18 ದಿನಗಳ ಉಪವಾಸ ಸತ್ಯಾಗ್ರಹ ಮತ್ತು ಹೋರಾಟದ ನಂತರ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೊಡ್ಡ ಗೆಲುವು ಸಾಧಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ರದ್ದಾಗಿದ್ದ ವಿದ್ಯಾರ್ಥಿ ಸಂಘವನ್ನು (ಸ್ಟೂಡೆಂಟ್ಸ್ ಯೂನಿಯನ್) ಮತ್ತೆ ಶುರು ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸುತ್ತಿದ್ದರು. ಈಗ ಕೊನೆಗೂ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲು ಖಚಿತ ಸಮಯವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.
ಪ್ರತಿಭಟನೆ ಯಾಕೆ ನಡೀತಾ ಇತ್ತು?
ಜಾಮಿಯಾ ವಿಶ್ವವಿದ್ಯಾಲಯದಲ್ಲಿ 2006 ರಿಂದ ಅಂದರೆ ಕಳೆದ 18-20 ವರ್ಷಗಳಿಂದ ಯಾವುದೇ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿರಲಿಲ್ಲ. ಇದರಿಂದಾಗಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಏನಾದರೂ ಸಮಸ್ಯೆಗಳಾದರೆ ಅಥವಾ ಶೈಕ್ಷಣಿಕ ತೊಂದರೆಗಳಾದರೆ ಆಡಳಿತ ಮಂಡಳಿ ಮುಂದೆ ಪ್ರಶ್ನೆ ಮಾಡಲು ಅವರ ಪರವಾಗಿ ಯಾರೂ ಇರಲಿಲ್ಲ. ಇತ್ತೀಚೆಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲೂ (AMU) ವಿದ್ಯಾರ್ಥಿಗಳ ಹೋರಾಟದ ನಂತರ ಚುನಾವಣೆ ನಡೆಸಲು ಒಪ್ಪಿಕೊಳ್ಳಲಾಗಿತ್ತು. ಇದನ್ನೇ ನೋಡಿ ಪ್ರೇರಣೆಗೊಂಡ ಜಾಮಿಯಾ ವಿದ್ಯಾರ್ಥಿಗಳು, ಅಕ್ಟೋಬರ್ 12 ರಿಂದ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದರು.
ಪ್ರತಿಭಟನೆಯ ಭಾಗವಾಗಿ ವಿದ್ಯಾರ್ಥಿಗಳು ಕಾಲೇಜಿನ ಆನ್‌ಲೈನ್ ಕ್ಲಾಸ್‌ಗಳನ್ನು ಬಹಿಷ್ಕರಿಸಿದ್ದರು, ಕ್ಯಾಂಪಸ್‌ನಲ್ಲಿ ‘ಇಂಕಿಲಾಬಿ ಮೇಳ’ ಎಂಬ ಕಾರ್ಯಕ್ರಮ ನಡೆಸಿ, ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಓಪನ್ ಮಾಡಬೇಕು ಮತ್ತು ಭದ್ರತಾ ಅಧಿಕಾರಿಗಳನ್ನು ಬದಲಾಯಿಸಬೇಕು ಎಂದು ಪಟ್ಟು ಹಿಡಿದಿದ್ದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿಯು ಹೋರಾಟದಲ್ಲಿದ್ದ ಹಲವು ವಿದ್ಯಾರ್ಥಿಗಳಿಗೆ ನೋಟಿಸ್‌ಗಳನ್ನು ನೀಡಿತು, ಕೆಲವರನ್ನು ಸಸ್ಪೆಂಡ್ ಮಾಡಿತು ಹಾಗೂ ಕ್ಯಾಂಪಸ್‌ಗೆ ಬರದಂತೆ ಬ್ಯಾನ್ ಮಾಡಿತು. ಅಷ್ಟೇ ಅಲ್ಲದೆ, ಕ್ಯಾಂಪಸ್‌ಗೆ ಸರಬರಾಜಾಗುತ್ತಿದ್ದ ನೀರನ್ನು ಬಂದ್ ಮಾಡಿ, ಪೊಲೀಸರನ್ನು ಕರೆಸಲಾಗಿತ್ತು.ಈ ನಡುವೆ ದೆಹಲಿ ಪೊಲೀಸರು ಗಲಾಟೆ ನೆಪದಲ್ಲಿ ಎರಡು ಎಫ್‌ಐಆರ್ (FIR) ದಾಖಲು ಮಾಡಿದ್ದರು. NSUI ವಿದ್ಯಾರ್ಥಿ ನಾಯಕ ಝೀಶನ್ ಖಾನ್ ಮತ್ತು ಮೊಹಮ್ಮದ್ ಫೈಜಾನ್ ಎಂಬ ಇಬ್ಬರು ವಿದ್ಯಾರ್ಥಿಗಳನ್ನು 24 ಗಂಟೆಗಳ ಕಾಲ ಪೊಲೀಸ್ ವಶದಲ್ಲಿಟ್ಟು, ನಂತರ ತಿಹಾರ್ ಜೈಲಿಗೆ ಕಳುಹಿಸಲಾಯಿತು. ರಜೆ ತಗೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ ಒಬ್ಬ ವಿದ್ಯಾರ್ಥಿನಿಗೂ ನೋಟಿಸ್ ನೀಡಲಾಗಿತ್ತು.
