನಿಸಿಕೊಂಡಿದೆ.
ಡಿಜೆಯ ಕರ್ಕಶ ಶಬ್ದ ಹಾಗೂ ಪಟಾಕಿಗಳ ಸದ್ದಿನಿಂದ ಮಕ್ಕಳು, ಬಾಣಂತಿಯರು, ವೃದ್ಧರು ಸೇರಿದಂತೆ ಅನೇಕರಿಗೆ ತೊಂದರೆ ಉಂಟಾಗುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದರ ನಿಷೇಧಿಸಲು ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಸಹ ಎಲ್ಲೆಡೆ ಡಿಜೆ ಅಬ್ಬರ, ಪಟಾಕಿಗಳ ಸದ್ದು ಜೋರಾಗಿ ನಡೆಯುತ್ತಿದೆ. ಪರಿಸರ, ಸಮಾಜಪರ ಕಾಳಜಿಯುಳ್ಳ ಕಿನ್ನಾಳ ಗ್ರಾಮದ ಹಿಂದೂ ಗಜಾನನ ಮಂಡಳಿಯು ಡಿಜೆ, ಪಟಾಕಿಗಳಿಗೆ ಖರ್ಚು ಮಾಡಬೇಕಿದ್ದ ಸುಮಾರು ಒಂದು ಲಕ್ಷದಷ್ಟು ಹಣವನ್ನು ಗ್ರಾಮದ ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಹಚ್ಚುವ ಮುಖಾಂತರ ಮಾದರಿಯಾಗಿದ್ದಾರೆ.
ಗಣೇಶೋತ್ಸವದ ಸಂಭ್ರಮದ ಜತೆಗೆ ಗ್ರಾಮದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿರುವ ಬಳಗವು, ಗ್ರಾಮದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ ಹಾಗೂ ಕೋಲಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳಿಗೆ ಸುಣ್ಣಬಣ್ಣ ಬಳಿದು ಅಂದಗೊಳಿಸಿದೆ. ಇದರಿಂದ ಶಾಲಾ ಕಟ್ಟಡಗಳು ಹಾಗೂ ಆವರಣಕ್ಕೆ ಹೊಸ ಮೆರುಗು ಬಂದಿದ್ದು, ಹೊಸ ತಲೆಮಾರಿನ ಯುವ ಜನಾಂಗಕ್ಕೆ ಪ್ರೇರಣೆಯಾಗಿದ್ದು, ಈ ಯುವಕರ ತಂಡ ರಚನಾತ್ಮಕ ಕಾರ್ಯಕ್ಕೆ ಮುನ್ನುಡಿ ಬರೆದಂತಾಗಿದೆ.
ಸಮಾನ ಮನಸ್ಕ ಯುವಕರ ಬಳಗ
ಹಿಂದೂ ಗಜಾನನ ಮಂಡಳಿಯಲ್ಲಿ ಸುಮಾರು 60ಕ್ಕೂ ಅಧಿಕ 40 ವಯಸ್ಸಿನ ಒಳಗಿನ ಸಮಾನ ಮನಸ್ಕ ಸದಸ್ಯರಿದ್ದಾರೆ. ಇದರಲ್ಲಿ ಸರ್ಕಾರಿ, ಖಾಸಗಿ ನೌಕರರು ಸೇರಿದಂತೆ ವಿದ್ಯಾರ್ಥಿ ಯುವಜನರು ಇದ್ದಾರೆ. ಈ ತಂಡವು ಕಳೆದ 11 ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಉತ್ಸವ ಆಚರಿಸಿಕೊಂಡು ಬರುತ್ತಿದೆ. ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುವ ಜತೆಗೆ ಸದಸ್ಯರಿಂದಲೂ ಹಣ ಸಂಗ್ರಹಿಸುತ್ತದೆ. ಪ್ರತಿ ವರ್ಷ ಗಣೇಶೋತ್ಸವದ ವೇಳೆ ಸಂಗ್ರಹವಾಗುವ ಹಣ ಹೇಗೆ ಸಮಾಜದ ಒಳಿತಿಗಾಗಿ ಸದ್ಬಳಕೆ ಮಾಡಬೇಕೆಂಬ ಬಗ್ಗೆ ಸದಸ್ಯರು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ.

ಪುರಾತನ ಬಾವಿ ಪುನಶ್ಚೇತನ, ರಸ್ತೆ ಗುಂಡಿಗಳಿಗೆ ಮುಕ್ತಿ
ಗ್ರಾಮ ಪಂಚಾಯತ್ ಕೇಂದ್ರ ಆಗಿರುವ ಕಿನ್ನಾಳ ಗ್ರಾಮವು ತನ್ನದೇ ಆದ ವಿಶೇಷತೆ ಹೊಂದಿದೆ, 12 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಗ್ರಾಮದಲ್ಲಿ ವಿವಿಧೆಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ಜರುಗುತ್ತದೆ. ಆದರೆ, ಈ ಯುವಕರು ಗಣೇಶ ಉತ್ಸವ ಜೊತೆಗೆ ಊರಿನ ಸಾಮಾಜಿಕ ಕಾಳಜಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಹೊಸತನ ಬಯಸುತ್ತಿದ್ದಾರೆ.
