ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಭಾರತೀಯ ಚುನಾವಣಾ ಆಯೋಗವು “ಏಕವ್ಯಕ್ತಿ ಸರ್ವಾಧಿಕಾರ”ದಂತೆ (One-man autocracy) ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿರುವ ವಿಪಕ್ಷಗಳು, ಅವರನ್ನು ಮಹಾಭಿಯೋಗ ನಡೆಸಿ ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ತೀವ್ರ ವಾಗ್ದಾಳಿ ನಡೆಸಿವೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಆಯೋಗದ ಇತರ ಇಬ್ಬರು ಚುನಾವಣಾ ಆಯುಕ್ತರು ಗಂಭೀರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ ವಿಪಕ್ಷ ನಾಯಕರು ಈ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗ ನಿಂದನೆ, ನಾಗರಿಕ ಹಕ್ಕುಗಳ ದಮನ: ಐಎಎಸ್ ಅಧಿಕಾರಿ ಮೇಧಾ ರೂಪಂ ಆಡಳಿತದ ಕರಾಳ ಮುಖ ಅನಾವರಣ
ರಾಷ್ಟ್ರೀಯ ಪತ್ರಿಕೆಯೊಂದು (ದ ಇಂಡಿಯನ್ ಎಕ್ಸ್‌ಪ್ರೆಸ್) ಪ್ರಕಟಿಸಿದ ತನಿಖಾ ವರದಿಯ ಪ್ರಕಾರ, ಎಸ್‌ಐಆರ್ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ನಿರ್ಧಾರಗಳಲ್ಲಿ ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ತಮ್ಮ ಸಹೋದ್ಯೋಗಿ ಆಯುಕ್ತರನ್ನು ಕತ್ತಲಲ್ಲಿಟ್ಟು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಕಳೆದ 10 ತಿಂಗಳುಗಳಲ್ಲಿ ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಬಲಿಷ್ಠವಾಗಿ ಹಾಗೂ ಅಧಿಕೃತವಾಗಿ ಕನಿಷ್ಠ 14 ಬಾರಿ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಹೊಸ ಮತದಾರರ ಸೇರ್ಪಡೆ, ಸಾಮೂಹಿಕ ಹೆಸರು ತೆಗೆದುಹಾಕುವುದು (ಮತದಾರರ ಪಟ್ಟಿ ಅಳಿಸುವಿಕೆ) ಮತ್ತು ಫಾರ್ಮ್ 6 ಬದಲಾವಣೆಗಳನ್ನು ‘ಅನಧಿಕೃತ ಮತ್ತು ಕಾನೂನುಬಾಹಿರ’ ಎಂದು ಆಯುಕ್ತರು ಆಕ್ಷೇಪಿಸಿದ್ದಾರೆ ಎಂಬ ಸಂಗತಿ ಹೊರಬಿದ್ದ ಬೆನ್ನಲ್ಲೇ ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ಮತ್ತು ಆಯೋಗದ ವಿರುದ್ಧ ಹರಿಹಾಯ್ದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐಎಂ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್, “ಇದು ಇನ್ಮುಂದೆ ಚುನಾವಣಾ ಆಯೋಗವಾಗಿ ಉಳಿದಿಲ್ಲ. ಸಿಇಸಿ ಗ್ಯಾನೇಶ್ ಕುಮಾರ್ ಅವರ ಅಡಿಯಲ್ಲಿ ‘ಏಕವ್ಯಕ್ತಿ ಸರ್ವಾಧಿಕಾರ’ವಾಗಿ (One-man autocracy) ಬದಲಾಗಿದೆ. ಆಯೋಗದ ಇತರ ಇಬ್ಬರು ಆಯುಕ್ತರೇ ಈ ನಿರ್ಧಾರಗಳು ಅಕ್ರಮ ಎಂದ ಮೇಲೆ ಸಂಸತ್ತು ತಕ್ಷಣವೇ ಸಿಇಸಿ ವಜಾ ಪ್ರಕ್ರಿಯೆಯನ್ನ ಆರಂಭಿಸಬೇಕು. ಸುಪ್ರೀಂ ಕೋರ್ಟ್ ತಕ್ಷಣವೇ ಈ SIR ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒಬ್ರೇನ್, “ಅಂದಾಜು 5 ತಿಂಗಳ ಹಿಂದೆಯೇ 60ಕ್ಕೂ ಹೆಚ್ಚು ರಾಜ್ಯಸಭಾ ಸಂಸದರು ಸಿಇಸಿ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ನೋಟಿಸ್ ನೀಡಿದ್ದರು. ಈಗ ಇಬ್ಬರು ಆಯುಕ್ತರೇ ವಿರೋಧ ವ್ಯಕ್ತಪಡಿಸಿರುವುದು ಬಹಿರಂಗವಾಗಿರುವುದರಿಂದ, ಪ್ರಜಾಪ್ರಭುತ್ವವನ್ನು ಉಳಿಸಲು ಈ ನೋಟಿಸ್ ಆಧರಿಸಿ ವಜಾ ಪ್ರಕ್ರಿಯೆಯನ್ನು ಜಾರಿಗೆ ತರುವ ಸಮಯ ಬಂದಿದೆ” ಎಂದು ತಿಳಿಸಿದ್ದಾರೆ.
ಇನ್ನು “ರಾಷ್ಟ್ರೀಯ ಪತ್ರಿಕೆಯ ವರದಿಯು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ನೈತಿಕತೆಯನ್ನು ಸಿಇಸಿ ಹೇಗೆ ಸಂಪೂರ್ಣವಾಗಿ ನಾಶಪಡಿಸಿದ್ದಾರೆ ಎಂಬುದನ್ನು ಬಯಲು ಮಾಡಿದೆ. ಈ ಆಘಾತಕಾರಿ ಸಂಗತಿಗಳ ಕುರಿತು ಪಕ್ಷದ ಪರವಾಗಿ ಅಭಿಷೇಕ್ ಸಿಂಘ್ವಿ ಅವರು ವಿವರವಾಗಿ ಮಾತನಾಡಲಿದ್ದಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಪರ್ಕ ವಿಭಾಗ) ಜೈರಾಮ್ ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಲೋಕಸಭಾ ಸಂಸದ ಮನೀಷ್ ತಿವಾರಿ, “ವರದಿಯಲ್ಲಿರುವ ಅಂಶಗಳು ನಿಜವಾಗಿದ್ದರೆ, ಚುನಾವಣಾ ಆಯೋಗವನ್ನು ಹಿಂಬಾಗಿಲಿನಿಂದ ನಡೆಸಲು ‘ಅದೃಶ್ಯ ಹಸ್ತ’ವೊಂದು ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಬಹುಮತವಿಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ ತೆಗೆದುಕೊಂಡ ನಿರ್ಧಾರಗಳು ಅಕ್ರಮ. ಇದು ಸಿಇಸಿ ವಿರುದ್ಧ ಮಹಾಭಿಯೋಗ (Impeachment) ನಡೆಸಲು ಸೂಕ್ತವಾದ ಪ್ರಕರಣವಾಗಿದೆ” ಎಂದಿದ್ದಾರೆ.




