‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ತಾಯಿ ಸೋನಾಲಿ ವಾಕೋಡೆ ಕೇಳಿದ ಪ್ರಶ್ನೆ. ಈ ಪ್ರಶ್ನೆ ಕೇವಲ ಮಗನನ್ನು ಕಳೆದುಕೊಂಡ ತಾಯಿಯ ನೋವಿನ ಪ್ರಶ್ನೆಯಲ್ಲ. ಕಳೆದ ಎರಡು ದಶಕಗಳಲ್ಲಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಐಐಟಿಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಸಂಭವಿಸಿದ ಹಲವು ವಿದ್ಯಾರ್ಥಿ ಆತ್ಮಹತ್ಯೆಗಳ ನಂತರ ಈ ಪ್ರಶ್ನೆ ಸಮಾಜವನ್ನು ಕಾಡುತ್ತಿದೆ. ಉತ್ತರಕ್ಕಾಗಿ ಶಿಕ್ಷಣ ಕ್ಷೇತ್ರದತ್ತ ನೋಡುತ್ತಿದೆ.
ಪ್ರತಿಯೊಂದು ಆತ್ಮಹತ್ಯೆಗೂ ಜಾತಿ ತಾರತಮ್ಯವೇ ಕಾರಣವಾಗದೇ ಇರಬಹುದು. ಆದರೆ, ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುವ ಜಾತಿ ಅವಮಾನ, ಮೀಸಲಾತಿ ವಿರೋಧಿ ಮನೋಭಾವ ಹಾಗೂ ಸಾಮಾಜಿಕ ಹೊರದಬ್ಬುವಿಕೆಯು ಇಂತಹ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.
ಸೆಪ್ಟೆಂಬರ್ 18ರಂದು ಐಐಟಿ ಬಾಂಬೆಯ 2ನೇ ವರ್ಷದ ಬಿಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಹಾದಿ ಹಿಡಿದು, ತಮ್ಮ ಜೀವ-ಜೀವನನ್ನು ಅಂತ್ಯಗೊಳಿಸಿಕೊಂಡರು. ಸಾಹಿಲ್ ಸಾವಿಗೆ ಕೆಲವೇ ದಿನಗಳ ಮೊದಲು ಅವರನ್ನು ಪೋಷಕರು ಭೇಟಿ ನೀಡಿದ್ದಾರೆ. ಆಗ, “ಕ್ಯಾಂಪಸ್‌ನಲ್ಲಿ ಜಾತಿ ನಿಂದನೆ ಮತ್ತು ಕಿರುಕುಳ ಎದುರಿಸುತ್ತಿದ್ದೇನೆ” ಎಂದು ಸಾಹಿಲ್ ಹೇಳಿಕೊಂಡಿದ್ದಾಗಿ ಅವರ ತಂದೆ ರವೀಂದ್ರ ಮತ್ತು ತಾಯಿ ಸೋನಾಲಿ ಆರೋಪಿಸಿದ್ದಾರೆ. “ಆಗ ಮಗನಿಗೆ ಧೈರ್ಯ ಹೇಳಿ, ವ್ಯಾಸಂಗಕ್ಕಾಗಿ ಸಹಿಸಿಕೊಂಡು ಮುಂದೆ ಸಾಗುವಂತೆ, ಓದಿನತ್ತ ಗಮನ ಹರಿಸುವಂತೆ ಸಲಹೆ ನೀಡಿದ್ದೆವು. ಆದರೆ, ಆ ರೀತಿ ಸಲಹೆ ನೀಡಿದ್ದಕ್ಕಾಗಿ, ಮಗನನ್ನೇ ಕಳೆದುಕೊಳ್ಳುವಂತಾಯಿತು” ಎಂದು ಪೋಷಕರು ಪಶ್ಚಾತ್ತಾಪದ ಮಾತನಾಡಿದ್ದಾರೆ.
