ಆಟವಾಡುತ್ತಿದ್ದಾಗ ಬಿದ್ದು ತುಟಿಗೆ ಗಾಯ ಮಾಡಿಕೊಂಡಿದ್ದ 18 ತಿಂಗಳ (ಒಂದೂವರೆ ವರ್ಷದ) ಮಗುವಿಗೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬಳಿಕ ಮಗು ಮೃತಪಟ್ಟಿರುವ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಅರಿವಳಿಕೆ ತಜ್ಞೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಮಗುವನ್ನು ಕಣ್ಣೂರು ಜಿಲ್ಲೆಯ ಎರಾಮಮ್-ಕುಟ್ಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠಮಂಗಲಂನ ಟಿ. ಸೂರಜ್ ಮತ್ತು ವಿಜಿಷಾ ದಂಪತಿಯ ಏಕೈಕ ಪುತ್ರ ದೇವಾಂಶ್ ಶೌರ್ಯ ಎಂದು ಗುರುತಿಸಲಾಗಿದೆ. ವಿವಾಹವಾಗಿ 8 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಈ ಮಗು ಜನಿಸಿತ್ತು. ಜುಲೈ 5 ರಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಬಿದ್ದು ಮಗುವಿನ ತುಟಿಗೆ ಗಾಯವಾಗಿತ್ತು. ತಕ್ಷಣವೇ ಪೋಷಕರು ಮಗುವನ್ನು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರು ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡುವಂತೆ ಸೂಚಿಸಿದ್ದರು.
ಪೋಷಕರ ದೂರಿನ ಪ್ರಕಾರ, ಅರಿವಳಿಕೆ ನೀಡಿದ ತಕ್ಷಣ ಮಗು ಪ್ರಜ್ಞೆ ತಪ್ಪಿದೆ. ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನಲ್ಲಿರುವ ಬೇಬಿ ಮೆಮೋರಿಯಲ್ ಆಸ್ಪತ್ರೆಯ ಘಟಕಕ್ಕೆ ಸ್ಥಳಾಂತರಿಸಿ, ಐಸಿಯುನಲ್ಲಿ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಆದರೆ, ಐದು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಮಗು, ಜುಲೈ 10ರ (ಶುಕ್ರವಾರ) ರಾತ್ರಿ 9 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಅತಿಯಾದ ಪ್ರಮಾಣದಲ್ಲಿ ಅರಿವಳಿಕೆ ನೀಡಿದ್ದೇ ಮಗುವಿನ ಮೆದುಳು ಹಾನಿಗೊಳಗಾಗಿ ಸಾವನ್ನಪ್ಪಲು ಕಾರಣ ಎಂದು ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ.
ಮಗುವಿನ ಸಂಬಂಧಿ ಕೆ. ರಾಜೀವನ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ, ಪಯ್ಯನ್ನೂರು ಪೊಲೀಸರು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಯ ಅರಿವಳಿಕೆ ತಜ್ಞೆ ಡಾ. ಅಂಜಲಿ ಪೊದುವಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125 ರ (ಮಾನವನ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯದ ಕೃತ್ಯ) ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆಯಡಿ ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ಆಸ್ಪತ್ರೆ ಆಡಳಿತ ಮಂಡಳಿ ತಳ್ಳಿಹಾಕಿದೆ. “ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಅನಿರೀಕ್ಷಿತವಾಗಿ ಹೃದಯಾಘಾತ ಸಂಭವಿಸಿದೆ. ನಿಗದಿತ ಪ್ರಮಾಣದ ಡೋಸೇಜ್ ಮತ್ತು ಸೂಕ್ತ ವೈದ್ಯಕೀಯ ಆರೈಕೆಯ ಹೊರತಾಗಿಯೂ ಇಂತಹ ಅಪರೂಪದ ಸಮಸ್ಯೆಗಳು ಎದುರಾಗಬಹುದು. ವೈದ್ಯಕೀಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಮಗುವನ್ನು ಉಳಿಸಲು ಸಾಧ್ಯವಾದಷ್ಟು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ” ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ.
ಈ ಘಟನೆಯನ್ನು ಖಂಡಿಸಿ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತರು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮಗುವಿನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.




