ರಾಷ್ಟ್ರ ರಾಜಧಾನಿ ದೆಹಲಿಯನ್ನು ವಿಪರೀತ ಬಿಸಿಲು ಮತ್ತು ತಾಪಮಾನ ಹೆಚ್ಚಳವು ಕಾಡುತ್ತಿದೆ. ಜನರು ಬಳಲುವಂತೆ ಮಾಡಿದೆ. ಉಷ್ಣೋಗ್ರತೆಯ ನಡುವೆಯೂ ರಸ್ತೆಗಿಳಿದು ಕರ್ತವ್ಯ ನಿರ್ವಹಿಸುವ ದೆಹಲಿ ಸಂಚಾರ ಪೊಲೀಸರ ಹಿತರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿದ್ದು, ವಿಶೇಷ ಪ್ರಾಯೋಗಿಕ ಯೋಜನೆಗೆ ಆರಂಭಿಸಿದೆ. ತೀವ್ರ ತಾಪಮಾನದಿಂದ ಕಾಪಾಡಲು ಸಂಚಾರ ಪೊಲೀಸರಿಗೆ ಅತ್ಯಾಧುನಿಕ ಹವಾನಿಯಂತ್ರಿತ (AC) ಹೆಲ್ಮೆಟ್‌ಗಳು ಮತ್ತು ಕೈಯಲ್ಲಿ ಹಿಡಿಯಬಹುದಾದ ಸಣ್ಣ ಪಂಖಗಳನ್ನು ಪ್ರಾಯೋಗಿಕವಾಗಿ ವಿತರಣೆ ಮಾಡಿದೆ.
ದೆಹಲಿಯಲ್ಲಿ ತಾಪಮಾನವು 40°C ನಿಂದ 45°C ಗರಿಷ್ಠ ಮಟ್ಟದಲ್ಲಿದೆ. ಈ ಪರಿಸ್ಥಿತಿಯಲ್ಲಿಯೂ ಕೆಲಸ ಮಾಡುತ್ತಿರುವ ಪೊಲೀಸರನ್ನು ಬಿಸಿಲಿನ ಬೇಗೆಯಿಂದ ರಕ್ಷಿಸುವುದು ತಮ್ಮ ಆದ್ಯತೆಯೆಂದು ದೆಹಲಿ ಪೊಲೀಸ್ ಇಲಾಖೆ ಹೇಳಿಕೊಂಡಿದೆ.
ಬಿಸಿಲಿನ ಬೇಗೆಯಿಂದ ಪೊಲೀಸರ ತಲೆಯನ್ನು ತಂಪಾಗಿಡಲು ವಿನ್ಯಾಸಗೊಳಿಸಲಾದ ಈ ಹೆಲ್ಮೆಟ್‌ಗಳು ಸಾಮಾನ್ಯ ಹೆಲ್ಮೆಟ್‌ಗಳಿಗಿಂತ ಭಿನ್ನವಾಗಿವೆ. ಇವು ಬ್ಯಾಟರಿ ಚಾಲಿತವಾಗಿದ್ದು, ಇವುಗಳ ಒಳಭಾಗದಲ್ಲಿ ವಿಶೇಷವಾದ ಕೂಲಿಂಗ್ ಪ್ಯಾಡ್‌ಗಳು ಮತ್ತು ಸಣ್ಣ ಗಾಳಿ ದ್ವಾರಗಳಿವೆ. ಇದು ತಲೆಯ ಭಾಗಕ್ಕೆ ನಿರಂತರವಾಗಿ ತಂಪಾದ ಗಾಳಿಯನ್ನು ಪೂರೈಸುತ್ತದೆ ಎಂದು ಇಲಾಖೆ ತಿಳಸಿದೆ.
“ತಾಪಮಾನವು 45°C ದಾಟಿದಾಗಲೂ, ಈ ಹೆಲ್ಮೆಟ್‌ಗಳು ತಲೆಯ ಮೂಲಕ ಇಡೀ ದೇಹದ ತಾಪಮಾನವನ್ನು ಗಣನೀಯವಾಗಿ ಸುಮಾರು 10-15°Cನಷ್ಟು ಕಡಿಮೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ” ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
“ಈ ಹೆಲ್‌ಮೆಟ್‌ಗಳಿಗೆ ಸೊಂಟಕ್ಕೆ ಕಟ್ಟಿಕೊಳ್ಳಬಹುದಾದ ಲಘು ತೂಕದ ಬ್ಯಾಟರಿ ಪ್ಯಾಕ್ ಅನ್ನು ಸಂಪರ್ಕಿಸಲಾಗಿರುತ್ತದೆ. ಇದು ಒಮ್ಮೆ ಚಾರ್ಜ್ ಮಾಡಿದರೆ, ಸುಮಾರು 5 ರಿಂದ 8 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತದೆ” ಎಂದು ವಿವರಿಸಿದ್ದಾರೆ.
