ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಅಗತ್ಯ ತರಕಾರಿಗಳನ್ನು ಒದಗಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರವು ‘ವೆಟ್ರಿ ವಿಶೇಷ ತರಕಾರಿ ಕಿಟ್’ ಯೋಜನೆ ಪರಿಚಯಿಸಿದೆ. ಈ ಯೋಜನೆಯಡಿ ಕೇವಲ 100 ರೂ.ಗೆ 10 ಬಗೆಯ ತರಕಾರಿಗಳು ಮತ್ತು ಅಡುಗೆ ಪದಾರ್ಥಗಳನ್ನು ಒಳಗೊಂಡ ವಿಶೇಷ ಕಿಟ್ ಮಾರಾಟ ಮಾಡಲಾಗುತ್ತಿದೆ.
ಈ ವಿಶೇಷ ಯೋಜನೆಯು ನವೆಂಬರ್ 5ರಿಂದ 7ರವರೆಗೆ ಮೂರು ದಿನಗಳ ಕಾಲ ಜಾರಿಯಲ್ಲಿರುತ್ತದೆ. ರಾಜ್ಯದಾದ್ಯಂತ ಆಯ್ದ 218 ಸಹಕಾರ ಸಗಟು ಮತ್ತು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಕಿಟ್‌ಗಳು ಲಭ್ಯವಾಗಲಿವೆ. ಇದಲ್ಲದೆ, ಚೆನ್ನೈ ನಗರದಲ್ಲಿ ನಾಲ್ಕು ಸಂಚಾರಿ ತರಕಾರಿ ಮಾರಾಟ ಮಳಿಗೆಗಳ ಮೂಲಕವೂ ಕಿಟ್‌ಗಳನ್ನು ಮಾರಾಟ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ.
ಸಹಕಾರ ಇಲಾಖೆಯು ನಿರ್ವಹಿಸುತ್ತಿರುವ ಈ 100 ರೂ. ಕಿಟ್‌ನಲ್ಲಿ ಒಟ್ಟು ಸುಮಾರು 2.55ರಿಂದ 2.60 ಕೆ.ಜಿ. ತರಕಾರಿಗಳು ಮತ್ತು ಅಡುಗೆ ಪದಾರ್ಥಗಳು ಇರಲಿವೆ. ಈ ಪೈಕಿ, 500 ಗ್ರಾಂ ಈರುಳ್ಳಿ, 500 ಗ್ರಾಂ ಟೊಮ್ಯಾಟೊ, 250 ಗ್ರಾಂ ಬದನೆಕಾಯಿ, 200 ಗ್ರಾಂ ಕ್ಯಾರೇಟ್, 200 ಗ್ರಾಂ ಬೀನ್ಸ್, 100 ಗ್ರಾಂ ಹಸಿಮೆಣಸಿನ ಕಾಯಿ, 100 ಗ್ರಾಂ ನಿಂಬೆಹಣ್ಣು, 50 ಗ್ರಾಂ ಶುಂಠಿ ಹಾಗೂ ಒಂದು ತೆಂಗಿನಕಾಯಿ (400-450 ಗ್ರಾಂ) ಇರಲಿವೆ.
ಈ ವಿಶೇಷ ತರಕಾರಿ ಕಿಟ್ ಮಾರಾಟಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಹಕಾರ ಇಲಾಖೆಯು ನವೆಂಬರ್ 3ರಂದು ಮಾರ್ಗಸೂಚಿಗಳನ್ನೂ ಹೊರಡಿಸಿದೆ. ಅದರ ಪ್ರಕಾರ, ಒಬ್ಬ ಗ್ರಾಹಕರಿಗೆ ಒಂದು ಕಿಟ್ ಮಾತ್ರ ಮಾರಾಟ ಮಾಡಬೇಕು. ನಿಗದಿತ 100 ರೂ.ಗಿಂತಹೆಚ್ಚು ಅಥವಾ ಕಡಿಮೆ ದರ ವಿಧಿಸುವಂತಿಲ್ಲ. ಕಿಟ್‌ನಲ್ಲಿರುವ ತರಕಾರಿಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಅವಕಾಶವಿಲ್ಲ.
ಮಾರಾಟ ಕೇಂದ್ರಗಳು ಪ್ರತಿದಿನ ತಾಜಾ ತರಕಾರಿಗಳನ್ನು ಖರೀದಿಸಬೇಕು. ಅವುಗಳ ಗುಣಮಟ್ಟವನ್ನು ಕಾಪಾಡುವುದರ ಜೊತೆಗೆ ಖರೀದಿ ಮತ್ತು ಮಾರಾಟದ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು ಎಂದು ಇಲಾಖೆ ಸೂಚಿಸಿದೆ.
ತರಕಾರಿಗಳ ಖರೀದಿ ವೆಚ್ಚ ಮತ್ತು 100 ರೂ.ರ ನಿಗದಿತ ಮಾರಾಟ ದರದ ನಡುವಿನ ಕೊರತೆ ಹಣವನ್ನು ಸರ್ಕಾರ ಪಾವತಿಲಿದೆ.
ಈ ಲೇಖನ ಓದಿದ್ದೀರಾ?: ʼಸ್ಟಿಂಗ್ʼ ಸರ್ಕಸ್ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!
ಪರಿಸರಸ್ನೇಹಿ ಪ್ಯಾಕಿಂಗ್ ಚೀಲಕ್ಕಾಗಿ ಪ್ರತಿ ಕಿಟ್‌ಗೆ 2.50 ರೂ. ವೆಚ್ಚವನ್ನೂ ಲೆಕ್ಕಹಾಕಲಾಗಿದೆ. ಇದರಿಂದ ಗ್ರಾಹಕರಿಗೆ ನಿಗದಿತ ದರದಲ್ಲಿ ತರಕಾರಿ ಒದಗಿಸುವುದರ ಜೊತೆಗೆ ಸಹಕಾರ ಮಾರಾಟ ಕೇಂದ್ರಗಳಿಗೆ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಸರ್ಕಾರ ಮುಂದಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗಳ ಅಡುಗೆ ವೆಚ್ಚವನ್ನು ತಗ್ಗಿಸುವುದು ಮತ್ತು ಅಗತ್ಯ ತರಕಾರಿಗಳು ಸಮಂಜಸ ದರದಲ್ಲಿ ದೊರೆಯುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಮೂರು ದಿನಗಳ ಅವಧಿಗೆ ಮಾತ್ರ ಸೀಮಿತವಾಗಿರುವ ಈ ವಿಶೇಷ ಮಾರಾಟವು ನವೆಂಬರ್ 7ರಂದು ಮುಕ್ತಾಯಗೊಳ್ಳಲಿದೆ.



