ಪೀಳಿಗೆಯಿಂದ ಪೀಳಿಗೆಗೆ ದಾಟುತ್ತಾ ಬಂದ ಸಾಮಾಜಿಕ ಶೋಷಣೆಯ ಮೌನ ಆಕ್ರಂದನವನ್ನು ಎದೆಯಲ್ಲಿ ಹೂತುಕೊಂಡು, ಇಂದು ತಮ್ಮ ಮುಂದಿನ ತಲೆಮಾರಿನ ಉಜ್ವಲ ಭವಿಷ್ಯಕ್ಕಾಗಿ ವಿಜಯನಗರದ ದೇವದಾಸಿ ತಾಯಂದಿರು ಧ್ವನಿ ಎತ್ತಿದ್ದಾರೆ. ಕೇವಲ ಬದುಕಿನ ಅಸ್ತಿತ್ವಕ್ಕಾಗಿ ಅಲ್ಲ, ಬದಲಿಗೆ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಆತ್ಮಗೌರವಕ್ಕಾಗಿ ನಡೆಸುತ್ತಿರುವ ಈ ಹೋರಾಟ ಕಣ್ಣೀರ ಕಥೆಯೂ ಹೌದು, ನ್ಯಾಯದ ಹಕ್ಕೊತ್ತಾಯವೂ ಹೌದು.
ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆಯ ನೇತೃತ್ವದಲ್ಲಿ ದೇವದಾಸಿ ಮಹಿಳೆಯರು, ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಶಿಕ್ಷಣ, ವಸತಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಕಲ್ಪಿಸಬೇಕು. ಜೊತೆಗೆ 2025ರ ಸಮಗ್ರ ಪುನರ್ವಸತಿ ಕರಡು ಆಧರಿಸಿ ಸಮೀಕ್ಷೆ ನಡೆಸಿ ಸೂಕ್ತ ಕಾನೂನಾತ್ಮಕ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇವದಾಸಿ ತಾಯಂದಿರು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು. ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ವತಿಯಿಂದ ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇವದಾಸಿ ತಾಯಂದಿರು ನಮೂನೆ-2ರಲ್ಲಿ ಸಲ್ಲಿಸಿದ ಅರ್ಜಿಗಳ ಸರ್ವೆ ನೋಂದಣಿ ಕಾರ್ಯವನ್ನು ಕಾಯಿದೆ ಅನುಸಾರವಾಗಿ ಮರುಪರಿಶೀಲನೆ ಮಾಡಿ ಎಂಟ್ರಿ ಮಾಡಬೇಕು. ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ವಸತಿ, ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ವಿಶೇಷ ಮೀಸಲಾತಿ ಕಲ್ಪಿಸಬೇಕು. ಓದಿದ ದೇವದಾಸಿ ಮಕ್ಕಳಿಗೆ ಸರ್ಕಾರಿ ನೇಮಕಾತಿಗಳಲ್ಲಿ ವಿಶೇಷ ಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈದಿನ.ಕಾಮ್ ಜೊತೆಗೆ ಮಾತನಾಡಿದ ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಕರ್ನಾಟಕ ಸದಸ್ಯೆ ಮಂಜುಳ ಮಾಳಗಿ, “ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಮುದಾಯಗಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪ್ರತಿ ವರ್ಷ ಬರುವ ಹಣದಲ್ಲಿ ಹಾಗೂ ಕೆ.ಎಂ.ಆರ್.ಸಿ ಅಥವಾ ಡಿ.ಎಂ.ಎಫ್ ಹಣದಲ್ಲಿ ಇವರ ಸಾಮಾಜಿಕ ಸಂಕಷ್ಟದಿಂದ ಹೊರಬರುವ ವಿಶೇಷ ಪ್ಯಾಕೇಜ್ ರೂಪಿಸಿ, ಅವರ ಮಕ್ಕಳು ಹಾಗೂ ಮೊಮ್ಮಕ್ಕಳ ಶೈಕ್ಷಣಿಕ-ಸಾಮಾಜಿಕ ಪ್ರಗತಿಗಾಗಿ ವಿಶೇಷ ಕಾನೂನಾತ್ಮಕ ಕಾರ್ಯಕ್ರಮಗಳನ್ನು ಕೂಡಲೇ ನಿರ್ದಿಷ್ಟ ಅವಧಿಯಲ್ಲಿ ಜಾರಿಗೊಳಿಸಬೇಕು. ಜೊತೆಗೆ ದೇವದಾಸಿ ಪದ್ಧತಿ ಆಚರಣೆಯನ್ನು ಸಂಪೂರ್ಣವಾಗಿ ತಡೆಯಬೇಕು” ಎಂದು ಆಗ್ರಹಿಸಿದ್ದಾರೆ.