ಸಾಹಿಲ್ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಪರೀಕ್ಷಾ ಕೊಠಡಿಯಲ್ಲಿ ನಡೆದ ಘಟನೆ ಸೇರಿದಂತೆ ಹಲವು ಆಯಾಮಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಅಂದಹಾಗೆ, ಪ್ರತಿಷ್ಠಿತ ಶಿಕ್ಷಣ ಕ್ಯಾಂಪಸ್‌ಗಳಲ್ಲಿ ಆತ್ಮಹತ್ಯೆಗೆ ಬಲಿಯಾಗಿರುವುದು ಕೇವಲ ಸಾಹಿಲ್ ಮಾತ್ರವಲ್ಲ. ಉನ್ನತ ಶಿಕ್ಷಣದ ಕನಸು ಹೊತ್ತಿದ್ದ ಹಲವಾರು ವಿದ್ಯಾರ್ಥಿಗಳು ಕ್ಯಾಂಪಸ್‌ಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ, ದಲಿತ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಇದೇ ಐಐಟಿ-ಬಾಂಬೆಯಲ್ಲಿ 2023ರಲ್ಲಿ ಮೊದಲ ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಕೂಡ ಪರಿಶಿಷ್ಟ ಜಾತಿಗೆ ಸೇರಿದವರು.
ಮುಂಬೈ ಪೊಲೀಸರ ವಿಶೇಷ ತನಿಖಾ ತಂಡ ಸಲ್ಲಿಸಿದ ಆರೋಪಪಟ್ಟಿಯಲ್ಲಿ, “ದರ್ಶನ್ ತಮ್ಮ ಕುಟುಂಬದವರೊಂದಿಗೆ ಮಾತನಾಡುವಾಗ ಕ್ಯಾಂಪಸ್‌ನಲ್ಲಿ ಮೀಸಲಾತಿ ಮತ್ತು ಜಾತಿ ಸಂಬಂಧಿಸಿದ ಟೀಕೆಗಳನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದರು” ಎಂಬ ಹೇಳಿಕೆಗಳು ದಾಖಲಾಗಿದ್ದವು. ಈ ದರ್ಶನ್ ಅವರ ಸಹಪಾಠಿಯೇ ಜಾತಿ ಆಧಾರಿತ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದರು. ಆತ ಜಾಮೀನು ಪಡೆದು ಹೊರಬಂದಿದ್ದಾನೆ.
ಈ ರೀತಿಯಲ್ಲಿ ಜಾತಿ ಆಧಾರಿತ ತಾರತಮ್ಯಗಳು ಮತ್ತು ನಿಂದನೆಗೆ ವಿದ್ಯಾರ್ಥಿ ನಾಯಕ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪಿಎಚ್‌ಡಿ ಸಂಶೋಧನಾರ್ಥಿ ರೋಹಿತ್ ಮೇಮೂಲಾ ಕೂಡ 2015ರಲ್ಲಿ ಬಲಿಯಾದರು. ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ASA)ಅನ್ನು ಮುನ್ನಡೆಸುತ್ತಿದ್ದ ರೋಹಿತ್ ಮತ್ತು ಇತರ ನಾಲ್ವರು ಸಹಚರರ ವಿರುದ್ಧ ಎಬಿವಿಪಿ ನಡೆಸಿದ ಕುತಂತ್ರದ ಕಾರಣಕ್ಕಾಗಿ ಸುಳ್ಳು ಆರೋಪದ ಮೇಲೆ ವಿಶ್ವವಿದ್ಯಾಲಯವು ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಅವರನ್ನು ಹಾಸ್ಟೆಲ್, ಲೈಬ್ರರಿ, ಫೆಲೋಶಿಪ್ ಸೇರಿದಂತೆ ಹಲವು ಸೌಲಭ್ಯಗಳಿಂದ ದೂರವಿಡಲಾಯಿತು. ತಮ್ಮ ವಿರುದ್ಧದ ದೌರ್ಜನ್ಯ ಮತ್ತು ಜಾತಿ ಆಧಾರಿತ ಕಿರುಕುಳ ವಿರುದ್ಧ ನಿರಂತರ ಹೋರಾಟ ನಡೆಸಿದ ರೋಹಿತ್, 2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.
“ಮಾನವನ ಮೌಲ್ಯವನ್ನು ಆತನ ತಕ್ಷಣದ ಗುರುತು ಮತ್ತು ಅಸ್ತಿತ್ವಕ್ಕೆ ಮಾತ್ರವೇ ಸೀಮಿತಗೊಳಿಸಲಾಗಿದೆ. ಒಂದು ವಸ್ತುವಿಗೆ, ಮತಕ್ಕೆ ಅಷ್ಟೇ ಆತನ ಮೌಲ್ಯ ನಿಗದಿಯಾಗುತ್ತದೆ. ಮನುಷ್ಯನನ್ನು ಆತನ ಬುದ್ಧಿವಂತಿಕೆಯಿಂದ ಅಳೆಯಲಾಗುತ್ತಿಲ್ಲ. ನನ್ನ ಜನನವೇ ನನ್ನ ಮಾರಕ ಅಪರಾಧ” ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದರು.