ವಿದ್ಯಾರ್ಥಿಗಳು ಯಾವುದಕ್ಕೂ ಜಗ್ಗದೇ ಇದ್ದಾಗ, ಅಕ್ಟೋಬರ್ 29 ರಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಫೀಸ್‌ನಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಸಂಘದ (JMISU) ಸಂವಿಧಾನವನ್ನು ಮೇ 15, 2027 ರೊಳಗೆ ಅನುಮೋದಿಸಿ ಜಾರಿಗೆ ತರಲಾಗುವುದು.
ಜುಲೈ 16, 2027 ರಂದು ಆರಂಭವಾಗುವ ಮುಂದಿನ ಶೈಕ್ಷಣಿಕ ವರ್ಷದ ಮೊದಲ ವಾರದ ಒಳಗಾಗಿ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲಾಗುವುದು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ ನೀಡಿದ್ದ ಎಲ್ಲ ನೋಟಿಸ್‌ಗಳು, ಸಸ್ಪೆನ್ಷನ್ ಮತ್ತು ಕ್ಯಾಂಪಸ್ ಬ್ಯಾನ್‌ಗಳನ್ನು ತಕ್ಷಣದಿಂದಲೇ ರದ್ದು ಮಾಡಲಾಗಿದೆ.
ನವೆಂಬರ್ 2, ಸೋಮವಾರದಿಂದ ಎಲ್ಲಾ ಕಾಲೇಜು ತರಗತಿಗಳು ಮತ್ತು ಪರೀಕ್ಷೆಗಳು ಮಾಮೂಲಿಯಂತೆ ಆಫ್‌ಲೈನ್‌ನಲ್ಲೇ ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು ಎಂದಿದೆ.
ಆಡಳಿತ ಮಂಡಳಿಯು ಈ ನಿಶ್ಚಿತ ಭರವಸೆ ನೀಡಿದ ಬೆನ್ನಲ್ಲೇ, ವಿದ್ಯಾರ್ಥಿಗಳಿಗೆ ತಕ್ಷಣವೇ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆಯನ್ನು ಕೊನೆಗೊಳಿಸಲು ನಿರ್ದೇಶಿಸಿದೆ.
ವಿದ್ಯಾರ್ಥಿಗಳು ಡಿಸೆಂಬರ್ 2026 ರೊಳಗೇ ಸಂವಿಧಾನ ಅಂಗೀಕರಿಸಿ ಬೇಗ ಚುನಾವಣೆ ಮಾಡಿ ಎಂದು ಕೇಳಿದ್ದರು. ಆದರೆ ಕಾಲೇಜು ಮಂಡಳಿ ಮೇ 2027 ರವರೆಗೆ ಟೈಮ್ ತಗೊಂಡಿರುವುದು ಮತ್ತು ಜೈಲಿನಲ್ಲಿರುವ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕೇಸ್‌ಗಳ ಬಗ್ಗೆ ಇನ್ನು ಸ್ಪಷ್ಟತೆ ಸಿಗದಿರುವುದು ವಿದ್ಯಾರ್ಥಿಗಳಲ್ಲಿ ಸಣ್ಣ ಬೇಸರ ತಂದಿದೆ. ಆದರೂ ಕೂಡ, ವರ್ಷಗಳಿಂದ ಮುಚ್ಚಿಹೋಗಿದ್ದ ವಿದ್ಯಾರ್ಥಿ ಸಂಘದ ಚುನಾವಣೆಗೆ ದಿನಾಂಕ ಗಿಟ್ಟಿಸಿಕೊಂಡಿರುವುದು ವಿದ್ಯಾರ್ಥಿಗಳ ಒಗ್ಗಟ್ಟಿಗೆ ಸಿಕ್ಕ ದೊಡ್ಡ ಗೆಲುವಾಗಿದೆ.
ಆದರೂ ಸಹ, 2006 ರಿಂದ ಮುಚ್ಚಿಹೋಗಿದ್ದ ವಿದ್ಯಾರ್ಥಿ ಸಂಘದ ಬಾಗಿಲನ್ನು ತೆರೆಸಿ, ಆಡಳಿತ ಮಂಡಳಿಯಿಂದ ಅಧಿಕೃತ ದಿನಾಂಕವನ್ನು ಪಡೆದುಕೊಂಡಿರುವುದು ವಿದ್ಯಾರ್ಥಿಗಳ ಒಗ್ಗಟ್ಟು ಮತ್ತು ಹೋರಾಟಕ್ಕೆ ಸಿಕ್ಕ ಪ್ರಮುಖ ಜಯವಾಗಿದೆ. ಕೊಟ್ಟಿರುವ ಮಾತು ಹಾಗೂ ದಿನಾಂಕದಂತೆ ಆಡಳಿತ ಮಂಡಳಿ ಚುನಾವಣೆ ನಡೆಸುತ್ತದೆಯೇ ಎಂಬುದನ್ನು ಈಗ ಕಾದು ನೋಡಬೇಕಿದೆ.




