ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ವಿಮಾನಯಾನ ಇಂಧನ (ಎಟಿಎಫ್) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ, ವಿಮಾನ ಟಿಕೆಟ್‌ಗಳ ಗಗನಚುಂಬಿ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಪ್ರಮುಖ ಹೆಜ್ಜೆ ಇಟ್ಟಿದೆ. ಅಸಾಧಾರಣ ಸಂದರ್ಭಗಳಲ್ಲಿ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಯುವ ಉದ್ದೇಶದಿಂದ ವಿಮಾನ ಟಿಕೆಟ್ ದರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುವ ಹೊಸ ನಿಯಮಗಳನ್ನು ಕೇಂದ್ರ ಸಿವಿಲ್ ವಿಮಾನಯಾನ ಸಚಿವಾಲಯ ಅಧಿಸೂಚಿಸಿದೆ.
ಕೇಂದ್ರ ಸಿವಿಲ್ ವಿಮಾನಯಾನ ಸಚಿವಾಲಯವು ‘ಭಾರತೀಯ ವಾಯುಯಾನ ನಿಯಮಗಳು, 2026’ ಅನ್ನು ಹೊರಡಿಸಿದ್ದು, ಇದರಡಿ ಸರ್ಕಾರವು ತುರ್ತು ಅಥವಾ ಅಸಾಧಾರಣ ಪರಿಸ್ಥಿತಿ ಉದ್ಭವಿಸಿದಾಗ ವಿಮಾನಯಾನ ಸಂಸ್ಥೆಗಳಿಗೆ ದರಕ್ಕೆ ಸಂಬಂಧಿಸಿದಂತೆ ಲಿಖಿತ ನಿರ್ದೇಶನಗಳನ್ನು ನೀಡಬಹುದಾಗಿದೆ. ಆದರೆ ಈ ರೀತಿಯ ಸರ್ಕಾರದ ನಿರ್ದೇಶನಗಳು ಪರಿಸ್ಥಿತಿಗೆ ತಕ್ಕಂತೆ ಪ್ರಮಾಣಾನುಗುಣವಾಗಿರಬೇಕು ಹಾಗೂ ನಿರ್ದಿಷ್ಟ ಅವಧಿಗೆ ಮಾತ್ರ ಜಾರಿಯಲ್ಲಿರುತ್ತವೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹೊಸ ನಿಯಮಗಳ ಪೈಕಿ ನಿಯಮ 192 ಅತ್ಯಂತ ಪ್ರಮುಖವಾಗಿದ್ದು, ಇದರ ಪ್ರಕಾರ ನಿಯಮಿತ ವಿಮಾನ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ನಿರ್ವಹಣಾ ವೆಚ್ಚ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಟಿಕೆಟ್ ದರವನ್ನು ನಿರ್ಧರಿಸಬೇಕಾಗುತ್ತದೆ. ಜೊತೆಗೆ ಈ ದರದ ಸಂಪೂರ್ಣ ವಿವರಗಳನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಸಲ್ಲಿಸುವುದು ಕಡ್ಡಾಯವಾಗಿದೆ.
ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ದರದ ವಿಷಯದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಕೆಲ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.
ವಿಮಾನಯಾನ ಸಂಸ್ಥೆಗಳು ತಮ್ಮ ಅಧಿಕೃತ ವೆಬ್‌ಸೈಟ್‌ಗಳು ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಟಿಕೆಟ್ ದರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಡಿಜಿಸಿಎ ಈ ದರಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಿದೆ.
ಬುಕಿಂಗ್ ಪ್ರಕ್ರಿಯೆಯ ಸಮಯದಲ್ಲಿ ಮತ್ತು ಟಿಕೆಟ್‌ನಲ್ಲಿ ಪ್ರಯಾಣಿಕರು ಪಾವತಿಸಬೇಕಾದ ಒಟ್ಟು ಮೊತ್ತವನ್ನು ಸ್ಪಷ್ಟವಾಗಿ ತೋರಿಸಬೇಕು.
ಮೂಲ ದರ, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳು, ವಿಮಾನ ಸಂಸ್ಥೆಗಳು ಸೇವೆಗಾಗಿ ವಿಧಿಸುವ ಶುಲ್ಕಗಳು, ಕ್ಯಾನ್ಸಲೇಶನ್ ಚಾರ್ಜಸ್, ರೀಫಂಡ್ ನಿಯಮಗಳು ಹಾಗೂ ಇತರ ಶುಲ್ಕಗಳ ವಿವರವಾದ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಬೇಕಾಗುತ್ತದೆ.
ತೆರಿಗೆಗಳು (ಸರ್ಕಾರಕ್ಕೆ ಸೇರುವುದು) ಮತ್ತು ಶುಲ್ಕಗಳ (ಸಂಸ್ಥೆಯ ಸೇವೆಗೆ ಸಂಬಂಧಿಸಿದ್ದು) ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಭಾರತದಲ್ಲಿ 1994ರಲ್ಲೇ ವಿಮಾನ ಟಿಕೆಟ್ ದರ ನಿಯಂತ್ರಣ ಮುಕ್ತಗೊಳಿಸಲಾಗಿತ್ತು. ಮಾರುಕಟ್ಟೆಯ ಬೇಡಿಕೆ, ನಿರ್ವಹಣಾ ವೆಚ್ಚ ಹಾಗೂ ಬುಕಿಂಗ್ ಮಾಡುವ ಸಮಯವನ್ನು ಆಧರಿಸಿ ವಿಮಾನಯಾನ ಸಂಸ್ಥೆಗಳು ದರ ನಿಗದಿಪಡಿಸಲು ಅವಕಾಶ ನೀಡಲಾಗಿತ್ತು.
ಈ ಹಿಂದೆ ಜಾರಿಯಲ್ಲಿದ್ದ ‘ಏರ್‌ಕ್ರಾಫ್ಟ್ ರೂಲ್ಸ್, 1937’ರ ನಿಯಮ 135(4)ರ ಅಡಿಯಲ್ಲಿ ಅತ್ಯಧಿಕ ದರ ವಸೂಲಿ, ಮಾರುಕಟ್ಟೆಯಲ್ಲಿ ಏಕಸ್ವಾಮ್ಯ/ಒಕ್ಕೂಟ ರಚನೆ ಕಂಡುಬಂದರೆ ಕ್ರಮ ಕೈಗೊಳ್ಳಲು ಡಿಜಿಸಿಎಗೆ ಅಧಿಕಾರವಿತ್ತು.
ಆದರೆ, ನೂತನ ‘ನಿಯಮ 192’ರಲ್ಲಿ ಈ ನಿರ್ದಿಷ್ಟ ಪದಗಳನ್ನು ಉಲ್ಲೇಖಿಸಿಲ್ಲವಾದರೂ, ಅಸಾಧಾರಣ ಪರಿಸ್ಥಿತಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಯಲು ದರಗಳ ಮೇಲೆ ಸಂಪೂರ್ಣ ನಿಯಂತ್ರಣ ಅಥವಾ ಹಸ್ತಕ್ಷೇಪ ಮಾಡುವ ವ್ಯಾಪಕ ಅಧಿಕಾರವನ್ನು ಕೇಂದ್ರ ಸರ್ಕಾರ ತನ್ನ ಬಳಿ ಉಳಿಸಿಕೊಂಡಿದೆ. ಇದು ಪ್ರಯಾಣಿಕರಿಗೆ ಅತಿಯಾದ ದರ ಏರಿಕೆಯಿಂದ ರಕ್ಷಣೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.