ಅವರ ಸಾವು ದೇಶಾದ್ಯಂತ ಕ್ಯಾಂಪಸ್‌ಗಳಲ್ಲಿನ ಜಾತಿ ತಾರತಮ್ಯದ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ‘ರೋಹಿತ್ ಸಾವು ಕೇವಲ ಆತ್ಮಹತ್ಯೆಯಲ್ಲ, ಸಾಂಸ್ಥಿಕ ಕೊಲೆ’ ಎಂದು ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆರೋಪಿಸಿ, ಪ್ರತಿಭಟನೆಗಳನ್ನು ನಡೆಸಿದರು. ಫಲವಾಗಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ಕರ್ನಾಟಕವೂ ಸೇರಿ ಕೆಲ ರಾಜ್ಯಗಳು ‘ರೋಹಿತ್ ವೇಮೂಲಾ ಕಾಯ್ದೆ’ಯನ್ನು ಜಾರಿಗೆ ತಂದವು.
ಆದರೂ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ಮತ್ತು ಕಿರುಕುಳಗಳು ನಿಂತಿಲ್ಲ. ಈ ವ್ಯವಸ್ಥೆಯ ವೈಫಲ್ಯವನ್ನು ಮುಂಬೈನ ವೈದ್ಯಕೀಯ ವಿದ್ಯಾರ್ಥಿನಿ ಡಾ. ಪಾಯಲ್ ತಡ್ವಿ ಅವರ 2019ರ ಸಾವು ಎತ್ತಿತೋರಿತು. ಪರಿಶಿಷ್ಟ ಪಂಗಡಕ್ಕೆ ಸೇರಿದ ಪಾಯಲ್ ತಮ್ಮ ಹಿರಿಯ ವೈದ್ಯರಿಂದ ನಿರಂತರ ಕಿರುಕುಳ ಮತ್ತು ಜಾತಿ ನಿಂದನೆಯನ್ನು ಎದುರಿಸಿದ್ದರು ಎಂದು ಕುಟುಂಬ ಆರೋಪಿಸಿತ್ತು. ಆಸ್ಪತ್ರೆಯ ‘ರ್‍ಯಾಗಿಂಗ್ ವಿರೋಧಿ ಸಮಿತಿ’ಯ ಪ್ರಾಥಮಿಕ ವರದಿಯು, “ಹಿರಿಯ ವೈದ್ಯರು ಪಾಯಲ್ ಅವರಿಗೆ ಕಿರುಕುಳ ಮತ್ತು ಜಾತಿ ಸಂಬಂಧಿತ ಅವಮಾನ ಮಾಡಿರುವುದಕ್ಕೆ ಸಾಕ್ಷ್ಯಗಳಿವೆ” ಎಂದು ಹೇಳಿತು. ಆದರೆ, ರಾಜ್ಯ ಮಟ್ಟದ ಮತ್ತೊಂದು ಸಮಿತಿಯು, “ರ್‍ಯಾಗಿಂಗ್ ನಡೆದಿತ್ತು. ಆದರೆ, ಜಾತಿ ತಾರತಮ್ಯಕ್ಕೆ ಸಾಕ್ಷ್ಯ ಗಳು ದೊರೆತಿಲ್ಲ” ಎಂದು ಹೇಳಿತು. ಈ ವಿಭಿನ್ನ ನಿರ್ಣಯಗಳಿಂದಾಗಿ ಸತ್ಯ ಹುದುಗಿ ಹೋಯಿತು. ಪಾಯಲ್ ಕುಟುಂಬವು ಪ್ರಕರಣ ದಾಖಲಿಸಿದೆಯಾದರೂ, ತನಿಖೆಗಳು ಕುಂಟುತ್ತಿವೆ.
ಅಂಕಿಅಂಶಗಳ ಪ್ರಕಾರ, 2014ರಿಂದ 2021ರವರೆಗೆ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 122 ವಿದ್ಯಾರ್ಥಿಗಳು ಮತ್ತು ಐಐಟಿಗಳಲ್ಲಿ 2018ರಿಂದ 2023ರವರೆಗೆ 33 ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಅವರಲ್ಲಿ, ಹೆಚ್ಚಿನವರು ದಲಿತ ವಿದ್ಯಾರ್ಥಿಗಳು.
