ಎಸ್ಯುವಿ ಕಂದಕಕ್ಕೆ ಉರುಳಿ ಎಂಟು ಮಂದಿ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ. ಟಿಸ್ಸಾ ಪ್ರದೇಶದಿಂದ ಸಚ್ ಪಾಸ್ ಕಡೆಗೆ ಹೋಗುತ್ತಿದ್ದ ಎಸ್ಯುವಿ ವಾಹನವು ಕಲಾಬನ್ ಬಳಿಯ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ವಾಹನವು ಬೈರಾಗಢ ಪೊಲೀಸ್ ಚೆಕ್ ಪೋಸ್ಟ್ ದಾಟಿದ ನಂತರ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಎಸ್ಪಿ ವಿಜಯ್ ಕುಮಾರ್ ಸಕ್ಲಾನಿ, “ವಾಹನವು ಸಚ್ ಪಾಸ್ ಕಡೆಗೆ ಹೋಗುತ್ತಿತ್ತು. ಕಲಾಬನ್ ಪ್ರದೇಶವನ್ನು ಸಮೀಪಿಸಿದ ನಂತರ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆಯಿಂದ ಸ್ಕಿಡ್ ಆಗಿ 500 ಮೀಟರ್ ಆಳದ ಕಂದಕಕ್ಕೆ ಉರುಳಿದೆ. ಮೃತರಲ್ಲಿ ಪ್ರವಾಸಿಗರೂ ಸೇರಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ನಾಲ್ವರ ಸಾವು, 16 ಮಂದಿ ನಾಪತ್ತೆ
ಮೃತರು ಎರಡು ಕುಟುಂಬಗಳಿಗೆ ಸೇರಿದವರು. ಒಂದೇ ವಾಹನದಲ್ಲಿ ಹೋಗುತ್ತಿದ್ದರು. ಈ ಅಪಘಾತ ನಡೆದ ಬಳಿಕ ಹಲವು ಗಂಟೆಗಳ ಕಾಲ ಯಾರಿಗೂ ಮಾಹಿತಿ ತಿಳಿದಿರಲಿಲ್ಲ. ನೆಟ್ವರ್ಕ್ ಇಲ್ಲದೆ ಸಂವಹನವೂ ಕಷ್ಟವಾಗಿತ್ತು ಎಂದು ವರದಿಯಾಗಿದೆ.
ಸಚ್ ಪಾಸ್ ಅನ್ನು ಹಿಮಾಚಲ ಪ್ರದೇಶದ ಅತ್ಯಂತ ಕಷ್ಟಕರವಾದ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಪಘಾತಕ್ಕೆ ಪ್ರಾಥಮಿಕ ಕಾರಣ ರಸ್ತೆಯಲ್ಲಿ ಹಿಮ ತುಂಬಿದ್ದು ಆಗಿತ್ತು ಎಂದು ಭಾವಿಸಲಾಗಿದೆ.




