ಮುಂಬೈನಲ್ಲಿ ವಿತರಣಾ ವಾಹನವೊಂದರಿಂದ (ಡೆಲಿವರಿ ಟೆಂಪೋ) ಎಲ್‌ಪಿಜಿಯುಳ್ಳ 27 ಸಿಲಿಂಡರ್‌ಗಳನ್ನು ಕಳ್ಳತನ ಮಾಡಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಬಿಕ್ಕಟ್ಟು ಎದುರಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಿದ್ದರೆ, ಗೃಹ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿಯೂ ಅಡಚಣೆ ಉಂಟಾಗಿದೆ. ಕಾಳಸಂತೆಯಲ್ಲಿ ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿದೆ. ಈ ನಡುವೆ, ಮುಂಬೈನ ಕಾಂದಿವಲಿಯ ಚಾರ್ಕೋಪ್‌ನಲ್ಲಿ ಸಿಲಿಂಡರ್‌ಗಳ ಕಳ್ಳತನ ನಡೆದಿದೆ.
ಸಿಲಿಂಡರ್ ಕಳವಿನ ಕುರಿತು ಡೆಲಿವರಿ ಏಜೆಂಟ್ ನಂದಕುಮಾರ್ ರಾಮರಾಜ್ ಸೋನಿ ಎಂಬುವವರು ದೂರು ದಾಖಲಿಸಿದ್ದಾರೆ. “ಮಾರ್ಚ್ 25 ರಂದು ತಮ್ಮ ಮನೆಯ ಸಮೀಪವಿರುವ ಕಾಕಾ ಕೇಣಿ ಚೌಕ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿದ್ದ ಟೆಂಪೊ ನಿಲ್ಲಿಸಲಾಗಿತ್ತು. ಟೆಂಪೊದಿಂದ 27 ಸಿಲಿಂಡರ್‌ಗಳ ಕಳವಾಗಿವೆ” ಎಂದು ಆರೋಪಿಸಿದ್ದಾರೆ.
ಕಳ್ಳತನದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. “ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಾಹನಗಳೊಂದಿಗೆ ಕೆಲವು ಶಂಕಿತರು ಕಂಡುಬಂದಿದ್ದು, ಅವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಅವರು ತಿಳಿಸಿದ್ದಾರೆ.