“2-3-4-5-6ನೇ ತಲೆಮಾರಿನ ದೇವದಾಸಿ ಮಹಿಳೆಯರ ಸಾಮಾಜಿಕ ಹಾಗೂ ಶೈಕ್ಷಣಿಕ ಬದಲಾವಣೆಗಾಗಿ ಕಾಯಿದೆಯಲ್ಲಿ ಯಾವ ಉಲ್ಲೇಖವೂ ಇಲ್ಲ. ಕನಿಷ್ಠ ಪಕ್ಷ ಜಾತಿ-ದೌರ್ಜನ್ಯ, ಮಹಿಳಾ ದೌರ್ಜನ್ಯ ಮತ್ತು ಮೌಢ್ಯ ನಿಷೇಧ ಕಾಯಿದೆ ಜಾರಿಯಾದ ಮೇಲಾದರೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಬರುವ ಹಣವನ್ನು ಇವರ ಅಭಿವೃದ್ಧಿಗೆ ಬಳಸಿದ್ದರೆ 45-47 ವಯಸ್ಸಿನವರೂ ದೇವದಾಸಿಯರಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಹಾಗಾಗಿ 2025ರಲ್ಲಿ ದೇವದಾಸಿ ಪದ್ಧತಿ ಆಚರಣೆ ಸಂಪೂರ್ಣ ನಿಷೇಧಗೊಳಿಸುವ ಸಮಗ್ರ ಪುನರ್ವಸತಿ ಕರಡು ಆಧರಿಸಿ ಸಮಗ್ರ ಸಮೀಕ್ಷೆ ನಡೆಸಿ ಮುಂದಿನ ಪೀಳಿಗೆಯನ್ನು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸುವುದು ಅವರ ಸಮಗ್ರ ಪುನರ್ವಸತಿಯ ಪ್ರಮುಖ ಅಂಶವಾಗಿದೆ. ಆ ಕಾರಣಕ್ಕಾಗಿ ನಮೂನೆ-2ರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ವಯಸ್ಸನ್ನು ಪರಿಗಣಿಸದೆ ನಿಜವಾಗಿ ದೇವದಾಸಿ ಪದ್ಧತಿಗೆ ಒಳಗಾದವರಿಗೆ ಕಾನೂನಾತ್ಮಕ ರಕ್ಷಣೆ ಒದಗಿಸಿ, ಅವರಿಗೆ ಶಿಕ್ಷಣ, ಉದ್ಯೋಗ ಮತ್ತು ಮಾರುಕಟ್ಟೆ ಆಧಾರಿತ ಅಗತ್ಯಗಳಿಗನುಗುಣವಾಗಿ ಉದ್ಯೋಗಗಳನ್ನು ಕಾನೂನಾತ್ಮಕವಾಗಿ ಭದ್ರತೆ ಒದಗಿಸಿಕೊಡಬೇಕು ಎಂದೂ ಆಗ್ರಹಿಸಿದ್ದಾರೆ.