ಈ ಸಾವುಗಳ ಹಿಂದಿರುವ ಪ್ರಮುಖ ಸಮಸ್ಯೆಗಳಲ್ಲಿ ‘ಮೀಸಲಾತಿ ವಿರೋಧಿ ಧೋರಣೆ ಮತ್ತು ನಿಂದನೆ’ ಪ್ರಮುಖವಾದ್ದು. ಮೀಸಲಾತಿ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಯನ್ನು ‘ಕಡಿಮೆ ಅಂಕದಿಂದ ಬಂದವರು’, ‘ಸೌಲಭ್ಯ ಪಡೆದು ಬಂದವರು’ ಅಥವಾ ‘ಇಲ್ಲಿ ಇರಲು ಅರ್ಹರಲ್ಲ’ ಎಂಬ ಪೂರ್ವಾಗ್ರಹ ದೃಷ್ಟಿಯಿಂದ ನೋಡುವ ಮನೋಭಾವ ಕ್ಯಾಂಪಸ್‌ಗಳಲ್ಲಿ ಆಳವಾಗಿ ಬೇರೂರಿದೆ. ಇದರಲ್ಲಿ ಸಹಪಾಠಿಗಳು ಮತ್ತು ಬೋಧಕರೇನೂ ಹೊರತಾಗಿಲ್ಲ. ಮೀಸಲಾತಿ ಸೌಲಭ್ಯ ಕುರಿತ ವ್ಯಂಗ್ಯ, ಜಾತಿ ನಿಂದನೆ, ಸಾಮರ್ಥ್ಯವನ್ನು ಜಾತಿಯೊಂದಿಗೆ ಬೆಸೆಯುವುದು ದಲಿತ ವಿದ್ಯಾರ್ಥಿಗಳನ್ನು ಮಾನಸಿಕ ಒತ್ತಡಕ್ಕೆ ದೂಡುತ್ತಿವೆ. ಆದ್ದರಿಂದಲೇ, ದರ್ಶನ್ ಸೋಲಂಕಿ ಸಾವಿನ ಬಳಿಕ, ಐಐಟಿ-ಬಾಂಬೆಯಲ್ಲಿ ವಿದ್ಯಾರ್ಥಿಗಳ JEE ಅಥವಾ GATE ರ್‍ಯಾಂಕ್ ಬಗ್ಗ ಕೇಳುವುದನ್ನು ನಿರ್ಬಂಧಿಸಿ ಮಾರ್ಗಸೂಚಿ ಹೊರಡಿಸಿತ್ತು.
ಈ ಲೇಖನ ಓದಿದ್ದೀರಾ?: ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ ನಿರೀಕ್ಷೆ
ಇದರ ಜೊತೆಗೆ, ದಲಿತ ಸಮುದಾಯದ ಮೊದಲ ತಲೆಮಾರಿನ ವಿದ್ಯಾರ್ಥಿಗಳು ಎದುರಿಸುವ ಭಾಷೆ ಮತ್ತು ವರ್ಗದ ಅಂತರವೂ ದಲಿತ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಹಿಂಸಿಸುತ್ತಿವೆ. ಗ್ರಾಮೀಣ ಪ್ರದೇಶ ಅಥವಾ ಸರ್ಕಾರಿ ಶಾಲೆಯಿಂದ ಬಂದ ವಿದ್ಯಾರ್ಥಿಗಳು ತಮ್ಮೂರು-ತಮ್ಮ ಶಾಲೆಗಳಲ್ಲಿ ಉತ್ತಮವಾಗಿ ವ್ಯಾಸಂಗ ಮಾಡಿದ್ದರೂ, ಅತ್ಯುತ್ತಮ ಅಂಕ ಗಳಿಸಿದ್ದರೂ, ಮಾಡ್ರನ್ ಜಗತ್ತಿನ ಸಂಸ್ಥೆಗೆ ಪ್ರವೇಶಿಸಿದಾಗ, ಹೊಸ ಸಾಮಾಜಿಕ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಂಕ ಕಡಿಮೆ ಬರುವುದು ಅಥವಾ ಪರೀಕ್ಷೆಯಲ್ಲಿ ವಿಫಲವಾಗುವುದು ಕೇವಲ ಶೈಕ್ಷಣಿಕ ಸಮಸ್ಯೆಯಾಗದೆ, ‘ಮೀಸಲಾತಿಯಲ್ಲಿ ಬಂದವರು, ತಲೆಯಲ್ಲೇನು ಇಲ್ಲ’ ಎಂಬ ತುಚ್ಛ ಮೂದಲಿಕೆಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿಯ ಜಾತಿ ಅವಮಾನಗಳು ದಲಿತ ವಿದ್ಯಾರ್ಥಿಗಳನ್ನು ಮತ್ತಷ್ಟು ಒಂಟಿತನಕ್ಕೆ ದೂಡುತ್ತವೆ.