ಈ ಗಣೇಶ ಮಂಡಳಿಯ ಯುವಕರು 2024ರಲ್ಲಿ ಗಣೇಶ ಉತ್ಸವ ಸಂಬಂಧ ಸಂಗ್ರಹವಾದ ಹಣವನ್ನು ಗ್ರಾಮದಲ್ಲಿನ ಪುರಾತನ ಬಾವಿಗಳನ್ನು ಸ್ವಚ್ಛಗೊಳಿಸಿ ನೀರಿನ ಸದ್ಬಳಕೆ, ಮಹತ್ವ ಕುರಿತು ಜಾಗೃತಿ ಮೂಡಿಸಿದರು. ಕಳೆದ ವರ್ಷ ಗಣೇಶೋತ್ಸವಕ್ಕಾಗಿ ಜಮೆಯಾದ ಹಣವನ್ನು ಕಿನ್ನಾಳ-ಕೊಪ್ಪಳ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದರು.
ಈ ಬಾರಿ ಗ್ರಾಮದ ಶಾಲೆಗಳ ಗೋಡೆಗಳನ್ನು ಖುದ್ದಾಗಿ ಅಂದಗೊಳಿಸುವ ಸಾಹಸಕ್ಕೆ ಕೈಹಾಕಿದರು. ಹೀಗೆ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಯುವಕರು ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ ಸಾಮಾಜಿಕ ಹೊಣೆಗಾರಿಕೆ ವೇದಿಕೆಯನ್ನಾಗಿ ರೂಪಿಸಿದ್ದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
“2024ರಲ್ಲಿ ನಮ್ಮೂರಿನಿಂದ 7 ಕಿ.ಮೀ. ದೂರದ ಚಿಲವಾಡಗಿ ಗ್ರಾಮದ ತನಕದ ಗುಂಡಿಗಳಿಂದ ತುಂಬಿ ಹೋಗಿದ್ದ ರಸ್ತೆಯನ್ನು ಒಂದು ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ದುರಸ್ತಿ ಮಾಡಲಾಗಿತ್ತು. ಹೊಸದಾಗಿ ಮಣ್ಣಿನ ರಸ್ತೆ ನಿರ್ಮಿಸಿದ್ದೇವೆ. ಇದು ನಮ್ಮ ಜಿಲ್ಲಾ ನ್ಯಾಯಾಧೀಶರ ಪ್ರಶಂಸೆಗೆ ಕಾರಣವಾಗಿ ಆಗಿನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಚಂದ್ರಶೇಖರ ಸಿ. ಅವರು ಕಿನ್ನಾಳ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದರು” ಎಂದು ಗಣೇಶ ಮಂಡಳಿಯ ಅಧ್ಯಕ್ಷ ವೀರೇಶ ನಾಯಕ್ ʼಈದಿನʼ ಜೊತೆ ಮಾತನಾಡಿ ಖುಷಿ ಹಂಚಿಕೊಂಡರು.
ʼನಮ್ಮ ಸದಸ್ಯರೆಲ್ಲರೂ ಸೇರಿ ಡಿಜೆ, ಪಟಾಕಿಗಳ ಬದಲಿಗೆ ಸಾಮಾಜಿಕ ಕಾರ್ಯ ಕೈಗೊಳ್ಳಲು ನಿರ್ಧರಿಸಿದ್ದೇವೆ. ಆರೋಗ್ಯ ಶಿಬಿರ, ಸಸಿ ನೆಡುವುದು, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪುರಾತನ ಬಾವಿ ಸದ್ಬಳಕೆ ಹೀಗೆ ಹಣವನ್ನು ಗ್ರಾಮಾಭಿವೃದ್ಧಿಗಾಗಿ ಬಳಸುತ್ತಿದ್ದೇವೆ. ಈ ಬಾರಿ ಡಿಜೆ, ಪಟಾಕಿಗಳಿಗೆ ಖರ್ಚಾಗಲಿದ್ದ 50 ಸಾವಿರಕ್ಕೂ ಅಧಿಕ ಹಣವನ್ನು ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಗಣೇಶೋತ್ಸವದ ಸಂಭ್ರಮದ ಜತೆಗೆ ಸಮಾಜಕ್ಕೆ ಉಪಯುಕ್ತವಾದ ಕೆಲಸ ಮಾಡಬೇಕು ಎಂಬುದು ನಮ್ಮ ಮಂಡಳಿಯ ಉದ್ದೇಶವಾಗಿದೆʼ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ
ಗಣೇಶೋತ್ಸವದ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು, ಅದೇ ಹಣವನ್ನು ಶಿಕ್ಷಣ, ರಸ್ತೆ, ಸ್ವಚ್ಛತೆ ಸೇರಿದಂತೆ ಸಾರ್ವಜನಿಕ ಹಿತದ ಕೆಲಸಗಳಿಗೆ ಬಳಸಬಹುದು ಎಂಬುದನ್ನು ಕಿನ್ನಾಳದ ಯುವಕರು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ. ಹಬ್ಬದ ಸಂಭ್ರಮದ ಜತೆಗೆ ಈ ಯುವಕರ ಶೈಕ್ಷಣಿಕ, ಸಾಮಾಜಿಕ ಹಾಗೂ ಪರಿಸರ ಕಾಳಜಿಯ ಈ ಕಾರ್ಯವನ್ನು ಇತರೆ ಗಣೇಶ ಮಂಡಳಿಗಳಿಗೂ ಮಾದರಿಯಾಗಬೇಕಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