ಹೆಲ್ಮೆಟ್ ಜೊತೆಗೆ, ಸಿಗ್ನಲ್‌ಗಳಲ್ಲಿ ನಿಂತು ವಾಹನಗಳನ್ನು ನಿಯಂತ್ರಿಸುವಾಗ ಬಿಸಿ ಗಾಳಿಯಿಂದ ತಪ್ಪಿಸಲು, ಪೊಲೀಸರಿಗೆ ಸಣ್ಣ ರಿಚಾರ್ಜಬಲ್ ಫ್ಯಾನ್‌ಗಳನ್ನು ನೀಡಲಾಗಿದೆ. ಇವುಗಳನ್ನು ಸುಲಭವಾಗಿ ಕೈಯಲ್ಲಿ ಹಿಡಿಯಬಹುದು ಅಥವಾ ಇಲಾಖೆಯು ನೀಡುವ ಬೆಲ್ಟ್‌ಗಳಿಗೆ ಸಿಕ್ಕಿಸಿಕೊಳ್ಳಬಹುದು. ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ತಂಗಾಳಿ ಬೀಸುವಂತೆ ಮಾಡಲು ಮತ್ತು ವಿಪರೀತ ಬೆವರುವಿಕೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಲು ಇದು ಸಹಕಾರಿಯಾಗಿದೆ” ಎಂದು ಇಲಾಖೆ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಸೈಬರ್ ಅಪರಾಧ | ‘ಡಿಜಿಟಲ್ ಅರೆಸ್ಟ್’ ವಿರುದ್ಧ ‘ಅಭಯ್’ ಹಸ್ತ; ಇರಲಿ ಎಚ್ಚರ
“ದೆಹಲಿಯ ಭೀಕರ ಬೇಸಿಗೆಯಲ್ಲಿ ದಿನದ 8-10 ಗಂಟೆಗಳ ಕಾಲ ರಸ್ತೆಯಲ್ಲಿ ನಿಲ್ಲುವುದರಿಂದ ಪೊಲೀಸರು ಹೀಟ್‌ಸ್ಟ್ರೋಕ್ (ಬಿಸಿಲಿನ ಆಘಾತ), ತಲೆಸುತ್ತು ಹಾಗೂ ದಣಿವು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದರು. ಇದನ್ನು ತಪ್ಪಿಸುವುದು ಯೋಜನೆಯ ಮುಖ್ಯ ಉದ್ದೇಶ” ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸದ್ಯಕ್ಕೆ ಈ ಉಪಕರಣಗಳನ್ನು ದೆಹಲಿಯ ಅತ್ಯಂತ ದಟ್ಟಣೆ ಇರುವ ಮತ್ತು ನೆರಳಿನ ಸೌಲಭ್ಯವಿಲ್ಲದ ಪ್ರಮುಖ ಜಂಕ್ಷನ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಆಯ್ದ ಸಂಚಾರ ಪೊಲೀಸರಿಗೆ ಮಾತ್ರ ನೀಡಲಾಗಿದೆ. ಪ್ರಯೋಗವು ಯಶಸ್ವಿಯಾದರೆ, ಹೆಲ್ಮೆಟ್‌ಗಳ ತೂಕ, ಕಾರ್ಯಕ್ಷಮತೆ ಹಾಗೂ ಬ್ಯಾಟರಿ ಬಾಳಿಕೆಯ ಬಗ್ಗೆ ಪೊಲೀಸರಿಂದ ಸಕಾರಾತ್ಮಕ ಅಭಿಪ್ರಾಯಗಳು ಬಂದರೆ, ಮುಂಬರುವ ದಿನಗಳಲ್ಲಿ ಇಲಾಖೆಯ ಎಲ್ಲ ಸಂಚಾರ ಪೊಲೀಸರಿಗೂ ಇದನ್ನು ವಿಸ್ತರಿಸಲಾಗುತ್ತದೆ” ಎಂದು ಇಲಾಖೆ ತಿಳಿಸಿದೆ.
ಇವುಗಳ ಜೊತೆಗೆ, ಈಗಾಗಲೇ ದೆಹಲಿ ಪೊಲೀಸರಿಗೆ, ಓಆರ್‌ಎಸ್, ಗ್ಲುಕೋಸ್, ನಿಂಬೆ ಹಣ್ಣಿನ ರಸ ಹಾಗೂ ತಂಪಾದ ಕುಡಿಯುವ ನೀರು ವಿತರಿಸಲಾಗುತ್ತಿದೆ. ನಿರಂತರವಾಗಿ ಬಿಸಿಲಿನಲ್ಲಿ ನಿಲ್ಲದಂತೆ ತಡೆಯಲು ಪೊಲೀಸರ ಶಿಫ್ಟ್ ಅವಧಿಗಳನ್ನು ಮರುಹೊಂದಿಸಲಾಗಿದೆ. ನೆರಳಿನ ಆಸರೆಗಾಗಿ ಸಣ್ಣ ಬೂತ್‌ಗಳನ್ನು ನಿರ್ಮಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.



