ಮಹಾರಾಷ್ಟ್ರದ ಭಿವಂಡಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಅವಶೇಷಗಳ ಅಡಿ ಮೂರರಿಂದ ನಾಲ್ಕು ಮಂದಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಭಿವಂಡಿಯ ಬಾಲಾಜಿ ನಗರ ಪ್ರದೇಶದಲ್ಲಿರುವ ‘ಕೊಹಿನೂರ್’ ಕಟ್ಟಡದ ಒಂದು ಭಾಗ ಗುರುವಾರ ರಾತ್ರಿ 11.30ರ ಸುಮಾರಿಗೆ ಕುಸಿದು ಬಿದ್ದಿದೆ. ಒಟ್ಟು 48 ಕೊಠಡಿಗಳನ್ನು ಹೊಂದಿದ್ದ ಈ ಕಟ್ಟಡದ ಪ್ರತಿ ಅಂತಸ್ತಿನಲ್ಲೂ 12 ಕೊಠಡಿಗಳಿದ್ದವು. ಸ್ಥಳೀಯ ಮಹಾನಗರ ಪಾಲಿಕೆಯು ಈ ಕಟ್ಟಡವನ್ನು ‘ಅಪಾಯಕಾರಿ’ ಎಂದು ಈ ಹಿಂದೆಯೇ ಘೋಷಿಸಿತ್ತು. ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಕಟ್ಟಡದಲ್ಲಿ ಬಿರುಕು ಬಿಡುತ್ತಿರುವಂತಹ ಭಾರಿ ಶಬ್ದಗಳು ನಿವಾಸಿಗಳಿಗೆ ಕೇಳಿಬಂದಿದ್ದವು. ಸಂಭವಿಸಬಹುದಾದ ಅನಾಹುತವನ್ನು ಅರಿತ ಸ್ಥಳೀಯರು, ತಕ್ಷಣವೇ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನೆರವಾದರು. ಆದರೆ, ಕಟ್ಟಡದಲ್ಲಿದ್ದ ಕೆಲವರು ಹೊರಬರುತ್ತಿದ್ದಂತೆಯೇ ಕಟ್ಟಡದ ‘ಬಿ’ ವಿಭಾಗ (B Wing) ಸಂಪೂರ್ಣವಾಗಿ ಕುಸಿದು ಬಿತ್ತು ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಘಟನಾ ಸ್ಥಳದಲ್ಲಿ ಬಹು-ಸಂಸ್ಥೆಗಳ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಠಾಣೆ ವಿಪತ್ತು ನಿರ್ವಹಣಾ ಪಡೆ (ಟಿಡಿಆರ್‌ಎಫ್) ಮತ್ತು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯಕ್ಕಾಗಿ ಶ್ವಾನ ದಳ, ನಾಲ್ಕು ಅಗ್ನಿಶಾಮಕ ವಾಹನಗಳು, ಎರಡು ಆಂಬ್ಯುಲೆನ್ಸ್‌ಗಳು ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಭಾರಿ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ.




