ದೆಹಲಿಯಲ್ಲಿ ಸುದೀರ್ಘ ಕಾಲದಿಂದ ವಾಸಿಸುತ್ತಿರುವ ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಬಿಜೆಪಿಯ ಬೂತ್ ಮಟ್ಟದ ಏಜೆಂಟ್‌ಗಳು (BLA-2) ‘ಫಾರ್ಮ್ 7’ ಅರ್ಜಿಗಳನ್ನು ಸಲ್ಲಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಲಾಭ ಪಡೆದು, ಅರ್ಹ ಮತದಾರರನ್ನು ‘ಅನುಪಸ್ಥಿತ/ಸ್ಥಳಾಂತರ’ ಅಥವಾ ‘ಮೃತ’ ಎಂದು ಸುಳ್ಳು ಮಾಹಿತಿ ನೀಡಿ ಪಟ್ಟಿಯಿಂದ ತೆಗೆದುಹಾಕಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ದೆಹಲಿಯ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದ ದಯಾಳಪುರ ನಿವಾಸಿ ಸಜೀದ್ ಹುಸೇನ್ ಸೇರಿದಂತೆ ಅನೇಕ ಸ್ಥಳೀಯರು ಕಳೆದ ಎರಡು ದಶಕಗಳಿಂದಲೂ ಒಂದೇ ವಿಳಾಸದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಚುನಾವಣಾ ಆಯೋಗದ ವೆಬ್‌ಸೈಟ್ ದಾಖಲೆಗಳ ಪ್ರಕಾರ, ಇವರ ಕುಟುಂಬದ ಸದಸ್ಯರು ‘ವಲಸೆ ಹೋಗಿದ್ದಾರೆ’, ‘ಮರಣ ಹೊಂದಿದ್ದಾರೆ’ ಎಂಬ ಸುಳ್ಳು ಕಾರಣಗಳನ್ನು ನೀಡಿ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರ್ಮ್ 7 (Form 7) ಅರ್ಜಿಗಳನ್ನು ಸಲ್ಲಿಸಲಾಗಿದೆ.
ಮತಗಟ್ಟೆ ಸಂಖ್ಯೆ 129ರ ಒಂದೇ ಪ್ರದೇಶದ ಸುಮಾರು 28 ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಈ ರೀತಿ ಅರ್ಜಿ ಸಲ್ಲಿಸಲಾಗಿತ್ತು. ತನಿಖೆ ಮತ್ತು ಸ್ಥಳೀಯ ಪರಿಶೀಲನೆಯ ವೇಳೆ ಈ 28 ಜನರೂ ತಮ್ಮ ಸ್ವಂತ ಮನೆಗಳಲ್ಲೇ ವಾಸವಾಗಿರುವುದು ಮತ್ತು ಅವರೆಲ್ಲರ ಬಳಿ ಅಧಿಕೃತ ಗುರುತಿನ ಚೀಟಿಗಳಿರುವುದು ದೃಢಪಟ್ಟಿದೆ.
ಕೇಂದ್ರ ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ಬಿಜೆಪಿ ನಿಯೋಜಿತ ಬೂತ್ ಮಟ್ಟದ ಏಜೆಂಟ್-2 (BLA-2) ಚಂದ್ರಶೇಖರ್ ನೈನ್ವಾಲ್ ಎಂಬುವವರ ಹೆಸರಿನಲ್ಲಿ ಈ 28 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈ ಅರ್ಜಿದಾರರನ್ನು ತಾವು ಎಂದಿಗೂ ನೋಡಿಲ್ಲ ಹಾಗೂ ಅವರ ಹೆಸರು ಕೇಳಿಲ್ಲ ಎಂದು ಸಂತ್ರಸ್ತ ಕುಟುಂಬಗಳು ತಿಳಿಸಿವೆ.
ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಏಜೆಂಟ್ ಗರಿಷ್ಠ 10 ‘ಫಾರ್ಮ್ 7’ ಅರ್ಜಿಗಳನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಆದರೆ, ಮುಸ್ತಫಾಬಾದ್ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ಬಿಎಲ್‌ಎ ಏಜೆಂಟರುಗಳು ತಲಾ 30ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಶಶಿ ಎಂಬ ಏಜೆಂಟ್ ಬರೋಬ್ಬರಿ 42 ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮುಸ್ತಫಾಬಾದ್ ಒಂದರಲ್ಲೇ ಆಗಸ್ಟ್ 31ರ ನಂತರ ಸಲ್ಲಿಕೆಯಾದ 597 ‘ಫಾರ್ಮ್ 7’ ಅರ್ಜಿಗಳಲ್ಲಿ ಶೇ. 96ರಷ್ಟು (572 ಅರ್ಜಿಗಳು) ಬಿಜೆಪಿ ಬಿಎಲ್‌ಎಗಳಿಂದಲೇ ಸಲ್ಲಿಕೆಯಾಗಿದ್ದು, ಇವೆಲ್ಲವೂ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ
ಬಿಎಲ್‌ಎಗಳು ಅರ್ಜಿ ಸಲ್ಲಿಸುವಾಗ ಸ್ವಯಂ-ದೃಢೀಕರಣ ನೀಡಬೇಕೆಂಬ ನಿಯಮವಿದ್ದರೂ, ಇವರನ್ನು ಸಾಮಾನ್ಯ ‘ಆಕ್ಷೇಪಣೇದಾರರು’ ಎಂದು ಬಿಂಬಿಸಿ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ನಿಯಮಗಳನ್ನು ಮೀರಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಫಾರ್ಮ್ 7 ಎಂದರೇನು?
ಚುನಾವಣಾ ಪಟ್ಟಿಯಲ್ಲಿರುವ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ, ಆ ವಿಳಾಸದಿಂದ ಖಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಅಥವಾ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಅನರ್ಹವಾಗಿದ್ದರೆ, ಅದನ್ನು ತೆಗೆದುಹಾಕಲು ಸಾರ್ವಜನಿಕರು ಅಥವಾ ಏಜೆಂಟರು ಸಲ್ಲಿಸುವ ಅರ್ಜಿಯೇ ‘ಫಾರ್ಮ್ 7’.
ಕಾನೂನಿನ ಪ್ರಕಾರ, ಯಾರದೇ ಹೆಸರು ತೆಗೆದುಹಾಕಲು ಆಕ್ಷೇಪಣೆ ಬಂದರೆ, ಚುನಾವಣಾ ನೋಂದಣಿ ಅಧಿಕಾರಿ (ERO) ಸಂಬಂಧಪಟ್ಟ ಮತದಾರರಿಗೆ ಕಡ್ಡಾಯವಾಗಿ ನೋಟಿಸ್ ಜಾರಿ ಮಾಡಬೇಕು. ಜೊತೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಭೌತಿಕ ಪರಿಶೀಲನೆ ನಡೆಸದೆ ಯಾರ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕುವಂತಿಲ್ಲ.
ಪ್ರಜಾಪ್ರತಿನಿಧಿ ಕಾಯ್ದೆ (RP Act) ಪ್ರಕಾರ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಯಾರಾದರೂ ಸುಳ್ಳು ಅಥವಾ ನಕಲಿ ಅರ್ಜಿ/ಮಾಹಿತಿ ನೀಡಿದರೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ಕ್ರಮ ಜರುಗಿಸಲು ಆಯೋಗಕ್ಕೆ ಅಧಿಕಾರವಿದೆ.
ಮುಸ್ತಫಾಬಾದ್ ನಿವಾಸಿಗಳು ತಮಗೆ ಆಯೋಗದಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ತಿಳಿಸಿದ್ದು, ಈ ರೀತಿ ಅರ್ಹ ಮತದಾರರ ಹಕ್ಕು ಕಸಿಯುವ ಯತ್ನಗಳ ವಿರುದ್ಧ ಕಠಿಣ ತನಿಖೆ ನಡೆಸಿ, ನಕಲಿ ಅರ್ಜಿಗಳನ್ನು ವಜಾಗೊಳಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ತೀವ್ರಗೊಂಡಿದೆ.