ಈ ಕುರಿತು ಈದಿನ.ಕಾಮ್ ತಂಡದ ಜೊತೆ 114 ಡಾಣಾಪುರ ಗ್ರಾಮದ ನಿವಾಸಿ ಹನುಮಕ್ಕ ಅವರು ಮಾತನಾಡಿ, ತಮ್ಮ ನೋವು ಹಂಚಿಕೊಂಡಿದ್ದಾರೆ. “ನಾನು 7 ವರ್ಷದವಳಿದ್ದಾಗಲೇ ದೇವದಾಸಿ ಮಾಡಿದ್ದಾರೆ. ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ ಎಂದು ಹಿರಿಕರು ದೇವದಾಸಿ ಪದ್ಧತಿಗೆ ನನ್ನನ್ನು ತಳ್ಳಿದ್ದಾರೆ. ನನಗೀಗ ಮೂರು ಮಕ್ಕಳು. ನಾನು ದೇವದಾಸಿಯಾದರೂ ಸರ್ಕಾರದ ಸರ್ವೆಯಲ್ಲಿ ನನ್ನ ಹೆಸರಿಲ್ಲ. ಈಗ ಮರು ಸರ್ವೆ ಮಾಡಿ ನಮ್ಮನ್ನು ಲಿಸ್ಟ್‌ಗೆ ಸೇರಿಸಿದರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಪುನರ್ವಸತಿಗೂ ಅವಕಾಶ ಸಿಕ್ಕಂತಾಗುತ್ತದೆ” ಎಂದು ಹೇಳಿದ್ದಾರೆ.
ಹರಪನಹಳ್ಳಿ ತಾಲೂಕಿನ ಹಳ್ಳಿಕೆರೆ ನಿವಾಸಿಯಾಗಿರುವ ದೇವದಾಸಿ ತಾಯಿ ಹೊನ್ನಮ್ಮ ಮಾತನಾಡಿ, “ನನಗೀಗ 80 ವರ್ಷ. ಇದುವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಇರಲು ಮನೆಯಿಲ್ಲ, ಹಳೇ ಮನೆಯಲ್ಲೇ ವಾಸ್ತವ್ಯ. ಈಗ ಸರ್ಕಾರ ಪುನರ್ವಸತಿಯ ಎದುರು ನೋಡುತ್ತಿದ್ದೇನೆ. ಉಸಿರು ನಿಲ್ಲುವ ಮುನ್ನ ಸೂರು ದೊರತರೆ, ನೆಮ್ಮದಿಯ ಒಂದೆರಡು ದಿನಗಳನ್ನು ಕಳೆಯುವ ಕೊನೆಯ ಆಸೆ ಹೊತ್ತಿದ್ದೇನೆ” ಎಂದು ವ್ಯಥೆಯಿಂದ ನುಡಿದರು.
ದೇವದಾಸಿ ತಾಯಂದಿರ ಮುಖ್ಯ ಬೇಡಿಕೆಗಳು:
- ಶಿಕ್ಷಣದ ಹಕ್ಕು ಕಾಯಿದೆ ಅಡಿಯಲ್ಲಿ ದೇವದಾಸಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ವಿಶೇಷ ಮೀಸಲಾತಿ ಕೊಡಬೇಕು.
- ವಸತಿ ಶಾಲೆಗಳಲ್ಲಿ ದೇವದಾಸಿ ಮಕ್ಕಳಿಗೆ ಇರುವ ಮೀಸಲಾತಿಯನ್ನು ಮೊಮ್ಮಕ್ಕಳಿಗೂ ವಿಸ್ತರಿಸಿ, ಉನ್ನತ ಶಿಕ್ಷಣದಲ್ಲೂ ದೇವದಾಸಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಮೀಸಲಾತಿ ಕಲ್ಪಿಸಬೇಕು.
- ದೇವದಾಸಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಒದಗಿಸಬೇಕು.
