ಕಾರಿನ ಮೇಲೆ ಬರೋಬ್ಬರಿ 3,400 ಲಿಪ್‌ಸ್ಟಿಕ್ ಕಿಸ್‌ಮಾರ್ಕ್‌ಗಳನ್ನು ಹಾಕಿಸಿಕೊಂಡು ವಾಹನ ಚಲಾಯಿಸಿ, ಸಾಮಾಜಿಕ ಜಾಲತಾಣದಲ್ಲಿ ಸ್ಟಂಟ್ ವಿಡಿಯೋ ಹಂಚಿಕೊಂಡಿದ್ದ ವ್ಯಕ್ತಿಗೆ ಮಧ್ಯಪ್ರದೇಶದ ಗ್ವಾಲಿಯರ್ ಪೊಲೀಸರು ₹5,500 ದಂಡ ವಿಧಿಸಿ ಶಾಕ್ ಕೊಟ್ಟಿದ್ದಾರೆ.
ಕಾರಿನ ಮಾಲೀಕ ಆದಿತ್ಯ ಸಿಕರ್‌ವಾರ್ ಅವರ ಕಾರಿನ ಸಂಪೂರ್ಣ ಬಾಡಿ ಮೇಲೆ ಲಿಪ್‌ಸ್ಟಿಕ್ ಗುರುತುಗಳು ಕಂಡುಬಂದಿದ್ದವು. ಅವರ ಸ್ನೇಹಿತೆ ಸುಮಾರು ಮೂರೂವರೆ ಗಂಟೆಗಳ ಕಾಲ ಈ ಗುರುತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ವಿದೇಶಿ ಟ್ರೆಂಡ್‌ವೊಂದನ್ನು ಅನುಸರಿಸಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ ಎಂದು ವರದಿಯಾಗಿದೆ.
ಕಿಸ್‌ಮಾರ್ಕ್‌ಗಳಿಂದ ತುಂಬಿದ್ದ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರ ಗಮನಕ್ಕೆ ಬಂದಿದೆ. ಸಿಟಿ ಸೆಂಟರ್ ಪ್ರದೇಶದಲ್ಲಿ ಕಾರು ಸಂಚರಿಸುತ್ತಿರುವ ವಿಡಿಯೋ ಆಧರಿಸಿ ಪೊಲೀಸರು ವಾಹನವನ್ನು ಪತ್ತೆಹಚ್ಚಿದ್ದಾರೆ.
ಪೊಲೀಸರು ಆದಿತ್ಯ ಅವರನ್ನು ಠಾಣೆಗೆ ಕರೆದೊಯ್ದು ಮೋಟಾರು ವಾಹನ ಕಾಯ್ದೆಯಡಿ ₹5,500 ದಂಡ ವಿಧಿಸಿದ್ದಾರೆ. ಅಲ್ಲದೆ, ಕಾರಿನ ಮೇಲೆ ಹಾಕಿದ್ದ ಎಲ್ಲಾ ಲಿಪ್‌ಸ್ಟಿಕ್ ಗುರುತುಗಳನ್ನು ಅಳಿಸುವಂತೆ ಸೂಚಿಸಿದ್ದಾರೆ. ‘ಆಪರೇಷನ್ ಈಗಲ್’ ಅಡಿಯಲ್ಲಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಸಂಚಾರ ನಿಯಮ ಉಲ್ಲಂಘನೆಗೆ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವವೋ ಅಥವಾ ಬೇಹುಗಾರಿಕಾ ರಾಜ್ಯವೋ: ‘ಕಾಕ್ರೋಚ್’ ಪ್ರತಿಭಟನೆ ಬಳಿಕ ಜಂತರ್ ಮಂತರ್‌ನಲ್ಲಿ ತೀವ್ರ ಕಣ್ಗಾವಲು
ಈ ಬಗ್ಗೆ ಪ್ರತಿಕ್ರಿಯಿಸಿರುವ ಆದಿತ್ಯ, ಈ ರೀತಿಯಾಗಿ ಕಾರನ್ನು ಅಲಂಕರಿಸುವುದು ಕಾನೂನುಬಾಹಿರ ಎಂಬುದು ತಮಗೆ ತಿಳಿದಿರಲಿಲ್ಲ. ಪೊಲೀಸ್ ಕ್ರಮದ ಬಳಿಕ ಕಾರಿನ ಮೇಲಿದ್ದ ಗುರುತುಗಳನ್ನೆಲ್ಲ ಸ್ವಚ್ಛಗೊಳಿಸಿ ದಂಡ ಪಾವತಿಸಿರುವುದಾಗಿ ಹೇಳಿದ್ದಾರೆ.
ಘಟನೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಕಾರಣವಾಗಿದ್ದು, “ಲಿಪ್‌ಸ್ಟಿಕ್ ಗುರುತು ಹಾಕುವುದರಿಂದ ಸಂಚಾರ ನಿಯಮ ಹೇಗೆ ಉಲ್ಲಂಘನೆಯಾಗುತ್ತದೆ?” ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಪೊಲೀಸರು ಕೈಗೊಂಡ ಕ್ರಮವನ್ನು ಸಮರ್ಥಿಸಿದ್ದಾರೆ.