ಇದೆಲ್ಲದರ ನಡುವೆ, ದಲಿತ ವಿದ್ಯಾರ್ಥಿಗಳ ಮಾನಸಿಕ ಒತ್ತಡಕ್ಕೆ ಕ್ಯಾಂಪಸ್‌ಗಳ ವ್ಯವಸ್ಥಯೂ ಕೊಡುಗೆ ನೀಡುತ್ತದೆ. ಕ್ಯಾಂಪಸ್‌ಗಳಲ್ಲಿ ಎಸ್‌ಸಿ/ಎಸ್‌ಟಿ ಸೆಲ್, ಸಮಾನ ಅವಕಾಶಗಳ ಘಟಕ ಹಾಗೂ ಆಪ್ತಸಮಾಲೋಚನಾ ಕೇಂದ್ರ ಇದ್ದರೂ, ಅವುಗಳ ಮೇಲೆ ವಿದ್ಯಾರ್ಥಿಗಳು ವಿಶ್ವಾಸ ಕಳೆದುಕೊಂಡಿದ್ದಾರೆ. ದೂರು ನೀಡಿದರೆ ಪ್ರಾಧ್ಯಾಪಕರು ನಾನಾ ರೀತಿಯಲ್ಲಿ ತೊಂದರೆ ಕೊಡುವ ಅಪಾಯವೇ ಹೆಚ್ಚಿರುತ್ತದೆ ಎಂಬ ಭಯ ದಲಿತ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಮಾತ್ರವಲ್ಲ, ದೂರು ನೀಡಿದರೂ, ಸಮಸ್ಯೆ ಬಗೆಹರಿಯುವ ಅಥವಾ ನ್ಯಾಯ ದೊರೆಯುವ ಸಾಧ್ಯತೆಯ ಕುರಿತೂ ವಿದ್ಯಾರ್ಥಿಗಳಲ್ಲಿ ವಿಶ್ವಾಸವಿಲ್ಲ.
ಹೀಗಾಗಿ, ‘ದಲಿತ ವಿದ್ಯಾರ್ಥಿಗಳು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?’ ಎಂಬ ಪ್ರಶ್ನೆಗೆ ‘ಅವರು ಒತ್ತಡ ತಡೆದುಕೊಳ್ಳಲಿಲ್ಲ’ ಎಂಬ ಗಾಳಿಯಲ್ಲಿ ಗುಂಡು ಹಾರಿಸುವ ಉತ್ತರ ತಕ್ಷಣಗೆ ಕಂಡರೂ, ಅದು ಒತ್ತಡದ ವಿಚಾರ ಮಾತ್ರವಲ್ಲ, ಸಾಮಾಜಿಕ ವ್ಯವಸ್ಥೆಯಲ್ಲಿನ ವೈಫಲ್ಯದ ವಿಷಯ. ರೋಹಿತ್ ವೇಮುಲಾ, ದರ್ಶನ್ ಸೋಲಂಕಿ, ಪಾಯಲ್ ತಡ್ವಿ ಹಾಗೂ ಸಾಹಿಲ್ ವಾಕೋಡೆ ಪ್ರಕರಣಗಳ ಕಾನೂನು ಸಂಗತಿಗಳು ಬೇರೆ-ಬೇರೆ ಇದ್ದರೂ, ಸಾಮಾಜಿಕ ಸಂಗತಿಗಳು ಒಂದೇ ಆಗಿವೆ. ಅವೆಲ್ಲವೂ ಜಾತಿ ಆಧಾರಿತ ಶೋಷಣೆ ಮತ್ತು ಕಿರುಕುಳದಿಂದಲೇ ಘಟಿಸಿವೆ.