- 2025ರ ಸರ್ವೆಯಲ್ಲಿ ಸಲ್ಲಿಸಿದ ದೇವದಾಸಿ ಮಹಿಳೆಯರ ನಮೂನೆ-1, 2 ಮತ್ತು 3 ಅರ್ಜಿಗಳನ್ನು ಸರಿಯಾಗಿ ಮರುಪರಿಶೀಲಿಸಿ ರಿ-ಎಂಟ್ರಿ ಮಾಡಬೇಕು. ಇನ್ನೂ ಅರ್ಜಿ ಸಲ್ಲಿಸುವವರು ಇದ್ದರೆ ಪುನಃ ಲಾಗಿನ್ ಮಾಡಿ ಅರ್ಜಿ ಸಲ್ಲಿಸಿ ನೋಂದಣಿಯಾಗಲು ಅವಕಾಶ ಕೊಡಬೇಕು.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರ್ಕಾರಿ ಉದ್ಯೋಗ ನೇಮಕಾತಿ ಕಾನೂನು ಹಾಗೂ ಇತರೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಆಡಳಿತಾತ್ಮಕ ಅಭಿಪ್ರಾಯ ಪಡೆದು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರದ ಅಂತಿಮ ಆದೇಶ ಬರುವವರೆಗೂ ದೇವದಾಸಿ ತಾಯಂದಿರಿಗೆ, ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ವಿಶೇಷ ಪ್ರವೇಶಾತಿ, ಉದ್ಯೋಗ ನೇಮಕಾತಿ, ಶಿಕ್ಷಣದಿಂದ ವಂಚಿತರಾದ ಯುವ ದೇವದಾಸಿ ಮಹಿಳೆಯರಿಗೆ ಶಿಕ್ಷಣಕ್ಕೆ ಪ್ರೋತ್ಸಾಹ, ಸ್ವಯಂ ಉದ್ಯೋಗ, ಮಾರುಕಟ್ಟೆ ವ್ಯವಸ್ಥೆ ಮತ್ತು ಸಹಾಯ ಒದಗಿಸಿ ಪದ್ಧತಿಯಿಂದ ಹೊರಬಂದು ಘನತೆಯಿಂದ ಬದುಕಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡ 2025ರ ಸರ್ವೆಯಲ್ಲಿ ನಮೂನೆ-2 ಅಡಿಯಲ್ಲಿ ಅರ್ಜಿ ಸಲ್ಲಿಸಿದ ದೇವದಾಸಿ ತಾಯಂದಿರ ಮಕ್ಕಳಿಗೂ ಶಿಕ್ಷಣದ ಹಕ್ಕು ಕಾಯಿದೆಯ (ಆರ್.ಟಿ.ಈ 2010) ಅಡಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಮತ್ತು ಸರ್ಕಾರಿ ವಸತಿ ಶಾಲೆಗಳಲ್ಲಿ ಪ್ರವೇಶ ನೀಡುವ ಸಂದರ್ಭದಲ್ಲಿ ದೇವದಾಸಿ ಮಹಿಳೆಯರ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ವಿಶೇಷ ಮೀಸಲಾತಿ ನೀಡುವುದು, ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸುವುದು ಅವಶ್ಯಕವಾಗಿದೆ.
ಸರ್ಕಾರ ಕೇವಲ ಕಾಗದದ ಮೇಲಿನ ಯೋಜನೆಗಳಿಗೆ ಸೀಮಿತವಾಗದೆ, 2025ರ ಸಮಗ್ರ ಪುನರ್ವಸತಿ ಕರಡನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕಿದೆ. ಈ ನೊಂದ ತಾಯಂದಿರಿಗೆ ಸೂರು ಒದಗಿಸಿ, ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ಹಕ್ಕುಗಳನ್ನು ಭದ್ರಪಡಿಸಿದಾಗ ಮಾತ್ರವೇ ಅವರಿಗೆ ನಿಜವಾದ ಸಾಮಾಜಿಕ ನ್ಯಾಯ ಹಾಗೂ ಸಮಾಜದಲ್ಲಿ ಘನತೆಯ ಬದುಕು ಸಿಗಲು ಸಾಧ್ಯ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್



